Viral Video: ಖುಷಿಯಿಂದ ಪತಿ ಜೊತೆ ಡಾನ್ಸ್ ಮಾಡ್ತಿರೋವಾಗ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದ ನವವಧು
Woman dies heart attack: ಗಾರ್ಬಾ ನೃತ್ಯ ಮಾಡುತ್ತಿದ್ದಾಗಲೇ ಮಹಿಳೆಯೊಬ್ಬಳು ಹೃದಯಾಘಾತದಿಂದ ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದುರ್ಗಾ ದೇವಸ್ಥಾನದಲ್ಲಿ ತಮ್ಮ ನವವಿವಾಹಿತ ದಂಪತಿ ನೃತ್ಯ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

-

ಇಂದೋರ್: ದುರ್ಗಾ ದೇವಸ್ಥಾನದಲ್ಲಿ ಗಾರ್ಬಾ ನೃತ್ಯ ಮಾಡುತ್ತಿದ್ದಾಗಲೇ ಮಹಿಳೆಯೊಬ್ಬಳು ಹೃದಯಾಘಾತದಿಂದ (heart attack) ಕುಸಿದುಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು (Viral Video), ಮಹಿಳೆಯು ತಮ್ಮ ಪತಿಯೊಂದಿಗೆ ದೇವಸ್ಥಾನದಲ್ಲಿ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನೆಲದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೆಲವೇ ಸೆಕೆಂಡುಗಳಲ್ಲಿ ಆಕೆ ಮೃತಪಟ್ಟಿದ್ದಾಳೆ.
ಭಿಕನ್‌ಗಾಂವ್ ತಹಸಿಲ್‌ನ ಪಲಾಸಿ ಗ್ರಾಮದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸೋನಮ್ ಎಂಬ ಮಹಿಳೆ ತನ್ನ ಪತಿ ಕೃಷ್ಣಪಾಲ್ ಜೊತೆ ದೇವರ ವಿಗ್ರಹದ ಮುಂದೆ ಗಾರ್ಬಾ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಈ ದಂಪತಿಗಳು ಮೇ ತಿಂಗಳಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಇಬ್ಬರು ಒಟ್ಟಿಗೆ ಹಬ್ಬವನ್ನು ಆಚರಿಸುತ್ತಾ, ನೃತ್ಯ ಪ್ರದರ್ಶನ ನೀಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಓ ಮೇರೆ ಧೋಲ್ನಾ ಹಾಡಿಗೆ ದಂಪತಿ ನೃತ್ಯ ಮಾಡುತ್ತಿದ್ದಾಗ ಸೋನಮ್ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದುಬಿದ್ದಿದ್ದಾಳೆ. ದಂಪತಿಯ ನೃತ್ಯ ಪ್ರದರ್ಶನ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಆರಂಭದಲ್ಲಿ ಆಕೆ ಬೀಳುತ್ತಿದ್ದಂತೆ ನೃತ್ಯ ಪ್ರದರ್ಶನದ ಭಾಗವಿರಬಹುದೆಂದು ಭಾವಿಸಿ ನಕ್ಕಿದ್ದರು. ಆದರೆ, ಆಕೆಯಲ್ಲಿ ಯಾವುದೇ ಚಲನೆಯಿಲ್ಲದ್ದನ್ನು ಕಂಡು ಜನರು ಆತಂಕಗೊಂಡರು. ಕೂಡಲೇ ಆಕೆಯ ಪತಿ ಕೃಷ್ಣಪಾಲ್ ಪತ್ನಿಯನ್ನು ಮೇಲಕ್ಕೆತ್ತಲು ಧಾವಿಸಿದರು. ಆತನಿಗೆ ಸಾಧ್ಯವಾಗದಿದ್ದಾಗ, ಇತರರು ಸಹಾಯ ಮಾಡಲು ಮುಂದೆ ಬಂದರು.
ವಿಡಿಯೊ ವೀಕ್ಷಿಸಿ:
#WATCH | 19-Year-Old Married Woman Suffers Heart Attack While Performing Garba In MP's Khandwa#MadhyaPradesh #MPNews pic.twitter.com/Jvz7NQcetM
— Free Press Madhya Pradesh (@FreePressMP) September 29, 2025
ಕೂಡಲೇ ವೈದ್ಯರನ್ನು ಸಂಪರ್ಕಿಸಲಾಯಿತು. ಆದರೆ, ಆ ವೇಳೆಗಾಗಲೇ ಸೋನಂ ಉಸಿರಾಟ ನಿಂತುಹೋಗಿತ್ತು. ಸೋನಂ ಹೃದಯಸ್ತಂಭನದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಗಾರ್ಬಾ ನೃತ್ಯ ಪ್ರದರ್ಶನವಿದ್ದ ಆ ಸಂಜೆ ವೇಳೆ ಸೋನಂ ಆರೋಗ್ಯವಾಗಿಯೇ ಇದ್ದಳು. ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಆಕೆಯಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.
ಇತ್ತೀಚೆಗೆ ತುಂಬಾ ಚಿಕ್ಕ ವಯಸ್ಸಿನಲ್ಲೇ ಅನೇಕರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ವಯಸ್ಸಿನ ಹೊರತಾಗಿಯೂ ಯಾರಿಗಾದರೂ ಹೃದಯಾಘಾತ ಸಂಭವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ದೈಹಿಕ ಚಟುವಟಿಕೆ ಕಡಿಮೆಯಿದ್ದರೆ ಹೃದಯಾಘಾತ ಉಂಟು ಮಾಡಬಹುದು. ಸೋನಂಳ ಹಠಾತ್ ಹೃದಯ ಸ್ತಂಭನಕ್ಕೆ ನಿಖರವಾದ ಕಾರಣವನ್ನು ವೈದ್ಯರು ಪತ್ತೆಹಚ್ಚುತ್ತಿದ್ದಾರೆ.
ತೀರಾ ಇತ್ತೀಚೆಗೆ ಕೇರಳ ವಿಧಾನಸಭೆಯ ಸಿಬ್ಬಂದಿ ನೃತ್ಯ ಮಾಡುತ್ತಿದ್ದಾಗ ವೇದಿಕೆಯಲ್ಲೇ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಎಲ್ಲರೂ ನೋಡುತ್ತಿದ್ದಂತೆ ಏಕಾಏಕಿ ಕುಸಿದುಬಿದ್ದಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದರು.
ಇದನ್ನೂ ಓದಿ: Viral Video: ಜಿಮ್‍ನಲ್ಲಿ ಜಡೆ ಜಗಳ; ಜುಟ್ಟು-ಜುಟ್ಟು ಹಿಡಿದು ಮಹಿಳೆಯರ ಬಿಗ್ ಫೈಟ್! ವಿಡಿಯೊ ವೈರಲ್