ಮುಂಬೈ:ರೈಲುಗಳಲ್ಲಿ ಪ್ರಯಾಣಿಕರಲ್ಲಿ ಸೀಟುಗಳ ಬಗ್ಗೆ ಅಥವಾ ರೈಲು ಹತ್ತುವಾಗ ಅಥವಾ ಇಳಿಯುವಾಗ ವಾದಕ್ಕಿಳಿದು ಗಲಾಟೆಗಳು ನಡೆಯುವುದು ಹೊಸದೇನಲ್ಲ. ಆದರೆ ಇತ್ತೀಚೆಗೆ ಮುಂಬೈ ಲೋಕಲ್ ರೈಲಿನ ಮಹಿಳಾ ಬೋಗಿಯಲ್ಲಿ ಭೀಕರ ಗಲಾಟೆ ನಡೆದಿದ್ದು, ಇಬ್ಬರು ಮಹಿಳೆಯರು ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದಾರೆ(Fighting). ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದ್ದು, ಅದರಲ್ಲಿ ಒಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ವೈರಲ್ ಆದ ವಿಡಿಯೊದಲ್ಲಿ ಮೊದಲು ಮಹಿಳೆಯರಿಬ್ಬರು ಒಬ್ಬರಿಗೊಬ್ಬರು ಅವಮಾನ ಮಾಡಿಕೊಳ್ಳುವುದನ್ನು ಸೆರೆಹಿಡಿಯಲಾಗಿದೆ. ನಂತರ ಇಬ್ಬರ ನಡುವೆ ಹೊಡೆದಾಟ ಶುರುವಾಗಿ ಒಬ್ಬರು ಇನ್ನೊಬ್ಬರ ಕೂದಲು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಇದರಿಂದಾಗಿ ಒಬ್ಬ ಮಹಿಳೆಯ ತಲೆಗೆ ಗಂಭೀರವಾದ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ.
ವಿಡಿಯೊ ಇಲ್ಲಿದೆ ನೋಡಿ...
ಈ ದೃಶ್ಯವನ್ನು ಸಹಪ್ರಯಾಣಿಕರೊಬ್ಬರು ವಿಡಿಯೊ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ಎಲ್ಲರ ಗಮನಸೆಳೆದು ವೈರಲ್ ಆಗಿದೆ. ಈ ಜಗಳಕ್ಕೆ ನಿಖರವಾದ ಕಾರಣ ತಿಳಿದಿಲ್ಲ.
ಚರ್ಚ್‌ಗೇಟ್‌ನಿಂದ ವಿರಾರ್‌ಗೆ ಪ್ರಯಾಣಿಸುವ ಪಶ್ಚಿಮ ರೈಲ್ವೆಯ ವಿಶೇಷ ಸ್ಥಳೀಯ ರೈಲಿನಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ವೈರಲ್ ಆದ ಕೆಲವೇ ಗಂಟೆಗಳ ನಂತರ, ಸಂಜೆ ರೈಲ್ವೆ ಪೊಲೀಸರು ಈ ವಿಷಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇಬ್ಬರು ಮಹಿಳೆಯರನ್ನು ಕವಿತಾ ರಾಮಚಂದ್ರನ್ (31) ಮತ್ತು ಜ್ಯೋತಿ ಪ್ರಸಾದ್ (21) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಆವರಣದಲ್ಲಿ ಜಗಳವಾಡುವುದು ಅಥವಾ ಅಸಭ್ಯವಾಗಿ ವರ್ತಿಸುವುದನ್ನು ಎದುರಿಸುವ ರೈಲ್ವೆ ಕಾಯ್ದೆಯ ಸೆಕ್ಷನ್ 145(ಬಿ) ಅಡಿಯಲ್ಲಿ ಭಯಾಂದರ್‌ನ ಆರ್‌ಪಿಎಫ್ ಪೋಸ್ಟ್ ಪ್ರಕರಣ ದಾಖಲಿಸಿದೆ. ಪ್ರಕರಣದ ನೋಂದಣಿಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮೆಟ್ರೊದೊಳಗೆ ಕಾಣಿಸಿಕೊಂಡ ಹಾವು; ಬೆಚ್ಚಿಬಿದ್ದ ಮಹಿಳೆಯರು ಮಾಡಿದ್ದೇನು? ಬಿದ್ದು ಬಿದ್ದು ನಕ್ಕ ನೆಟ್ಟಿಗರು!
ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಕರ ನಡುವೆ ಗಲಾಟೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮುಂಬೈನಲ್ಲಿ ಲೋಕಲ್ ರೈಲಿನಲ್ಲಿ ಒಬ್ಬ ವ್ಯಕ್ತಿ ಮಹಿಳಾ ಪ್ರಯಾಣಿಕರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.