ವೆನಿಸ್: ಅಮೆರಿಕದ ಪ್ರವಾಸಿ ಮಹಿಳೆಯೊಬ್ಬರು ಶಂಕಿತ ಜೇಬುಗಳ್ಳಿಯನ್ನು ಆಕೆಯ ಜುಟ್ಟು ಹಿಡಿದು (ponytail) ಎಳೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಹದಿಹರೆಯದ ಬಾಲಕಿಯು ತನ್ನ ಪರ್ಸ್ ಮತ್ತು ಪಾಸ್‌ಪೋರ್ಟ್ ಅನ್ನು ಕದ್ದಿದ್ದಾಳೆ ಎಂದು ಪ್ರವಾಸಿ ಆರೋಪಿಸಿದ್ದಾರೆ. ಆಗಸ್ಟ್ 14ರಂದು ಈ ಘಟನೆ ನಡೆದಿದ್ದು, ಇಟಲಿಗೆ ರಜೆ ವೇಳೆ ತೆರಳಿದ್ದಾಗ ಅಮೆರಿಕದ (US) ಮಹಿಳೆಯ ಪರ್ಸ್ ಕದ್ದಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆಯು ಕೋಪಗೊಂಡು ಬಾಲಕಿಯ ಜುಟ್ಟು ಹಿಡಿದುಕೊಂಡಿರುವುದು ಕಂಡು ಬಂದಿದೆ. ಎಂಟು ಮಕ್ಕಳ ತಾಯಿಯಾಗಿರುವ ಆ ಮಹಿಳೆ, ಕದ್ದ ವಸ್ತುವಿನ ಒಳಗಿದ್ದ ತನ್ನ ಏರ್‌ಪಾಡ್‌ನಲ್ಲಿನ ‘ಫೈಂಡ್ ಮೈ ಫ್ರೆಂಡ್ಸ್’ ವೈಶಿಷ್ಟ್ಯವನ್ನು ಬಳಸಿಕೊಂಡು ಕಳುವಾದ ತಮ್ಮ ಪರ್ಸ್ ಪತ್ತೆ ಹಚ್ಚಿದ್ದಾರೆ ಎಂದು ಅವರ ಮಗಳು ಕರಿಸ್ ಮೆಕ್‌ಲ್ರಾಯ್ ಹೇಳಿದ್ದಾಳೆ. ಈ ಘಟನೆಯ ಮೂಲ ವಿಡಿಯೊವನ್ನು ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕರಿಸ್ ಅವರ ತಾಯಿ ವೆನಿಸ್‌ನಲ್ಲಿ ತನ್ನ ಮಲತಂದೆಯೊಂದಿಗೆ ರಜೆಗೆ ತೆರಳಿದ್ದರು. ಕಿರಿದಾದ ಸೇತುವೆಯ ಮೇಲೆ ನಿಂತಿದ್ದಾಗ ಬೆನ್ನಿಗೆ ಹಾಕಿದ್ದ ಜಿಪ್ ಬಿಚ್ಚಲಾಗಿದೆ. ಲೋಹದ ನೀರಿನ ಬಾಟಲ್ ಹಾಗೂ ಪರ್ಸ್ ಕಾಣೆಯಾಗಿರುವುದು ಆಕೆಗೆ ಗೊತ್ತಾಗಿದೆ. ಪರ್ಸ್‌ನಲ್ಲಿ ಅವರ ಕ್ರೆಡಿಟ್ ಕಾರ್ಡ್‌ಗಳು, ನಗದು ಮತ್ತು ಪಾಸ್‌ಪೋರ್ಟ್ ಇತ್ತು. ಕೂಡಲೇ ಅವರ ಪತಿ ಮತ್ತು ಅವರು ‘ಫೈಂಡ್ ಮೈ ಫ್ರೆಂಡ್ಸ್’ನಲ್ಲಿ ಏರ್‌ಪಾಡ್ ವೈಶಿಷ್ಟ್ಯದ ಮೂಲಕ ಅವಳ ಪರ್ಸ್ ಅನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದರು. ಈ ವೇಳೆ ಮೂವರು ಹುಡುಗಿಯರನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಕರಿಸ್ ವಿಡಿಯೊದಲ್ಲಿ ತಿಳಿಸಿದ್ದಾಳೆ.
ವಿಡಿಯೊ ವೀಕ್ಷಿಸಿ:
ಕೂಡಲೇ ಆ ಬಾಲಕಿಯರನ್ನು ಬೆನ್ನಟ್ಟಿದ ಮಹಿಳೆ, ಒಬ್ಬಳ ಜುಟ್ಟು ಹಿಡಿದು ಎಳೆದಿದ್ದಾಳೆ. ಒಬ್ಬಳು ಆಕೆಯ ಜತೆಯೇ ಇದ್ದರೆ ಮತ್ತೊಬ್ಬಾಕೆ ತನ್ನ ತಾಯಿಯ ಪರ್ಸ್‌ನೊಂದಿಗೆ ಓಡಿಹೋಗಿದ್ದಾಳೆ ಎಂದು ಕರಿಸ್ ವಿವರಿಸಿದ್ದಾಳೆ. ಬ್ಯಾಗ್‌ನಲ್ಲಿರುವ ಬೇರೆ ಯಾವುದೇ ವಸ್ತುಗಳ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮುಖ್ಯವಾಗಿ ಪಾಸ್‌ಪೋರ್ಟ್ ಕಳ್ಳತನವಾಗಿರುವುದರಿಂದ ಆಕೆಗೆ ಕಳವಳವುಂಟಾಗಿತ್ತು ಎಂದು ಆಕೆಯ ಪುತ್ರಿ ಹೇಳಿದ್ದಾಳೆ.
ಮೂವರು ಹದಿಹರೆಯದವರು ವೆನಿಸ್‌ನಲ್ಲಿ ಕುಖ್ಯಾತ ಜೇಬುಗಳ್ಳರಾಗಿದ್ದು, ಪೊಲೀಸರು ಬರುವವರೆಗೂ ಅವಳನ್ನು ಹಿಡಿದುಕೊಂಡು ಇದ್ದರು. ಮಹಿಳೆ ಜುಟ್ಟು ಹಿಡಿದುಕೊಂಡಿದ್ದರಿಂದ ಆ ಹುಡುಗಿಯು ಕಿರುಚುತ್ತಲೇ ಇದ್ದಳು. ಇದ್ಯಾವುದಕ್ಕೂ ಅಂಜದ ಅಮೆರಿಕನ್ ಮಹಿಳೆ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ಪೊಲೀಸರು ಬಂದು ಹುಡುಗಿಯರನ್ನು ಬಂಧಿಸಲು ಹೋದಾಗ, ಭುಜದ ಮೇಲೆ ಬ್ಯಾಗ್ ಹಿಡಿದಿದ್ದ ಹುಡುಗಿಯು ತನ್ನ ಅಮ್ಮನಿಗೆ ಅದರಿಂದ ಮಹಿಳೆಯ ತಲೆಗೆ ಬಡಿದಿದ್ದಾಳೆ. ಕಳ್ಳತನ ಮಾಡಿದ್ದ ಲೋಹದ ನೀರಿನ ಬಾಟಲಿ ಆ ಬ್ಯಾಗ್‍ನೊಳಗಿತ್ತು. ಅದರಿಂದ ತನ್ನ ಅಮ್ಮನ ತಲೆಯ ಮೇಲೆ ದೊಡ್ಡ ಗಾಯವಾಗಿ, ರಕ್ತಸ್ರಾವವಾಗುತ್ತಿತ್ತು. ಅವಳ ಕಣ್ಣು ಕಪ್ಪು ಬಣ್ಣಕ್ಕೆ ತಿರುಗಿತು. ನಂತರ ನನ್ನ ತಾಯಿ ಆಸ್ಪತ್ರೆಗೆ ಹೋಗಿ ಹೊಲಿಗೆ ಹಾಕಬೇಕಾಯಿತು ಎಂದು ಕರಿಸ್ ಹೇಳಿದ್ದಾಳೆ.
ಇನ್ನು ಇಬ್ಬರು ಹದಿಹರೆಯದ ಹುಡುಗಿಯರನ್ನು ಪೊಲೀಸರು ಬಂಧಿಸಿದ್ದಾರೆ. ಮೂರನೇ ಹುಡುಗಿ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಹೋಗಿದ್ದಾಳೆ, ಅಲ್ಲಿ ಅವಳನ್ನು ಬಂಧಿಸಲಾಯಿತು. ಪೊಲೀಸರು ಕರಿಸ್ ಅವರ ತಾಯಿಯ ಪಾಸ್‌ಪೋರ್ಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪತ್ತೆಹಚ್ಚಿದರು. ಆದರೆ ನಗದು ಮತ್ತು ಏರ್‌ಪಾಡ್‌ಗಳು ಮಾತ್ರ ಸಿಕ್ಕಿಲ್ವಂತೆ.
ಆ ಭಯಾನಕ ಅನುಭವದ ನಂತರವೂ, ವೆನಿಸ್‌ನಲ್ಲಿರುವ ಜನರು ಎಷ್ಟು ಕರುಣಾಮಯಿ ಎಂದು ತನ್ನ ತಾಯಿ ಎತ್ತಿ ತೋರಿಸುತ್ತಲೇ ಇದ್ದರು ಎಂದು ಕರಿಸ್ ಹೇಳಿದರು. ಅಲ್ಲಿದ್ದ ಆಭರಣ ಅಂಗಡಿಯ ಮಾಲೀಕರು ತಾಯಿಗೆ ಒಂದು ಹಾರವನ್ನು ಉಡುಗೊರೆಯಾಗಿ ನೀಡಿದರಂತೆ. ಇನ್ನು ಮಹಿಳೆ ಜುಟ್ಟು ಹಿಡಿದಿದ್ದ ಬಾಲಕಿಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಎರಡು ದಿನಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಹೇಳಲಾಗಿದೆ.
ಇದನ್ನೂ ಓದಿ: Viral News: ಈ ಹೋಟೆಲ್‍ಗೆ ಭೇಟಿ ನೀಡಿದರೆ ನೀವು ಒಂಟಿಯಾಗಿರಲ್ಲ; ನಿಮಗಾಗಿ ಆತ್ಮೀಯ ಸ್ನೇಹಿತನೊಬ್ಬ ಇಲ್ಲಿರ್ತಾನೆ!