ಲಖನೌ: ಗನ್ ಹಿಡಿದ ವ್ಯಕ್ತಿಗಳನ್ನು ನೋಡಿದವರು ಯಾರಾದರೂ ಸರಿಯೇ ಜೀವ ಭಯದಲ್ಲಿ ಎದ್ದೋ ಬಿದ್ದೋ ಎಂದು ಓಡಲು ಶುರುಮಾಡುತ್ತಾರೆ. ಅಂತಹದರಲ್ಲಿ ಉತ್ತರ ಪ್ರದೇಶದ ವೃದ್ಧ ಮಹಿಳೆಯೊಬ್ಬಳು ಗನ್ ಹಿಡಿದ ವ್ಯಕ್ತಿಯನ್ನು ಮರದ ಕೋಲನ್ನು ಹಿಡಿದುಕೊಂಡು ಓಡಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ಆಕೆಯ ಧೈರ್ಯವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಮೊರಾದಾಬಾದ್‌ನಲ್ಲಿ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮನೆಯ ಹೊರಗೆ ಇಬ್ಬರು ಪುರುಷರು ಜಗಳವಾಡುವುದು ಸೆರೆಯಾಗಿದೆ. ಅವರಲ್ಲಿ ಒಬ್ಬನು ಗನ್ ಹಿಡಿದುಕೊಂಡಿರುವುದು ಕಂಡು ಬಂದಿದೆ. ಈ ವೇಳೆ ವೃದ್ಧೆ ಉದ್ದವಾದ ಕೋಲು ಹಿಡಿದುಕೊಂಡು ಆತನ ಬಳಿ ಬಂದಿದ್ದಾಳೆ. ಆಕೆಯನ್ನು ನೋಡಿ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ವಿಡಿಯೊ ನೋಡಿ...
ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಈಗಾಗಲೇ ಐದು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ನೆಟ್ಟಿಗರು ಇದಕ್ಕೆ ಕಾಮೆಂಟ್ ಮಾಡಿದ್ದಾರೆ. "ಆಗಿನ ಮಹಿಳೆಯರು ಈಗಿನ ಕಾಲದ ಹೇಡಿ ಪುರುಷರಿಗಿಂತ ಹೆಚ್ಚು ಧೈರ್ಯಶಾಲಿಗಳು" ಎಂದು ಒಬ್ಬರು ಬರೆದಿದ್ದಾರೆ. "ಧೈರ್ಯಕ್ಕೆ ವಯಸ್ಸಿನ ಮಿತಿಯಿಲ್ಲ” ಎಂದು ಮತ್ತೊಬ್ಬರು ತಿಳಿಸಿದ್ದಾರೆ.
"ನಿಜವಾದ ಧೈರ್ಯ ಬಲದಲ್ಲಿಲ್ಲ, ಬದಲಾಗಿ ಉತ್ಸಾಹದಲ್ಲಿದೆ. ಧೈರ್ಯಶಾಲಿ ದಾದಿಗೆ ಹ್ಯಾಟ್ಸ್ ಆಫ್" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. “ಆಂಟಿ ತನ್ನ ಬಾಲ್ಯದಲ್ಲಿ ಗ್ಯಾಂಗ್‌ಸ್ಟರ್ ಆಗಿರಬೇಕು" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಲಿಫ್ಟ್‌ನೊಳಗೆ ಹೋದ ಬಾಲಕ ಮಾಡಿದ ಅವಾಂತರ ಒಂದಾ ಎರಡಾ...? ಶಾಕಿಂಗ್ ವಿಡಿಯೊ ಇಲ್ಲಿದೆ
ಈ ಘಟನೆಗೆ ಮೊರಾದಾಬಾದ್ ಪೊಲೀಸರು ಸಹ ಪ್ರತಿಕ್ರಿಯಿಸಿದ್ದಾರೆ. ಮೊರಾದಾಬಾದ್ ಪೊಲೀಸರ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‍ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ʼʼಕಟ್ಘರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದಲ್ಲಿ ಇತರ ಕಾನೂನು ಕ್ರಮಗಳು ಕೈಗೊಳ್ಳಲಾಗುತ್ತಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.