ವಾಷಿಂಗ್ಟನ್: ಅಮೆರಿಕದ ಮಹಿಳೆಯೊಬ್ಬರು ನ್ಯೂಯಾರ್ಕ್‌ನ ಜನಪ್ರಿಯ ಟೈಮ್ಸ್ ಸ್ಕ್ವೇರ್ (Times Square)ನಲ್ಲಿ ಫಲಕ ಹಿಡಿದು ನಿಂತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ. ಆ ಫಲಕದಲ್ಲಿ ಅವರು ಭಾರತೀಯ ಪತಿಯನ್ನು ಹುಡುಕುತ್ತಿರುವುದಾಗಿ ಬರೆದಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಕೂಡಲೇ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ವಿಶೇಷವಾಗಿ ಇನ್‌ಸ್ಟಾಗ್ರಾಮ್ (Instagram)ನಲ್ಲಿರುವ ಭಾರತೀಯ ಬಳಕೆದಾರರು ಹಾಸ್ಯ ಮತ್ತು ಮೋಜು ಭರಿತ ಕಾಮೆಂಟ್ ಮಾಡುತ್ತಿದ್ದಾರೆ.
ವೈರಲ್ ರೀಲ್‌ಗಳಿಗೆ ಹೆಸರುವಾಸಿಯಾದ @logielingo ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ಒಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ದೊಡ್ಡ ಫಲಕವನ್ನು ಹಿಡಿದಿರುವುದನ್ನು ಕಾಣಬಹುದು. ಫಲಕದಲ್ಲಿರುವ ದಪ್ಪ ಅಕ್ಷರದಲ್ಲಿ ಭಾರತೀಯ ಗಂಡನನ್ನು ಹುಡುಕುತ್ತಿದ್ದೇನೆ ಎಂದು ಬರೆಯಲಾಗಿದೆ.
ಈ ವಿಡಿಯೊ ಈಗಾಗಲೇ ಇನ್‌ಸ್ಟಾಗ್ರಾಮ್ (Instagram)ನಲ್ಲಿ 28 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜತೆಗೆ ಹಲವು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಬಂದಿವೆ. ಒಬ್ಬ ಬಳಕೆದಾರರು ಇಲ್ಲ, ಅವಳಿಗೆ ಭಾರತೀಯ ಗಂಡನ ಅವಶ್ಯಕತೆ ಇಲ್ಲ, ಹೆಚ್ಚಿನ ವೀಕ್ಷಣೆಗಳು ಬೇಕು ಅಷ್ಟೆ ಎಂದು ಕಾಮೆಂಟ್ ಮಾಡಿದ್ದಾರೆ. ಭಾರತದ ದಕ್ಷಿಣದ ರಾಜ್ಯವಾದ ಕೇರಳಕ್ಕೆ ಬನ್ನಿ, ನಿಮಗೆ ಅತ್ಯುತ್ತಮ ಮಲ್ಲು ಹುಡುಗ ಸಿಗುತ್ತಾನೆ ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. ಭಾರತದಲ್ಲಿ ಈ ರೀತಿ ಫಲಕ ಪ್ರದರ್ಶಿಸಬೇಡಿ, ನಿಮ್ಮನ್ನು ಅಪಹರಿಸಬಹುದು ಎಂದು ಮಗದೊಬ್ಬ ಬಳಕೆದಾರರು ತಿಳಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
ಆಕೆ ಕೊನೆಗೂ ವೈರಲ್ ಆಗುವುದು ಹೇಗೆಂದು ಕಂಡುಕೊಂಡಳು ಎಂದು ವ್ಯಕ್ತಿಯೊಬ್ಬರು ವ್ಯಂಗ್ಯವಾಡಿದ್ದಾರೆ. ಭಾರತೀಯರ ಮೇಲಿನ ನಿಮ್ಮ ಪ್ರೀತಿ, ನಂಬಿಕೆ, ಗೌರವ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ನೀವು ನನ್ನ ಹೃದಯವನ್ನು ಕದ್ದಿದ್ದೀರಿ ಎಂದು ಇನ್ನೊಬ್ಬ ವ್ಯಕ್ತಿ ಬರೆದುಕೊಂಡಿದ್ದಾರೆ. ನೀವು ಅವನಿಂದ (ಭಾರತೀಯ ಪುರುಷ) ಎಷ್ಟು ಹಣವನ್ನು ನಿರೀಕ್ಷಿಸುತ್ತಿದ್ದೀರಿ ಎಂದು ಮತ್ತೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ವಾಸಿಸುವ ಅಮೆರಿಕ ಮೂಲದ ಮಹಿಳೆಯೊಬ್ಬರು ಇತ್ತೀಚೆಗೆ ಭಾರತ ಮತ್ತು ಅಮೆರಿಕದಲ್ಲಿ ವೃದ್ಧರ ಆರೈಕೆಯ ಮೇಲೆ ಸಾಂಸ್ಕೃತಿಕ ವ್ಯತ್ಯಾಸಗಳು ಹೇಗೆ ಪರಿಣಾಮ ಬೀರಿವೆ ಎಂಬುದರ ಬಗ್ಗೆ ವಿವರಿಸಿದ್ದರು. ಅಮೆರಿಕದಲ್ಲಿರುವ ವೃದ್ಧ ರೋಗಿಗಳು ಯಾವಾಗಲೂ ಕುಟುಂಬ ಸದಸ್ಯರು ಮತ್ತು ಸಂಬಂಧಿಕರೊಂದಿಗೆ ಇರುವ ಭಾರತೀಯರಿಗೆ ಹೋಲಿಸಿದರೆ ಸಂಪೂರ್ಣವಾಗಿ ಒಂಟಿಯಾಗಿರುತ್ತಾರೆ ಎಂದು ಅವರು ಹೇಳಿದ್ದರು.
ಇನ್ನು ಗುಜರಾತ್‍ನ ಅಹಮದಾಬಾದ್‍ನಲ್ಲಿ ವಾಸಿಸುತ್ತಿರುವ ಫ್ರಾನ್ಸ್ ಮೂಲದ ಮಹಿಳೆ, ಸುಂದರ ನಗರ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ತ್ವರಿತವಾಗಿ ವೈರಲ್ ಆಗಿತ್ತು ಹಾಗೂ ಭಾರತೀಯರ ಹೃದಯ ಕದ್ದಿತ್ತು.
ಇದನ್ನೂ ಓದಿ: Viral News: ನೀರಿನ ಬಾಟಲಿಯ ಮುಚ್ಚಳಗಳು ಯಾವಾಗಲೂ ನೀಲಿ ಬಣ್ಣದಲ್ಲಿಯೇ ಇರುವುದು ಏಕೆ ಗೊತ್ತಾ? ಇಲ್ಲಿದೆ ಕಾರಣ