ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುವ ರೈಲಿನಲ್ಲಿ ಮೋಜು ಮಾಡಲು ಹೋಗಿ ಕೆಳಗೆ ಬಿದ್ದ ಯುವತಿ; ಈ ವಿಡಿಯೊ ನಿಜವೋ, ನಕಲಿಯೊ?

Woman Hanging Out of Moving Train: ಚಲಿಸುವ ರೈಲಿನಲ್ಲಿ ಯುವತಿಯೊಬ್ಬಳು ಅಪಾಯಕಾರಿ ಕೃತ್ಯ ಎಸಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಚಲಿಸುತ್ತಿರುವ ರೈಲಿನ ತೆರೆದ ಬಾಗಿಲಲ್ಲಿ ಯುವತಿಯೊಬ್ಬಳು ನಿಂತಿದ್ದು, ಮೋಜು ಮಾಡಿದ್ದಾಳೆ. ಈ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿರುವ ಆಘಾತಕಾರಿ ದೃಶ್ಯವಿದು.

ದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಅಂತಹ ವಿಡಿಯೊಗಳು ಯಾವುದು ನಿಜ ಅಥವಾ ಸುಳ್ಳು ಎಂಬುದನ್ನು ಹೇಳುವುದು ಕಷ್ಟ. ಸಾಮಾಜಿಕ ಜಾಲತಾಣಗಳ್ಲಲಿ ಹಂಚಿಕೊಳ್ಳಲಾದ ವಿಡಿಯೊಗಳು ತಕ್ಷಣ ಗಮನ ಸೆಳೆಯಬಹುದು. ಆದರೆ ಕೆಲವೊಮ್ಮೆ ಅವುಗಳ ಸತ್ಯಾಸತ್ಯತೆಯ ಬಗ್ಗೆ ಗೊಂದಲ ಉಂಟಾಗುತ್ತದೆ. ಇದೀಗ ಚಲಿಸುವ ರೈಲಿನಲ್ಲಿ (Moving Train) ಯುವತಿಯೊಬ್ಬಳು ಅಪಾಯಕಾರಿ ಕೃತ್ಯ ಎಸಗುತ್ತಿರುವ ವಿಡಿಯೊವೊಂದು ವೈರಲ್ (Viral Video) ಆಗಿದೆ.

ಈ ವಿಡಿಯೊವನ್ನು ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಹಂಚಿಕೊಳ್ಳಲಾಗಿದ್ದು, ಅನೇಕ ಬಳಕೆದಾರರು ಪ್ರಯಾಣ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಇದು ಎಐ ವಿಡಿಯೊ ಎಂದು ಹಲವರು ಹೇಳಿದ್ದಾರೆ. ಆದರೆ ಎಐ ಚಾಟ್‌ಬಾಟ್ ಗ್ರೋಕ್ ಮತ್ತು ರೈಲ್ವೆ ಪೊಲೀಸ್ ಪಡೆ (RPF) ಸಹ ಇದಕ್ಕೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದಾಗ ಗೊಂದಲ ಹೆಚ್ಚಾಯಿತು.

ಚಲಿಸುತ್ತಿರುವ ರೈಲಿನ ತೆರೆದ ಬಾಗಿಲಲ್ಲಿ ಯುವತಿಯೊಬ್ಬಳು ನಿಂತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದು. ರೈಲು ವೇಗವಾಗಿ ಮುಂದಕ್ಕೆ ಚಲಿಸುತ್ತಿರುವಾಗ ಆಕೆ ಇನ್ನೊಬ್ಬ ವ್ಯಕ್ತಿಯ ಕೈ ಹಿಡಿದು ಅಪಾಯಕಾರಿಯಾಗಿ ಹೊರಗೆ ಒರಗುತ್ತಿರುವುದನ್ನು ಕಾಣಬಹುದು. ಆದರೆ ಕೆಲವು ಸೆಕೆಂಡುಗಳ ನಂತರ, ಆಕೆಗೆ ಕಂಬವೊಂದು ಡಿಕ್ಕಿ ಹೊಡೆದ ಪರಿಣಾಮ ಅವಳು ಹಳಿಯ ಪಕ್ಕವಿದ್ದ ಹೊಲಕ್ಕೆ ಬಿದ್ದಿದ್ದಾಳೆ.

ಎಲ್ಲೆಡೆ ಮೋಜು ಮಾಡುವುದು ಒಳ್ಳೆಯದಲ್ಲ. ಸ್ವಲ್ಪ ಅಜಾಗರೂಕತೆಯು ಜೀವಮಾನದ ಪ್ರಮಾದವಾಗಬಹುದು. ಮೋಜು ಎಲ್ಲೆಡೆ ಇರುವುದಿಲ್ಲ, ಸುರಕ್ಷತೆಯೇ ಅತ್ಯಂತ ಮುಖ್ಯ. 2 ಸೆಕೆಂಡುಗಳ ಚಟುವಟಿಕೆಯು ಅಪಘಾತಕ್ಕೆ ತಿರುಗಿದರೆ ಹೇಗಾಗಬಹುದು ಎಂಬುದನ್ನು ಊಹಿಸಿ. ಆದಷ್ಟು ಎಚ್ಚರವಾಗಿರಿ. ಎಲ್ಲಕ್ಕಿಂತ ಸುರಕ್ಷತೆ ಮೊದಲು, ಇಂತಹ ಮೋಜು ಮಾಡುವುದು ಒಳ್ಳೆಯದಲ್ಲ ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ವಿಡಿಯೊವನ್ನು ಇಲ್ಲಿ ವೀಕ್ಷಿಸಿ:



ಈ ವಿಡಿಯೊ ನಿಜವೋ, ನಕಲಿಯೋ ಎಂದು ನಿರ್ಧರಿಸಲು ಸಾಧ್ಯವಾಗಿಲ್ಲ. ಇದು ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಅದು ವೈರಲ್ ಆಗುತ್ತಿದ್ದಂತೆ ಸತ್ಯಾಸತ್ಯತೆಯ ಸುತ್ತಲಿನ ಗೊಂದಲವೂ ಹೆಚ್ಚಾಗಿದೆ. ಉತ್ತರಗಳನ್ನು ಪಡೆಯಲು, ಕೆಲವು ಬಳಕೆದಾರರು ಚಾಟ್‌ಬಾಟ್ ಗ್ರೋಕ್ ಅನ್ನು ವಿಡಿಯೊ ನಿಜವೇ ಎಂದು ಕೇಳಿದರು. ಆದರೆ ಚಾಟ್‌ಬಾಟ್‌ನಿಂದ ಬಂದ ಉತ್ತರ ಗೊಂದಲವನ್ನು ಇನ್ನಷ್ಟು ಹೆಚ್ಚಿಸಿತು.

ಇದು ನಿಜವೇ? ಎಂದು ಒಬ್ಬ ಬಳಕೆದಾರರು ಕೇಳಿದಾಗ- ಗ್ರೋಕ್, ಈ ವಿಡಿಯೊ ಸುರಕ್ಷತಾ ಜಾಗೃತಿಗಾಗಿ ಪ್ರದರ್ಶಿಸಲಾಗಿದೆ ಎಂದು ತಿಳಿಸಿದ್ದು, ಇದಕ್ಕೆ ಪಠ್ಯ, ಎಮೋಜಿಗಳನ್ನು ಸೇರಿಸಲಾಗಿದೆ. ಇದು ಯಾವುದೇ ನೈಜ ಘಟನೆ ವರದಿಗಳನ್ನು ತೋರಿಸುತ್ತಿಲ್ಲ. ಇದೇ ರೀತಿಯ ವೈರಲ್ ವಿಡಿಯೊಗಳನ್ನು ಹೆಚ್ಚಾಗಿ ಸ್ಕ್ರಿಪ್ಟ್ ಮಾಡಲಾಗುತ್ತದೆ. ಬಹುಶಃ ನಿಜವಲ್ಲ, ಆದರೆ ಉತ್ತಮ ಸಂದೇಶವನ್ನು ಒತ್ತಿ ಹೇಳುತ್ತದೆ: ಸುರಕ್ಷತೆ ಮೊದಲು ಎಂಬ ಉತ್ತರ ಬಂದಿದೆ.

ಇದನ್ನೂ ಓದಿ: Viral Video: ಖಾಸಗಿ ಭಾಗವನ್ನು ಸ್ವಚ್ಛಗೊಳಿಸಿದ ಬಟ್ಟೆಯನ್ನು ಜ್ಯೂಸ್ ಮಾಡುವ ಪಾತ್ರೆಯಲ್ಲಿಟ್ಟ! ಕಿಡಿಗೇಡಿಯ ಕೃತ್ಯ ಫುಲ್‌ ವೈರಲ್‌

ಆದರೆ ಇನ್ನೊಬ್ಬ ಬಳಕೆದಾರರು ಅದೇ ಪ್ರಶ್ನೆಯನ್ನು ಕೇಳಿದಾಗ, ಗ್ರೋಕ್ ಪ್ರತಿಕ್ರಿಯೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಇದು ನೈಜ ದೃಶ್ಯಾವಳಿಯಂತೆ ಕಾಣುತ್ತದೆ. ಬಹುಶಃ ಸುರಕ್ಷತೆಯ ಜಾಗೃತಿ ಮೂಡಿಸಲು ಈ ವಿಡಿಯೊವನ್ನು ಮಾಡಿರಬಹುದು. ಭಾರತ ಮತ್ತು ಬ್ರೆಜಿಲ್‌ನಂತಹ ಸ್ಥಳಗಳಲ್ಲಿ ಇದೇ ರೀತಿಯ ಬಸ್ ಅಪಘಾತಗಳು ವರದಿಯಾಗಿವೆ. ಇದು AI ಎಂಬುದಕ್ಕೆ ನಿರ್ಣಾಯಕ ಪುರಾವೆ ಸಿಗಲಿಲ್ಲ. ಆದರೆ ಡೀಪ್‌ಫೇಕ್‌ ಆಗಿರುವ ಸಾಧ್ಯತೆಯಿದೆ. ಜಾಗರೂಕರಾಗಿರಿ ಎಂದು ತಿಳಿಸಿದೆ.

ಇನ್ನು ದೆಹಲಿ ವಿಭಾಗದ ರೈಲ್ವೆ ಪೊಲೀಸ್ ಪಡೆ (RPF)ನ ಅಧಿಕೃತ X ಹ್ಯಾಂಡಲ್ ಕೂಡ ಪ್ರತಿಕ್ರಿಯಿಸಿದೆ. ದಯವಿಟ್ಟು ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ ಎಂದು ಬರೆದಿದೆ. ಅಧಿಕಾರಿಗಳು ಘಟನೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ವಿಡಿಯೊವನ್ನು ವೀಕ್ಷಿಸಿದ ಜನರು ಅಸ್ವಾಭಾವಿಕವೆಂದು ತೋರುವ ಹಲವು ವಿವರಗಳನ್ನು ಎತ್ತಿ ತೋರಿಸಿದ್ದಾರೆ. ಮಹಿಳೆ ಡಿಕ್ಕಿ ಹೊಡೆದಾಗ, ಕಂಬ ತಕ್ಷಣವೇ ಹಿಂದಕ್ಕೆ ಹೋಗುವ ಬದಲು ಮುಂದಕ್ಕೆ ಚಲಿಸಿತು. ಇದು ನಿಜ ಜೀವನದಲ್ಲಿ ಸಂಭವಿಸುವುದಿಲ್ಲ. ಡಿಕ್ಕಿ ಹೊಡೆದು ಅವಳು ನೆಲಕ್ಕೆ ಬಿದ್ದಾಗ, ಅವಳ ದೇಹವು ತಕ್ಷಣವೇ ಕಣ್ಮರೆಯಾಗುತ್ತದೆ ಎಂದು ಹೇಳಿದ್ದಾರೆ. ಆದರೂ ಈ ವಿಡಿಯೊ ನಿಜವೋ ಅಥವಾ ನಕಲಿಯೋ ಎಂಬುದರ ಕುರಿತು ಇಲ್ಲಿಯವರೆಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ.