ಕೇಶವ ಪ್ರಸಾದ್
ಆನೆಕಾಲು ರೋಗವು ಸೊಳ್ಳೆಗಳಿಂದ ಹರಡುವ ಸೋಂಕು. ಇದು ಕಾಲು, ತೋಳುಗಳಲ್ಲಿ ವಿಪರೀತ ಊತಕ್ಕೆ ಕಾರಣವಾಗಬಲ್ಲುದು. ವ್ಯಕ್ತಿಯನ್ನು ದೈಹಿಕ- ಮಾನಸಿಕವಾಗಿ ಹೈರಾಣಾ ಗಿಸಬಲ್ಲ ಕಾಯಿಲೆ. ಕಾಸರಗೋಡಿನ ಡಾ.ಎಸ್.ಆರ್.ನರಹರಿಯವರು ಆನೆಕಾಲು ರೋಗ ವನ್ನು ಗುಣಪಡಿಸುವ ಚಿಕಿತ್ಸಾ ಪದ್ಧತಿಯನ್ನು ಆವಿಷ್ಕರಿಸಿದ್ದಾರೆ.
ಈ ನಿಟ್ಟಿನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಅಪ್ಲೈಡ್ ಡರ್ಮಟಾಲಜಿ-ಐಎಡಿ ಎಂಬ ಸಂಸ್ಥೆ ಯನ್ನು ಸ್ಥಾಪಿಸಿದ್ದಾರೆ. ಸಮಾಜಕ್ಕೆ ಅಮೂಲ್ಯ ಸೇವೆ ನೀಡಿದ್ದಾರೆ. ಡಾ.ಎಸ್.ಆರ್.ನರಹರಿ ಯವರ ಸಾಧನೆಯ ಬಗ್ಗೆ ಬೆಳಕು ಚೆಲ್ಲುವ ಕೃತಿಯನ್ನು ಡಾ.ಮಹೇಶ್ವರಿ ಅವರು ಬರೆದಿದ್ದಾರೆ. ಕೃತಿಯ ಹೆಸರು- ಡಾ.ನರಹರಿ ಮತ್ತು ಐಎಡಿ.ಜಗತ್ತಿನ 72 ದೇಶಗಳಲ್ಲಿ 12 ಕೋಟಿ ಜನರಿಗೆ ಆನೆಕಾಲು ಸೋಂಕು ತಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: Keshava Prasad B Column: ವರ್ಷದೊಳಗೆ ಸಾಫ್ಟ್ʼವೇರ್ ಎಂಜಿನಿಯರ್ʼಗಳು ಕಣ್ಮರೆ ?!
ಭಾರತದಲ್ಲಿ ಬಿಹಾರ, ಉತ್ತರಪ್ರದೇಶ, ಕೇರಳ, ಆಂಧ್ರಪ್ರದೇಶದಲ್ಲಿ ಆನೆಕಾಲು ರೋಗ ಹೆಚ್ಚಾಗಿ ಕಾಡುತ್ತಿದೆ. ಜಗತ್ತಿನ ಶೇಕಡಾ 40ರಷ್ಟು ರೋಗಪೀಡಿತರು ಭಾರತದಲ್ಲಿ ಇರುವುದು ಕಳವಳಕಾರಿ. ಗಡಿನಾಡು ಕಾಸರಗೋಡಿನ ಕನ್ನಡಿಗ ವೈದ್ಯ ಡಾ.ಎಸ್.ಆರ್.ನರಹರಿ ಅವರು ಸಂಯೋಜಿತ ವಿಧಾನದಲ್ಲಿ ಆನೆಕಾಲು ರೋಗದ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿ ದ್ದಾರೆ.
ಆನೆಕಾಲು ರೋಗದಂತಹಹಳೆಯ ರೋಗಗಳು ಇಂದಿಗೂ ರೋಗಿಗಳನ್ನು ಅಲೆದಾಡಿಸಿ, ಅವರ ಬದುಕಿನ ಉತ್ಸಾಹ, ಲವವಿಕೆಯನ್ನು ಕಸಿದುಕೊಳ್ಳುತ್ತದೆ. ಅಂಥ ರೋಗಿಗಳ ಪಾಲಿಗೆ ಡಾ.ನರಹರಿ ಅವರು ಅಶಾಕಿರಣ. ವರ್ಷಗಟ್ಟಲೆ ಅಧ್ಯಯನ, ಸಂಶೋಧನೆ ನಡೆಸಿ, ಈ ಆನೆಕಾಲು ರೋಗದ ಚಿಕಿತ್ಸೆಗೆ ಹೊಸ ಸಂಯೋಜಿತ ವಿಧಾನವನ್ನು ಕಂಡುಹಿಡಿದು ಉಪಕಾರ ಮಾಡಿದ್ದಾರೆ.
ಕೆಲವೊಂದು ಗಣವಾಗದ ಕಾಯಿಲೆಗಳಿಗೆ ಒಂದು ವೈದ್ಯಕೀಯ ಪದ್ಧತಿ ವಿಫಲವಾದಾಗ, ರೋಗಿ ಹತಾಶರಾಗುವ ಸಾಧ್ಯತೆಯೇ ಹೆಚ್ಚು. ಆದರೆ ಒಂದಕ್ಕಿಂತ ಹೆಚ್ಚು ವೈದ್ಯ ಪದ್ಧತಿಯ ಸಂಯೋಜನೆಯಿಂದ ಉತ್ತಮ ಫಲಿತಾಂಶ ಕಂಡುಹಿಡಿದವರು ಡಾ.ನರಹರಿ. ಆಲೋಪತಿ ವೈದ್ಯರಾಗಿದ್ದ ಡಾ.ನರಹರಿಯವರು ಹಲವು ವೈದ್ಯಪದ್ಧತಿಗಳ ಬಗ್ಗೆ ಅಳವಾದ ಸಂಶೋಧನೆ ನಡೆಸಿ, ಅವುಗಳಲ್ಲಿರುವ ಸಾರವನ್ನು ತಿಳಿದು, ಸಂಯೋಜಿಸಿ ಉತ್ತಮ ವಿಧಾನವನ್ನು ಆವಿಷ್ಕರಿಸಿರುವುದು ವಿಶೇಷ. ಡಾ.ನರಹರಿಯವರು ರೂಪಿಸಿದ ಈ ಸಂಯೋಜಿತ ಚಿಕಿತ್ಸಾ ಪದ್ಧತಿಯು ಜಾಗತಿಕ ಮನ್ನಣೆಯನ್ನೂ ಪಡೆದಿದೆ. ಈ ಕುರಿತ ಅಮೂಲ್ಯ ವಿವರಗಳು ಕೃತಿಯಲ್ಲಿವೆ.