ನವದೆಹಲಿ, ಫೆ. 18: ಇತ್ತೀಚೆಗೆ ರೀಲ್ಸ್ ಹುಚ್ಚಾಟ ಮೀತಿ ಮೀರಿ ಹೋಗಿದೆ. ಪ್ರಾಣವನ್ನು ಲೆಕ್ಕಿಸದೆ ಅಪಾಯಕಾರಿ ಸ್ಟಂಟ್ ಮಾಡಲು ಮುಂದಾಗುತ್ತಾರೆ. ಇದರಿಂದ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಲೈಕ್, ಕಮೆಂಟ್ ಗಿಟ್ಟಿಸಿಕೊಳ್ಳಬೇಕೆಂದು ಅಪಾಯಕಾರಿ ಸಾಹಸ ಮಾಡಿ ಅದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿಯಲ್ಲಿ ಯುವಕನೊಬ್ಬ ರೀಲ್ಸ್ ಮಾಡಲು ಹೋಗಿ ಸಾರ್ವಜನಿಕರ ಜೀವಕ್ಕೆಯೇ ಕುತ್ತು ತರಲು ಮುಂದಾಗಿದ್ದಾನೆ. ಸದ್ಯ ಈ ಅಪಾಯಕಾರಿ ವಿಡಿಯೊ ಭಾರಿ ವೈರಲ್ (Viral Video) ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎನ್ನುವ ಕಾರಣಕ್ಕೆ ಬೈಕ್ ಏರಿ ಸ್ಟಂಟ್ ಮಾಡುವುದು, ರೈಲ್ವೆ ಹಳಿಯಲ್ಲಿ ರೀಲ್ಸ್ ಮಾಡುವುದು ಇತ್ಯಾದಿ ಸಹಾಸಕ್ಕೆ ಮುಂದಾಗುವವರು ಇದ್ದಾರೆ. ಇದೀಗ ದೆಹಲಿಯ ಬೈಕ್ ಸವಾರನೊಬ್ಬ ಜನ ದಟ್ಟಣೆಯ ರಸ್ತೆಯಲ್ಲಿ ಜೀವಕ್ಕೆ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿರುವುದು ಕಂಡುಬಂದಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೊ ನೋಡಿ:
ಯುವಕನೊಬ್ಬ ತನ್ನ ಬೈಕ್ ವೇಗವಾಗಿ ಚಲಿಸುತ್ತಿರುವ ಬಸ್ ಮತ್ತು ಕಾರುಗಳ ಅತ್ಯಂತ ಹತ್ತಿರಕ್ಕೆ ಕೊಂಡೊಯ್ದು ಚಲಿಸುತ್ತಿರುವ ವಾಹನಗಳ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ವಾಹನಗಳು ಚಲಿಸುತ್ತಿರುವಾಗಲೂ ಅವನು ಪದೇ ಪದೆ ಅವುಗಳ ಬಾಗಿಲುಗಳನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಇದು ತನ್ನನ್ನು ಮಾತ್ರವಲ್ಲದೆ ಚಾಲಕರು, ಪ್ರಯಾಣಿಕರು ಮತ್ತು ಪಾದಚಾರಿ ಗಳನ್ನು ಗಂಭೀರ ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಇತ್ತು.
ವಾಕಿಂಗ್ ತೆರಳಿದ್ದ ಮಾಜಿ ಶಾಸಕಿ ಮೇಲೆ ಏಕಾಏಕಿಯಾಗಿ ಹರಿದ ಕಾರು
ದೆಹಲಿಯ ಉಸ್ಮಾನ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಯುವಕನ ಚಲಿಸುವ ಕಾರು ಮತ್ತು ಬಸ್‌ಗಳ ಬಳಿ ಅಪಾಯಕಾರಿಯಾಗಿ ತನ್ನ ಬೈಕ್ ಅನ್ನು ಚಲಾಯಿಸುತ್ತಿರುವುದನ್ನು ಕಾಣಬಹುದು. ಈತನ ಈ ಬೇಜವಾಬ್ದಾರಿ ಕೃತ್ಯದಿಂದಾಗಿ ವಾಹನ ಚಾಲಕರು ಅನಿರೀಕ್ಷಿತವಾಗಿ ಗಾಬರಿಗೊಂಡು ಅಪಘಾತಕ್ಕೀಡಾಗುವ ಸಾಧ್ಯತೆ ಇತ್ತು.
ಈ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಈ ಕೃತ್ಯವನ್ನು ಅಜಾಗರೂಕತೆಯ ಪರಮಾವಧಿ ಮತ್ತು ಬೇಜವಾಬ್ದಾರಿ ಎಂದು ನೆಟ್ಟಿಗರು ಕರೆದಿದ್ದಾರೆ. ವಿಡಿಯೊ ವೈರಲ್ ಆದ ನಂತರ, ಅಧಿಕಾರಿಗಳು ತ್ವರಿತ ಕ್ರಮ ಕೈಗೊಂಡಿದ್ದಾರೆ. ದೆಹಲಿ ಪೊಲೀಸರು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 281ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಕೂಡ ಕಿಡಿಕಾರಿದ್ದಾರೆ. ಒಬ್ಬರು ಯಾವುದೇ ರೀಲ್ಸ್ ಮಾನವ ಜೀವಗಳನ್ನು ಪಣಕ್ಕಿಡಲು ಯೋಗ್ಯವಲ್ಲ ಎಂದು ಕಮೆಂಟ್ ಮಾಡಿದರೆ, ಇನ್ನೊಬ್ಬರು ಯುವಕನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದಿದ್ದಾರೆ.