ಮೆಕ್ಸಿಕೋ: 23 ವರ್ಷದ ಯುವತಿಯನ್ನು ಕೊಲೆ ಮಾಡಿದ ಆರೋಪಿಯ ಮೇಲೆ ಇಬ್ಬರು ವ್ಯಕ್ತಿಗಳು ನ್ಯಾಯಾಲಯದಲ್ಲಿಯೇ ಹಲ್ಲೆ ನಡೆಸಿದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ಈ ಇಬ್ಬರು ವ್ಯಕ್ತಿಗಳು ಕೊಲೆಯಾದ ಯುವತಿಯ ಮಲತಂದೆ ಮತ್ತು ಸೋದರ ಮಾವ ಎನ್ನಲಾಗಿದೆ. ಅವರು ನ್ಯಾಯಾಲಯದಲ್ಲಿ ಹಾಕಲಾದ ಬ್ಯಾರಿಕೇಡ್ ಮೇಲೆ ಹಾರಿ ಆರೋಪಿಯೊಂದಿಗೆ ಜಗಳವಾಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಘಟನೆಯ ವಿಡಿಯೊದಲ್ಲಿ ಆರೋಪಿ ಅಲೆಕ್ಸಾಂಡರ್ ಒರ್ಟಿಜ್ ತನ್ನ ವಕೀಲರೊಂದಿಗೆ ನ್ಯಾಯಾಲಯದ ಮಧ್ಯದಲ್ಲಿ ನಿಂತಿರುವುದು ಸೆರೆಯಾಗಿದೆ. ಇದ್ದಕ್ಕಿದ್ದಂತೆ, ಸಂತ್ರಸ್ತೆಯ ಸೋದರ ಮಾವ ವಿಚಾರಣೆಯ ಸಮಯದಲ್ಲಿ ಗೇಟ್ ಮೇಲೆ ಹಾರಿ ಆರೋಪಿಯ ಕಡೆಗೆ ಧಾವಿಸಿ ಬಂದು ಅವನನ್ನು ನೆಲಕ್ಕೆ ಕೆಡವಿ ಹಲ್ಲೆ ಮಾಡಿದ್ದಾನೆ.ಅವನ ಜೊತೆಗೆ ಯುವತಿಯ ಮಲತಂದೆ ಕೂಡ ಸೇರಿ ಆರೋಪಿಗೆ ಹೊಡೆದಿದ್ದಾನೆ. ಈ ಸಮಯದಲ್ಲಿ, ನ್ಯಾಯಾಲಯದ ಅಧಿಕಾರಿಗಳು ಮಧ್ಯಪ್ರವೇಶಿಸಿ, ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.
ಮಾಹಿತಿ ಪ್ರಕಾರ, ಕಳೆದ ವರ್ಷ ಮೆಕ್ಸಿಕೋದಲ್ಲಿ 23 ವರ್ಷದ ಯುವತಿ ಅಲಿಯಾನಾ ಫರ್ಫಾನ್ ಅನ್ನು ಅಲೆಕ್ಸಾಂಡರ್ ಒರ್ಟಿಜ್ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವಾಗ ಸಂತ್ರಸ್ತೆಯ ಸೋದರ ಮಾವ 40 ವರ್ಷದ ಕಾರ್ಲೋಸ್ ಲುಸೆರೊ ಮತ್ತು ಸಂತ್ರಸ್ತೆಯ ಮಲತಂದೆ ಪೀಟ್ ಯಸಾಸಿ ಆರೋಪಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಘಟನೆಯಲ್ಲಿ ಲುಸೆರೊ ಹಾಗೂ ಸಂತ್ರಸ್ತೆಯ ಮಲತಂದೆಯನ್ನು ಬಂಧಿಸಲಾಗಿತ್ತು ಮತ್ತು ವಿಚಾರಣೆಯ ವೇಳೆ ಲುಸೆರೊ, ಒರ್ಟಿಜ್ ನನ್ನ ಸೋದರ ಸೊಸೆಯನ್ನು ಹೇಡಿಯಂತೆ ಕೊಂದಿದ್ದಾನೆ. ಹಾಗಾಗಿ ಆತನನ್ನು ಹೊಡೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಮಾಹಿತಿ ಪ್ರಕಾರ, ಅವರಿಬ್ಬರ ವಿರುದ್ಧ ಹಲ್ಲೆ ಮಾಡಿದ ಆರೋಪ ಹೊರಿಸಿ ನಂತರ, ಇಬ್ಬರನ್ನೂ ಮೆಟ್ರೋಪಾಲಿಟನ್ ಬಂಧನ ಕೇಂದ್ರದಿಂದ ಬಿಡುಗಡೆ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ: Delhi Horror: ಲಿವಿಂಗ್ ಟು ಗೆದರ್-ಡೆಡ್ಲಿ ಮರ್ಡರ್! ಸೂಟ್‌ಕೇಸ್‌ನಲ್ಲಿ ಪತ್ತೆಯಾಯಿತು ಯುವತಿಯ ಸುಟ್ಟದೇಹ;
ಒರ್ಟಿಜ್ ಕಳೆದ ವರ್ಷ ಆತನ ಮಾಜಿ ಗೆಳತಿಯಾದ ಅಲಿಯಾನಾ ಫರ್ಫಾನ್ ಅವಳನ್ನು ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಫರ್ಫಾನ್ ಬೆಡ್ ರೂಂನಲ್ಲಿ ಮಲಗಿದ್ದಾಗ ಗುಂಡು ಹಾರಿಸಿ ಕೊಲೆ ಮಾಡಿ ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಹೊರಗೆ ಓಡಿಹೋಗಿದ್ದಾನೆ ಎಂದು ವರದಿಯಾಗಿತ್ತು. ಪೊಲೀಸರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿಚಾರಣೆ ಮಾಡಿದಾಗ ಫರ್ಫಾನ್ ಮತ್ತು ಒರ್ಟಿಜ್ ನಡುವೆ ಸಂಬಂಧವಿದ್ದು, ಅವರ ನಡುವೆ ಜಗಳವಾಗಿರುವುದು ತಿಳಿದು ಪೊಲೀಸರು ಒರ್ಟಿಜ್ ಮೇಲೆ ಶಂಕೆ ವ್ಯಕ್ತಪಡಿಸಿ ಅರೆಸ್ಟ್ ಮಾಡಿದ್ದರು.