ಡೆಹ್ರಾಡೂನ್ ಜೂ.19: ಇತ್ತೀಚೆಗೆ ಧಾರ್ಮಿಕ ಹೆಸರಿನಲ್ಲಿ ಜನ ಆಧ್ಯಾತ್ಮಿಕ ತಾಣಗಳಿಗೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಟ್ಟರೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು, ಮದ್ಯಾಪಾನ ಸೇವನೆ ಮಾಡುವುದು ಹೀಗೆ ಬೇಜವ್ದಾರಿ ವರ್ತನೆಯನ್ನು ಕೂಡ ತೋರುತ್ತಿದ್ದಾರೆ. ಇದೀಗ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾದ ತುಂಗನಾಥವನ್ನು, ಜನರು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದು ಮಾದಕ ದ್ರವ್ಯ ಸೇವನೆಯನ್ನು ಇಲ್ಲಿ ಮಾಡುತ್ತಿದ್ದಾರೆ ಎಂದು ಅರ್ಚಕರೊಬ್ಬರು ದೂರಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಒಂದು ಕಾಲದಲ್ಲಿ ಶಾಂತಿ ಮತ್ತು ಭಕ್ತಿಗೆ ಹೆಸರುವಾಸಿಯಾಗಿದ್ದ ಧಾರ್ಮಿಕ ಸ್ಥಳಗಳನ್ನು ಇಂದು ಪಿಕ್ನಿಕ್ ತಾಣಗಳಂತೆ ಮಾಡಲಾಗುತ್ತಿದೆ.ಇಲ್ಲಿ ಜನರು ಭಕ್ತಿಗಾಗಿ ಪ್ರಾರ್ಥನೆಗಾಗಿ ಆಗಮಿಸುವುದು ಅಲ್ಲ, ವಿರಾಮಕ್ಕಾಗಿ ಎಂಜಾಯ್ ಮಾಡಲು ಬರುತ್ತಾರೆ, ಕಸ, ತ್ಯಾಜ್ಯವನ್ನು ಬಿಟ್ಟು ಈ ಸ್ಥಳಗಳ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ ಎಂದು ಅರ್ಚಕರು ದೂರಿದ್ದಾರೆ.
ವಿಡಿಯೋ ನೋಡಿ:
ದೇವಾಲಯಕ್ಕೆ ಬರುವ ಅನೇಕರು ಇಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ. ಕೆಲವರು ಪವಿತ್ರ ಕ್ಷೇತ್ರದಲ್ಲಿ ಮಾದಕ ದ್ರವ್ಯಗಳನ್ನು ಸೇವನೆ ಮಾಡುತ್ತಾ ಕಾಲ ಕಳೆಯುತ್ತಿದ್ದು ದೇವಾಲಯದ ಮರ್ಯಾದೆಗೆ ಹಾನಿ ಮಾಡುತ್ತಾರೆ ಎಂದು ಅರ್ಚಕರು ದೂರಿದ್ದಾರೆ. ಅವರ ಮಾತುಗಳು ಹಲವಾರು ಪವಿತ್ರ ಸ್ಥಳಗಳಲ್ಲಿ ಬೆಳೆಯುತ್ತಿರುವ ಕಳವಳವನ್ನು ಎತ್ತಿ ತೋರಿಸಿವೆ.
ನಾಗರಿಕ ಪ್ರಜ್ಞೆಯ ಕೊರತೆ ಇಂದು ಎದ್ದು ತೋರುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಲಕ್ಷ್ಯವನ್ನು ಜನ ಮಾಡುತ್ತಿದ್ದಾರೆ. ಹೀಗಾಗಿ ಇಂತವರಿಗೆ ಸರಿಯಾದ ದಂಡವನ್ನು ವಿಧಿಸಬೇಕೆಂದು ಅನೇಕರು ಕಿಡಿಕಾರಿದ್ದಾರೆ. ಪ್ರವಾಸಿಗರಿಂದ ಬರುವ ಆದಾಯದ ನಷ್ಟ ಭಯದಿಂದಾಗಿ ಸ್ಥಳೀಯ ಅಧಿಕಾರಿಗಳು ಹಾಗೂ ಸರ್ಕಾರಗಳು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅನೂಪ್ ನೌಟಿಯಾಲ್ ಅವರು ಈ ಕುರಿತು ವಿಡಿಯೋ ಹಂಚಿ ಕೊಂಡಿದ್ದು ಉತ್ತರಾಖಂಡ ಪೊಲೀಸರು ಇಂತಹ ಪವಿತ್ರ ಬೆಟ್ಟಗಳನ್ನು ಹತ್ತುವ ಮುನ್ನವೇ ಮಾದಕದ್ರವ್ಯ ಪರೀಕ್ಷೆ ಮಾಡಬೇಕು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.