ನಾರಾಯಣ ಯಾಜಿ
ಅಭಿನಯ ಎನ್ನುವುದು ನಿಜ ಜೀವನದ ಪುನರುತ್ಪತ್ತಿಯಲ್ಲ; ಅದು ಜೀವನದ ರಸಮಯ ರೂಪಕ. ಮತ್ತು ಆ ರೂಪಕದ ಶುದ್ಧತೆಯನ್ನು ಕೆರೆಮನೆ ಶಿವಾನಂದ ಹೆಗಡೆ ಅವರು ಕಾಪಾಡಿ ಕೊಂಡು ತಪಸ್ಸಿನಂತೆ ಕಾಪಾಡಿಕೊಂಡು ಬಂದಿದ್ದಾರೆ.
ಕೆರೆಮನೆ ಶಿವಾನಂದ ಹೆಗಡೆಯವರಿಗೆ ಈ ವರ್ಷದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವ ದೊರಕಿರುವುದು ಕೇವಲ ಅವರ ಸಾಧನೆ ಮಾತ್ರವಲ್ಲ, 92 ವರ್ಷಗಳಷ್ಟು ದೀರ್ಘಕಾಲ ಯಕ್ಷಗಾನದ ಶಿಸ್ತು ಮತ್ತು ಪರಂಪರೆಯನ್ನು ಅದೇ ಶುದ್ಧತೆಯಲ್ಲಿ ಕಾಪಾಡಿಕೊಂದು ಬಂದ ಪರಂಪರೆಗೆ ಸಂದ ಗೌರವ. ಒಂದೇ ಮನೆತನದ ಅಜ್ಜ, ದೊಡ್ಡಪ್ಪ, ಅಪ್ಪ ಮತ್ತು ಮಗ ಎಲ್ಲರಿಗೂ ಈ ಗೌರವ ಸಿಕ್ಕಿರುವುದು ವಿರಳ. ಹಲವು ಅವಕಾಶಗಳ ನಡುವೆಯೂ ಮನೆತನದ ಕಲೆಗೆ ತನ್ನ 12ರ ವಯಸ್ಸಿನಲ್ಲಿಯೇ ಆಕರ್ಷಿತಗೊಂಡು ಮಹಾ ಬಲ ಹೆಗೆಡೆಯವರಲ್ಲಿ, ಚಿಕ್ಕಪ್ಪ ಗಜಾನನ ಹೆಗಡೆ ಯವರಲ್ಲಿ, ಜೊತೆಗೆ ಅಜ್ಜ, ಅಪ್ಪ ಎಲ್ಲರಿಂದಲೂ ಸತ್ವವನ್ನು ಹೀರಿ ತನ್ನದೇ ಆದ ನಿರ್ದೇಶಿತ ಕಲಾಪರಂಪರೆಯನ್ನು ಕಟ್ಟಿಕೊಟ್ಟಿರುವುದು ಸಣ್ಣ ಸಾಧನೆಯೇನೂ ಅಲ್ಲ. ಕೆರೆಮನೆ ಶಿವಾನಂದ ಹೆಗಡೆಯವರು ಪ್ರಾದೇಶಿಕ ರಂಗಭೂಮಿ ಯಕ್ಷಗಾನ ದಲ್ಲಿದ್ದುಕೊಂಡೇ, ಜಾಗತಿಕ ರಂಗಭೂಮಿ ಯಲ್ಲಿ ಯಕ್ಷಗಾನ, ಕಥಕ್ ಮೊದಲಾದವುಗಳ ಮೂಲ ನಿರ್ವಚನವನ್ನು ತೌಲನಿಕವಾಗಿ ವಿಮರ್ಶಿಸ ಬಲ್ಲರು. ಜೊತೆಗೆ ಪ್ರದರ್ಶನ ಕಲೆಗಳ ಓರ್ವ ಮಹತ್ವದ ಸಂಪನ್ಮೂಲ ವ್ಯಕ್ತಿಯಾಗಿಯೂ ಅವರು ಕಾಣಿಸುತ್ತಾರೆ.
ಇತ್ತೀಚೆಗಷ್ಟೇ ಅವರ ಸಾಧನೆಯನ್ನು ಗುರುತಿಸಿ ‘ಶ್ರೀ ವಿದ್ಯಾ ವೇದ ವಿಜ್ಞಾನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ, ಫ್ಲೋರಿಡಾ (ಅಮೇರಿಕಾ) ಹಾಗೂ ಶ್ರೀ ವಿದ್ಯಾ ವಿಶ್ವ ಸಂಶೋಧನಾ ಪ್ರತಿಷ್ಠಾನಂ, ಬೆಂಗಳೂರು’ ಇವರು ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇದು ಯಕ್ಷಗಾನ ಕಲೆಗೆ ಸಂದ ಗೌರವ. ಎರಡು ತಿಂಗಳ ಹಿಂದೆ ಯಕ್ಷಗಾನಕ್ಕೆ ಮೀಸಲಾದ ‘ಯಕ್ಷರಂಗ’ ಪತ್ರಿಕೆಯ ಕಡತೋಕಾ ಮಂಜುನಾಥ ಭಾಗವತರ ಸಂಸ್ಮರಣೆಯ ಕಾರ್ಯಕ್ರಮದಲ್ಲಿ ಇವರಿಗೆ ‘ಯಕ್ಷ ಸಂಘಟಕ’ ಪ್ರಶಸ್ತಿಯನ್ನು ಪುರಸ್ಕರಿಸಿ ಗೌರವಿಸಿತ್ತು.
ಕೆರೆಮನೆ ಮತ್ತು ಯಕ್ಷಗಾನ ಇವೆರಡೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತಹವು. 1934ರಲ್ಲಿ ಮಂಡಳಿಯನ್ನು ಇವರ ಅಜ್ಜ ಕೆರಮನೆ ಶಿವರಾಮ ಹೆಗಡೆ ಸ್ಥಾಪಿಸಿದನಂದಿನಿಂದ ಇದುತನಕ ಈ ಮಂಡಳಿ ಸಾಗಿ ಬಂದ ಹಾದಿಯಲ್ಲಿ ಸವಾಲುಗಳು ಅನೇಕವಿದೆ. ಅವುಗಳನ್ನೆಲ್ಲ ವನ್ನೂ ಸಹ ಈ ಕುಟುಂಬದ ಮೂರು ತಲೆಮಾರಿನ ಕಲಾವಿದರುಗಳು ಎದುರಿಸುತ್ತಾ ಯಕ್ಷಗಾನದ ಕಲೆಯ ಸತ್ವವನ್ನು ಜತನದಿಂದ ಕಾಪಿಟ್ಟುಕೊಂಡು ಬಂದಿರುತ್ತಾರೆ.
ಇದನ್ನೂ ಓದಿ: Game Of Thrones Actor: ʻಗೇಮ್ ಆಫ್ ಥ್ರೋನ್ಸ್ʼ ನಟ ಮೈಕೆಲ್ ಪ್ಯಾಟ್ರಿಕ್ ನಿಧನ
1934ನೆ ಇಸವಿಯೆನ್ನುವುದು ಕಾಲದ ಲೆಕ್ಕಾಚಾರಕ್ಕಿರಬಹುದು. ಯಾವುದೇ ಮಂಡಳಿ ಸ್ಥಾಪನೆ ಯಾದುದರ ಹಿನ್ನೆಲೆ ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದಿನ ಯೋಜನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ಮಂಡಳಿಯ ರಂಗಚಿಂತನೆಗೆ ನೂರುವರ್ಷ ದಾಟಿದೆ. ಹೀಗೆ ಭವ್ಯ ಪರಂಪರೆ ಯನ್ನು ಹೊಂದಿದ ಮಂಡಳಿಯನ್ನು ಸುವರ್ಣಯುಗಕ್ಕೆ ಕೊಂಡೊಯ್ದವರು ಕೆರಮನೆ ಶಂಭು ಹೆಗಡೆಯವರು.
ಅವರ ನಿರ್ಯಾಣದ ನಂತರ ಶಿವಾನಂದ ಹೆಗಡೆ ಮಂಡಳಿಯ ಜವಾಬುದಾರಿಯನ್ನು ವಹಿಸಿ ಕೊಂಡಾಗ ಅವರ ಮುಂದೆ ಯಕ್ಷಗಾನದ ಸದಾತನವನ್ನು ಕಾಯ್ದಿಟ್ಟುಕೊಳ್ಳುವ ಮಹತ್ವದ ಜವಾಬ್ದಾರಿಯಿತ್ತು.
ಕಲಾಸಂಸ್ಕೃತಿಯ ಮಹತ್ವವೆನ್ನುವುದು ಕೇವಲ ಭೂತಕಾಲದ ನೆನಪುಗಳ ಸಂಗ್ರಹವಲ್ಲ; ಅದು ಹರಿಯುವ ನದಿ. ಮೂಲವನ್ನು ಕಳೆದುಕೊಳ್ಳದೆ, ಕಾಲಕ್ಕೆ ತಕ್ಕಂತೆ ತನ್ನ ದಾರಿಯನ್ನು ವಿಸ್ತರಿಸಿ ಕೊಳ್ಳುತ್ತಾ ಸಾಗುತ್ತದೆ. ಆದ್ದರಿಂದಲೇ ಭಾರತೀಯ ಪರಂಪರೆಯಲ್ಲಿ ‘ಸನಾತನ’ ಎಂಬ ಪದಕ್ಕೆ ‘ಹಳೆಯದು’ ಎಂಬ ಅರ್ಥವಲ್ಲ; ‘ನಿತ್ಯ ನವೀನ’ ಎಂದಾಗಿದೆ. ಇದೇ ಅರ್ಥದಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ಯಕ್ಷಗಾನ ಸಾಧನೆಯನ್ನು ನೋಡಬೇಕು. ಅವರು ಕೇವಲ ಒಂದು ಪಾರಂಪರಿಕ ಮೇಳದ ನಿರ್ದೇಶಕರಲ್ಲ; ಅವರು ಸನಾತನ ಮತ್ತು ಅದುತನ ಎಂಬ ಎರಡು ತುದಿಗಳ ನಡುವೆ ಯಕ್ಷಗಾನವನು ‘ಸದಾತನ’ವಾಗಿ ಉಳಿಸಿರುವ ಅಪರೂಪದ ಕಲಾ ಸಾಧಕ. ಇಂದು ಜನಪದ ಮತ್ತು ಪಾರಂಪರಿಕ ಕಲೆಗಳ ಮುಂದೆ ಎರಡು ಅಪಾಯಗಳಿವೆ.
ಒಂದು ಕಡೆ ‘ಆಧುನಿಕತೆ’ ಎಂಬ ಹೆಸರಿನಲ್ಲಿ ಕಲೆಯ ಮೂಲ ಸ್ವರೂಪವನ್ನೇ ಬದಲಾಯಿಸುವ ಪ್ರಯತ್ನ. ಇನ್ನೊಂದು ಕಡೆ ‘ಪರಂಪರೆ’ ಎಂಬ ಹೆಸರಿನಲ್ಲಿ ಕಲೆ ಯನ್ನು ಜೀವಹೀನ ಆಚರಣೆ ಯನ್ನಾಗಿ ಮಾಡುವ ಮನೋಭಾವ. ಯಕ್ಷಗಾನ ಈ ಎರಡೂ ಹಾದಿಯಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು.
ಸೂಕ್ಷ್ಮ ಸಮತೋಲನ
ಶಿವಾನಂದ ಹೆಗಡೆ ಈ ಎರಡರ ಮಧ್ಯೆ ಅತ್ಯಂತ ಸೂಕ್ಷ್ಮವಾದ ಸಮತೋಲನ ಸಾಽಸಿದ್ದಾರೆ. ಕೆರೆಮನೆ ಮನೆತನದ ಯಕ್ಷಗಾನ ಪರಂಪರೆ ಕೇವಲ ಒಂದು ಮೇಳದ ಇತಿಹಾಸವಲ್ಲ; ಅದು ಬಡಗುತಿಟ್ಟಿನ ಯಕ್ಷಗಾನದ ರೂಪಶುದ್ಧಿಯ ಪರಂಪರೆ. ಕೆರೆಮನೆ ಶಿವರಾಮ ಹೆಗಡೆಯವರು ಯಕ್ಷಗಾನಕ್ಕೆ ನೀಡಿದ ಆಂಗಿಕ ಶಿಸ್ತು, ಶಂಭು ಹೆಗಡೆಯವರು ನೀಡಿದ ಜೀವಂತ ಅಭಿನಯ ಪ್ರಜ್ಞೆ ಇಂದು ಯಕ್ಷಗಾನದ ಮಾನದಂಡಗಳಾಗಿವೆ. ಶಿವಾನಂದ ಹೆಗಡೆಯವರು ಈ ಪರಂಪರೆಯನ್ನು ಕೇವಲ ಅನುಕರಿಸಿಲ್ಲ; ಅದರ ಅಂತಃಸತ್ವವನ್ನು ಅರಿತು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ, ಶಂಭು ಹೆಗಡೆಯವರ ಸಹಿತವಾಗಿ ಉತ್ತರ ಕನ್ನಡದ ಎಲ್ಲಾ ಹಿರಿಯ ಕಲಾವಿದರ ಹತ್ತಿರ ಚರ್ಚಿಸಿ ಸಮನ್ವಯಗೊಳಿಸಿ ಪ್ರದರ್ಶಿಸುತ್ತಿದ್ದಾರೆ ಎನ್ನಬಹುದು.
ಇವರ ಪ್ರದರ್ಶನಗಳಲ್ಲಿ ಸಂಪ್ರದಾಯದ ಶುದ್ಧತೆ, ವೇಷಭೂಷಣ, ಮುಖವರ್ಣಿಕೆ, ಭಾಗವತಿಕೆ, ರಾಗಪ್ರಯೋಗ, ಗತಿಭೇದ, ಸಂಭಾಷಣೆಯ ನಡಿಗೆ, ಎಲ್ಲಿಯೂ ಯಕ್ಷಗಾನದ ಮೂಲಸ್ವರೂಪಕ್ಕೆ ಧಕ್ಕೆಯಾಗುವುದಿಲ್ಲ. ಅವರು ಯಕ್ಷಗಾನವನ್ನು ‘ಕೇವಲ ಮನರಂಜನೆ’ಯನ್ನಾಗಿಸಿಲ್ಲ. ಅದರ ರಸಾನುಭವವನ್ನು ಉಳಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರ ಪ್ರದರ್ಶನ ನೋಡಿದಾಗ ಪ್ರೇಕ್ಷಕನಿಗೆ ‘ಆಟವನ್ನು ನೋಡಿದ್ದೇನೆ’ ಎಂಬ ಭಾವಕ್ಕಿಂತ ‘ಒಂದು ಪರಂಪರೆಯೊಳಗೆ ಪ್ರವೇಶಿಸಿ ದ್ದೇನೆ’ ಎಂಬ ಅನುಭವ ಉಂಟಾಗುತ್ತದೆ; ಪರಂಪರೆಯೊಳಗೆ ಪ್ರಯೋಗವನ್ನು ಅವರ ತಂದೆ ಶಂಭು ಹೆಗಡೆಯವರಂತೆ ಮುಂದುವರಿಸಿಕೊಂಡು ಹೋಗಿದ್ದಾರೆ.
ಸತ್ಯ ಹರಿಶ್ಚಂದ್ರನ ವೇಷದಲ್ಲಿ
ಯಕ್ಷಗಾನದ ‘ಸತ್ಯ ಹರಿಶ್ಚಂದ್ರ’ ಪ್ರಸಂಗದಲ್ಲಿ ರಾಜನಾದವ ಸ್ಮಶಾನಕಾಯುವ ಸಂದರ್ಭದಲ್ಲಿ ನಾಟಕೀಯವಾಗಿ ಪಾತ್ರವನ್ನು ಕಂಬಳಿ ಹೊದ್ದುಕೊಂಡು ಬರುವುದು ರೂಢಿಗೆ ಬಂದಿದೆ. ಇಲ್ಲಿ ವೇಷ ಸಂಪೂರ್ಣ ರೂಪಾಂತರದ ಪ್ರಕ್ರಿಯಾಗುತ್ತದೆ. ಶಿವಾನಂದ ಹರಿಶ್ಚಂದ್ರ ಸ್ಮಶಾನ ಕಾಯುವ ಸನ್ನಿವೇಷದಲ್ಲಿ ಕಿರೀಟ ಮತ್ತು ಹೆಗಲಿಗೆ ಕಪ್ಪುಬಟ್ಟೆಯನ್ನು ಮರೆಮಾಚಿ ಅಭಿನಯಿಸುತ್ತಾರೆ. ಇದೇ ರೀತಿ ನಳಚರಿತ್ರೆಯಲ್ಲಿ ಬಾಹುಕನಾಗಿರುವಾಗಲೂ ಇದೇ ರೀತಿ ರೂಪಾಂತರವನ್ನು ಮಾಡುತ್ತಾರೆ.
ಕಲೆಯ ದೃಷ್ಟಿಯಿಂದ ಬಹು ಸೂಕ್ಷ್ಮವಾದ ಅಭಿನಯ ಇದು. ಭಾರತೀಯ ಪ್ರದರ್ಶನ ಕಲೆಗಳ ಮಹತ್ವವೇನೆಂದರೆ ಅವು ‘ನಿಜವನ್ನು ನಕಲು’ ಮಾಡುವುದಿಲ್ಲ; ‘ಸತ್ಯವನ್ನು ಸೂಚಿಸುವದಾಗಿದೆ’. ಇದನ್ನು ‘ಲೋಕಾನುವೃತಾನುಕರಣ’ ಎನ್ನುತ್ತಾರೆ. ಆಹಾರ್ಯವೆನ್ನುವುದು ಬಾಹ್ಯ ಜೀವನದ ನಕಲಿ ಪ್ರತಿರೂಪವಲ್ಲ; ಜೀವನದ ರಸಾತ್ಮಕಘಟ್ಟಗಳ ಸಂಕೇತ. ಕಲೆಯ ಗುರಿ ವಾಸ್ತವದ ಛಾಯಾ ಚಿತ್ರವಲ್ಲ, ಭಾವಸತ್ಯದ ಅನುಭವ. ಪಾಶ್ಚಾತ್ಯ ರಂಗಭೂಮಿಯಲ್ಲಿ ಪಾತ್ರ ಬದಲಾದರೆ ವೇಷ ಸಂಪೂರ್ಣ ಬದಲಾಗುತ್ತದೆ. ಆದರೆ ಭಾರತೀಯ ರಂಗಭೂಮಿಯಲ್ಲಿ ‘ಸೂಚಕತೆ’ ಮುಖ್ಯ. ಒಂದು ಅಂಗವಿಕ್ಷೇಪ.
ಭಾವಾನುಸಂಧಾನ
ಯಕ್ಷಗಾನ, ಕಥಕ್ಕಳಿ, ಕೂಡಿಯಾಟ್ಟಂ ಮೊದಲಾದ ಭಾರತೀಯ ರಂಗಪ್ರಕಾರಗಳಲ್ಲಿ ‘ರೂಪಾಂತರ’ ಕ್ಕಿಂತ ‘ವೇಷಾಂತರ’ ಮುಖ್ಯವಾಗುತ್ತದೆ. ಹರಿಶ್ಚಂದ್ರನು ಸ್ಮಶಾನ ಕಾಯುವಾಗ ಅಥವಾ ಬಾಹುಕ ನಾಗಿ ಬದಲಾಗುವಾಗ, ಸಂಪೂರ್ಣ ವೇಷ ಬದಲಿಸುವುದಕ್ಕಿಂತ, ರಾಜವೇಷದ ಮೇಲೆಯೇ ಕಪ್ಪುಬಟ್ಟೆಯನ್ನು ಹೊದೆದು ಅಭಿನಯಿಸುವುದು ಅತ್ಯಂತ ಗಂಭೀರವಾದ ಭಾರತೀಯ ರಂಗ ತತ್ತ್ವದ ಅಭಿವ್ಯಕ್ತಿ. ಇಲ್ಲಿ ಪಾತ್ರದ ‘ಸ್ವರೂಪ’ ಬದಲಾಗುವುದಿಲ್ಲ; ಅದರ ‘ಅವಸ್ಥೆ’ ಬದಲಾಗುತ್ತದೆ
ಹರಿಶ್ಚಂದ್ರನು ಬಾಹುಕನಾದರೂ ಅವನೊಳಗಿನ ರಾಜಧರ್ಮ ನಾಶವಾಗಿಲ್ಲ. ರಾಮನು ಅರಣ್ಯ ವಾಸಿಯಾದರೂ ಅವನ ದೈವಿಕತೆ ಕ್ಷೀಣವಾಗಿಲ್ಲ. ಆದ್ದರಿಂದಲೇ ಕಥಕ್ಕಳಿಯಲ್ಲಿ ವನವಾಸದ ರಾಮನು ಕಿರೀಟವನ್ನೇ ಧರಿಸುತ್ತಾನೆ. ಯಕ್ಷಗಾನದಲ್ಲಿಯೂ ರಾಮ, ಕೃಷ್ಣ, ಧರ್ಮರಾಜ ಮೊದ ಲಾದ ಪಾತ್ರಗಳು ಸಂಪೂರ್ಣ ವೇಷತ್ಯಾಗ ಮಾಡುವುದಿಲ್ಲ. ಅಭಿನವಗುಪ್ತ ಇದನ್ನೇ ‘ಭಾವಾನು ಸಂಧಾನ’ ಎಂದಿದ್ದಾನೆ.
ಶಿವಾನಂದ ಹೆಗಡೆ ಅವರು ರಾಜಪೂಷಾಕಿನ ಕಿರೀಟವನ್ನು ಸಂಪೂರ್ಣ ತೆಗೆದುಹಾಕದೆ ಕಪ್ಪುಬಟ್ಟೆ ಯಿಂದ ಮರೆಮಾಚಿ ಅಭಿನಯಿಸುವುದು, ಕೇವಲ ಶೈಲಿಯ ಆಯ್ಕೆ ಅಲ್ಲ; ಅದು ಭಾರತೀಯ ರಂಗದರ್ಶನದ ಆಳವಾದ ಅರಿವು. ಇಲ್ಲಿ ‘ನಾನು ಈಗ ಬೇರೆ ವ್ಯಕ್ತಿ’ ಎನ್ನುವುದಕ್ಕಿಂತ, ‘ನನ್ನೊಳಗಿನ ಸ್ಥಿತಿ ಬದಲಾಗಿದೆ’ ಎನ್ನುವುದೇ ಮುಖ್ಯ.
ಅದಕ್ಕಾಗಿಯೇ ಕೆರೆಮನೆ ಪರಂಪರೆಯಲ್ಲಿ ‘ಅತಿಯಾದ ವಾಸ್ತವಿಕತೆ’ಗೆ ಅವಕಾಶವಿಲ್ಲ. ಮೊದಲೇ ಹೇಳಿದಂತೆ ಅಭಿನಯ ನಿಜ ಜೀವನದ ಪುನರುತ್ಪತ್ತಿಯಲ್ಲ; ಅದು ಜೀವನದ ರಸಮಯ ರೂಪಕ. ಮತ್ತು ಆ ರೂಪಕದ ಶುದ್ಧತೆಯನ್ನು ಕೆರೆಮನೆ ಶಿವಾನಂದ ಹೆಗಡೆ ಅವರು ಕಾಪಾಡಿಕೊಂಡು ತಪಸ್ಸಿನಂತೆ ಕಾಪಾಡಿಕೊಂಡು ಬಂದಿದ್ದಾರೆ.
ಇಂದಿನ ಪ್ರೇಕ್ಷಕನ ಮನಸ್ಥಿತಿ, ವೇದಿಕೆಯ ತಾಂತ್ರಿಕ ಸಾಧ್ಯತೆಗಳು, ದೃಶ್ಯಪ್ರಜ್ಞೆ, ಸಮಯಪ್ರಜ್ಞೆ ಇವೆಲ್ಲವನ್ನೂ ಅವರು ಗಮನಿಸಿದ್ದಾರೆ. ಅವರ ಮಂಡಳಿಯ ಪ್ರದರ್ಶನ ‘ಪ್ರದರ್ಶನಕ್ಕಾಗಿ ಪ್ರದರ್ಶನ’ ಆಗುವುದಿಲ್ಲ. ಯಕ್ಷಗಾನದ ಒಳಸೌಂದರ್ಯವನ್ನು ಮತ್ತಷ್ಟು ಸ್ಪಷ್ಟಗೊಳಿಸುವ ಸಾಧನವಾಗುತ್ತದೆ. ‘ಸೀತಾಪಹರಣ, ವಾಲಿವಧೆ’ ಮೊದಲಾದ ಪ್ರಸಂಗಗಳನ್ನು ಶಿವಾನಂದ ರಸಕಾವ್ಯವಾಗಿ ನಿರ್ದೇಶಿಸಿ ಅಭಿನಯಿಸುತ್ತಾರೆ.
ಭಾಗವತಿಕೆಯ ಅಧ್ಯಯನ
ಇದೇ ರೀತಿ ‘ಭಾಸಂ’ ಯೋಜನೆಯ ಮೂಲಕ ಭಾಗವತಿಕೆಯ ಅಧ್ಯಯನ ನಡೆಸಿರುವುದು ಮಹತ್ವದ ಕೆಲಸ. ಯಕ್ಷಗಾನದ ಹೃದಯ ಭಾಗವತಿಕೆ. ಆ ಭಾಗವತಿಕೆಯ ಶುದ್ಧತೆಯನ್ನು ಕಾಪಾಡದೇ ಯಕ್ಷಗಾನದ ಆತ್ಮ ಉಳಿಯುವುದಿಲ್ಲ ಎಂಬ ಅರಿವು ಅವರಿಗೆ ಇದೆ. ಆದ್ದರಿಂದ ಅವರು ಕೇವಲ ರಂಗದ ಮೇಲಿನ ಹೊಳಪಿನ ಕಡೆ ನೋಡದೆ, ಕಲೆಯ ಆಂತರಿಕ ಶಕ್ತಿಯನ್ನು ಉಳಿಸುವ ಕೆಲಸ ಮಾಡಿದ್ದಾರೆ. ಓರ್ವ ರಂಗಗುರುವಾಗಿ ಅವರ ಸಾಧನೆ ‘ಭಾಸಂ’ನಲ್ಲಿ ಮತ್ತಷ್ಟು ಮಹತ್ವ ಪಡೆಯು ತ್ತದೆ. ಅವರು ಕೇವಲ ವೇದಿಕೆಯ ಮೇಲೆ ಪಾತ್ರಧಾರಿಯಾಗಿರುವ ಕಲಾವಿದರಲ್ಲ; ಪರಂಪರೆಯ ಒಳಾರ್ಥವನ್ನು ಮುಂದಿನ ತಲೆಮಾರಿಗೆ ಬೋಧಿಸುವ ರಂಗಗುರು. ಅವರ ತರಬೇತಿಯಲ್ಲಿ ಯಕ್ಷಗಾನವು ಕೇವಲ ಹೆಜ್ಜೆಗಳ ಕಲಿಕೆಯಲ್ಲ; ಅದು ಶಿಸ್ತು, ಸಂಸ್ಕಾರ, ದೇಹಭಾಷೆ, ತಾಳಪ್ರಜ್ಞೆ ಭಾಷಾ ಸಂವೇದನೆ ಮತ್ತು ಆತ್ಮವಿಶ್ವಾಸದ ಶಿಕ್ಷಣಗಳಾಗಿ ಕಾಣಿಸುತ್ತದೆ.
ಪ್ರತೀ ವರ್ಷವೂ ತನ್ನ ತಂದೆ ಶಂಭು ಹೆಗಡೆಯವರ ಸ್ಮರಣೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ ಜಾಗತಿಕ ರಂಗಭೂಮಿಯ ಹೊಳಹನ್ನು ಸ್ಥಳೀಯರಿಗೆ ತರುವ ಮಹತ್ವದ ಪ್ರಯತ್ನ. ರಂಗಕಲೆಗಳ ವಿವಿಧ ಮುಖಗಳನ್ನು ಅನುಭೂತಿಮಾಡಿಸಿಕೊಳ್ಳಬಹುದಾದ ಮಹತ್ವದ ವೇದಿಕೆಯೂ ಆಗಿದೆ. ಆದ್ದರಿಂದ ಶಿವಾನಂದ ಹೆಗಡೆಯವರ ಸಾಧನೆ ಯಕ್ಷಗಾನದ ‘ಉಳಿವು’ ಮಾತ್ರವಲ್ಲ; ಅದರ ‘ಜೀವಂತಿಕೆ’ಯ ಉಳಿಸುವ ಪ್ರಯತ್ನವಾಗಿದೆ.
ಅವರು ಯಕ್ಷಗಾನವನ್ನು ಕೇವಲ ಭೂತಕಾಲದ ಸ್ಮಾರಕವನ್ನಾಗಿಸಿಲ್ಲ; ವರ್ತಮಾನದಲ್ಲಿ ಉಸಿರಾಡುವ ಕಲೆಯನ್ನಾಗಿಸಿದ್ದಾರೆ. ಇದೇ ಕಾರಣಕ್ಕೆ ಅವರ ಯಕ್ಷಗಾನದಲ್ಲಿ ಸನಾತನದ ಬೇರು ಗಳೂ ಇವೆ, ಅದುತನದ ಚೈತನ್ಯವೂ ಇದೆ, ಮತ್ತು ಸದಾತನದ ನಿರಂತರ ಜೀವಶಕ್ತಿಯೂ ಇದೆ. ಕೆರೆಮನೆ ಪರಂಪರೆಯ ಈ ಸಾಧನೆಯೇ ಇಂದು ಯಕ್ಷಗಾನವನ್ನು ಕೇವಲ ಕರಾವಳಿಯ ಕಲೆಯಾಗಿ ಉಳಿಸದೆ, ಭಾರತೀಯ ಸಾಂಸ್ಕೃತಿಕ ಚೇತನೆಯ ಜೀವಂತ ರೂಪವಾಗಿ ನಿಲ್ಲಿಸಿದೆ.