ಒಸ್ಲೊ, ಜೂ. 3: ಯಾವುದೇ ಅಂಗಡಿಯಲ್ಲಿ ಮಾಲಕ ಅಥವಾ ಸಿಬ್ಬಂದಿ ಇರುವುದು ಸಾಮಾನ್ಯ. ಆದ್ರೆ ಇಲ್ಲೊಂದು ಅಂಗಡಿಯಲ್ಲಿ ಯಾವುದೇ ವ್ಯಾಪಾರಿ ಇಲ್ಲ, ಕಾವಲು ಕಾಯಲು ಸೆಕ್ಯೂರಿಟಿ ಗಾರ್ಡ್ ಇಲ್ಲ. ಆದರೆ ಇಲ್ಲಿ ಯಾವುದೇ ರೀತಿಯ ಕಳ್ಳತನ ಆಗಲ್ಲ ಎಂದರೆ ನಿಮಗೂ ಆಶ್ಚರ್ಯ ಎನಿಸಬಹುದು. ಹೌದು ನಾರ್ವೆಯಲ್ಲಿ ಇರುವ ಸಣ್ಣ ಹೂವಿನ ಅಂಗಡಿಯೊಂದು ರಾತ್ರಿ 10 ಗಂಟೆಯಾದರೂ ಯಾವುದೇ ಅಡೆತಡೆ ಇಲ್ಲದೆ, ಕಳ್ಳತನದ ಹಂಗಿಲ್ಲದೆ ಕಾರ್ಯಾಚರಿಸುತ್ತದೆ. ಸದ್ಯ ಈ ವೈರಲ್ (Viral News) ವಿಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ಸಿಬ್ಬಂದಿ ಇಲ್ಲದೆ ಸಂಪೂರ್ಣವಾಗಿ ನಂಬಿಕೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಈ ಹೂವಿನ ಅಂಗಡಿಯಲ್ಲಿ ಯಾವ ಸಿಸಿಟಿವಿ ನಿಗಾವೂ ಇಲ್ಲ, ಇಲ್ಲೇ ಗ್ರಾಹಕರೇ ತಮಗೆ ಬೇಕಾದ ಹೂವನ್ನು ಆರಿಸಿಕೊಂಡು ತಾವಾಗಿಯೇ ಹಣ ಪಾವತಿಸಿ ಹೋಗುತ್ತಾರೆ. ಈ ವಿಡಿಯೊವನ್ನು ಭಾರತೀಯ ವ್ಯಕ್ತಿಯೊಬ್ಬ ಶೇರ್ ಮಾಡಿಕೊಂಡಿದ್ದು ಇಲ್ಲಿನ ನಾಗರಿಕ ಪ್ರಜ್ಞೆಯ ಬಗ್ಗೆ ಕೊಂಡಾಡಿದ್ದಾರೆ.
ವಿಡಿಯೊ ನೋಡಿ:
ವೈರಲ್ ಆಗಿರುವ ಕ್ಲಿಪ್‌ನಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ಸಣ್ಣ ರಸ್ತೆ ಬದಿಯ ಹೂವಿನ ಅಂಗಡಿಯನ್ನು ಸೆರೆ ಹಿಡಿಯಲಾಗಿದೆ. ಇಲ್ಲಿ ಯಾರಾದರೂ ಅಂಗಡಿಗೆ ಹೋಗಿ, ಹೂವುಗಳನ್ನು ಆಯ್ಕೆ ಮಾಡಿ ಸ್ವತಃ ಪಾವತಿ ಮಾಡಬಹುದು ಎಂದು ಆ ವ್ಯಕ್ತಿ ವಿವರಿಸುತ್ತಾರೆ. ಆವರಣದಲ್ಲಿ ಯಾವುದೇ ಪರಿಚಾರಕರು, ಭದ್ರತಾ ಸಿಬ್ಬಂದಿ ಅಥವಾ ಕ್ಯಾಷಿಯರ್‌ಗಳು ಇಲ್ಲ. ಬದಲಾಗಿ, ಗ್ರಾಹಕರು ತಾವು ತೆಗೆದುಕೊಳ್ಳುವ ಹೂವಿಗೆ ಪ್ರಾಮಾಣಿಕವಾಗಿ ಹಣ ಪಾವತಿಸುತ್ತಾರೆ
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಸಂಪೂರ್ಣವಾಗಿ ಸಾರ್ವಜನಿಕ ಪ್ರಾಮಾಣಿಕತೆ ಹಾಗೂ ನಂಬಿಕೆ ಆಧಾರದ ಮೇಲೆ ಈ ಹೂವಿನ ಸ್ಟಾಲ್ ತೆರೆಯಲಾಗಿದೆ. ಸಾರ್ವಜನಿಕರ ಪ್ರಾಮಾಣಿಕತೆಯನ್ನು ಬಿಂಬಿಸುವ ಈ ದೃಶ್ಯ ಎಲ್ಲರ ಮನ ಗೆದ್ದಿದೆ. ಯಾರು ಗಮನಿಸುತ್ತಿಲ್ಲ ಎಂದು ತಿಳಿದಿದ್ದರೂ ಜನ ಪ್ರಾಮಾಣಿಕವಾಗಿ ತಾವಾಗಿಯೇ ಹಣ ಪಾವತಿಸುವ ಈ ನಾಗರಿಕ ಪ್ರಜ್ಞೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ಕೆಲವರು ಇದೇ ರೀತಿಯ ಟ್ರಸ್ಟ್-ಆಧಾರಿತ ಅಂಗಡಿಗಳು ಮತ್ತು ಸ್ವಯಂ-ಸೇವಾ ಕಿಯೋಸ್ಕ್‌ಗಳು ಯುರೋಪಿನ ಕೆಲವು ಭಾಗಗಳಲ್ಲಿ ಇದೆ ಎಂದು ಕಮೆಂಟ್‌ನಲ್ಲಿ ತಿಳಿಸಿದ್ದಾರೆ. ಒಬ್ಬರು "ನಂಬಿಕೆ ಕಳೆದುಹೋದ ಸ್ಥಳಗಳಲ್ಲಿ ಇದನ್ನು ಅನುಸರಿಸವುದು ಕಷ್ಟ" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼಭಾರತದಲ್ಲಿ ಇದು ಸಾಧ್ಯವೇ ಇಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.