ಕಂಕೇರ್: ಯುವಕನೊಬ್ಬ ಕರಡಿಗೆ ತಂಪು ಪಾನೀಯದ ಬಾಟಲಿಯನ್ನು ಕುಡಿಯಲು ಕೊಡುತ್ತಿರುವ ಆಘಾತಕಾರಿ ಘಟನೆ ಛತ್ತೀಸ್‌ಗಢ (Chhattisgarh) ದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದ್ದು, ಮಾನವನ ಅಜಾಗರೂಕತೆ, ವನ್ಯಜೀವಿ ಸುರಕ್ಷತೆ ಮತ್ತು ಸಂರಕ್ಷಣಾ ಕಾನೂನುಗಳ ಉಲ್ಲಂಘನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಯುವಕನೊಬ್ಬ ತಂಪು ಪಾನೀಯದ ಬಾಟಲಿಯನ್ನು ಹಿಡಿದು ಕರಡಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ಅವನು ಬಾಟಲಿಯನ್ನು ಕರಡಿಯ ಮುಂದೆ ಇರಿಸಿ ಹಿಂತಿರುಗಿ, ಕ್ಯಾಮರಾವನ್ನು ನೋಡುತ್ತಾ ನಗುತ್ತಾನೆ. ನಂತರ ಕರಡಿ ಹತ್ತಿರ ಬಂದು ಬಾಟಲಿಯನ್ನು ಎತ್ತಿ ತಂಪು ಪಾನೀಯವನ್ನು ಸೇವಿಸಲು ಪ್ರಾರಂಭಿಸುತ್ತದೆ. ಕರಡಿಯು ಬಾಟಲಿಯನ್ನು ಕೆಳಗಿಳಿಸುವ ಮೊದಲು ಅದನ್ನು ಖಾಲಿ ಮಾಡುವುದನ್ನು ಕಾಣಬಹುದು.
ಈ ವಿಡಿಯೊವನ್ನು ನಾರಾ ಗ್ರಾಮದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಜನರು ತಮ್ಮ ಪ್ರಾಣ ಮತ್ತು ಪ್ರಾಣಿಗಳ ಪ್ರಾಣ ಎರಡನ್ನೂ ಪಣಕ್ಕಿಡುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಎತ್ತಿ ತೋರಿಸುತ್ತದೆ. ಅಂತಹ ಕ್ರಮಗಳು ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಕರಡಿಗಳು, ಹತ್ತಿರದಿಂದ ಮನುಷ್ಯರನ್ನು ನೋಡಿದಾಗ ಆಕ್ರಮಣಕಾರಿಯಾಗಬಹುದು ಮತ್ತು ದಾಳಿ ಮಾಡಬಹುದು.
ವಿಡಿಯೊ ವೀಕ್ಷಿಸಿ:
ತಂಪು ಪಾನೀಯಗಳು ಮತ್ತು ಕೃತಕ ವಸ್ತುಗಳು ಕಾಡು ಪ್ರಾಣಿಗಳಿಗೆ ಹಾನಿಕಾರಕ ಎಂಬ ಅಂಶವೂ ಅಷ್ಟೇ ಕಳವಳಕಾರಿಯಾಗಿದೆ. ಅವು ಕರಡಿಯ ಜೀರ್ಣಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸಬಹುದು ಮತ್ತು ಅದರ ನೈಸರ್ಗಿಕ ನಡವಳಿಕೆಯನ್ನು ಬದಲಾಯಿಸಬಹುದು. ಇದು ಕಾಡಿನಲ್ಲಿ ಬದುಕುಳಿಯುವ ಬದಲು ಮಾನವ ಆಹಾರದ ಮೇಲೆ ಅವಲಂಬಿತವಾಗುವಂತೆ ಮಾಡುತ್ತದೆ.
ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಗನ್ನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಯುವಕರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ವಿದ್ಯುತ್ ಸ್ಪರ್ಶಿಸಿ ಕರಡಿ ಸಾವು
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಮಹಾಸಮುಂದ್ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹಾಕಲಾದ ಅಕ್ರಮ ವಿದ್ಯುತ್ ಬಲೆಗೆ ಸಿಲುಕಿ ಕರಡಿಯೊಂದು ಸಾವನ್ನಪ್ಪಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಹಲವಾರು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ವನ್ಯಜೀವಿಗಳನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಉದ್ದೇಶಪೂರ್ವಕವಾಗಿ ವಿದ್ಯುತ್ ತಂತಿಗಳನ್ನು ಹಾಕಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Kerala IAS Aspirant: ವೆಂಟಿಲೇಟರ್ ಜೊತೆಗೆ UPSC ಪರೀಕ್ಷೆ ಬರೆದ ಯುವತಿ; ಈಕೆ ಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ!