ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಶ್ವಾನ ರಕ್ಷಿಸಿದ ಸಚಿವ; ಹೃದಯಸ್ಪರ್ಶಿ ವಿಡಿಯೊ ವೈರಲ್‌

Viral Video: ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಗಂಗಾ ನದಿಯಲ್ಲಿ ಕೊಚ್ಚಿಕೊಂಡ ಹೋಗುತ್ತಿದ್ದ ಶ್ವಾನವನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ಸಹಾಯದಿಂದ ಸಚಿವ ಇಂದ್ರಾನಿಲ್‌ ಖಾನ್‌ ರಕ್ಷಿಸಿದ್ದಾರೆ. ಸ್ಪೀಡ್‌ಬೋಟ್‌ನಲ್ಲಿ ತೆರಳಿ ರಕ್ಷಿಸಲಾಗಿದ್ದು, ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಇಂದ್ರಾನಿಲ್‌ ಖಾನ್‌ ಮತ್ತು ರಕ್ಷಿಸಲ್ಪಟ್ಟ ಶ್ವಾನ

ಕೋಲ್ಕತಾ, ನ. 16: ಉತ್ತರ ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಛತ್‌ ಪೂಜೆ (Chhath Puja) ಆರಂಭವಾಗಿದೆ. 4 ದಿನಗಳ ಕಾಲ ಇದನ್ನು ಆಚರಿಸಲಾಗುತ್ತದೆ. ನದಿ ಇಲ್ಲವೆ ಕಲ್ಯಾಣಿಗಳಲ್ಲಿ ಪವಿತ್ರ ಸ್ನಾನ ಮಾಡಿ ಬೆಳಗ್ಗೆ ಉದಯಿಸುವ ಮತ್ತು ಸಂಜೆ ಮುಳುಗುವ ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸಿ ಧ್ಯಾನ ಮಾಡುವುದು ಛತ್‌ ಪೂಜೆಯ ಸಂಪ್ರದಾಯ. ಪಶ್ಚಿಮ ಬಂಗಾಳದಲ್ಲಿ ಈ ಪೂಜೆಯ ಸಿದ್ಧತೆ ನಡೆಸುತ್ತಿದ್ದಾಗ ಹೃದಯ ಸ್ಪರ್ಶಿ ಘಟನೆಯೊಂದು ನಡೆದಿದೆ. ಗಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಶ್ವಾನವನ್ನು ಸಚಿವ ಇಂದ್ರಾನಿಲ್‌ ಖಾನ್‌ (Indranil Khan) ರಕ್ಷಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ವೈರಲ್‌ (Viral Video) ಆಗಿದೆ.

ಸೋಮವಾರ (ನವೆಂಬರ್‌ 16) ಬೆಳಗ್ಗೆ ಕೋಲ್ಕಾತಾದ ಬಾಬು ಘಾಟ್‌ನಲ್ಲಿ ಛತ್‌ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾಗ ಗಂಗಾ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಶ್ವಾನವೊಂದನ್ನು ಗಮನಿಸಿ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಡಾ. ಇಂದ್ರನಿಲ್ ಖಾನ್ ಅದರ ರಕ್ಷಣೆಗೆ ಮುಂದಾಗಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಶ್ವಾನ ರಕ್ಷಣಾ ಕಾರ್ಯಾಚರಣೆಯ ವಿಡಿಯೊ:



ಘಟನೆ ವಿವರ

ಪಶ್ಚಿಮ ಬಂಗಾಳದಲ್ಲಿ ನದಿ ಉದ್ದಕ್ಕೂ ಛತ್‌ ಪೂಜೆಗೆ ಸಿದ್ಧತೆ ನಡೆಸಲಾಗುತ್ತಿದೆ. ಬಾಬು ಘಾಟ್‌ನಲ್ಲಿ ನಡೆಯುತ್ತಿರುವ ಪೂಜೆಯ ಸಿದ್ಧತೆಯನ್ನು ಪರಿಶೀಲಿಸಲು ಇಂದ್ರನಿಲ್ ಖಾನ್ ಆಗಮಿಸಿದ ವೇಳೆ ಅವರು ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಶ್ವಾನವನ್ನು ಗಮನಿಸಿದರು. ಶ್ವಾನ ನೀರಿನ ರಭಸಕ್ಕೆ ಸಿಲುಕಿ ಪ್ರಾಣ ಭಯದಿಂದ ಒದ್ದಾಡುತ್ತಿತ್ತು. ಕೂಡಲೇ ಖಾನ್ ಘಾಟ್‌ನಲ್ಲಿ ನಿಯೋಜನೆಗೊಂಡಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ವಿಪತ್ತು ನಿರ್ವಹಣಾ ಗುಂಪಿನ (DMG) ಸಿಬ್ಬಂದಿಯನ್ನು ಎಚ್ಚರಿಸಿದ್ದಲ್ಲದೆ ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ನೇಪಾಳ ಪ್ರವಾಹದಲ್ಲಿ ಧ್ವಂಸಗೊಂಡ ಮನೆಯ ಬಳಿ ಕುಳಿತು ಮಾಲಕರಿಗಾಗಿ ಕಾಯುತ್ತಿರುವ ಶ್ವಾನಗಳು

ಸ್ಪೀಡ್‌ಬೋಟ್‌ ಮೂಲಕ ರಕ್ಷಣೆ

ಸಚಿವರ ಸೂಚನೆ ಮೇರೆಗೆ ಕೂಡಲೇ ಕಾರ್ಯ ಪ್ರವೃತ್ತರಾದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಸ್ಪೀಡ್‌ಬೋಟ್‌ ಮೂಲಕ ನದಿಗೆ ಇಳಿದರು. 3 ಸ್ಪೀಡ್‌ಬೋಟ್‌ನಲ್ಲಿ ತೆರಳಿ ಎಚ್ಚರಿಕೆಯಿಂದ ಶ್ವಾನವನ್ನು ಮೇಲಕ್ಕೆತ್ತಿ ದಡಕ್ಕೆ ಕರೆತಂದರು. ತುಂಬಾ ಹೊತ್ತು ನೀರಿನಲ್ಲಿದ್ದುದರಿಂದ ಶ್ವಾನ ಚಳಿಯಿಂದ ನಡುಗುತ್ತಿತ್ತು.

ಬಿಸಿಬಿಸಿ ಹಾಲು ನೀಡಿದ ಸಚಿವ

ಶ್ವಾನದ ಆರೈಕೆಯತ್ತ ಗಮನ ಹರಿಸಿದ ಸಚಿವ ಖಾನ್‌ ಬಾತ್‌ ಟವಲ್‌ನಿಂದ ಅದರ ಮೈ ಒರೆಸಿದರು. ಅಲ್ಲದೆ ‍ಸ್ಥಳಕ್ಕೆ ಬಿಸಿ ಬಿಸಿ ಹಾಲಿ ತರಿಸಿ ಕೊಟ್ಟರು. ಜತೆಗೆ ಶ್ವಾನ ಚೇತರಿಸಿಕೊಳ್ಳುವವರೆಗೆ ಅಲ್ಲೇ ಇದ್ದು ಅದರ ಯೋಗಕ್ಷೇಮ ನೋಡಿಕೊಂಡರು. ಛತ್‌ ಪೂಜೆಯ ಸಿದ್ಧತೆಯ ನಡುವೆ ಸದ್ಯ ಈ ದೃಶ್ಯ ಗಮನ ಸೆಳೆದಿದೆ. ನೆಟ್ಟಿಗರು ಸಚಿವರ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಬಾವಿಗೆ ಬಿದ್ದ ಶ್ವಾನಗಳ ಜೀವ ಉಳಿಸಲು 60 ಅಡಿ ಆಳಕ್ಕೆ ಧುಮುಕಿದ ರಕ್ಷಣಾ ತಂಡದ ಸದಸ್ಯರು

ರಾಜ್ಯಾದ್ಯಂತ ವ್ಯಾಪಕ ಸಿದ್ಧತೆ

ಪಶ್ಚಿಮ ಬಂಗಾಳದ ನದಿ ದಂಡೆಗಳಲ್ಲಿ ಛತ್‌ ಪೂಜೆಗೆ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಅದರಲ್ಲೂ ಸೂರ್ಯನಿಗೆ ಪೂಜೆ ಸಲ್ಲಿಸುವ ಘಾಟಗಳಲ್ಲಿ ಭಕ್ತರ ಅನುಕೂಲಕ್ಕಾಗಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಸಚಿವರು, ಶಾಸಕರು ವಿವಿಧ ಕಡೆಗಳಿಗೆ ತೆರಳಿ ಸಿದ್ಧತೆ ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ವೈರಲ್‌ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author