ಶಿಲ್ಲಾಂಗ್: ಈಗಂತೂ ಮಕ್ಕಳು ಮನೆಗೆ ಬಂದರೆ ತಂದೆ-ತಾಯಿ ಓದು ಓದು ಎಂದು ಹಿಂದೆ ಬೀಳುತ್ತಾರೆ. ಶಾಲೆಗೆ ಹೋದರೆ ಟೀಚರ್ಸ್ ಕಲಿ ಎಂದು ದುಂಬಾಲು ಬೀಳುತ್ತಾರೆ. ಶಾಲೆಯೆಂದರೆ ಮಕ್ಕಳು ಜೈಲು ಅನ್ನುವ ಹಾಗೇ ನೋಡುತ್ತಾರೆ. ಅದು ಅಲ್ಲದೇ ಈಗ ಹೋಂವರ್ಕ್, ಪರೀಕ್ಷೆ ಎಂದು ಮಕ್ಕಳ ಬದುಕು ಒತ್ತಡದಿಂದ ಕೂಡಿರುತ್ತದೆ. ಆದರೆ ಮೇಘಾಲಯದ ಸೇಂಟ್ ಡೊಮಿನಿಕ್ ಸವಿಯೊ ಹ್ಯೂನಿಯರ್ ಸೆಕಂಡರಿ ಶಾಲೆಯಲ್ಲಿ ಶಿಕ್ಷಕನೊಬ್ಬ ತರಗತಿಯಲ್ಲಿ ಮಕ್ಕಳಿಗೆ ರ‍್ಯಾಂಪ್ ವಾಕ್ ಮಾಡಿಸಿದ್ದಾನೆ (Viral Video). ಮಕ್ಕಳು ಕೂಡ ಇದರಿಂದ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಶಿಕ್ಷಕ ಟೆಂಗ್‌ಸ್ಮಾರ್ಟ್ ಎಂ. ಮಕ್ಕಳು ರ‍್ಯಾಂಪ್ ವಾಕ್ ಮಾಡಿದ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದೀಗ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ವಿಡಿಯೊದಲ್ಲಿ, ಮಕ್ಕಳು ಪಾಠದ ಹಂಗಿಲ್ಲದೇ, ಖುಷಿಯಿಂದ ರ‍್ಯಾಂಪ್ ವಾಕ್‌ಗೆ ಸಜ್ಜಾದ ದೃಶ್ಯ ಸೆರೆಯಾಗಿದೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಶಿಕ್ಷಕರ ಈ ನಡೆಯನ್ನು ನೆಟ್ಟಿಗರು ಹೊಗಳಿ ಕಾಮೆಂಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಅರುಣಾಚಲ ಪ್ರದೇಶದ ಪುಟ್ಟ ಬಾಲಕನೊಬ್ಬ ಅಳುತ್ತಾ ಶಾಲೆಯಿಂದ ಓಡಿ ಹೋಗಿದ್ದು, ಆತನನ್ನು ಪುಸಲಾಯಿಸಿ ಮತ್ತೆ ಕರೆದುಕೊಂಡು ಬರಲು ಶಿಕ್ಷಕರು ಮಾಡಿದ ಹರಸಾಹಸದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರನ್ನು ನಗೆಯ ಕಡಲಿನಲ್ಲಿ ಮುಳುಗಿಸಿತ್ತು.
ವಿದ್ಯಾರ್ಥಿಗಳ ಜತೆ ಗುಂಡಿನ ಪಾರ್ಟಿ ಮಾಡಿದ ಶಿಕ್ಷಕ
ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಲಾಲ್ ನವೀನ್ ಪ್ರತಾಪ್ ಸಿಂಗ್ ತನ್ನ ವಿದ್ಯಾರ್ಥಿಗಳಿಗೆ ಮದ್ಯ ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಂತರ ಅವನನ್ನು ಅಮಾನತುಗೊಳಿಸಲಾಗಿದೆ. ಆತ ಚಿಕ್ಕ ವಿದ್ಯಾರ್ಥಿಗಳಿಗೆ ಕೋಣೆಯಲ್ಲಿ ಕಪ್‍ಗಳಲ್ಲಿ ಮದ್ಯಪಾನವನ್ನು ನೀಡುವುದು ಮತ್ತು ಪಾನೀಯವನ್ನು ಸೇವಿಸುವ ಮೊದಲು ನೀರನ್ನು ಬೆರೆಸುವಂತೆ ಅವರಲ್ಲಿ ಒಬ್ಬರಿಗೆ ಹೇಳುವುದು ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿ ದಿಲೀಪ್ ಕುಮಾರ್ ಯಾದವ್ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣ ಅಧಿಕಾರಿ ಒ.ಪಿ. ಸಿಂಗ್ ಅವರಿಗೆ ನಿರ್ದೇಶನ ನೀಡಿದ್ದಾರೆ. ದುರ್ನಡತೆ, ಮಕ್ಕಳನ್ನು ಮದ್ಯಪಾನ ಮಾಡಲು ಪ್ರೋತ್ಸಾಹಿಸುವುದು ಮತ್ತು ಶಿಕ್ಷಕರ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಸಿಂಗ್ ಅವನನ್ನು ಮಧ್ಯ ಪ್ರದೇಶ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳ ಅಡಿಯಲ್ಲಿ ಅಮಾನತುಗೊಳಿಸಲಾಗಿತ್ತು.