ಭೋಪಾಲ್: ವಿಶೇಷ ಚೇತನ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡೇ ಸಾರ್ವಜನಿಕ ಅಹವಾಲು ಸಭೆಗೆ ಬಂದ ವ್ಯಕ್ತಿಯೊಬ್ಬರು, ಕಳೆದ 10 ವರ್ಷಗಳಿಂದ ರೇಷನ್ ಸೌಲಭ್ಯ (Madhya Pradesh) ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿರುವುದಾಗಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ. ಪುಷ್ಪೇಂದ್ರ ಸಿಂಗ್ ಎಂಬ ವ್ಯಕ್ತಿ ತನ್ನ ಪತ್ನಿ ನೀಲು ರಾಜಾ ಹಾಗೂ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಗೆ ಹಾಜರಾಗಿದ್ದರು. ನಡೆಯಲು ಅಸಮರ್ಥಳಾಗಿರುವ ಪತ್ನಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಅಧಿಕಾರಿಗಳ ಮುಂದೆ ಮಾತನಾಡಿದ ನೀಲು ರಾಜಾ, ತಮ್ಮ ಕುಟುಂಬಕ್ಕೆ ನೀಡಲಾಗಿದ್ದ ಅಂತ್ಯೋದಯ ಅನ್ನ ಯೋಜನೆ (AAY) ರೇಷನ್ ಕಾರ್ಡ್ ಅನ್ನು ಸುಮಾರು 10 ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತಮ್ಮ ಅರಿವಿಲ್ಲದೆ ಸಾಮಾನ್ಯ ಬಿಪಿಎಲ್ ಕಾರ್ಡ್‌ಗೆ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.
ಇದಾದ ಬಳಿಕ ತಮಗೆ ರೇಷನ್ ಸ್ಲಿಪ್ ನೀಡಲೇ ಇಲ್ಲ. ಇದರ ಪರಿಣಾಮವಾಗಿ ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಸಬ್ಸಿಡಿ ಆಹಾರ ಧಾನ್ಯಗಳ ಸೌಲಭ್ಯದಿಂದ ತಮ್ಮ ಕುಟುಂಬ ವಂಚಿತವಾಗಿದೆ ಎಂದು ಅವರು ದೂರಿದರು.
Viral Video: ಭೀಕರ ಅಲೆಗಳಿಂದ ವೃದ್ಧರ ಪ್ರಾಣ ಉಳಿಸಿ ಕಪಾಳಮೋಕ್ಷ ಮಾಡಿದ ಯುವಕ; ಕಾರಣವೇನು?
ಇದಷ್ಟೇ ಅಲ್ಲದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY-G) ಅಡಿಯಲ್ಲಿ ಮನೆ ನಿರ್ಮಾಣ ಸಹಾಯಧನ, ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭವೂ ತಮ್ಮ ಕುಟುಂಬಕ್ಕೆ ದೊರೆತಿಲ್ಲ ಎಂದು ಆರೋಪಿಸಿದರು.
ಉದ್ಯೋಗಾವಕಾಶಗಳ ಕೊರತೆಯಿಂದ ಕುಟುಂಬ ಜೀವನ ನಡೆಸುವುದೇ ಕಷ್ಟವಾಗಿದೆ. ತಾವು ಮೂತ್ರಪಿಂಡದ ಕಾಯಿಲೆಗೆ ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರ್ಥಿಕ ಸಂಕಷ್ಟದಿಂದ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎಂದು ನೀಲು ರಾಜಾ ಕಣ್ಣೀರಿಟ್ಟರು.
ಗ್ರಾಮ ಪಂಚಾಯಿತಿ ಸರ್ಪಂಚ್ ಹಾಗೂ ಕಾರ್ಯದರ್ಶಿ ಸೇರಿದಂತೆ ಸ್ಥಳೀಯ ಅಧಿಕಾರಿಗಳು ತಮ್ಮ ಮನವಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ ಅವರು, ಗ್ರಾಮ ಪಂಚಾಯಿತಿಯಿಂದ ಹಿಡಿದು ಮುಖ್ಯಮಂತ್ರಿ ಕಚೇರಿ (CMO)ವರೆಗೂ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕ ಅಹವಾಲು ಸಭೆಯಲ್ಲಿ ತಮ್ಮ ನೋವನ್ನು ಹೇಳಿಕೊಳ್ಳುವ ವೇಳೆ ಭಾವೋದ್ವೇಗಕ್ಕೆ ಒಳಗಾದ ನೀಲು ರಾಜಾ ತಕ್ಷಣದ ನೆರವಿಗಾಗಿ ಮನವಿ ಮಾಡಿದರು.
ಕುಟುಂಬದ ಅಹವಾಲು ಆಲಿಸಿದ ಪನ್ನಾ ಜಿಲ್ಲಾಧಿಕಾರಿ ಉಷಾ ಪರ್ಮಾರ್, ಪ್ರಕರಣದ ಕುರಿತು ಸಮಗ್ರ ಪರಿಶೀಲನೆ ನಡೆಸುವುದಾಗಿ ಹಾಗೂ ಅಗತ್ಯ ರೇಷನ್ ದಾಖಲೆಗಳನ್ನು ಒದಗಿಸಿ, ಅರ್ಹತೆ ಹೊಂದಿರುವ ಎಲ್ಲಾ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಕುಟುಂಬಕ್ಕೆ ತಲುಪಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.