ಭೋಪಾಲ್: ಮಧ್ಯಪ್ರದೇಶದ ಸಿಯೋನಿಯ ಪೆಂಚ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಕಾಡುಹಂದಿಯನ್ನು ಬೆನ್ನಟ್ಟಿಕೊಂಡು ಬಂದು ನಂತರ ಆಕಸ್ಮಿಕವಾಗಿ ಹುಲಿ ಮತ್ತು ಕಾಡು ಹಂದಿ ಎರಡು ಒಟ್ಟಿಗೆ ಬಾವಿಯೊಳಗೆ ಬಿದ್ದಿವೆ. ಆದರೆ ಬಾವಿಯಲ್ಲಿ ಕಾಡುಹಂದಿ ಹುಲಿಯ ಹತ್ತಿರವಿದ್ದರೂ ಅದನ್ನು ತಿನ್ನದೇ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಜಿಕುರೈ ಅರಣ್ಯ ವಲಯದ ಪಿಪರಿಯಾ ಹರ್ದುಲಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು ಬಾವಿಯಿಂದ ನೀರು ತರಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಹುಲಿ ಮತ್ತು ಕಾಡುಹಂದಿಯನ್ನು ಬಾವಿಯಲ್ಲಿ ಕಂಡು ಬೆರಗಾಗಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳನ್ನು ರಕ್ಷಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ಬಾವಿಯಲ್ಲಿ ಕಾಡುಹಂದಿ ಹಾಗೂ ಹುಲಿ ಒಟ್ಟಿಗೆ ಇರುವುದು ಸೆರೆಯಾಗಿದೆ. ಅಲ್ಲಿದ್ದ ಜನರು ಇದನ್ನು ವಿಡಿಯೊ ಮಾಡಿದ್ದಾರೆ. ಹುಲಿ ಮತ್ತು ಕಾಡುಹಂದಿ ಬಾವಿಯಿಂದ ಹೊರಗೆ ಬರಲು ದಾರಿಯನ್ನು ಹುಡುಕುತ್ತಾ ನೀರಿನಲ್ಲಿ ಈಜುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕಾಡುಹಂದಿ ಹುಲಿಯ ಪಕ್ಕದಲ್ಲಿಯೇ ಹಾದುಹೋದರೂ ಹುಲಿ ಬೇಟೆಯನ್ನು ಮರೆತು ಜೀವ ಉಳಿಸಿಕೊಳ್ಳಲು ಒದ್ದಾಡಿದೆ.
ಮೀಸಲು ಪ್ರದೇಶದ ಉಪ ನಿರ್ದೇಶಕ ರಜನೀಶ್ ಕುಮಾರ್ ಸಿಂಗ್ ಅವರು ತಿಳಿಸಿದ ಪ್ರಕಾರ, ಸುಮಾರು ಮೂರು ವರ್ಷದ ಹೆಣ್ಣು ಹುಲಿ ಹಂದಿಯನ್ನು ಬೆನ್ನಟ್ಟಿಕೊಂಡು ಬಂದಾಗ ಎರಡು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿವೆ. ಆದರೆ ಅಲ್ಲಿ ಕಾಡುಹಂದಿ ತನ್ನ ಹತ್ತಿರದಲ್ಲಿಯೇ ಇದ್ದರೂ ಹುಲಿ ಅದಕ್ಕೆ ಏನೂ ಮಾಡದೇ ಸುಮ್ಮನೇ ಇದೆಯಂತೆ ನಾಲ್ಕು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅವುಗಳನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಮಾಹಿತಿ ಪ್ರಕಾರ, ಮಂಚಕ್ಕೆ ಹಗ್ಗವನ್ನು ಕಟ್ಟಿ ಬಾವಿಗೆ ಇಳಿಸಿದಾಗ ಹುಲಿ ಬಂದು ಮಂಚದ ಮೇಲೆ ಕುಳಿತಿತಂತೆ. ನಂತರ ರಕ್ಷಣಾ ತಂಡವು ಹೈಡ್ರಾಲಿಕ್ ಕ್ರೇನ್ ಮೂಲಕ ಬಾವಿಗೆ ಬೋನು ಇಳಿಸಿ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರಂತೆ. ಕಾಡುಹಂದಿಯನ್ನು ಸಹ ಇದೇ ರೀತಿ ರಕ್ಷಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಹುಲಿಯನ್ನು ಆನೆ ಮೇಲೆ ಕಟ್ಟಿ ಸವಾರಿ ಮಾಡಿದ ದುರುಳರು- ಹಳೆಯ ವಿಡಿಯೊ ಮತ್ತೆ ವೈರಲ್
ಈ ಕಾರ್ಯಾಚರಣೆಯಲ್ಲಿ ಸುಮಾರು 60 ರಕ್ಷಕರು ಭಾಗಿಯಾಗಿದ್ದಾರಂತೆ. ಸಾಗರ ಜಿಲ್ಲೆಯ ವೀರಾಂಗನ ದುರ್ಗಾವತಿ ಹುಲಿ ಮೀಸಲು ಪ್ರದೇಶದ ನೌರದೇಹಿ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಯನ್ನು ಬಿಡುಗಡೆ ಮಾಡಲು ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.