ದೆಹಲಿ, ನ. 22: ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎನ್ನುವುದು ಬಹುತೇಕ ಸಂದರ್ಭಗಳಲ್ಲಿ ಘೋಷ ವಾಕ್ಯಕ್ಕೆ ಸೀಮಿತವಾಗುತ್ತದೆ. ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸೋದು, ಮೂವರು ತೆರಳೋದು, ಕಾರ್ಗಳಲ್ಲಿ ಸೀಟ್ ಬೆಲ್ಟ್ ಹಾಕದೇ ಇರೋದು ಹೀಗೆ ಪ್ರತಿ ದಿನ ಒಂದಲ್ಲ ಒಂದು ಸನ್ನಿವೇಶ ನೋಡುತ್ತಿರುತ್ತೇವೆ. ಇದೀಗ ಅಂತಹದ್ದೇ ನಿಯಮ ಉಲ್ಲಂಘನೆಯ ದೃಶ್ಯ ವೈರಲ್ (Viral Video) ಆಗಿದೆ. ಫುಟ್ಪಾತ್ನಲ್ಲಿ ಹಲವು ದ್ವಿಚಕ್ರ ವಾಹನ ಬರುತ್ತಿದ್ದರೂ, ನಿರಂತರ ಹಾರ್ನ್ ಮಾಡುತ್ತಿದ್ದರೂ ಮೂವರು ಮಹಿಳೆಯರು ದಾರಿ ಬಿಟ್ಟು ಕೊಡದೆ ಪಾಠ ಕಲಿಸಿದ್ದಾರೆ. ಸದ್ಯ ಅವರ ದಿಟ್ಟತನಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.
ಫುಟ್ಪಾತ್ನಲ್ಲಿ ವಾಹನಗಳು ಸಂಚರಿಸಬಾರದು ಎನ್ನುವ ನಿಯಮವಿದೆ. ಆದರೆ ನಗರ ಪ್ರದೇಶಗಳಲ್ಲಿ ಈ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಎಲ್ಲೆಂದರಲ್ಲಿ, ಫುಟ್ಪಾತ್ ಮೇಲೆ ವಾಹನ ನುಗ್ಗಿಸಿ ಪಾದಾಚಾರಿಗಳಿಗೆ ಕಿರಿಕಿರಿ ಉಂಟು ಮಾಡುವುದು ಸಾಮಾನ್ಯ ಎಂಬಂತಾಗಿದೆ. ಇದೀಗ ಅಂತಹವರಿಗೆ ಈ ಮೂವರು ದಿಟ್ಟ ಮಹಿಳೆಯರು ಬುದ್ಧಿ ಕಲಿಸಿದ್ದಾರೆ. ಹಲವು ದ್ವಿಚಕ್ರ ವಾಹನಗಳು ಹಾರ್ನ್ ಹೊಡೆಯುತ್ತಿದ್ದರೂ ದಾರಿ ಬಿಟ್ಟು ಕೊಡದೆ ತಮ್ಮಷ್ಟಕ್ಕೆ ತಾವು ನಡೆದುಕೊಂಡು ಹೋಗಿದ್ದಾರೆ.
ವೈರಲ್ ವಿಡಿಯೊ ನೋಡಿ:
ವಿಡಿಯೊದಲ್ಲಿ ಏನಿದೆ?
ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿ ನೆಟ್ಟಿಗರ ಗಮನ ಸೆಳೆದಿದೆ. ಫುಟ್ಪಾತ್ನಲ್ಲಿ ನಡೆಯುತ್ತಿರುವ ಮಹಿಳೆಯರು ದ್ವಿಚಕ್ರ ವಾಹನಗಳಿಗೆ ದಾರಿ ಬಿಟ್ಟು ಕೊಡದೆ ಧೈರ್ಯದಿಂದ ನಡೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ವಿಶೇಷ ಎಂದರೆ ಹಲವು ಬಾರಿ ಹಾರ್ನ್ ಹೊಡೆದರೂ ಅವರು ಕಿಂಚಿತ್ತೂ ಅಂಜಿಲ್ಲ. ಜತೆಗೆ ದಾರಿನೂ ಬಿಟ್ಟು ಕೊಟ್ಟಿಲ್ಲ.
ಫುಟ್ಪಾತ್ ಮೇಲೆ ಸ್ಕೂಟರ್ ಓಡಿಸಿದ ಯುವಕನಿಗೆ ಅಜ್ಜಿಯ 'ಖಡಕ್' ವಾರ್ನಿಂಗ್
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಈ ಮೂವರು ದ್ವಿಚಕ್ರ ವಾಹನ ಸವಾರರು ಕಲಿಯೇಬೇಕಾದ ಪಾಠವನ್ನು ಮನಮುಟ್ಟುವಂತೆ, ಪ್ರಾಯೋಗಿಕವಾಗಿ ಕಲಿಸಿದ್ದಾರೆʼʼ ಎಂದು ಬಣ್ಣಿಸಲಾಗಿದೆ.
ಚರ್ಚೆ ಹುಟ್ಟು ಹಾಕಿದ ವಿಡಿಯೊ
ಇದರೊಂದಿಗೆ ಈ ವಿಡಿಯೊ ಟ್ರಾಫಿಕ್ ರೂಲ್ಸ್ ಬಗ್ಗೆ, ದ್ವಿಚಕ್ರ ವಾಹನ ಸವಾರರು ತಿಳಿದರಲೇಬೇಕಾದ ಕನಿಷ್ಠ ನಿಯಮಗಳ ಬಗ್ಗೆ, ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಒಬ್ಬರು, ʼʼಈ ಘಟನೆಯಿಂದಾದರೂ ಸವಾರರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುತ್ತಾರೆಯೇ?ʼʼ ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, "ಮಹಿಳೆಯರಿಂದ ಒಳ್ಳೆಯ ಕೆಲಸ. ಈ ಬೈಕರ್ಗಳಿಗೆ ನಾಚಿಕೆಯಾಗಬೇಕು" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಭಾರತೀಯರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿ ನಂತರ ಹಾರ್ನ್ ಮಾಡಬೇಕು" ಎಂದು ವ್ಯಂಗ್ಯವಾಡಿದ್ದಾರೆ. ವಾಹನ ಚಾಲಕರು ಪರ್ಯಾಯ ಮಾರ್ಗಗಳಾಗಿ ಪಾದಚಾರಿ ಮಾರ್ಗಗಳನ್ನು ಬಳಸುವುದನ್ನು ತಡೆಯಲು ಕಠಿಣ ಕ್ರಮ ಜಾರಿಗೊಳಿಸುವ ಅಗತ್ಯವನ್ನು ಕೆಲವರು ಒತ್ತಿ ಹೇಳಿದರು.
ಕುಡಿದ ಮತ್ತಿನಲ್ಲಿ ಫುಟ್ಪಾತ್ ಮೇಲೆ ಗಾಡಿ ಓಡಿಸಿದ್ದಲ್ಲದೇ, ವೃದ್ಧನಿಗೆ ಥಳಿಸಿದ ಬೈಕ್ ಸವಾರ
ಕೆಲವು ತಿಂಗಳ ಹಿಂದೆ ಕೇರಳಂನಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಪಾದಚಾರಿ ಮಾರ್ಗದಲ್ಲಿ ಬಂದ ಸ್ಕೂಟರ್ಗೆ ದಾರಿ ಬಿಟ್ಟು ಕೊಡದೆ ವೃದ್ಧೆಯೊಬ್ಬರು ಚಾಲಕನ್ನು ಸತಾಯಿಸಿದ್ದರು. ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಇದ್ದ ಕಾರಣ, ಸಮಯ ಉಳಿಸಲು ಸ್ಕೂಟರ್ ಸವಾರನು ಫುಟ್ಪಾತ್ ಮೇಲೆ ವಾಹನ ಚಲಾಯಿಸಿದ್ದ. ಅಲ್ಲಿದ್ದ ವೃದ್ಧೆಯೊಬ್ಬರು ಸವಾರನ ದಾರಿಗೆ ಅಡ್ಡವಾಗಿ ನಿಂತಿದ್ದರು. ಸವಾರ ಎಷ್ಟೇ ಪ್ರಯತ್ನಿಸಿದರೂ ಅಜ್ಜಿ ಮಾತ್ರ ದಾರಿ ಬಿಟ್ಟು ಕೊಟ್ಟಿರಲಿಲ್ಲ. ಇದರ ಬದಲಾಗಿ ಸವಾರನಿಗೆ ಪಾದಚಾರಿ ಮಾರ್ಗವನ್ನು ಬಳಸದಂತೆ ಎಚ್ಚರಿಕೆ ನೀಡಿದ್ದರು.
ಇನ್ನಷ್ಟು ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.