ಭೋಪಾಲ್: ಬೀದಿ ನಾಯಿಮರಿಗಳು ಮಗುವಿನ ತಲೆಬುರುಡೆಯೊಂದಿಗೆ ಆಟವಾಡುತ್ತಿದ್ದ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಗುರುವಾರ(ಜನವರಿ 30) ಸೋಶಿಯಲ್ ಮೀಡಿಯಾಗಳಲ್ಲಿ ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಆಗಿದೆ. ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆಯ ಹಾಸ್ಟೆಲ್ ಬಳಿಯಿಂದ ಈ ವಿಡಿಯೊವನ್ನು ಸೆರೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ವಿಡಿಯೊ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಕಾಲೇಜಿನ ಡೀನ್ ನವನೀತ್ ಸಕ್ಸೇನಾ, ತಲೆಬುರುಡೆ ಅಲ್ಲಿಗೆ ಹೇಗೆ ತಲುಪಿತು? ಅದು ಯಾರಿಗೆ ಸೇರಿದ್ದು? ಮತ್ತು ಅದನ್ನು ಹಾಸ್ಟೆಲ್ ಹಿಂಭಾಗದ ಕೊಳದ ಬಳಿ ಎಸೆಯಲಾಗಿದೆಯೇ? ಎಂಬ ಹಲವು ಪ್ರಶ್ನೆಗಳು ಅವರಲ್ಲಿ ಮೂಡಿದ ಕಾರಣ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಮಾಹಿತಿಯ ಪ್ರಕಾರ, ಜಬಲ್ಪುರದ ನೇತಾಜಿ ಸುಭಾಷ್ ಚಂದ್ರ ಬೋಸ್ ವೈದ್ಯಕೀಯ ಆಸ್ಪತ್ರೆಯ ಬಳಿ ಎರಡು ನಾಯಿಮರಿಗಳು ಮಾನವ ಮಗುವಿನ ತಲೆಬುರುಡೆಯೊಂದಿಗೆ ಆಟವಾಡಿದ ದೃಶ್ಯಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿ ಎರಡು ನಾಯಿಮರಿಗಳಲ್ಲಿ ಒಂದು ತಲೆಬುರುಡೆಯನ್ನು ಎತ್ತಿಕೊಂಡು ಓಡಿಹೋಗುವುದು ಸೆರೆಯಾಗಿದೆ. ವೈದ್ಯಕೀಯ ಕಾಲೇಜಿನ ಡೀನ್ ವಿಡಿಯೊವನ್ನು ನೋಡಿ ಈ ವಿಷಯದ ಬಗ್ಗೆ ಸಮಗ್ರ ತನಿಖೆಯನ್ನು ಶುರು ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:UP horror: ಪೊಲೀಸರ ಎದುರೇ ನಡೆಯಿತು ಮರ್ಡರ್! ಆಸ್ಪತ್ರೆಯ ಹೊರಗೆ ವ್ಯಕ್ತಿಯ ತಲೆಬುರುಡೆ ಒಡೆದ ಕಿರಾತಕರು
ಮೇಲ್ನೋಟಕ್ಕೆ ಸ್ವಚ್ಛತೆ ಕೆಲಸ ಮಾಡುವ ಸಿಬ್ಬಂದಿ ತಲೆಬುರುಡೆಯನ್ನು ಹಾಸ್ಟೆಲ್ ಹಿಂಭಾಗದಲ್ಲಿ ಹೂತುಹಾಕಿದ್ದರು ಎಂದು ತಿಳಿದುಬಂದಿದೆ. ತಲೆಬುರುಡೆಯ ಮೇಲೆ ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸುವಂತೆ ಆದೇಶಿಸಲಾಗಿದೆ. ಇದಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಉದ್ದೇಶಗಳಿಗಾಗಿ ತಲೆಬುರುಡೆಗಳನ್ನು ಸಹ ಬಳಸುತ್ತಾರೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ತನಿಖೆ ಸಂಪೂರ್ಣಗೊಂಡ ಬಳಿಕ ಈ ಬಗ್ಗೆ ಮಾಹಿತಿ ಹೊರಬೀಳಲಿದೆ.