ಚೆನ್ನೈ : ಇತ್ತೀಚೆಗೆ ವೃಂದಾವನದಲ್ಲಿ ಕೋತಿಗಳು(Monkey) ಭಕ್ತರ ವಸ್ತುಗಳನ್ನು ಕಸಿದುಕೊಂಡು ಫ್ರೂಟಿ ಕುಡಿದ ನಂತರವೇ ಅವುಗಳನ್ನು ಹಿಂದಿರುಗಿಸಿದ ಘಟನೆ ಎಲ್ಲ ಕಡೆ ಸುದ್ದಿಯಾಗಿತ್ತು. ಇದೀಗ ತಮಿಳುನಾಡಿನ ಜನಪ್ರಿಯ ಪ್ರವಾಸಿ ತಾಣವಾದ ಕೊಡೈಕೆನಾಲ್(Kodaikanal)ನಲ್ಲಿ ಕೋತಿಯೊಂದು ಪ್ರವಾಸಿಗರಿಂದ 500 ರೂ. ನೋಟುಗಳ ಬಂಡಲ್ ಅನ್ನು ಕಸಿದುಕೊಂಡು ಹೋಗಿ ಹತ್ತಿರದ ಮರ ಏರಿ ಕುಳಿತಿದೆ. ಅಷ್ಟೇ ಅಲ್ಲದೇ ಆ ಕೋತಿ ಒಂದರ ನಂತರ ಒಂದರಂತೆ ನೋಟುಗಳನ್ನು ಹೊರತೆಗೆದಿದೆ. ಇದರಿಂದಾಗಿ ಕೋತಿ ಕೈಯಿಂದ ಜಾರಿದ ನೋಟುಗಳು ಎಲ್ಲಾ ಕಡೆ ಹರಿದಾಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಕೋತಿಯು ಕದ್ದ ಹಣದ ಬಂಡಲ್ ಅನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ನಂತರ ಅದನ್ನು ಒಂದೊಂದಾಗಿ ತೆಗೆಯುವುದು ಸೆರೆಯಾಗಿದೆ. ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಕೊಡೈಕೆನಾಲ್‌ನ ಗುಣ ಗುಹೆಯ ಬಳಿ ಈ ಘಟನೆ ನಡೆದಿದೆ. ಕರ್ನಾಟಕ ಮೂಲದ ಪ್ರವಾಸಿಗರಿಂದ ಕೋತಿ ಹಣವನ್ನು ಕದ್ದಿದ್ದು. ಇದರಿಂದ ಹಣದ ಮಾಲೀಕ ಚಿಂತೆಗೀಡಾಗಿದ್ದಾನಂತೆ.
ವಿಡಿಯೊ ಇಲ್ಲಿದೆ ನೋಡಿ...
ಕಳೆದ ವರ್ಷ, ವ್ಲಾಗ್ಗರ್ ಡೇನಿಯಲ್ ಜೈನ್ರಾಜ್ ಗುಹೆಗಳಿಗೆ ಭೇಟಿ ನೀಡಿದಾಗ ಮಂಗದಿಂದ ದಾಳಿಗೊಳಗಾದ ದೃಶ್ಯಗಳನ್ನು ಹಂಚಿಕೊಂಡಿದ್ದನು. ಕೋತಿಯೊಂದು ಗುಣ ಗುಹೆಯಲ್ಲಿ ಆತನ ಮೇಲೆ ದಾಳಿ ಮಾಡಿತ್ತಂತೆ.
ಈ ಸುದ್ದಿಯನ್ನೂ ಓದಿ:Viral Video: ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ಫ್ಲೈಓವರ್‌ನ ನಟ್ ಬೋಲ್ಟ್ ಕಿತ್ತ ಮಕ್ಕಳು- ಶಾಕಿಂಗ್ ವಿಡಿಯೊ ವೈರಲ್
ದಿಂಡಿಗಲ್ ಜಿಲ್ಲೆಯ ಕೊಡೈಕೆನಾಲ್ ಒಂದು ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿದೆ. ಪ್ರತಿದಿನ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ, ಕೊಡೈಕೆನಾಲ್‌ನ ಪ್ರಮುಖ ಪ್ರವಾಸಿ ತಾಣವಾಗಿರುವ ಗುಣ ಗುಹೆ ಕೂಡ ಎಲ್ಲರ ಆಕರ್ಷಣೆಯ ಸ್ಥಳವಾಗಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕೋತಿಗಳು ಪ್ರವಾಸಿಗರ ಬ್ಯಾಗ್‍ಗಳು ಮತ್ತು ಆಹಾರ ಪದಾರ್ಥಗಳನ್ನು ಕಸಿದುಕೊಳ್ಳುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಈ ಪ್ರದೇಶದಲ್ಲಿನ ಕೋತಿಗಳನ್ನು ಹಿಡಿದು ದಟ್ಟವಾದ ಕಾಡಿಗೆ ಕರೆದೊಯ್ಯಬೇಕು ಎಂದು ಪ್ರವಾಸಿಗರು ವಿನಂತಿ ಮಾಡಿದ್ದಾರೆ.