ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಸ್‌ನಲ್ಲಿ ಗುಪ್ತಾಂಗ ತೋರಿಸಿದ ಕಾಮುಕನ ಕೆನ್ನೆಗೆ ಹೊಡೆದ ಯುವತಿ; ವಿಡಿಯೊ ವೈರಲ್

Viral Video: ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ದಿಯೋರಿ ಬಸ್ ನಿಲ್ದಾಣದಲ್ಲಿ ಬಸ್‌ನೊಳಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಯುವತಿ ಸಾರ್ವಜನಿಕರ ಎದುರೇ ಕೆನ್ನೆಗೆ ಬಾರಿಸಿ ತಕ್ಕ ಪಾಠ ಕಲಿಸಿದ್ದಾಳೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸಂತ್ರಸ್ತೆಯಿಂದ ಅಧಿಕೃತ ದೂರು ನೀಡದ ಕಾರಣ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ.

ಚಾಟ್‌ಜಿಪಿಟಿ ರಚಿತ ಚಿತ್ರ

ಭೋಪಾಲ್‌, ಜು. 13: ನಿಂತಿದ್ದ ಬಸ್‌ನೊಳಗೆ ಪ್ಯಾಂಟ್‌ ಜಿಪ್‌ ಜಾರಿಸಿ, ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಕಾಮುಕನಿಗೆ ಧೈರ್ಯಶಾಲಿ ಯುವತಿಯೊಬ್ಬಳು ಸಾರ್ವಜನಿಕವಾಗಿ ಕೆನ್ನೆಗೆ ಬಾರಿಸಿ ಬುದ್ಧಿ ಕಲಿಸಿರುವ ಘಟನೆ ಮಧ್ಯ ಪ್ರದೇಶದ (Madhya Pradesh) ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ದಿಯೋರಿ ಬಸ್ ನಿಲ್ದಾಣದಲ್ಲಿ ನಡೆದಿರುವ ಈ ಘಟನೆಯ ಸಿಸಿಟಿವಿ (CCTV) ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವರದಿಗಳ ಪ್ರಕಾರ, ಬಸ್‌ನಲ್ಲಿ ಯುವತಿಯರು ಕುಳಿತಿದ್ದ ಜಾಗಕ್ಕೆ ಬಂದ ಆರೋಪಿ, ಅವರ ಅತ್ಯಂತ ಸಮೀಪದಲ್ಲಿ ನಿಂತುಕೊಂಡಿದ್ದಾನೆ. ಸುತ್ತಲೂ ಇತರ ಪ್ರಯಾಣಿಕರು ಇದ್ದಾಗಲೂ ಯಾವುದೇ ಹೆದರಿಕೆಯಿಲ್ಲದೆ ತನ್ನ ಪ್ಯಾಂಟ್ ಜಿಪ್ ತೆಗೆದು ವಿಕೃತವಾಗಿ ವರ್ತಿಸಲು ಯತ್ನಿಸಿದ್ದಾನೆ. ಅಲ್ಲದೆ ಆ ಯುವತಿಯ ಹೆಗಲನ್ನು ಅಸಭ್ಯವಾಗಿ ಸ್ಪರ್ಶಿಸಲು ಮುಂದಾಗಿದ್ದಾನೆ. ಇದರಿಂದ ತಕ್ಷಣವೇ ಜಾಗೃತಳಾದ ಯುವತಿ, ಯಾವುದೇ ಭಯವಿಲ್ಲದೆ ಆತನನ್ನು ಎದುರಿಸಿ ಕೆನ್ನೆಗೆ ಹೊಡೆದಿದ್ದಾಳೆ. ಯುವತಿಯ ರೌದ್ರಾವತಾರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಆರೋಪಿ ತಕ್ಷಣವೇ ಬಸ್‌ನಿಂದ ಇಳಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವೈರಲ್‌ ವಿಡಿಯೊ ಇಲ್ಲಿದೆ:



ಆರೋಪಿಯ ಬಂಧನ, ದೂರು ದಾಖಲಾಗದ ಹಿನ್ನೆಲೆ

ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಿಸಿಟಿವಿ ದೃಶ್ಯಾವಳಿಗಳು ಭಾರಿ ಸಂಚಲನ ಸೃಷ್ಟಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ದಿಯೋರಿ ಪೊಲೀಸರು, ಆರೋಪಿಯನ್ನು ನಿತೀಶ್ ಗೊಂಡ್ ಎಂದು ಗುರುತಿಸಿ ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಸಂತ್ರಸ್ತ ಯುವತಿಯರು ಈವರೆಗೆ ಯಾವುದೇ ಅಧಿಕೃತ ಲಿಖಿತ ದೂರನ್ನು ದಾಖಲಿಸದ ಕಾರಣ, ಆರೋಪಿಯ ವಿರುದ್ಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅನುಕಂಪದ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ತಾಯಿಯನ್ನೇ ಕೊಂದ ಪಾಪಿ ಮಗಳು

ಯುವತಿಯ ಧೈರ್ಯಕ್ಕೆ ಮೆಚ್ಚುಗೆ

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಿಡಿಯೊ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಯುವತಿಯ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಯುವತಿ ಅತ್ಯಂತ ಧೈರ್ಯಶಾಲಿ ನಡೆ ಇಟ್ಟಿದ್ದಾಳೆ, ಇಂತಹ ವಿಕೃತರನ್ನು ಕಂಡಾಗ ಹೆದರದೆ ಸೂಕ್ತ ಪಾಠ ಕಲಿಸಬೇಕು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. "ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷೆ ನೀಡಲಾಗಿದೆ, ಈತನನ್ನು ಜೈಲಿಗಟ್ಟಬೇಕು" ಎಂದು ಮತ್ತೊಬ್ಬರು ಆಗ್ರಹಿಸಿದ್ದಾರೆ. ಈ ಘಟನೆಯು ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಮತ್ತು ಇಂತಹ ಪುಂಡರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.