ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ದಸರಾ (Kullu Dussehra) ಹಬ್ಬದಲ್ಲಿ ಗುರುವಾರ ಆಘಾತಕಾರಿ ಘಟನೆಯೊಂದು ನಡೆದಿದೆ. ದೇವರ ವಲಯಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ (Tehsildar) ಹರಿ ಸಿಂಗ್ ಯಾದವ್ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಮೆರವಣಿಗೆಯ ಸಮಯದಲ್ಲಿ, ಯಾದವ್ ಅವರನ್ನು ಬೆನ್ನಟ್ಟಿ, ಅವರ ಬಟ್ಟೆಗಳನ್ನು ಹರಿದು ಥಳಿಸಲಾಯಿತು. ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಇದು ಕುಲ್ಲುವಿನ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಅನುಮಾನಗಳನ್ನು ಮೂಡಿಸಿದೆ.
ಚಾಮುಂಡಿ ಮಾತೆಯ ಜೊತೆಗೆ ಭೃಗು ಋಷಿಯ ಮೂರ್ತಿಯನ್ನು ಸ್ಥಾಪಿಸಿದಾಗ ವಾಗ್ವಾದ ಪ್ರಾರಂಭವಾಯಿತು. ಇದು ಸ್ಥಳದಲ್ಲಿ ವಿವಾದಕ್ಕೆ ಕಾರಣವಾಯಿತು. ಈ ವೇಳೆ ತಹಸೀಲ್ದಾರ್ ಯಾದವ್ ಮಧ್ಯಪ್ರವೇಶಿಸಿದರು. ಆದರೆ, ಸಂಪ್ರದಾಯವನ್ನು ಉಲ್ಲಂಘಿಸಿ, ಪಾದರಕ್ಷೆಗಳನ್ನು ಧರಿಸಿಕೊಂಡು ದೇವರ ರಥದ ಬಳಿಗೆ ಬಂದಿದ್ದರಿಂದ ಭಕ್ತರ ಕೋಪಕ್ಕೆ ಕಾರಣವಾಗಿದೆ.
ಕೋಪಗೊಂಡ ಭಕ್ತರು ಯಾದವ್ ಅಲ್ಲಿಂದ ಎಳೆದೊಯ್ದು ಥಳಿಸಿದ್ದಾರೆ. ಘಟನೆಯ ವಿಡಿಯೊಗಳಲ್ಲಿ, ಯಾದವ್ ಅವರ ಕಾಲರ್ ಹಿಡಿದು ಎಳೆದುಕೊಂಡು ಹೋಗುತ್ತಿರುವುದನ್ನು, ಅವರ ಶರ್ಟ್ ಅಸ್ತವ್ಯಸ್ತವಾಗಿರುವುದನ್ನು ಗಮನಿಸಬಹುದು. ಅವರು ಯಾರಿಗೋ ಕರೆ ಮಾಡಲು ಪ್ರಯತ್ನಿಸಿದರು. ಆದರೆ, ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿಯಿದ್ದಿದ್ದರಿಂದ ಯಾರಿಗೂ ಫೋನ್ ಮಾಡಲು ಸಾಧ್ಯವಾಗಲಿಲ್ಲ. ಹಲ್ಲೆ ನಡೆಸಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೊ ವೀಕ್ಷಿಸಿ:
ತಹಸೀಲ್ದಾರ್ ಶೂ ಧರಿಸಿಕೊಂಡು ಶಿಬಿರದೊಳಗೆ ಪ್ರವೇಶಿಸಿದ್ದು, ಶತಮಾನಗಳಷ್ಟು ಹಳೆಯದಾದ ಸಂಪ್ರದಾಯವನ್ನು ಮುರಿದಿದ್ದಾರೆ ಮತ್ತು ದೇವ ಸಮಾಜವನ್ನು ಅಗೌರವಿಸಿದ್ದಾರೆ ಎಂದು ಗ್ರಾಮ ಪಂಚಾಯತ್ ರಾಟೋಚಾದ ಉಪ ಮುಖ್ಯಸ್ಥ ರಿಂಕು ಶಾ ಹೇಳಿದ್ದಾರೆ. ಘಟನೆಯ ತೀವ್ರತೆಯ ಹೊರತಾಗಿಯೂ, ತಹಸೀಲ್ದಾರ್ ಯಾದವ್ ಪೊಲೀಸ್ ದೂರು ದಾಖಲಿಸಿಲ್ಲ ಮತ್ತು ಇದುವರೆಗೂ ಪ್ರಕರಣವು ಇತ್ಯರ್ಥವಾಗದೆ ಉಳಿದಿದೆ.
ಕುಲ್ಲುವಿನ ಬಂಜಾರ್‌ನ ಬಿಜೆಪಿ ಶಾಸಕ ಸುರೇಂದ್ರ ಶೌರಿ, ತಹಸೀಲ್ದಾರ್ ಅವರನ್ನು ಟೀಕಿಸಿದ್ದಾರೆ. 2023 ರಲ್ಲಿ ಯಾದವ್ 18 ದೇವತೆಗಳ ಡೇರೆಗಳನ್ನು ಕೆಡವಿದ್ದರು. ಕಳೆದ ಎರಡು ವರ್ಷಗಳಿಂದ ದೇವತೆಗಳು ಮತ್ತು ಸ್ಥಳೀಯರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕುಲ್ಲುವಿನಲ್ಲಿ ಯಾದವ್ ಅವರನ್ನು ನೇಮಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಶೌರಿ ಪ್ರಶ್ನಿಸಿದರು. ತಹಸೀಲ್ದಾರ್ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ನಿರ್ಣಯವನ್ನು ಸಲ್ಲಿಸಲಾಗಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು. ದೇವರ ಮುಂದೆ ತಹಸೀಲ್ದಾರ್ ಯಾದವ್ ಕ್ಷಮೆಯಾಚಿಸಲು ಒತ್ತಾಯಿಸಲಾಯಿತು ಎಂದು ಶೌರಿ ಹೇಳಿದರು.
ಇನ್ನು ಕುಲ್ಲು ದಸರಾ ಉತ್ಸವಕ್ಕೆ 1,200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಪೊಲೀಸರು ಘಟನೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಹಲ್ಲೆ ನಡೆಸಿದವರ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಗ್ಗೆ ಇದು ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ.
ಇದನ್ನೂ ಓದಿ: Viral Video: ಬೆಂಗಳೂರು ಮೆಟ್ರೋದಲ್ಲಿ ಕನ್ನಡ-ಹಿಂದಿ ವಿವಾದ: ಮಹಿಳೆಯರ ನಡುವೆ ವಾಕ್ಸಮರ