ಲಖನೌ: ವ್ಯಕ್ತಿಯೊಬ್ಬ ಉದ್ದನೆಯ ಕೋಲು ಹಿಡಿದು ಆಸ್ಪತ್ರೆಯ ತುರ್ತು ವಾರ್ಡ್‌ನ ಒಳಗೆ ಇದ್ದ ರೋಗಿಗಳಿಗೆ ಹೊಡೆಯುತ್ತಿರುವ ವಿಡಿಯೊವೊಂದು (Viral Video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಉತ್ತರ ಪ್ರದೇಶದ (UP Crime) ಶಾಮ್ಲಿ ಜಿಲ್ಲಾ ಆಸ್ಪತ್ರೆಯ (Shamli District Hospital) ತುರ್ತು ವಾರ್ಡ್‌ನ ಒಳಗೆ ನುಗ್ಗಿದ ವ್ಯಕ್ತಿಯೊಬ್ಬ ಉದ್ದನೆಯ ಕೋಲಿನಿಂದ ಹಾಸಿಗೆಯ ಮೇಲೆ ಮಲಗಿರುವ ಇಬ್ಬರು ರೋಗಿಗಳ ಮೇಲೆ ದಾಳಿ ಮಾಡಿದ್ದಾನೆ. ಈ ವೇಳೆ ರೋಗಿಗಳು ಪ್ರಾಣ ರಕ್ಷಣೆಗಾಗಿ ಓಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಈ ಘಟನೆ ಪೊಲೀಸರ ಮುಂದೆಯೇ ನಡೆದಿದೆ.
ಶಾಮ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ, ತುರ್ತು ವಾರ್ಡ್‌ನಲ್ಲಿ ದಾಖಲಾಗಿದ್ದ ಇಬ್ಬರು ರೋಗಿಗಳ ಮೇಲೆ ವ್ಯಕ್ತಿಯೊಬ್ಬ ಕೋಲಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದರು. ಅವರು ಆತನನ್ನು ತಡೆಯಲು ಯತ್ನಿಸುತ್ತಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ.
ರೋಗಿಗಳ ಮೇಲಿನ ಹಲ್ಲೆಯ ದೃಶ್ಯ:
ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗಳ ಮುಂದೆಯೇ ಕೋಲು ಹಿಡಿದುಕೊಂಡು ಬಂದು ರೋಗಿಗಳಿಗೆ ಹೊಡೆಯಲು ಪ್ರಾರಂಭಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಗುರುವಾರ ರಾತ್ರಿ ಚಿಕಿತ್ಸೆಗಾಗಿ ದಾಖಲಾಗಿದ್ದ ಇಬ್ಬರು ಸಹೋದರರಾದ ಫರ್ಕನ್ ಮತ್ತು ಇರ್ಫಾನ್ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಈ ಘಟನೆಯಿಂದಾಗಿ ಆಸ್ಪತ್ರೆಯಲ್ಲಿನ ಭದ್ರತಾ ಲೋಪದ ಕುರಿತು ಚರ್ಚೆ ಪ್ರಾರಂಭವಾಗಿದೆ.
ಫರ್ಕನ್ ಮತ್ತು ಇರ್ಫಾನ್ ಗುರುವಾರ ಮುಂಜಾನೆ ಥಾನಭವನ್‌ಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಒಂದು ಗುಂಪಿನೊಂದಿಗೆ ಜಗಳಕ್ಕೆ ಇಳಿದಿದ್ದರು. ಇದರಲ್ಲಿ ಸಹೋದರರು ಗಂಭೀರವಾಗಿ ಗಾಯಗೊಂಡರು. ಅವರನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರ ಮೇಲೆ ಆಸ್ಪತ್ರೆಯಲ್ಲಿ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದ್ದರೂ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಆದರ್ಶ ಮಂಡಿ ಠಾಣೆ ಪೊಲೀಸರು ತಿಳಿಸಿದ್ದಾರೆ.