Viral News: ಹೀಗೂ ಉಂಟೇ? ಕೋಳಿ ಸಾರಿನ ವಿಚಾರಕ್ಕೆ ಶುರುವಾದ ಜಗಳದ ಅಂತ್ಯ ಮಾತ್ರ ಭಯಾನಕವಾಗಿತ್ತು!
Woman Dies by Suicide: ತನ್ನ ಇಚ್ಛೆಗೆ ವಿರುದ್ಧವಾಗಿ ಮನೆಯಲ್ಲಿ ಪತಿಯೊಬ್ಬ ಕೋಳಿ ಮಾಂಸ ಬೇಯಿಸಿದ್ದಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ವಂಶಿವಾಲಾ ಗ್ರಾಮದಲ್ಲಿ ನಡೆದಿದೆ. ಮಹಿಳೆ ಸಸ್ಯಾಹಾರಿಯಾಗಿದ್ದಳು ಎನ್ನಲಾಗಿದೆ. 21 ವರ್ಷದ ರೀನಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

-

ಲಖನೌ: ತಮ್ಮ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ಕೋಳಿ ಬೇಯಿಸಿದ ಕಾರಣ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ (Uttar Pradesh) ದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. 21 ವರ್ಷದ ಮಹಿಳೆ ರೀನಾ ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ಈಕೆ ಸಸ್ಯಾಹಾರಿಯಾಗಿದ್ದರು ಎನ್ನಲಾಗಿದೆ. ತನ್ನ ಪತಿ ಮಾಂಸ ಬೇಯಿಸಿದ್ದಕ್ಕೆ ಬೇಸತ್ತು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 20 ರಂದು ವಂಶಿವಾಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೀನಾಳ ಪತಿ ನಿಗಮ್ ಸಿಂಗ್ (24) ಆಕೆಯ ವಿರೋಧದ ಹೊರತಾಗಿಯೂ ಕೋಳಿ ಬೇಯಿಸಿದ್ದಾನಂತೆ. ವಿಚಾರಣೆಯ ಸಮಯದಲ್ಲಿ, ನಿಗಮ್ ಆ ರಾತ್ರಿ ತಾನು ಮದ್ಯ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ನಂತರ ತನ್ನ ಹೆಂಡತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ನೋಡಿದ್ದಾನೆ.
ಆತ್ಮಹತ್ಯೆ ವಿಚಾರವನ್ನು ಪೊಲೀಸರಿಗೆ ತಿಳಿಸುವ ಬದಲು, ನಿಗಮ್ ತನ್ನ ಸಹೋದರ ಮಹ್ಕರ್ ಮತ್ತು ಸೋದರಸಂಬಂಧಿ ಬಿಜೇಂದ್ರ ಜೊತೆಗೂಡಿ ಶವವನ್ನು ಬಟ್ಟೆಯಲ್ಲಿ ಸುತ್ತಿ ಮೂರು ಕಿಲೋಮೀಟರ್ ದೂರದಲ್ಲಿರುವ ಗಂಗಾ ನದಿಯಲ್ಲಿ ಎಸೆದು, ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ರೀನಾಳ ಕುಟುಂಬವು, ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿದರು.
ರೀನಾಳ ತಾಯಿ ಕೌಶಲ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ನಿಗಮ್, ಆತನ ಪೋಷಕರು, ಮಹ್ಕರ್ ಮತ್ತು ಬಿಜೇಂದ್ರ ವಿರುದ್ಧ ಬಿಎನ್ಎಸ್ ಸೆಕ್ಷನ್ 80 (ವರದಕ್ಷಿಣೆ ಸಾವು) ಮತ್ತು 238 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗುರುವಾರ, ಪೊಲೀಸರು ನಿಗಮ್, ಮಹ್ಕರ್ ಮತ್ತು ಬಿಜೇಂದ್ರ ಅವರನ್ನು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಬಳಸಲಾದ ದುಪ್ಪಟ್ಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶವವನ್ನು ಪತ್ತೆಹಚ್ಚಲು ಮತ್ತು ಉಳಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ನನ್ನನ್ನೇ ಕಚ್ಚುತ್ತೀಯಾ?: ಕುಡಿದ ಮತ್ತಿನಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡು ಹುಚ್ಚಾಟ ಮೆರೆದ ವ್ಯಕ್ತಿ
ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ನಡೆದಿದೆ. 29 ವರ್ಷದ ಮಹಿಳೆಯೊಬ್ಬರು ತನ್ನ ಮೂವರು ಹೆಣ್ಣುಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಕ್ರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತೇಜ್ ಕುಮಾರಿ ಅಲಿಯಾಸ್ ಮಾಯಾ ಎಂದು ಗುರುತಿಸಲ್ಪಟ್ಟ ಮಹಿಳೆ ಮೃತ ದುರ್ದೈವಿ. ಮನೆಯಲ್ಲಿ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಮಹಿಳೆ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಪೊಲೀಸರ ಪ್ರಕಾರ, ತನ್ನ ಪತಿ ವಿಕಾಸ್ ಕಶ್ಯಪ್ ದೂರದಲ್ಲಿ ವಾಸಿಸುತ್ತಿದ್ದಾನೆ. ಅಲ್ಲದೆ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿಲ್ಲ ಎಂದು ಆಕೆ ಅಸಮಾಧಾನಗೊಂಡಿದ್ದಳು ಎನ್ನಲಾಗಿದೆ. ನಾಲ್ಕು ತಿಂಗಳ ಹಸುಗೂಸು, ಎರಡು ವರ್ಷದ ಮಗು ಮತ್ತು ಏಳು ವರ್ಷದ ಬಾಲಕಿಯನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಸಮಯದಲ್ಲಿ, ಮಾಯಾ ಪತಿ ದೆಹಲಿ ಮೂಲದ ಪ್ರವಾಸಿ ಬಸ್ ನಿರ್ವಾಹಕ, ಮನೆಯ ಹೊರಗೆ ಮರದ ಕೆಳಗೆ ಮಲಗಿದ್ದ ಎನ್ನಲಾಗಿದೆ.