ನವದೆಹಲಿ, ಮೇ 18: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವೇ. ಉದ್ಯೋಗ ಸಿಕ್ಕ ಮೇಲೆ ನೆಮ್ಮದಿಯ ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ಕೆಲಸದಲ್ಲಿ ಅಷ್ಟರಮಟ್ಟಿನ ಒತ್ತಡ ಇರುತ್ತದೆ. 25 ವರ್ಷದ ಯುವಕನೊಬ್ಬ ಕೆಲಸದ ಹೊರೆ ಹೆಚ್ಚಾಗಿ 20 ಲಕ್ಷ ರುಪಾಯಿ ಪ್ಯಾಕೇಜ್ ಹೊಂದಿದ್ದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾನೆ. ಎನ್‌ಐಟಿ ಕುರುಕ್ಷೇತ್ರದ 25 ವರ್ಷದ ಎಂಜಿನಿಯರ್ ಸೌರಭ್ ಮಿತ್ತಲ್ 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರುಪಾಯಿ ಸಂಬಳದೊಂದಿಗೆ ಬಿಪಿಸಿಎಲ್‌ಗೆ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಉದ್ಯೋಗಕ್ಕಾಗಿ ಪದಾರ್ಪಣೆ ಮಾಡಿದ್ದ. ಈ ಕೆಲಸವನ್ನು ಪ್ರತಿಷ್ಠಿತವೆಂದು ಪರಿಗಣಿಸಲಾಗುತ್ತದೆ. ಆದರೆ ಅತೀವ ಒತ್ತಡ ಹಾಗೂ ಮಾನಸಿಕ ನೆಮ್ಮದಿ ಇಲ್ಲದೆ ಇದೀಗ ಆ ಉದ್ಯೋಗಕ್ಕೆ ಗುಡ್ ಬೈ ಹೇಳಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ʼʼಕೆಲಸದ ಜಾಗದಲ್ಲಿ ಕನಿಷ್ಠ ಮೂಲ ಸೌಕರ್ಯಗಳು ಇಲ್ಲ. ಶೌಚಾಲಯ ಇಲ್ಲ, ಕುಡಿಯಲು ನೀರಿಲ್ಲ. ಅಲ್ಲದೆ ಹಿರಿಯ ಉದ್ಯೋಗಿಗಳ ಮಾನಸಿಕ ಒತ್ತಡವೇ ಕೆಲಸ ತ್ಯಜಿಸಲು ಕಾರಣʼʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾನೆ. ಇತ್ತೀಚಿನ ದಿನದಲ್ಲಿ ಯುವ ಜನತೆ ಹಣ, ಪ್ರತಿಷ್ಠಿತ ಕಂಪನಿ ಎನ್ನುವುದಕ್ಕಿಂತ ಮಾನಸಿಕ ನೆಮ್ಮದಿಗೆ ಆದ್ಯತೆ ನೀಡುತ್ತಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
ವಿಡಿಯೊ ನೋಡಿ:
ಸೌರಭ್ ಮಿತ್ತಲ್ 22ನೇ ವಯಸ್ಸಿನಲ್ಲೇ ಪ್ರತಿಷ್ಠಿತ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡು ಅನೇಕರಲ್ಲಿ ಅಚ್ಚರಿ ಮೂಡಿಸಿದ್ದರು. ವಾರ್ಷಿಕ 20 ಲಕ್ಷ ರುಪಾಯಿ ಸಂಬಳವಿದ್ದ ಕಾರಣ ಮನೆಯವೂ ಖುಷಿ ವ್ಯಕ್ತಪಡಿಸಿದ್ದರು. ಆದರೆ, ಪಶ್ಚಿಮ ಬಂಗಾಳದ ಸಿಲಿಗುರಿಯ ಗೋದಾಮೊಂದರಲ್ಲಿ ಅವರಿಗೆ ಪೋಸ್ಟಿಂಗ್ ಸಿಕ್ಕಾಗ ಎದುರಾದ ಸಮಸ್ಯೆಯೇ ಬೇರೆಯಾಗಿತ್ತು.
ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು
ʼʼಕೆಲಸ ಮಾಡುವ ಸ್ಥಳದಲ್ಲಿ ಒಂದು ಶೌಚಾಲಯ ಇರಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕೂಡ ಇರಲಿಲ್ಲ. ತುರ್ತು ಅಗತ್ಯಗಳಿಗಾಗಿ ಅವರು ಗೋದಾಮಿನಿಂದ ಮನೆಗೇ ಬರಬೇಕಾಗಿತ್ತು. ಬಹುತೇಕ ರಜೆ ಇರಲಿಲ್ಲ, ಇಷ್ಟೆಲ್ಲ ಕಷ್ಟಪಟ್ಟರೂ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಅತ್ಯಂತ ನಿಧಾನಗತಿಯಲ್ಲಿತ್ತು. ಹಿರಿಯ ಸಿನಿಯರ್ ಅಧಿಕಾರಿಗಳು ತೀವ್ರ ಮಾನಸಿಕ ಒತ್ತಡ ಹೇರುತ್ತಿದ್ದರು. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದರುʼʼ ಎಂದು ಸೌರಭ್ ಬೇಸರ ಹೊರ ಹಾಕಿದ್ದಾನೆ.
ಈ ಒತ್ತಡವನ್ನು ನೋಡಿ ಆತನ ಪೋಷಕರು ಉದ್ಯೋಗ ತ್ಯಜಿಸುವಂತೆ ಸಲಹೆ ನೀಡಿದರು. ಸೌರಭ್ ಮಿತ್ತಲ್ ಈಗ ಗುರಗಾಂವ್‌ನಲ್ಲಿ ಎಂಬಿಎ ಪದವಿಗೆ ಸೇರಿದ್ದಾನೆ. ಇದರೊಂದಿಗೆ ಯುವ ವೃತ್ತಿಪರರಿಗೆ ಮಾರ್ಗದರ್ಶನ ನೀಡಲು ಕಂಟೆಂಟ್ ಕ್ರಿಯೇಟರ್ ಆಗಿಯೂ ಕೆಲಸ ಮಾಡಲು ಮುಂದಾಗಿದ್ದಾನೆ. ಈ ಬಗ್ಗೆ ನೆಟ್ಟಿಗರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ʼʼಒಳ್ಳೆಯ ಕೆಲಸ ಸಹೋದರʼʼ ಎಂದು ಪ್ರೀತಿಯಿಂದ ಪ್ರೋತ್ಸಾಹಿಸಿದ್ದಾರೆ. ಒಬ್ಬರು, ʼʼನಿಮಗೆ ಶುಭವಾಗಲಿ. ಇಂತಹದ್ದೇ ಪರಿಸ್ಥಿತಿ ಎದುರಿಸಿ ನಾನು ಹೊರ ಬಂದಿದ್ದೆ, ನಿಮ್ಮ ನಿರ್ಧಾರ ನಿಜಕ್ಕೂ ಶ್ಲಾಘನೀಯʼʼ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.