ನವದೆಹಲಿ,ಜು.6: ಇತ್ತೀಚೆಗೆ ಯಾವುದೇ ವಸ್ತುಗಳನ್ನು ಆನ್ ಲೈನ್ ನಲ್ಲಿ ಖರೀದಿ ಮಾಡುವುದು ಟ್ರೆಂಡ್ ಆಗಿ ಬಿಟ್ಟಿದೆ. ಡ್ರೆಸ್ ,ಮನೆ ಬಳಕೆಯ ವಸ್ತು, ಬ್ಯೂಟಿ ಪ್ರಾಡಕ್ಟ್ ಹೀಗೆ ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ಆದರೆ ಈ ವಸ್ತುಗಳು ಎಷ್ಟರ ಮಟ್ಟಿಗೆ ಸುರಕ್ಷತೆ ಅನ್ನುವ ಪ್ರಶ್ನೆ ಇದೀಗ ಮೂಡುವಂತೆ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೀಶೋ ಆ್ಯಪ್ ನಲ್ಲಿ ಸಿಗುವ ಪಾಕಿಸ್ತಾನಿ ಮೂಲದ " ಗೋರಿ ಬ್ಯೂಟಿ ಕ್ರೀಮ್ " ಬಳಸಿದ ಮಹಿಳೆಯರು ಇದೀಗ ಅನಾರೋಗ್ಯಕ್ಕೆ ತುತ್ತಾದ ಘಟನೆಯೊಂದು ನಡೆದಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, ಮೀಶೊದಲ್ಲಿ ಲಭ್ಯವಿರುವ ಪಾಕಿಸ್ತಾನದಲ್ಲಿ ತಯಾರಿಸಲ್ಪಟ್ಟ ಗೋರಿ ಬ್ಯೂಟಿ ಕ್ರೀಮ್ ಬಳಸಿದ ನಂತರ 18 ಮಹಿಳೆಯರಿಗೆ ಮೂತ್ರಪಿಂಡದ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.. ಸದ್ಯ ಈ ಸುದ್ದಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಪಾಕಿಸ್ತಾನಿ ವಸ್ತುಗಳನ್ನು ಭಾರತೀಯರು ಬಳಕೆ ಮಾಡುವಂತಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ವ್ಯಾಪಾರ ಸಂಬಂಧಗಳು ಈಗಾಗಲೇ ನಿಷೇಧ ಮಾಡಿದರೂ ಮಾರುಕಟ್ಟೆಯಲ್ಲಿ ಇದರ ಬಳಕೆ ಹೇಗೆ ಎಂದು ಹಲವಾರು ಚರ್ಚೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಎಫ್‌ಡಿಎ ಪ್ರಕಾರ ಚರ್ಮವನ್ನು ಬಿಳಿಚಿಸುವ ಈ ಕ್ರೀಮ್ ಕಾನೂನುಬದ್ಧವಾಗಿ ಅನುಮತಿಸುವ ಮಿತಿಗಿಂತ 752 ಪಟ್ಟು ಪಾದರಸವನ್ನು ಹೊಂದಿದೆ. ಹೀಗಾಗಿ ಮಹಿಳೆಯರು ಅನಾರೋಗ್ಯಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಆರೋಗ್ಯ ತಜ್ಞ ಎಂದು ಹೇಳಲಾದ ಚಿರಾಗ್ ಬರ್ಜತ್ಯ ಅವರು ಈ ಪೋಸ್ಟ್ ಶೇರ್ ಮಾಡಿದ್ದಾರೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಡೆಸಿದ ಪ್ರಯೋಗಾಲಯದಲ್ಲಿ ಕ್ರೀಮ್‌ನಲ್ಲಿ ಕಾನೂನುಬದ್ಧವಾಗಿ ಅನುಮತಿಸುವ ಮಿತಿಗಿಂತ 752 ಪಟ್ಟು ಪಾದರಸವಿದೆ. ಹೀಗಾಗಿ ಈ ಬ್ಯೂಟಿ ಕ್ರೀಮ್ ಬಳಸಿದ ಮಹಾರಾಷ್ಟ್ರದ ನಾಗ್ಪುರದ 18 ಮಹಿಳೆಯರು ಕಳೆದ ಎರಡು ವರ್ಷಗಳಲ್ಲಿ ತೀವ್ರ ಕಿಡ್ನಿ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಈ ಕ್ರೀಮ್‌ನಲ್ಲಿರುವ ಪಾದರಸವು ಚರ್ಮಕ್ಕೆ ಬಣ್ಣ ನೀಡುವ 'ಮೆಲನಿನ್' ಉತ್ಪಾದನೆಯನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಇದರಿಂದ ಚರ್ಮವು ಬೇಗನೆ ಬೆಳ್ಳಗೆ ಕಾಣುತ್ತದೆ. ಆದರೆ ಇದು ದೇಹಕ್ಕೆ ನೀಡುವ ಸೌಂದರ್ಯ ಅಲ್ಲ ನಮ್ಮ ಚರ್ಮವು ಈ ಪಾದರಸವನ್ನು ಹೀರಿಕೊಳ್ಳುತ್ತದೆ.ಇದು ರಕ್ತದ ಮೂಲಕ ದೇಹವನ್ನು ಸೇರಿ ಕಾಲಕ್ರಮೇಣ ಕಿಡ್ನಿಗಳಲ್ಲಿ ಶೇಖರಣೆಯಾಗಿ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಈ ಸುದ್ದಿ ಬೆಳಕಿಗೆ ಬರುತ್ತಿದ್ದಂತೆ, ಭಾರತದಲ್ಲಿಈ ಉತ್ಪನ್ನಗಳ ಲಭ್ಯತೆಯ ಕುರಿತು ಬಳಕೆದಾರರು ಕೇಳಿದ ಪ್ರಶ್ನೆಗಳಿಗೆ ಮೀಶೋ ಪ್ರತಿಕ್ರಿಯಿಸಿದೆ. ಇತ್ತೀಚಿನ ಸುದ್ದಿ ವರದಿಗಳ ಹಿನ್ನೆಲೆಯಲ್ಲಿ, ನಾವು ಈ ವಿಚಾರವನ್ನು ತನಿಖೆ ಮಾಡುತ್ತಿದ್ದೇವೆ. ಹಾಗೂ ನಮ್ಮ ಕಂಪನಿಯಿಂದ ಉತ್ಪನ್ನಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮ ಗ್ರಾಹಕರಿಗೆ ಸುರಕ್ಷಿತ ಮಾರುಕಟ್ಟೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ ಎಂದಿದೆ.
ಈ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದು ಬಳಕೆದಾರರೊಬ್ಬರು ಇದನ್ನು ಬಳಸುವ ಜನರು ಎಷ್ಟು ಮೂರ್ಖ, ಮೆದುಳು ಇದ್ದ ವ್ಯಕ್ತಿ ಪಾಕಿಸ್ತಾನದಲ್ಲಿ ತಯಾರಿಸಿದ ಉತ್ಪನ್ನವನ್ನು ಬಳಸುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಜನರು ಫೇಸ್ ಕ್ರೀಮ್‌ಗಾಗಿ ಮೀಶೋ ಬಳಸುತ್ತಿದ್ದಾರೆ ಅಂದರೆ ಅವರಿಗೆ ಹುಚ್ಚು ಎಂದು ಟೀಕೆ ಮಾಡಿದ್ದಾರೆ.