ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ (Metro Station) ಇಬ್ಬರು ಮಹಿಳೆಯರ ನಡುವೆ ನಡೆದ ವಾಗ್ವಾದದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಭಾಷೆಯ ಆಯ್ಕೆಯ ವಿಷಯದಲ್ಲಿ ಘರ್ಷಣೆ ಭುಗಿಲೆದ್ದಿದೆ. ಒಬ್ಬ ಮಹಿಳೆ ಕನ್ನಡದಲ್ಲಿ (Kannada) ಮಾತನಾಡಲು ಒತ್ತಾಯಿಸಿದರೆ, ಇನ್ನೊಬ್ಬ ಮಹಿಳೆ ನಿರಾಕರಿಸಿ ಹಿಂದಿಯಲ್ಲಿ (Hindi) ಪ್ರತಿಕ್ರಿಯಿಸಿದರು. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಇಬ್ಬರು ಮಹಿಳೆಯರು ನಿಂತು ಮಾತಿನ ಚಕಮಕಿ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊದಲ್ಲಿ, ಬುರ್ಖಾ ಧರಿಸಿದ ಮಹಿಳೆಯೊಬ್ಬರು ಹಿಂದಿ ಮಾತನಾಡಿ ಎಂದು ಜೋರಾಗಿ ಹೇಳಿದರೆ, ಮತ್ತೊಬ್ಬ ಮಹಿಳೆ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾರೆ. ಹಿಂದಿ, ಕನ್ನಡ ಎನ್ನುತ್ತಾ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.
ಸೀರೆಯುಟ್ಟ ಕನ್ನಡ ಭಾಷಿಕ ಮಹಿಳೆಯ ಬಗ್ಗೆ ಬುರ್ಖಾ ಧರಿಸಿದ ಮಹಿಳೆಯು, ನೀವು ಸಿದ್ದರಾಮಯ್ಯ ಅವರ ಮಹಿಳೆಯೇ? ಎಂದು ಪ್ರಶ್ನಿಸಿದ್ದಲ್ಲದೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಮಾತು ಮುಂದುವರಿದಂತೆ, ಕನ್ನಡ ಮಾತನಾಡುವ ಮಹಿಳೆ ಪದೇ ಪದೆ ಕನ್ನಡ...ಕನ್ನಡ...ಎಂದು ಹೇಳಿದರೆ, ಮತ್ತೊಬ್ಬಾಕೆ ಭಾಷೆ ಬದಲಾಯಿಸಲು ನಿರಾಕರಿಸಿದ್ದಾಳೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಹೆಚ್ಚುತ್ತಿರುವ ಭಾಷಾ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ರೆಡ್ಡಿಟ್ ಬಳಕೆದಾರರು, ಪ್ರತಿದಿನ ಕನ್ನಡಕ್ಕಾಗಿ ಹೋರಾಟ ನಡೆಯುತ್ತಿರುವಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ಅಸಹಿಷ್ಣುತೆ ಏಕೆ? ಎಂದು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ಗೊಂದಲದಿಂದ ಕೂಡಿದ್ದು, ಇದು ಆಕ್ರೋಶ ಅಥವಾ ಗಲಾಟೆಗೆ ನಿಜವಾಗಿಯೂ ಅರ್ಹವಲ್ಲ ಎಂದು ಎಕ್ಸ್‌ನಲ್ಲಿ ಬಳಕೆದಾರರೊಬ್ಬರು ಟೀಕಿಸಿದ್ದಾರೆ.
ಮೊನ್ನೆಯಷ್ಟೇ ಮಹಾರಾಷ್ಟ್ರದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮರಾಠಿ ಭಾಷಿಕ ಮಹಿಳೆ ಹಾಗೂ ಹಿಂದಿ ಭಾಷಿಕ ಮಹಿಳೆಯ ನಡುವೆ ರೈಲಿನಲ್ಲಿ ಭಾಷಾ ಸಮರ ನಡೆದಿತ್ತು. ಅಲ್ಲಿ ಮರಾಠಿ ಮಾತನಾಡುವ ಮಹಿಳೆಯು, ಮತ್ತೊಬ್ಬ ಮಹಿಳೆಗೆ ಮರಾಠಿ ಭಾಷೆ ಮಾತನಾಡದಿದ್ದರೆ ಮಹಾರಾಷ್ಟ್ರದಿಂದ ಒದ್ದು ಓಡಿಸುವುದಾಗಿ ಬೆದರಿಸಿದ್ದಳು. ಈ ವಿಡಿಯೊ ವೈರಲ್ ಆಗಿತ್ತು.
ದಕ್ಷಿಣ ಭಾರತದಲ್ಲಿ ಇತ್ತೀಚೆಗೆ ಭಾಷಾ ಸಮರ ನಡೆಯುತ್ತಿದೆ. ಹಿಂದಿ ಭಾಷಿಕರು ನಮ್ಮ ನಾಡಿಗೆ ಬಂದು, ಇಲ್ಲಿನ ಭಾಷೆ, ಸಂಸ್ಕೃತಿಗೆ ಬೆಲೆ ಕೊಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದು ಕನ್ನಡಿಗರು, ತಮಿಳಿಗರು, ತೆಲುಗು ಜನರ ಕೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Viral Video: ನವರಾತ್ರಿ ವಿಶೇಷ- ಸೀರೆ ಉಟ್ಟು ಗಾರ್ಬಾ ನೃತ್ಯ ಪ್ರದರ್ಶಿಸಿದ ಪುರುಷರು; ವಿಡಿಯೊ ವೈರಲ್