ದೆಹಲಿ, ಮೇ 27: ದೇಶದಲ್ಲಿ ಬಿಸಿಲಿನ ತೀವ್ರತೆಗೆ ಜನ ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೀಕರ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಬೆಂದು ಹೋಗಿವೆ. ಇಷ್ಟೇ ಅಲ್ಲ ತಿನ್ನುವ ಆಹಾರ ಪದಾರ್ಥಗಳೂ ಕೂಡ ಕರಗಿ ಹೋಗುತ್ತಿವೆ. ದೆಹಲಿಯ ತೀವ್ರ ಬಿಸಿಲಿನ ತಾಪಮಾನಕ್ಕೆ ಲಡ್ಡುಗಳೇ ಕರಗಿ ಹಲ್ವಾದಂತೆ ಆಗಿರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ತಾಪಮಾನವು 45°C ದಾಟುತ್ತಿದ್ದು ಜನ ಹೊರಗೆ ಹೋಗಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದೀಗ ದೆಹಲಿಯ ಬೇಸಗೆಯ ಬಿಸಿಲು ಮತ್ತೊಮ್ಮೆ ಆತಂಕವನ್ನು ಸೃಷ್ಟಿಸಿದೆ. ಸುಡುವ ತಾಪಮಾನದಲ್ಲಿ ಲಡ್ಡು ಸಹ ಕರಗುತ್ತಿರುವುದನ್ನು ಮಹಿಳೆಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ಮನುಷ್ಯರಿಗೆ ಮಾತ್ರ ಅಲ್ಲ, ಈಗ ಹುಲಿಗಳಿಗೂ 'ಇಂಟರ್ಮಿಟೆಂಟ್ ಫಾಸ್ಟಿಂಗ್'!
ಅತಿಯಾದ ಬಿಸಿಲಿಗೆ ಲಡ್ಡು ಆಕಾರವನ್ನು ಕಳೆದುಕೊಂಡು, ಕರಗಿ ಒಂದಕ್ಕೊಂದು ಅಂಟಿಕೊಂಡು ಹಲ್ವಾದ ಶೇಪ್‌ಗೆ ಬಂದಿವೆ. ʼʼಇನ್ಮುಂದೆ ಇದು ಲಡ್ಡು ಅಲ್ಲ. ಇದರದ್ದೀಗ ಬರ್ಫಿ ಮಾಡಬೇಕುʼʼ ಎಂದು ಮಹಿಳೆ ತಮಾಷೆ ಮಾಡಿ ವಿಡಿಯೊ ಹಂಚಿಕೊಂಡಿದ್ದಾರೆ. ಬಿಸಿಲಿನ ತೀವ್ರತೆ ವಿದ್ಯುತ್ ಕಡಿತದಿಂದ ಹಿಡಿದು ನೀರಿನ ಕೊರತೆಯವರೆಗೆ ಜನರನ್ನು ಸಂಕಷ್ಟಕ್ಕೆ ದೂಡಿದೆ.
ವಿಡಿಯೊ ನೋಡಿ:
ಲಡ್ಡು ಕರಗುತ್ತಿರುವ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಕಮೆಂಟ್ ಬಾಕ್ಸ್‌ನಲ್ಲಿ ಹಲವು ಹಾಸ್ಯದ ಪ್ರತಿಕ್ರಿಯೆಗಳು ಬಂದಿವೆ. ಒಬ್ಬರು, "ನಾವು ಇರುವುದು ಭೂಮಿಯ ಮೇಲೆ ಹೌದೇ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ʼʼಇನ್ಮುಂದೆ ಬರ್ಫಿ ಮಾಡುವುದು ಸುಲಭ. ಬಿಸಿಲಿಗೆ ಇಟ್ಟರೆ ಸಾಕುʼʼ ಎಂದು ಹಾಸ್ಯ ಮಾಡಿದ್ದಾರೆ. ಈ ವಿಡಿಯೊ ನೋಡಲು ತಮಾಷೆಯಾಗಿದ್ದರೂ, ಉತ್ತರ ಭಾರತ, ದೆಹಲಿಯಲ್ಲಿರುವ ಭೀಕರ ಹವಾಮಾನ ಪರಿಸ್ಥಿತಿಯನ್ನು ವಿವರಿಸಿದೆ.