ಪಾಟ್ನಾ, ಮೇ 9: ಇತ್ತೀಚೆಗೆ ಹಣ್ಣು- ತರಕಾರಿಗಳನ್ನು ತಾಜಾವಾಗಿ ಇಡಲು ವಿವಿಧ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಮಾರಕವಾಗಿದ್ದು, ಅತಿಯಾದ ಬಳಕೆಯೊಂದ ಗಂಭೀರ ಕಾಯಿಲೆ ಕಾನಿಸಿಕೊಳ್ಳುವ ಅಪಾಯವಿದೆ. ಇದೀಗ ಇಂತಹ ಪ್ರಕರಣವೊಂದು ಬಿಹಾರದ ರೈಲು ನಿಲ್ದಾಣದಲ್ಲಿ ಕಂಡು ಬಂದಿದೆ. ಸೌತೆಕಾಯಿಗೆ ಕೃತಕ ಹಸಿರು ಬಣ್ಣ ಬಳಿದಿರುವ ಘಟನೆ ಬೆಳಕಿಗೆ ಬಂದಿದೆ. ನಾವು ಸೇವಿಸುವ ಆಹಾರ ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಬಿಹಾರದ ಕತಿಹಾರ್ ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ಕಂಡು ಬಂದಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಬಿಹಾರದ ಕತಿಹಾರ್ ಜಂಕ್ಷನ್ ರೈಲ್ವೆ ನಿಲ್ದಾಣದಬಬಳಿ ಮಹಿಳೆಯರಿಬ್ಬರು ಸೌತೆಕಾಯಿಗಳಿಗೆ ಕೃತಕ ಹಸಿರು ಬಣ್ಣ ಬಳಿದು ಪ್ರಯಾಣಿಕರಿಗೆ ಮಾರಾಟ ಮಾಡುತ್ತಿದ್ದರು. ಅವು ಹೆಚ್ಚು ಪ್ರೆಶ್ ಆಗಿರುವಂತೆ ಕಾಣಲು ಹಸಿರು ಬಣ್ಣದಲ್ಲಿ ಅದ್ದಿದ್ದಾರೆ. ರೈಲು ಪ್ರಯಾಣಿಕರಿಗೆ ಮಾರಾಟ ಮಾಡಲು ಈ ತರಕಾರಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ಈ ಆತಂಕಕಾರಿ ವಿಡಿಯೊ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ.
ವಿಡಿಯೊ ನೋಡಿ:
ವೈರಲ್ ಆದ ದೃಶ್ಯ ಕತಿಹಾರ್ ಜಂಕ್ಷನ್‌ನ 7 ಮತ್ತು 8ನೇ ಪ್ಲಾಟ್ ಫಾರ್ಮ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಬ್ಬರು ಮಹಿಳೆಯರು ಬಾಡಿ ಹೋಗಿರುವ ಸಿಪ್ಪೆ ಸುಲಿದ ಸೌತೆ ಕಾಯಿಗೆ ಹಸಿರು ಬಣ್ಣ ಲೇಪಿಸಿ ಇಡುತ್ತಿರುವುದು ಕಂಡು ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದೃಶ್ಯ ವೈರಲ್ ಆದ ನಂತರ, ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನಿಲ್ದಾಣದಲ್ಲಿ ತ್ವರಿತ ಕ್ರಮ ಕೈಗೊಂಡಿದೆ.
ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?
ಎಚ್ಚೆತ್ತ ರೈಲ್ವೆ ರಕ್ಷಣಾ ಪಡೆ (RPF) ನಿಲ್ದಾಣದ ಮೇಲೆ ದಾಳಿ ನಡೆಸಿದೆ. ಆರ್‌ಪಿಎಫ್ ಸಿಬ್ಬಂದಿ ಆವರಣದೊಳಗೆ ಕಾರ್ಯ ನಿರ್ವಹಿಸುತ್ತಿರುವ ಮಾರಾಟಗಾರರಿಂದ ಹಲವು ಬುಟ್ಟಿ ಸೌತೆ ಕಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಡಿಯೊದಲ್ಲಿದ್ದ ಮಹಿಳೆಯರು ಸೇರಿ ಒಟ್ಟು ಒಂಬತ್ತು ಬೀದಿ ಬದಿ ವ್ಯಾಪಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.