Karnataka Floods: ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಿಸಿ: ಎಚ್.ಡಿ. ಕುಮಾರಸ್ವಾಮಿ ಆಗ್ರಹ
HD Kumaraswamy: ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

-

ನವದೆಹಲಿ: ಬೆಂಗಳೂರಿನಲ್ಲಿ ಎಸಿ ರೂಮ್‌ಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕಕ್ಕೆ ನೆರೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆಗ್ರಹಿಸಿದ್ದಾರೆ. ನವ ದೆಹಲಿಯಲ್ಲಿ ಮಂಗಳವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದರೆ ರಾಜ್ಯದಲ್ಲಿರುವ ಸರ್ಕಾರ ʼಕುಂಭಕರ್ಣ ನಿದ್ರೆʼ ಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರ್ಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರ್ಕಾರ ಗಾಢ ನಿದ್ರೆಯಲ್ಲಿತ್ತು ಎಂದು ಅವರು ಕಿಡಿಕಾರಿದರು.
ಸಿಎಂ ಹೇಳಿಕೆ ಬಗ್ಗೆ ನಿರಾಸೆ ಆಗಿದೆ
ಪರಿಹಾರಕ್ಕೆ ಒತ್ತಾಯ ಮಾಡುತ್ತಿರುವ ಪ್ರತಿಪಕ್ಷಗಳ ಬಗ್ಗೆ ಮುಖ್ಯಮಂತ್ರಿ ನೀಡುತ್ತಿರುವ ಉತ್ತರ, ಹೇಳಿಕೆಗಳನ್ನು ನೋಡಿದರೆ ನಿರಾಸೆಯಾಗುತ್ತದೆ. ಪ್ರತಿಪಕ್ಷವನ್ನು ಬೈದರೆ ನೆರೆ ಸಂತ್ರಸ್ತರ ಸಮಸ್ಯೆ ನೀಗುತ್ತದೆಯೇ? ಅವರ ಹೇಳಿಕೆಗಳು ಅವರು ಅಲಂಕರಿಸುವ ಹುದ್ದೆಗೆ ತಕ್ಕುದಾಗಿಲ್ಲ. ಸಂಪುಟದಲ್ಲಿ 36 ಜನ ಮಂತ್ರಿಗಳಿದ್ದಾರೆ. ಅವರೆಲ್ಲರೂ ಎಲ್ಲಿ ಹೋಗಿದ್ದಾರೆ? ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡಿದ್ದು ಸಾಕು ಎಂದು ಗುಡುಗಿದ ಅವರು, ಮೊದಲು ಜಡತ್ವ ಬಿಟ್ಟು ಪ್ರತೀ ಜಿಲ್ಲೆಗೂ ಇಬ್ಬರು-ಮೂವರು ಮಂತ್ರಿಗಳನ್ನು ಕಳಿಸಿ. ವಿಶೇಷ ತಂಡಗಳನ್ನು ನಿಯೋಜಿಸಿ. ಸಚಿವರು ಕನಿಷ್ಠ 3 ದಿನ ಜಿಲ್ಲೆಗಳಲ್ಲಿಯೇ ಮೊಕ್ಕಂ ಹೂಡಲಿ. ಮೊದಲು ಜನರ ಬಳಿಗೆ ಹೋಗಿ ಅವರ ಕಷ್ಟಕ್ಕೆ ಮಿಡಿಯಲಿ ಎಂದು ಒತ್ತಾಯಿಸಿದರು.
ನನಗೆ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದಿದ್ದರೆ ನೆರೆಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ವಾರ ಕಾಲವಾದರೂ ಕ್ಯಾಂಪ್ ಮಾಡುತ್ತಿದ್ದೆ. ಇನ್ನೊಂದು ಕಡೆ 2 ದಿನಗಳ ಹಿಂದೆಯೇ ನಾನು ನೆರೆ ಪ್ರದೇಶಗಳಿಗೆ ಹೋಗಲು ಸಿದ್ದವಾಗಿದ್ದೆ. ಹವಾಮಾನ ಸರಿ ಇಲ್ಲದ ಕಾರಣ ಅಧಿಕಾರಿಗಳು ಬರಬೇಡಿ ಎಂದರು. ಪ್ರವಾಹ ಬಂದು ಎರಡುಮೂರು ದಿನಗಳು ಆದ ಮೇಲೆ ಮಂತ್ರಿಗಳು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಹೀಗೆ ಮಾಡಿದರೆ ಹೇಗೆ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಪದೇ ಪದೆ ಕೇಂದ್ರ ಸರ್ಕಾರದ ಜತೆ ಘರ್ಷಣೆ ಮಾಡಿಕೊಳ್ಳಬೇಡಿ. ಅದರಿಂದ ಉಪಯೋಗ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಡಿ. ಸರಿಯಾದ ರೀತಿಯಲ್ಲಿ ಮನವಿ ಕೊಟ್ಟು ಪರಿಹಾರ ಕೇಳಿದರೆ ಕೇಂದ್ರದ ನೆರವು ಸಿಗುತ್ತದೆ. ಮೊದಲು ಒರಟು ಮಾತು ಬಿಡಿ. ಈವರೆಗೂ ರಾಜ್ಯದ ಒಬ್ಬ ಸಚಿವ ಅಥವಾ ಅಧಿಕಾರಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಅವರು ಹರಿಹಾಯ್ದರು.
ರಾಜ್ಯದಲ್ಲಿ ಬೇಕಿಲ್ಲದ ವಿಷಯಗಳತ್ತ ಹೆಚ್ಚು ಕಾಲ ವ್ಯರ್ಥವಾಗುತ್ತಿದೆ. ಜಾತಿ ಗಣತಿ ಅಂತ ಮಾಡುತ್ತಿದ್ದಾರೆ. ಅದನ್ನು ಮಾಡಲು ಇನ್ನೊಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಈ ಸರ್ಕಾರದಿಂದ ಜನರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ. ಕಾಂತರಾಜು ಆಯೋಗದ ಭಜನೆ ನಿಲ್ಲಿಸಿ. ಗ್ಯಾರಂಟಿ ಕೊಟ್ಟೆವು ಎಂದರು. ಈಗ ಕಲ್ಯಾಣ ಕರ್ನಾಟಕವನ್ನು ಗ್ಯಾರಂಟಿಗಳು ಕಾಪಾಡುತ್ತಿವೆಯೇ? ಅವರಿಗೆ ನೆರೆಯನ್ನು ತಡೆದು ಶಾಶ್ವತ ಪರಿಹಾರ ನೀಡಬೇಕು. ಈ ಸರ್ಕಾರದಿಂದ ಅದು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.
ಬೆಂಗಳೂರು ಪರಿಸ್ಥಿತಿ ನೋಡಿ
ಬೆಂಗಳೂರು ನಗರದ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡುತ್ತಿದ್ದೀರಿ. ಬೆಂಗಳೂರು ಉಸ್ತುವಾರಿ ಸಚಿವರು ಭಾರೀ ಬಿಜಿ ಇದ್ದರು, ಹಾಗಾಗಿ ಅವರನ್ನು ಬಿಟ್ಟೇ ಸಿಎಂ ನಗರ ಪ್ರದಕ್ಷಿಣೆ ಮಾಡಿದರು. ಸಿಎಂ ಅವರು ಮುಚ್ಚಿದ ಗುಂಡಿ ನೋಡ್ಕೊಂಡು ಹೋಗುತ್ತಿದ್ದರೆ ಅವರ ಹಿಂದೆ ಹಾಕಿರುವ ಟಾರು ಕಿತ್ತುಕೊಂಡು ಹೋಗಿದೆ. ಗ್ಯಾರಂಟಿ ಸ್ಕೀಮ್ ಮಾಡಿ ಖಜಾನೆ ಖಾಲಿ ಅಂಥ ನಾನು ಹೇಳಲ್ಲ. ಜನರೂ ಕೇಳಿರಲಿಲ್ಲ. ಆದರೆ ದಸರಾ ಹೆಸರಲ್ಲಿ ಈಗ ಬಸ್ ಟಿಕೆಟ್ ಬೆಲೆ ಹೆಚ್ಚಳ ಮಾಡಿದೆ ಸರ್ಕಾರ. ಖಾಸಗಿ ಬಸ್ಸುಗಳ ಜತೆ ಕೆಎಸ್‌ಆರ್‌ಟಿಸಿ ಕೂಡ ದರ ಏರಿಕೆಗೆ ಪೈಪೋಟಿಗೆ ಬಿದ್ದಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದೆ. ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ಇದರಿಂದ ರೈತರು ಖುಷಿಯಾಗಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡೆ ಮಳೆ ಹೆಚ್ಚಿ ಪ್ರವಾಹದ ಸ್ವರೂಪ ಪಡೆಯಿತು. ಗೌರಿ ಗಣೇಶ ಹಬ್ಬದ ವೇಳೆಯಲ್ಲೇ ಕಲ್ಯಾಣ ಕರ್ನಾಟಕ, ಬೆಳಗಾವಿ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈಗಲೂ ಸಹ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ದೊಡ್ಡ ಪ್ರವಾಹ ಉಂಟಾಗಿದೆ. ನಾನು ಆ ಜಿಲ್ಲೆಗಳ ಡಿಸಿಗಳ ಜತೆ ದೂರವಾಣಿಯಲ್ಲಿ ಮಾತಾಡಿ ಮಾಹಿತಿ ಪಡೆದಿದ್ದೇನೆ. ಪ್ರತಿ ಒಂದು ಜಿಲ್ಲೆಯಲ್ಲೂ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಮನೆಗಳಿಗೆ ನೀರು ನುಗ್ಗಿ ಜನರು ಬೀದಿಪಾಲಾಗಿದ್ದಾರೆ. ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಇಷ್ಟೂ ಜಿಲ್ಲೆಗಳ 12 ಗೋಶಾಲೆಗಳು ಸಂಪೂರ್ಣ ಮುಳುಗಿವೆ. ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Kalaburagi News: ಕಲಬುರಗಿಯಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಬಿ.ವೈ. ವಿಜಯೇಂದ್ರ ಭೇಟಿ
ನೆರೆಯ ಮಹಾರಾಷ್ಟ್ರದಿಂದ ನಿತ್ಯವೂ 4.5 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ಬರುತ್ತಿದೆ. ಜತೆಗೆ ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಕೃಷ್ಣಾ ನದಿ ಪಾತ್ರಗಳಲ್ಲಿಯೂ ಅತಿವೃಷ್ಠಿಯಾಗಿ ಅಷ್ಟೇ ಪ್ರಮಾಣದ ನೀರು ಹರಿಯುತ್ತಿದೆ. ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದ ನೀರು ಪ್ರವಾಹ ಸ್ವರೂಪ ಪಡೆದು ಅಪಾರ ನಷ್ಟ ಉಂಟು ಮಾಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.