ಚೆನ್ನೈ, ಜು. 29: ಇತ್ತೀಚೆಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಹೆಚ್ಚುತ್ತಿದೆ. ಇದೀಗ ತಮಿಳುನಾಡಿನ ಸೇಲಂನಲ್ಲಿ ಕಿಚ್ಚ ಸುದೀಪ್ ನಟನೆಯ ʼವೀರ ಮದಕರಿʼ ಚಿತ್ರದ ಕಥೆಯನ್ನು ಹೋಲುವ ವಿಚಿತ್ರ ಘಟನೆಯೊಂದು (Viral News) ನಡೆದಿದೆ. ಕೇವಲ 15,000 ರುಪಾಯಿ ಆಸೆಗೆ ಬಿದ್ದು ಮಹಿಳೆಯರು ತಲೆ ಬೋಳಿಸಿಕೊಂಡಿದ್ದು, ಈ ಪ್ರಕರಣ ದೇಶವನ್ನೇ ಅಚ್ಚರಿಗೆ ದೂಡಿದೆ. ಕೋವಿಡ್-19ನಂತಹ ಅಪಾಯಕಾರಿ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ವಿಶೇಷ ಆರೋಗ್ಯ ಯೋಜನೆ ಪರಿಚಯಿಸಿದೆ. ಅದರಂತೆ ತಲೆ ಬೋಳಿಸಿಕೊಂಡರೆ ದುಡ್ಡು ಸಿಗಲಿದೆ ಎಂದು ನಂಬಿಸಿ ವ್ಯಕ್ತಿಯೊರ್ವ ಮಹಿಳೆಯರನ್ನು ಮೋಸಗೊಳಿಸಿದ್ದಾನೆ.
ವಂಚಕ ತಹಶೀಲ್ದಾರ್ ಕಚೇರಿಗೆ ಸಂಬಂಧಿಸಿದ ಅಧಿಕಾರಿಯಂತೆ ನಟಿಸಿ ಫೋನ್ ಮೂಲಕ ಕೆಲವು ಮಹಿಳೆಯರನ್ನು ಸಂಪರ್ಕಿಸಿದ್ದಾನೆ. ಹೊಸ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ಸರ್ಕಾರ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಸುಳ್ಳು ಪ್ರಚಾರ ಮಾಡಿ ಜನರನ್ನು ನಂಬಿಸಿದ್ದಾನೆ.
ವಿಡಿಯೊ ನೋಡಿ:
ʼʼವಿದೇಶದಲ್ಲಿ ಈ ಕಾಯಿಲೆ ಬಂದವರು ತಲೆ ಬೋಳಿಸಿಕೊಂಡಿದ್ದಾರೆ. ತಮಿಳುನಾಡು ಸರ್ಕಾರವು ಮುಂಜಾಗ್ರತಾ ಕ್ರಮವನ್ನು ಅಳವಡಿಸಿಕೊಂಡಿದ್ದು, ನಾಗರಿಕರು ತಲೆ ಬೋಳಿಸಿಕೊಳ್ಳಲು ಸೂಚಿಸಿದೆʼʼ ಎಂದು ಹೇಳಿದ್ದಾನೆ. ಅಲ್ಲದೆ ಜನರನ್ನು ನಂಬಿಸಲು ದೊಡ್ಡ ಮಟ್ಟದ ಹಣದ ಆಮಿಷ ಒಡ್ಡಿದ್ದಾನೆ.
ತಲೆ ಬೋಳಿಸಿಕೊಳ್ಳುವ ಮಹಿಳೆಯರಿಗೆ 15,000 ರುಪಾಯಿ, ಪುರುಷರಿಗೆ 6,000 ರುಪಾಯಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ 45,000 ರುಪಾಯಿ ನಗದು ಜತೆಗೆ ಲ್ಯಾಪ್‌ಟಾಪ್ ನೀಡುವುದಾಗಿ ಹೇಳಿದ್ದಾನೆ. ಓರ್ವ ಮಹಿಳೆಯ ಹೆಸರನ್ನು ಸರ್ಕಾರಿ ಕಾರ್ಯಕ್ರಮಕ್ಕೆ ಈಗಾಗಲೇ ಆಯ್ಕೆ ಮಾಡಲಾಗಿದೆ ಎಂದು ಹೇಳುವ ಮೂಲಕ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾನೆ.
ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ
ಇದನ್ನು ನಂಬಿದ ಮಹಿಳೆಯರು ಇತರರಿಗೂ ಈ ಯೋಜನೆಯ ಬಗ್ಗೆ ತಿಳಿಸಿದ್ದಾರೆ. ಅಂತಿಮವಾಗಿ ಮೂವರು ಮಹಿಳೆಯರು ಆರ್ಥಿಕ ನೆರವು ಸಿಗುತ್ತದೆ ಎಂದು ನಂಬಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಆದರೆ, ಪ್ರಕ್ರಿಯೆ ಮುಗಿದ ನಂತರ ಹಣಕ್ಕಾಗಿ ಮಹಿಳೆಯರು ಕಾಲ್ ಮಾಡಿದಾಗ ಆ ವ್ಯಕ್ತಿಯ ನಂಬರ್ ಬಿಝಿಯಾಗಿತ್ತು, ನಂತರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆಗಲೆ ತಾವು ಮೋಸ ಹೋಗಿರುವುದು ಮಹಿಳೆಯರಿಗೆ ಮನದಟ್ಟಾಗಿದ್ದು.
ನಕಲಿ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ವಂಚಿಸುತ್ತಿರುವ ಪ್ರಕರಣಗಳು ಇಂದು ಹೆಚ್ಚಾಗಿದೆ. ವಂಚಕರು ಸರ್ಕಾರಿ ಕಚೇರಿಗಳು ಅಥವಾ ಅಧಿಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ಇಂತಹ ಮೋಸಗಳನ್ನು ಮಾಡುತ್ತಾರೆ. ಹೀಗಾಗಿ ಎಚ್ಚರಿಕೆಯಿಂದ ಇರಲು ಸರ್ಕಾರವು ಸೂಚನೆ ನೀಡಿದೆ.