ಶ್ರೀನಗರ, ಫೆ. 22: ಪ್ರವಾಸಿ ದೋಣಿಗಳು ಮುಳುಗಿ ದುರಂತ ಎದುರಾದ ಅನೇಕ ಘಟನೆಗಳು ಇತ್ತೀಚೆಗೆ ನಡೆದಿವೆ. ಇತ್ತೀಚೆ ಗಷ್ಟೇ ಉಡುಪಿಯ ಕೋಡಿಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ಪ್ರವಾಸಿ ದೋಣಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದರು. ಇದೀಗ ಉತ್ತರಾಖಂಡದ (Uttarakhand) ಪೌರಿ ಜಿಲ್ಲೆಯ ಪ್ರಸಿದ್ಧ ಧಾರಿ ದೇವಿ ದೇವಸ್ಥಾನದ ಬಳಿ ಅಲಕನಂದಾ ನದಿಯಲ್ಲಿ ಎರಡು ಪ್ರವಾಸಿ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಡಿಕ್ಕಿ ಎಷ್ಟು ಪ್ರಬಲವಾಗಿತ್ತೆಂದರೆ ದೋಣಿ ನಿರ್ವಾಹಕರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ನೇರವಾಗಿ ನದಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.
ವಿಡಿಯೊ ನೋಡಿ:
ಪೌರಿ ಜಿಲ್ಲೆಯ ಅಲಕನಂದಾ ನದಿಯಲ್ಲಿ ಎರಡು ದೋಣಿಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಎರಡು ದೋಣಿಗಳು ವೇಗದಲ್ಲಿ ಬರುತ್ತಿದ್ದವು. ಡಿಕ್ಕಿ ಹೊಡೆದ ರಭಸಕ್ಕೆ ದೋಣಿ ನಿರ್ವಾಹಕರಲ್ಲಿ ಒಬ್ಬರು ಸಮತೋಲನ ಕಳೆದುಕೊಂಡು ನೇರವಾಗಿ ನದಿಗೆ ಎಸೆಯಲ್ಪಟ್ಟರು. ಚಾಲಕ ನದಿಯೊಳಗೆ ಬಿದ್ದಿದ್ದರಿಂದ ದೋಣಿ ನದಿಯ ಮಧ್ಯದಲ್ಲಿ ನಿಯಂತ್ರಣ ತಪ್ಪಿ ಮುಳುಗುವ ಹಂತಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ದಡದಲ್ಲಿದ್ದ ಭಕ್ತರು ಮತ್ತು ಪ್ರವಾಸಿಗರಲ್ಲಿ ತೀವ್ರ ಆತಂಕ ಸೃಷ್ಟಿ ಯಾಗಿತ್ತು.
ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!
ದೋಣಿ ನಿರ್ವಾಹಕನು ಸುರಕ್ಷಿತವಾಗಿ ಈಜುವಲ್ಲಿ ಯಶಸ್ವಿಯಾಗಿದ್ದಾನೆ. ದೋಣಿ ನಿಯಂತ್ರಣ ತಪ್ಪಿ ನೀರಿನಲ್ಲಿ ಸುತ್ತುತ್ತಿರುವುದನ್ನು ಗಮನಿಸಿದ ಇತರ ದೋಣಿ ಚಾಲಕರು ಕೂಡಲೇ ಗಮನಿಸಿ ಆ ದೋಣಿಯನ್ನು ನಿಯಂತ್ರಿಸಿದರು.
ಹಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ಕ್ಷಣಗಳನ್ನು ಸೆರೆಹಿಡಿದಿದ್ದಾರೆ. ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು, ಈ ರೀತಿಯಯಾಗಿ ಪ್ರವಾಸಿಗರ ಜೀವದ ಜತೆ ಆಟ ಆಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ನದಿಯಲ್ಲಿ ದೋಣಿ ವಿಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.