ಭಾರತ ತಂಡದ ಮಾಜಿ ವೇಗಿ ಜಾವಗಲ್ ಶ್ರೀನಾಥ್‌ಗೆ ಮಾತೃ ವಿಯೋಗ!
ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ತಾಯಿ ಭಾಗ್ಯಲಕ್ಷಿ ತಮ್ಮ 88ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ದೀರ್ಘಾವಧಿಯಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಮೈಸೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಜಾವಗಲ್ ಶ್ರೀನಾಥ್ ಅವರಿಗೆ ಮಾತೃ ವಿಯೋಗ.

ಮೈಸೂರು: ಭಾರತ ಕ್ರಿಕೆಟ್ ತಂಡದ (India) ಮಾಜಿ ವೇಗದ ಬೌಲರ್ ಜಾವಗಲ್ (Jawagal Srinath) ಅವರಿಗೆ ಮಾತೃ ವಿಯೋಗವಾಗಿದೆ. 88ನೇ ವಯಸ್ಸಿನ ಭಾಗ್ಯಲಕ್ಷ್ಮಿ (Bhagya Lakshmi) ಅವರು ದೀರ್ಘಾವಧಿಯಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದರ ಪರಿಣಾಮ ಭಾನುವಾರ ಸಾಂಸ್ಕೃತಿಕ ನಗರಿ ಮೈಸೂರಿನ ಕುವೆಂಪು ನಗರದ ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಆಗಸ್ಟ್ 17ರಂದೇ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ನಡೆಯಿತು.
ಮೈಸೂರಿನ ಜಾವಗಲ್ ಗ್ರಾಮದ ಕನ್ನಡಿಗ ಬ್ರಾಹ್ಮಣ ಕುಟುಂಬದಲ್ಲಿ ಭಾಗ್ಯಲಕ್ಷ್ಮಿ ಅವರು ಜನಿಸಿದ್ದರು. ತಮ್ಮ ಪತಿ ಜೆ ಕೆ ಚಂದ್ರಶೇಖರ್‌ರೊಂದಿಗೆ, ಅವರು ಕುವೆಂಪುನಗರದಲ್ಲಿ ಜೀವನ ನಡೆಸುತ್ತಿದ್ದರು. ಚಂದ್ರಶೇಖರ್ ಅವರು ವ್ಯಾಪಾರಿಯಾಗಿದ್ದು, ಕ್ರೀಡಾಪ್ರಿಯರಾಗಿದ್ದರು ಮತ್ತು ಕರ್ನಾಟಕದಲ್ಲಿ ಫುಟ್‌ಬಾಲ್ ಆಡಿದ್ದರು. 2018ರಲ್ಲಿ ಚಂದ್ರಶೇಖರ್ ಅವರ ನಿಧನದ ನಂತರ, ಭಾಗ್ಯಲಕ್ಷ್ಮಿ ಅವರು ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
Asia Cup 2025: ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್ ಬುಮ್ರಾ ಲಭ್ಯ! ವರದಿ
ಜಾವಗಲ್ ಶ್ರೀನಾಥ್ ಅಂಕಿ ಅಂಶಗಳು
ಭಾರತದ ‘ಮೈಸೂರು ಎಕ್ಸ್‌ಪ್ರೆಸ್’ ಎಂದೇ ಖ್ಯಾತರಾದ ಜಾವಗಲ್ ಶ್ರೀನಾಥ್ 1991ರಿಂದ 2003ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರು 67 ಟೆಸ್ಟ್ ಮತ್ತು 229 ಏಕದಿನ ಪಂದ್ಯಗಳಲ್ಲಿ 551 ವಿಕೆಟ್‌ಗಳನ್ನು ಪಡೆದಿದ್ದಾರೆ. ಭಾರತದ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಅವರ ತಂದೆ ಚಂದ್ರಶೇಖರ್ 2018ರಲ್ಲಿ ನಿಧನರಾಗಿದ್ದರು. ಇದೀಗ ಇವರ ತಾಯಿ ಭಾಗ್ಯಲಕ್ಷ್ಮಿ ಅವರ ನಿಧನದಿಂದ ಶ್ರೀನಾಥ್ ಕುಟುಂಬ ದುಖಃದಲ್ಲಿದೆ.
Mysore: ಭಾರತೀಯ ಕ್ರೀಕೆಟಿಗ ಜಾವಗಲ್ ಶ್ರೀನಾಥ್ ಅವರ ತಾಯಿ, 88 ವರ್ಷದ ಭಾಗ್ಯಲಕ್ಷ್ಮೀ ವಿಧಿವಶ. ಕುವೆಂಪುನಗರದ ಸ್ವಗೃಹದಲ್ಲಿ ಇಂದು ಬೆಳಗ್ಗೆ ನಿಧನ. ಮಧ್ಯಾಹ್ನ 1 ಗಂಟೆಗೆ ಚಾಮುಂಡಿ ಬೆಟ್ಟದ ಪಾದದ ಬಳಿಯ ಸ್ಮಶಾನದಲ್ಲಿ ಅಂತ್ಯಕ್ರಿಯೆ. ಕುಟುಂಬಸ್ಥರಿಂದ "ಜಸ್ಟ್ ಕನ್ನಡ " ಗೆ ಮಾಹಿತಿ.@JustKannada @MysuruMemes @RajeevaVK… pic.twitter.com/idPoRD2kQH
— JustKannada (@JustKannada) August 17, 2025
ಮೈಸೂರು ವಿಶ್ವವಿದ್ಯಾಲಯವು 2023ರಲ್ಲಿ ಶ್ರೀನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತ್ತು. ಈ ವೇಳೆ ಭಾಗ್ಯಲಕ್ಷ್ಮಿ ಅವರ ಸರಳತೆಯನ್ನು ಶ್ರೀನಾಥ್‌ರ ಸಾಧನೆಗೆ ಮೂಲವೆಂದು ಹಲವರು ಬಣ್ಣಿಸಿದ್ದರು. ಸ್ಥಳೀಯ ಸಾಮಾಜಿಕ ಜಾಲತಾಣಗಳಲ್ಲಿ, “ಶ್ರೀನಾಥ್‌ರ ತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ” ಎಂದು ಸಂತಾಪ ಸಂದೇಶಗಳು ಹರಿದಾಡುತ್ತಿವೆ.
ಶ್ರೀನಾಥ್ ಅವರು ಕ್ರಿಕೆಟ್‌ನಿಂದ ನಿವೃತ್ತಿಯಾದ ನಂತರ ಐಸಿಸಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇದರ ಜೊತೆಗೆ ಮೈಸೂರಿನಲ್ಲಿ ಹಲವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಮೈಸೂರು ಜಿಲ್ಲೆಯ ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಶನ್ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಟರ್ ಆಗಿ ಮತದಾನದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.