ಪವನ್ ಕುಮಾರ್ ಶಿರ್ವ
ನಮ್ಮ ರಾಜ್ಯದ ಕರಾವಳಿಯ ಪ್ರಸಿದ್ಧ ಕ್ಷೇತ್ರವಾದ ಉಡುಪಿಯಲ್ಲಿ ಈಗ ಪರ್ಯಾಯ ಸಂಭ್ರಮ! ಅಲ್ಲಿನ ಕೃಷ್ಣನ ಪೂಜೆಯ ಜವಾಬ್ದಾರಿಯೂ ಸೇರಿದಂತೆ, ಎಲ್ಲಾ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಈ ಜವಾಬ್ದಾರಿಯನ್ನು ಶ್ರೀ ವೇದವರ್ಧನ ತೀರ್ಥರಿಗೆ ವಹಿಸಿಕೊಡಲಿದ್ದಾರೆ.
ಪುರಾತನ ಪ್ರಸಿದ್ಧವಾದ ಮತ್ತು ದೇಗುಲ ನಗರಿ ಎಂದೇ ಹೆಸರಾದ ಉಡುಪಿಗೆ, ಇನ್ನಷ್ಟು ಹೆಚ್ಚಿನ ಐತಿಹಾಸಿಕ ಮೌಲ್ಯವನ್ನು ನೀಡಿದವರು ಮಧ್ವಾಚಾರ್ಯರು. ದ್ವಾರಕೆಯ ಕೃಷ್ಣ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಠೆ ಮಾಡುವ ಮೂಲಕ ಕಲಿಯುಗದ ಆರಾಧ್ಯನನ್ನು ಸಜ್ಜನ ಸಮುದಾಯಕ್ಕೆ ಸುಲಭವಾಗಿ ಸಿಗುವಂತೆ ಮಾಡಿದರು.
ಶ್ರೀಕೃಷ್ಣ ದೇಗುಲದಲ್ಲಿ ಪೂಜೆ ಪುರಸ್ಕಾರಗಳಿಗಾಗಿ ಮಠದ ಪದ್ಧತಿಯಂತೆ ಎಂಟು ಯತಿ ಶಿಷ್ಯರನ್ನು ನೇಮಿಸಿದರು. ಸನ್ಯಾಸಿಗಳೇ ಪೂಜಿಸುವಂತಹ ದೇವ ಮಂದಿರ ಇದು. ಇದು ಶ್ರೀ ಕೃಷ್ಣ ಮಠ. ಈ ಮಠವು ಮಂದಿರವೂ ಹೌದು, ದೇಗುಲವೂ ಹೌದು, ಮಠವೂ ಹೌದು: ಯಾಕೆಂದರೆ ಸನ್ಯಾಸಿಗಳ ಜಪದ ಮಂತ್ರ, ಪ್ರಣವ ಓಂಕಾರ, ಇದರ ಸಾಮಾನ್ಯ ವಿಶೇಷ ಪ್ರತಿಪಾದ್ಯ ದೇವರ ರೂಪ. ಇದನ್ನು ಮೊದಲ ಬಾರಿಗೆ ಶೃತ ಡಿಸಿದವರು ಮಧ್ವಾಚಾರ್ಯರು.
ಶ್ರೀ ಕೃಷ್ಣನ ಪ್ರಧಾನ ಪೂಜೆಯನ್ನು ನೆರವೇರಿಸಲು ಒಬ್ಬೊಬ್ಬ ಯತಿಗಳಿಗೆ ಎರಡು ತಿಂಗಳಂತೆ ಕಾಲ ವ್ಯವಸ್ಥೆಯನ್ನು ಮೊದಲು ಮಾಡಲಾಗಿತ್ತು; ಎರಡು ತಿಂಗಳು ಕೃಷ್ಣ ಪೂಜೆಯನ್ನು ನೆರವೇರಿಸಿದ ಯತಿಗಳು ಅಕ್ಷಯ ಪಾತ್ರೆಯನ್ನು ಹಸ್ತಾಂತರಿಸುವ ಮೂಲಕ ಮುಂದಿನ ಪರ್ಯಾಯದ ಯತಿಗಳಿಗೆ ಜವಾಬ್ದಾರಿಯನ್ನು ವಿಸುತ್ತಿದ್ದರು; ಪರ್ಯಾಯ ಪೀಠಸ್ಥ ಯತಿಗಳು ತಾವೇ ಶ್ರೀಕೃಷ್ಣನಿಗೆ ಮಹಾ ಪೂಜೆಯನ್ನು ಮಾಡುತ್ತಾರೆ.
ಈ ದೈಮಾಸಿಕ ಪದ್ಧತಿಯು ಸುಮಾರು 250 ವರ್ಷಗಳವರೆಗೂ ನಡೆಯಿತು; ಬಳಿಕ ವಾದಿರಾಜ ಗುರು ಸಾರ್ವಭೌಮರು ಯತಿಗಳ ಸಂಚಾರದ ಅನುಕೂಲಕ್ಕೆಂದು, ಪರ್ಯಾಯವನ್ನು ಎರಡು ವರ್ಷಗಳಿಗೆ ವಿಸ್ತರಿಸಿದರು; ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.
ಇದನ್ನೂ ಓದಿ: Vishweswhar Bhat Column: ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !
ಅಷ್ಟ ಮಠದ ಯತಿಗಳಿಗೆ ರಥ ಬೀದಿಯಲ್ಲಿ ಪ್ರತ್ಯೇಕ ಮಠಗಳನ್ನು ಕಲ್ಪಿಸಿದರು. ದ್ವೈವಾರ್ಷಿಕ ಪದ್ಧತಿ ಬಂದ ಮೇಲೆ ಮೊದಲ ಪರ್ಯಾಯವನ್ನು ಶ್ರೀ ವಾದಿರಾಜ ತೀರ್ಥರು ನೆರವೇರಿಸಿದರು. ಮೊದಲ ಪರ್ಯಾಯವು ಶ್ರೀ ಪಲಿಮಾರು ಮಠದಿಂದ ಆರಂಭವಾಗಿತ್ತು. ಈಗ 253ನೆಯ ದ್ವೈ ವಾರ್ಷಿಕ ಪರ್ಯಾಯ ನಡೆಯುತ್ತಿದೆ.
ಇದೇ ಜನವರಿ 18ರ ಬೆಳಿಗ್ಗೆ, ಶ್ರೀ ಮದ್ವಾಚಾರ್ಯರೇ ನಿರ್ಮಿಸಿದ ಕಾಪು ಗ್ರಾಮದ ಸಮೀಪದ ದಂಡ ತೀರ್ಥದಲ್ಲಿ ಸ್ನಾನವನ್ನು ಮಾಡಿ, ಶಿರೂರು ಮಠಾಧೀಶರು ಕೃಷ್ಣನ ಪೂಜೆಗಾಗಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಜೋಡುಕಟ್ಟೆಯಲ್ಲಿ ಭವ್ಯ ಸ್ವಾಗತವನ್ನು ಸಮರ್ಪಿಸುತ್ತಾರೆ. ಅತ್ಯಂತ ವೈಭವದ ಮೆರವಣಿಗೆಯಲ್ಲಿ ಭಾವೀ ಪರ್ಯಾಯ ಶ್ರೀಗಳು ಅಲಂಕೃತ ಪಲ್ಲಕ್ಕಿಯಲ್ಲಿ ಆಗಮಿಸುತ್ತಾರೆ. ಮೆರವಣಿಗೆಯಲ್ಲಿ ಚಿನ್ನದ ಪಲ್ಲಕ್ಕಿಯಲ್ಲಿ ಪಟ್ಟದ ದೇವರನ್ನು ತರುತ್ತಾರೆ.
ರಥಬೀದಿಗೆ ಆಗಮಿಸಿದ ಶ್ರೀಗಳು ಕೂಡಲೇ ಪಲ್ಲಕ್ಕಿಯಿಂದ ಕೆಳಗಿಳಿದು ನಡೆದುಕೊಂಡು ಬರುತ್ತಾರೆ. ಶ್ರೀ ಚಂದ್ರಮೌಳೇಶ್ವರ ಮತ್ತು ಶ್ರೀ ಅನಂತೇಶ್ವರ ದೇವರ ಸಾನಿಧ್ಯದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ, ಶ್ರೀ ಕೃಷ್ಣ ಮಠವನ್ನು ಪ್ರವೇಶಿಸುತ್ತಾರೆ. ಹಾಲಿ ಪರ್ಯಾಯ ಶ್ರೀಪಾದರು ಪರ್ಯಾಯ ಸ್ವೀಕರಿಸುವ ಯತಿಗಳನ್ನು ಆದರದಿಂದ ಸ್ವಾಗತಿಸುತ್ತಾರೆ.
ಶ್ರೀ ಕೃಷ್ಣ, ಮುಖ್ಯಪ್ರಾಣ, ಶ್ರೀ ಮಧ್ವಾಚಾರ್ಯರ, ಗರುಡದೇವರ ದರ್ಶನವನ್ನು ಮಾಡುತ್ತಾರೆ; ನಂತರ ಪ್ರಧಾನ ಮುಹೂರ್ತವಾದ ಅಕ್ಷಯ ಪಾತ್ರೆ ಹಸ್ತಾಂತರ ಕಾರ್ಯಕ್ರಮವು ನಡೆಯುತ್ತದೆ. ಅಲ್ಲಿಂದ ಸಿಂಹಾಸನಕ್ಕೆ ಕರೆದುಕೊಂಡು ಬರುತ್ತಾರೆ. ಮೊದಲು ತಮ್ಮ ಪಟ್ಟದ ದೇವರನ್ನು ಪೀಠ ದಲ್ಲಿಟ್ಟು ನಮಸ್ಕರಿಸುತ್ತಾರೆ.
ಬೆಳಗಿನ ಆ ಶುಭ ಮುಹೂರ್ತದಲ್ಲಿ ಇಲ್ಲಿಯವರೆಗೆ ಪರ್ಯಾಯವನ್ನು ನಡೆಸಿದ ಶ್ರೀಗಳು, ಮುಂದಿನ ಪರ್ಯಾಯ ಶ್ರೀಗಳನ್ನು ಕೈಹಿಡಿದು ಈ ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸುತ್ತಾರೆ. ಇಲ್ಲಿಂದ ಇನ್ನು ಎರಡು ವರ್ಷಗಳ ಪಯಂತ ಅವರು ಪರ್ಯಾಯ ಶ್ರೀಗಳು ಎಂದೆನಿಸಿಕೊಳ್ಳುತ್ತಾರೆ. ಜನವರಿ 18 ರಿಂದ ಪರ್ಯಾಯ ಶ್ರೀಗಳ ಸ್ಥಾನದಲ್ಲಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಇರುತ್ತಾರೆ.
ಪರ್ಯಾಯ ದರ್ಬಾರ್
ಸರ್ವಜ್ಞ ಪೀಠದ ಪ್ರಮುಖ ಕಾರ್ಯಕ್ರಮದ ನಂತರ ಎಲ್ಲಾ ಯತಿಗಳು ಬಡಗು ಮಾಳಿಗೆಗೆ ಬರುತ್ತಾರೆ. ಅಲ್ಲಿ ಅರಳು ಗದ್ದೆಯಲ್ಲಿ ಆಸೀನರಾಗುತ್ತಾರೆ. ಎಲ್ಲಾ ಶ್ರೀಪಾದರಿಗೂ ಪರ್ಯಾಯ ಮಠದಿಂದ ಉಪಚಾರಗಳನ್ನು ಸಲ್ಲಿಸಲಾಗುತ್ತದೆ. ಶ್ರೀ ವಾದಿರಾಜರ ಕಾಲದಲ್ಲಿ ಇಲ್ಲಿಯೇ ಪರ್ಯಾಯ ದರ್ಬಾರ್ ನಡೆಯುತ್ತಿತ್ತು. ಈಗ ರಾಜಾಂಗಣದಲ್ಲಿ ನಡೆಯುತ್ತಿದೆ. ಆದ್ದರಿಂದ ಸಾಂಕೇತಿಕವಾದ ದರ್ಬಾರನ್ನು ಇಲ್ಲಿ ನಡೆಸುತ್ತಾರೆ.
ಕಳೆದ ಒಂದು ವಾರಕ್ಕೂ ಅಧಿಕ ಅವಧಿಯಿಂದ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯು ತ್ತಿವೆ; ಜನವರಿ 18 ರಂದು ಪರ್ಯಾಯ ಪೀಠಾರೋಹಣ ಮತ್ತು ಇತರ ಕಾರ್ಯಕ್ರಮಗಳು ನಡೆಯು ತ್ತಿವೆ. ಇದೇ ಸಂದರ್ಭಕ್ಕೆಂದು ಉಡುಪಿಗೆ ಆಗಮಿಸಿದ ಭಕ್ತರು, ಆಸ್ತಿಕರು, ಗಣ್ಯರು, ವಿದೇಶಿ ಅತಿಥಿಗಳು ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಈ ಪರ್ಯಾಯ ಮಹೋತ್ಸವವನ್ನು ಕಣ್ಣು ತುಂಬಿ ಕೊಳ್ಳುತ್ತಾರೆ.
ಮುಂದಿನ ಎರಡು ವರ್ಷಗಳ ಕಾಲ ಶ್ರೀಕೃಷ್ಣ ಪೂಜೆ ಮತ್ತು ಇತರ ಜವಾಬ್ದಾರಿಗಳನ್ನು ನಿರ್ವಹಿಸ ಲಿರುವ ಶ್ರೀ ವೇದವರ್ಧನ ತೀರ್ಥರಿಂದ ಆಶೀರ್ವಚನ ಪಡೆದು, ಅವರ ಕೈಂಕರ್ಯಕ್ಕೆ ಮನಸಾರೆ ಶುಭ ಹಾರೈಸುತ್ತಾರೆ.
2 ವರ್ಷಕ್ಕೊಮ್ಮೆ ಪರ್ಯಾಯ
ಉಡುಪಿಯ ಶ್ರೀ ಕೃಷ್ಣ ದೇಗುಲದಲ್ಲಿ ಪೂಜೆ ಮತ್ತು ಇತರ ನಿರ್ವಹಣೆಯನ್ನು, ಜವಾಬ್ದಾರಿಯನ್ನು ವಹಿಸಲು, ಪ್ರತಿ ಎರಡು ವರ್ಷಗಳಿಗೊಮ್ಮೆ ಒಂದೊಂದು ಮಠ ಮುಂದೆ ಬರುತ್ತದೆ. ಈ ರೀತಿ ಎಂಟು ಮಠಗಳೂ ಶ್ರೀ ಕೃಷ್ಣ ದೇಗುಲದ ನಿರ್ವಹಣೆಯನ್ನು ವಹಿಸಿಕೊಳ್ಳುವ ‘ಪರ್ಯಾಯ’ ವ್ಯವಸ್ಥೆಯು ಉಡುಪಿಯ ವಿಶೇಷ.
ಶ್ರೀಕೃಷ್ಣ ದೇಗುಲ ಪ್ರತಿಷ್ಠಾಪನೆಯಾದಾಗ ಎರಡು ತಿಂಗಳಿಗೊಮ್ಮೆ ಒಂದೊಂದು ಮಠವು ಈ ಜವಾಬ್ದಾರಿಯನ್ನು ಹೊರುತ್ತಿತ್ತು; ಸಾ.ಶ.1522ರಲ್ಲಿ ಉಡುಪಿಯ ವಿಷ್ಣು ತೀರ್ಥ ಮಠ ಸಂಸ್ಥಾನದ ವಾದಿರಾಜರು (1481-1601), ಈ ಎರಡು ತಿಂಗಳ ಆವರ್ತವನ್ನು ಎರಡು ವರ್ಷ ಎಂದು ನಿಗದಿ ಪಡಿಸಿದರು. ಆಗ ಮೊದಲ 2 ವರ್ಷದ ಪೂಜಾ ಜವಾಬ್ದಾರಿಯನ್ನು ಹೊತ್ತದ್ದು ಫಲಿಮಾರು ಮಠ.
ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು
ಇದೇ ಜನವರಿ 18ರ ಬೆಳಗಿನ ಜಾವ 1.15ರ ಸಮಯದಲ್ಲಿ, ಉಡುಪಿಯ ನೂತನ ಪರ್ಯಾಯ ಪೀಠಾ ಧೀಶರಾದ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು, ದಂಡತೀರ್ಥದಲ್ಲಿ ಪುಣ್ಯ ಸ್ನಾನ ಮಾಡಿ, ಉಡುಪಿಯತ್ತ ಬರುವರು. ಬೆಳಗಿನ 2.00 ಗಂಟೆಗೆ, ಉಡುಪಿ ಸಮೀಪದ ಜೋಡುಕಟ್ಟೆಯಲ್ಲಿ ಪುರ ಪ್ರವೇಶ ಸಮಾರಂಭದ ಆರಂಭ; ಭಕ್ತಿ ಭಾವಗಳ ಸಮಾಗಮ ಎನಿಸಿದ ಮೆರವಣಿಗೆಯ ಮೂಲಕ ಉಡುಪಿಯ ರಥಬೀದಿಯನ್ನು ಪ್ರವೇಶಿಸುವ ಶಿರೂರು ಶ್ರೀಗಳು, ಬೆಳಗಿನ ಸಮಯ 5.15ಕ್ಕೆ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಮಾಡಿ, ಆಶೀರ್ವಾದ ಪಡೆದು, ಸನಿಹದ ಶ್ರೀ ಚಂದ್ರ ಮೌಳೀಶ್ವರ ಮತ್ತು ಶ್ರೀ ಅನಂತೇಶ್ವರರ ದರ್ಶನ ಪಡೆಯುವರು.
ಇದಾದ ನಂತರ, ಪರ್ಯಾಯ ಮಹೋತ್ಸವದ ಪ್ರಮುಖ ಅಂಗವಾದ ಸರ್ವಜ್ಞಪೀಠವನ್ನು ಏರುವ ಮೂಲಕ, ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರು ಮುಂದಿನ ಎರಡು ವರ್ಷಗಳ ತನಕ ಉಡುಪಿಯಲ್ಲಿ ಶ್ರೀಕೃಷ್ಣನ ಪೂಜೆಯನ್ನು ನಡೆಸುವ ಜವಾಬ್ದಾರಿಯನ್ನು ಹೊರುತ್ತಾರೆ. ಮತ್ತು ಉಡುಪಿ ಶ್ರೀಕೃಷ್ಣ ಮಠಕ್ಕೆ ಬರುವ ಭಕ್ತರ ಆತಿಥ್ಯವನ್ನು ಸಹ ನಿರ್ವಹಿಸುವ ಹೊಣೆಯನ್ನು ಹೊರು ತ್ತಾರೆ.
ಬೆಳಗಿನ 6.15ರ ಸಮಯದಲ್ಲಿ ಅಲ್ಲಿನ ರಾಜಾಂಗಣದಲ್ಲಿ ಪರ್ಯಾಯ ದರ್ಬಾರ್ ನಡೆಸಿ, ಅಷ್ಟ ಮಠದ ಸ್ವಾಮೀಜಿಗಳ ಜತೆಯಲ್ಲೇ ಆಶೀರ್ವಚನ ನೀಡುವರು. ನಂತರ, ಮಧ್ಯಾಹ್ನದ ತನಕ ಉಡುಪಿ ಶ್ರೀಕೃಷ್ಣನಿಗೆ ಪೂಜೆ ಸಲ್ಲಿಸಿ, ಪರ್ಯಾಯಕ್ಕೆ ಅಧಿಕೃತ ಚಾಲನೆ ನೀಡುವರು.
18.1.2026ರಂದು ಸರ್ವಜ್ಞಪೀಠವನ್ನು ಏರುವ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥರಿಗೆ ಈ ಹಿಂದಿನ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠದ ಶ್ರೀಗಳು ಅಧಿಕಾರ ಹಸ್ತಾಂತರ ಮಾಡುವರು. ಉಡುಪಿ ಶ್ರೀ ಕೃಷ್ಣ ದೇಗುಲಕ್ಕೆ ಸಂಬಂಧಿಸಿದ ಈ ಪರ್ಯಾಯ ವ್ಯವಸ್ಥೆಯು, ಬಹು ಸಂಭ್ರಮದ ಮತ್ತು ಲಕ್ಷಾಂತರ ಜನಸಾಮಾನ್ಯರು ಭಾಗವಹಿಸುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬವಾಗಿ ಆಚರಣೆಗೊಳ್ಳುತ್ತಿರುವುದು, ನಮ್ಮ ನಾಡಿನ ಪರಂಪರೆಯ ವಿಶೇಷ ಎಂದೇ ಹೇಳಬೇಕು.
12000 ಸ್ಟೀಲ್ ತಟ್ಟೆ!
ಇದೇ ಜನವರಿ 17 ಮತ್ತು 18 ರಂದು ಉಡುಪಿ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, ಇದರಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಜತೆಗೆ, ದೇಶ ವಿದೇಶದಿಂದ ಹಲವು ಗಣ್ಯರು ಬಂದು ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ 40000 ದಿಂದ 50000 ಜನರಿಗೆ ಅನ್ನದಾನ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ, ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯು, 12000 ಸ್ಟೀಲ್ ತಟ್ಟೆಗಳನ್ನು ಸರಬರಾಜು ಮಾಡುತ್ತಿದ್ದು, ಪ್ಲಾಸ್ಟಿಕ್ ತಟ್ಟೆಗಳ ಬಳಕೆಯ ಬದಲಿಗೆ ಇದನ್ನು ಉಪಯೋಗಿಸುವ ಮೂಲಕ, ಪರಿಸರಸ್ನೇಹಿ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ದ್ವಾರಕೆಯ ಶ್ರೀಕೃಷ್ಣ!
ಉಡುಪಿಯಲ್ಲಿ ಶ್ರೀಕೃಷ್ಣ ದೇಗುಲ ಸ್ಥಾಪನೆಗೊಂಡದ್ದರ ಹಿನ್ನೆಲೆಯನ್ನು ವಿವರಿಸುವ ಹಲವು ಐತಿಹ್ಯಗಳು ಇವೆ. ಅವುಗಳಲ್ಲಿ ಹೆಚ್ಚು ಪ್ರಚಲಿತವಿರುವ ಐತಿಹ್ಯದ ಪ್ರಕಾರ, ಆಚಾರ್ಯ ಮಧ್ವರು ಒಂದು ವಿಶಿಷ್ಟ ಸನ್ನಿವೇಶದಲ್ಲಿ ಈ ದೇಗುಲವನ್ನು ಪ್ರತಿಷ್ಠಾಪಿಸಿದರು. ದೂರದ ದ್ವಾರಕೆಯ ಒಂದು ಹಡಗು, ಉಡುಪಿ ಸಮೀಪದ ಸಮುದ್ರ ತೀರದಲ್ಲಿ ಬಿರುಗಾಳಿಗೆ ಸಿಲುಕಿ ಸಂಕಷ್ಟದಲ್ಲಿತ್ತು; ಆಗ ಮಧ್ವರು ಆ ಹಡಗನ್ನು ರಕ್ಷಿಸಿ, ಅಲ್ಲಿನ ನಾವಿಕರಿಗೆ ಆಶಿರ್ವಾದ ಮಾಡಿ, ಧೈರ್ಯ ತುಂಬಿದರು. ಆ ನಾವಿಕರು ಭಕ್ತಿಯಿಂದ ಸಮ ರ್ಪಿಸಿದ ಎರಡು ಗೋಪಿ ಚಂದನದ ತುಂಡುಗಳಲ್ಲಿ, ಶ್ರೀ ಕೃಷ್ಣ ಮತ್ತು ಬಲರಾಮದ ಶಿಲಾಮೂರ್ತಿಗಳಿದ್ದವು! ಬಲರಾಮನ ಪ್ರತಿಮೆಯನ್ನು ಸಮುದ್ರ ಸನಿಹದ ವಡ ಬಾಂಡೇ ಶ್ವರದಲ್ಲಿ ಪ್ರತಿಷ್ಠಾಪಿಸಿದರು; ಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ, ಅನಂತೇಶ್ವರ ದೇಗುಲದ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು. ಅದು ಈಗ ಕೃಷ್ಣ ದೇಗುಲವಾಗಿ ಹೆಸರಾಗಿದೆ. ಆ ದೇಗುಲದ ಪೂಜೆಗೆಂದು ಎಂಟು ಮಂದಿ ಶಿಷ್ಯರಿಗೆ ಸನ್ಯಾಸ ದೀಕ್ಷೆ ನೀಡಿ, ಅವರಿಗೆ ತಲಾ 2 ತಿಂಗಳ ಅವಧಿಯ ಪೂಜೆಯ ಜವಾಬ್ದಾರಿಯನ್ನು ವಹಿಸಿದರು. ಆ 2 ತಿಂಗಳ ಪರ್ಯಾಯವು, ನಂತರ, 2 ವರ್ಷದ ಪರ್ಯಾಯ ವ್ಯವಸ್ಥೆಯಾಗಿ ರೂಪುಗೊಂಡಿತು.
ಎರಡು ಟನ್ ಮಟ್ಟು ಗುಳ !
ಪರ್ಯಾಯದ ಸಮಯಕ್ಕೆ ಸಾವಿರಾರು ಭಕ್ತರು ಹೊರೆ ಕಾಣಿಕೆ ನೀಡುವ ಮೂಲಕ, ಅನ್ನದಾನಕ್ಕೆ ಸಹಕರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಈ ಸಂದರ್ಭದಲ್ಲಿ ಉಡುಪಿ ಸನಿಹದ ಮಟ್ಟು ಮತ್ತು ಇತರ ಗ್ರಾಮಸ್ಥರು ಸುಮಾರು 2 ರಿಂದ 3 ಟನ್ ಮಟ್ಟು ಗುಳ್ಳ (ಬದನೆ)ವನ್ನು ಮಠಕ್ಕೆ ಕಾಣಿಕೆಯಾಗಿ ನೀಡುತ್ತಿದ್ದಾರೆ. ಸೋದೆ ಮಠದ ಶ್ರೀ ವಾದಿರಾಜರು ಮಟ್ಟು ಗ್ರಾಮದ ಕೃಷಿಕರಿಗೆ ಬದನೆಯ ಬೀಜಗಳನ್ನು ನೀಡಿದ್ದರಂತೆ; ಆ ಬದನೆಯೇ, ಇಂದು ಬಹುರುಚಿಕರ ಎಂದು ಹೆಸರಾಗಿ ರುವ ಮಟ್ಟು ಗುಳ್ಳ ಬದನೆ ತಳಿ. ನಮ್ಮ ರಾಜ್ಯದ ಕರಾವಳಿಯ ಪ್ರಸಿದ್ಧ ಮತ್ತು ರುಚಿಕರ ತರಕಾರಿ ಗಳಲ್ಲಿ ಮಟ್ಟು ಗುಳ್ಳವೂ ಒಂದು.
ಎಂಟು ಮಠಗಳು
ಉಡುಪಿಯ ಶ್ರೀಕೃಷ್ಣ ದೇಗುಲದ ಆಸುಪಾಸಿನಲ್ಲಿ ಎಂಟು ಮಠಗಳಿದ್ದು, ಪ್ರತಿ ಎರಡು ವರ್ಷ ಗಳಿಗೊಮ್ಮೆ ಪರ್ಯಾಯದ ಜವಾಬ್ದಾರಿಯನ್ವಯ, ಶ್ರೀಕೃಷ್ಣ ದೇಗುಲದ ಪೂಜೆ ಮತ್ತು ಇತರ ಕಾರ್ಯಗಳ ನಿರ್ವಹಣೆಯ ಜವಾಬ್ದಾರಿ ಯನ್ನು ಹೊರುತ್ತವೆ. ಎಂಟು ಮಠಗಳು ಇಂತಿವೆ:
1.ಪಲಿಮಾರು ಮಠ 2.ಅದಮಾರು ಮಠ 3.ಕೃಷ್ಣಾಪುರ ಮಠ 4.ಪುತ್ತಿಗೆ ಮಠ 5.ಶಿರೂರು ಮಠ 6. ಸೋದೆ (ಕುಂಭಾಸಿ) ಮಠ 7.ಕಾಣಿಯೂರು ಮಠ 8.ಪೇಜಾವರ ಮಠ.