ಶಶಿಧರ ಹಾಲಾಡಿ
ಗೋಡಂಬಿ ಬೀಜವನ್ನು ತಿನ್ನುವುದೆಂದರೆ, ನಮ್ಮ ದೇಶದವರಿಗೆ ಬಹಳ ಇಷ್ಟ. ಕಾಜು ಬರ್ಫಿ ಮೊದಲಾದ ತಿನಿಸುಗಳಿಗೆ ರುಚಿ ನೀಡುವ ಈ ಗೋಡಂಬಿ, ನಮ್ಮ ನಾಡಿನ ದುಬಾರಿ ಡ್ರೈಫ್ರೂಟ್ಸ್ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಆದರೆ, ಆ ಬೀಜಕ್ಕೆ ಅಂಟಿಕೊಂಡಿರುವ ಗೋಡಂಬಿ ಹಣ್ಣನ್ನು ತಿನ್ನುವ ಅಭ್ಯಾಸ ಕಡಿಮೆ! ಸಾಕಷ್ಟು ರಸವಿರುವ, ಸಿಹಿ ಮತ್ತು ಒಗರು ರುಚಿ ಇರುವ ಗೋಡಂಬಿ ಹಣ್ಣನ್ನು ತಿನ್ನುವಲ್ಲಿ, ಅದನ್ನು ಜನಪ್ರಿಯಗೊಳಿಸುವಲ್ಲಿ ಇರುವ ತೊಡಕುಗಳೇನು? ಗೋಡಂಬಿ ಹಣ್ಣಿನ ರಸವನ್ನು ತೆಗೆದು, ‘ಕ್ಯಾಶ್ಯೂ ಆಪಲ್ ಜ್ಯೂಸ್’ ಎಂಬ ಬ್ರ್ಯಾಂಡ್ ರೂಪಿಸಿ, ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸುವ ಸಾಧ್ಯತೆ ಗಳಿವೆಯೇ? ನಮ್ಮ ರಾಜ್ಯದ ಪ್ರಮುಖ ವಾಣಿಜ್ಯಕ ಬೆಳೆಯೊಂದರ ಮೌಲ್ಯವರ್ಧನೆಗೆ ಇನ್ನಷ್ಟು ಅವಕಾಶಗಳಿವೆಯೇ?
ನಮ್ಮ ರಾಜ್ಯವು ಸಾಕಷ್ಟು ಗೋಡಂಬಿಯನ್ನು ಉತ್ಪಾದಿಸುತ್ತದೆ; ಗೋಡಂಬಿ ಬೀಜ ಬಹಳ ರುಚಿ. ಆದರೆ ನಮ್ಮ ರಾಜ್ಯದ ಹೆಚ್ಚಿನವರಿಗೆ ಗೋಡಂಬಿ ಬೀಜವನ್ನು ತಿಂದು ಗೊತ್ತೇ ಹೊರತು, ಅದರ ಹಣ್ಣಿನ ರುಚಿ ಗೊತ್ತಿಲ್ಲ! ಅಸಲು, ಅಂತಹದೊಂದು ಹಣ್ಣು ಇದೆ ಎಂದೇ ಹೆಚ್ಚಿನವರಿಗೆ ತಿಳಿಯದು. ಇಂಗ್ಲಿಷ್‌ನಲ್ಲಿ ಇದಕ್ಕಿರುವ ಆಕರ್ಷಕ ಹೆಸರು ‘ಕ್ಯಾಶ್ಯೂ ಆಪಲ್’! ಕರಾವಳಿಯ ಜಿಲ್ಲೆಗಳು, ಮಲೆನಾಡಿನ ಕೆಲವು ಭಾಗದಲ್ಲಿ ಸಾಕಷ್ಟು ಬೆಳೆಯುವ ಗೋಡಂಬಿ ಮರಗಳನ್ನು, ಚಿತ್ರದುರ್ಗ, ಬೆಂಗಳೂರು ಸುತ್ತಮುತ್ತಲೂ ಅಲ್ಲಲ್ಲಿ ಕಾಣಬಹುದು.
ಗೋಡಂಬಿಯನ್ನು ತೋಟಗಾರಿಕೆ ಬೆಳೆಯಾಗಿ ಬೆಳೆಯುವವರು ಸಹ, ಮುಖ್ಯವಾಗಿ ಅದರ ಬೀಜವನ್ನು ವಾಣಿಜ್ಯಕವಾಗಿ ಮಾರುತ್ತಾರೆ, ಹೊರತು, ಗೋಡಂಬಿ ಹಣ್ಣನ್ನಲ್ಲ. ಅದಕ್ಕೊಂದು ಕಾರಣವಿದೆ. ಗೋಡಂಬಿ ಬೀಜವನ್ನು ತನ್ನ ಒಂದು ತುದಿಯಲ್ಲಿ ಬೇಸಿಗೆ ಎದುರಿಸಲು ಹೊಸದೊಂದು ಪಾನೀಯ!
ಅಂಟಿಸಿಕೊಂಡಿರುವ ಗೋಡಂಬಿ ಹಣ್ಣು, ಬಣ್ಣದಲ್ಲಿ ಮುಖ್ಯವಾಗಿ ಕೆಂಪು ಮತ್ತು ಹಳದಿ ಯಲ್ಲಿ ಕಾಣಸಿಗುತ್ತದೆ. ಸಾಕಷ್ಟು ದೊಡ್ಡದಾಗಿಯೂ, ರಸಭರಿತವಾಗಿಯೂ ಇರುತ್ತದೆ; ಆದರೆ, ಒಂದೆರಡು ಹಣ್ಣನ್ನು ತಿನ್ನುವಷ್ಟರಲ್ಲಿ, ಮುಖ್ಯವಾಗಿ ಅದರ ರಸ ಹೀರುವಷ್ಟರಲ್ಲಿ, ಗಂಟಲು ಕೆರತ ಆರಂಭವಾಗುತ್ತದೆ; ಮೊದಲ ಬಾರಿ ತಿಂದವರಿಗೆ ಸಣ್ಣಗೆ ಕೆಮ್ಮು ಸಹ ಬರಬಹುದು. ಆದ್ದರಿಂದ, ಗೋಡಂಬಿ ಹಣ್ಣು ನೋಡಲು ಬಲು ಆಕರ್ಷಕವಾದರೂ, ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿಲ್ಲ. ಆಗೊಮ್ಮೆ, ಈಗೊಮ್ಮೆ ಬೆಂಗಳೂರಿನ ಬೀದಿ ಗಳಲ್ಲೂ ಗೋಡಂಬಿ ಹಣ್ಣು ಮಾರಾಟಕ್ಕೆ ದೊರಕುವುದುಂಟು; ಆದರೆ ಸಾರ್ವತ್ರಿಕ ವಾಗಿ ಮಾರಾಟಕ್ಕೆ ಬಂದಿಲ್ಲ.
ನಮ್ಮ ರಾಜ್ಯದ ಕರಾವಳಿಯ ಜಿಲ್ಲೆಗಳಲ್ಲಿ ಎಪ್ರಿಲ್-ಮೇ ತಿಂಗಳಲ್ಲಿ ಓಡಾಡಿದರೆ, ‘ಗೇರು ಹಣ್ಣು’ಗಳು (ಅಲ್ಲಿ ಗೋಡಂಬಿ ಹಣ್ಣನ್ನು ಹೀಗೆಂದೇ ಕರೆಯುವುದು) ರಾಶಿ ರಾಶಿಯಾಗಿ ಮರಗಳಲ್ಲಿ ಬಿಟ್ಟಿರುವುದನ್ನು ಕಾಣಬಹುದು. ಕೆಂಪು, ಹಳದಿ ಬಣ್ಣದ ವಿವಿಧ ಗಾತ್ರದ ಗೇರು ಹಣ್ಣುಗಳನ್ನು ಕಂಡಾಕ್ಷಣ, ತಿನ್ನುವ ಆಸೆ ಹುಟ್ಟುವುದು ಸಹಜ. ಆದರೆ, ಅದರಲ್ಲಿರುವ ಟ್ಯಾನಿನ್ ಅಂಶದಿಂದಾಗಿ, ಹಣ್ಣನ್ನು ತಿಂದ ನಂತರ ಸಣ್ಣಗೆ ಗಂಟಲು ಕೆರೆಯುವುದರಿಂದ, ಜಾಸ್ತಿ ತಿನ್ನಲು ಆಗುವುದಿಲ್ಲ. ಆದ್ದರಿಂದ, ನಮ್ಮ ರಾಜ್ಯದ ಕರಾವಳಿ ಯವರು ರಸಭರಿತ ‘ಕ್ಯಾಶ್ಯೂ ಆಪಲ್’ನ್ನು ಸಾಮಾನ್ಯವಾಗಿ ಗೊಬ್ಬರದ ಗುಂಡಿಗೆ ಸುರಿಯು ತ್ತಾರೆ! ಗೋಬರ್ ಗ್ಯಾಸ್ ತಯಾರಿಸಲು, ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಇದನ್ನು ಬಳಸುತ್ತಾರೆ. ಕೆಲವರಂತೂ, ಸುಮ್ಮನೆ ಎಸೆದುಬಿಡುತ್ತಾರೆ.
ಇದನ್ನೂ ಓದಿ: Shashidhara Halady Column: ಕಾಡಿನಲ್ಲಿ ಬೆಳೆಯುವ ದ್ರಾಕ್ಷಿ ಹಣ್ಣುಗಳು !
ಅಡಿಕೆ ಪತ್ರಿಕೆಯ ಅಭಿಯಾನ
ಸಾಕಷ್ಟು ರಸವಿರುವ, ಸಿಹಿ ರುಚಿ ಇರುವ ಗೇರು ಹಣ್ಣಿನ ರಸವನ್ನು ವಾಣಿಜ್ಯಕವಾಗಿ ಉಪಯೋಗಿಸಬಹುದೇ? ಇದರ ಕುರಿತು ಇತ್ತೀಚೆಗೆ ಸಾಕಷ್ಟು ಸಂಶೋಧನೆ, ಅಧ್ಯಯನ ಕೈಗೊಂಡ ‘ಅಡಿಕೆ ಪತ್ರಿಕೆ’ಯ ಸಂಪಾದಕರಾದ ಶ್ರೀ ಪಡ್ರೆಯವರು, ಅಂತಹದೊಂದು ಸಾಧ್ಯತೆ ಇದೆ ಎಂದು ಖಚಿತವಾಗಿ ಹೇಳುವರು. ‘ಅಡಿಕೆ ಪತ್ರಿಕೆ’ಯ ಮೂರು ಸಂಚಿಕೆ ಗಳನ್ನು ಗೇರು ಹಣ್ಣಿನ ಜ್ಯೂಸ್ ತಯಾರಿಕೆಗೆ ಮತ್ತು ವಾಣಿಜ್ಯಕವಾಗಿ ಬಳಸುವ ಸಾಧ್ಯತೆಯ ಬಗ್ಗೆ ಮೀಸಲಿಟ್ಟು, ಆ ಕುರಿತು ವ್ಯಾಪಕವಾಗಿ ಬರೆದಿದ್ದಾರೆ; ಜತೆಗೆ, ನಮ್ಮ ರಾಜ್ಯದಲ್ಲಿ ವ್ಯರ್ಥವಾಗಿ ಕೊಳೆತು ಹೋಗುತ್ತಿರುವ ಗೋಡಂಬಿ ಹಣ್ಣುಗಳ ರಸವನ್ನು ಸದುಪಯೋಗ ಮಾಡಿಕೊಂಡು, ವಾಣಿಜ್ಯಕವಾಗಿ ಬಳಸಬೇಕು ಮತ್ತು ಉದ್ಯಮಿಗಳು ಈ ಕುರಿತು ಗಮನ ಹರಿಸಬೇಕು ಎಂದು, ಅದಕ್ಕಾಗಿ ಅವರೊಂದು ಅಭಿಯಾನವನ್ನೇ ನಡೆಸುತ್ತಿದ್ದಾರೆ.
ಗುಣಮಟ್ಟದ ಜ್ಯೂಸ್
ಮಿದುವಾದ ಗೇರು ಹಣ್ಣುಗಳ ರಸವನ್ನು ತೆಗೆದು, ಅದರ ಒಗರು ಗುಣವನ್ನು ನೀಗಿಸಿದರೆ, ಬೇರೇನನ್ನೂ ಬಳಸದೇ, ಆ ಜ್ಯೂಸ್‌ನ್ನು ಕುಡಿಯಬಹುದು ಎಂಬುದು ನಿಜಕ್ಕೂ ಬಹು ವಿಶೇಷ ಮತ್ತು ಮುಖ್ಯ. ಕೇರಳ ರಾಜ್ಯದ ಹಲವು ಕೃಷಿಕರು, ಪುಟ್ಟ ಉದ್ಯಮಿಗಳು, ಮಹಾರಾಷ್ಟ್ರದ ಉತ್ಸಾಹಿ ಕೃಷಿಕರು ಮತ್ತು ಮಂಗಳೂರು ಜಿಲ್ಲೆಯ ಕೆಲವರು ಗೇರು ಹಣ್ಣಿನ ಜ್ಯೂಸ್‌ನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅದರ ರಸಕ್ಕೆ ಸಾಬುದಾನಿ ಅಥವಾ ಸಾಬಕ್ಕಿ ಪುಡಿಯನ್ನು ಬೆರೆಸಿಟ್ಟರೆ, ಕೆಲವು ಗಂಟೆಗಳಲ್ಲಿ, ಗುಣ ಮಟ್ಟದ ಜ್ಯೂಸ್ ಸಿದ್ಧವಾಗುತ್ತದೆ.
ನಮ್ಮ ನೆರೆಯ ರಾಜ್ಯಗಳಲ್ಲಿ ನಡೆದಂತೆ, ನಮ್ಮ ರಾಜ್ಯದಲ್ಲೂ ಇಂತಹದೊಂದು ಪ್ರಯತ್ನ ನಡೆಯಬೇಕು. ಏಕೆಂದರೆ, ಕರಾವಳಿಯ ಜಿಲ್ಲೆಗಳಲ್ಲಿ ಇಂದು ನಷ್ಟವಾಗುತ್ತಿರುವ, ಉಪಯೋಗಕ್ಕೆ ಬಾರದು ಎಂದು ಎಸೆಯುತ್ತಿರುವ ‘ಕ್ಯಾಶ್ಯೂ ಆಪಲ್’ ಪ್ರಮಾಣವು, ಟನ್ ಗಟ್ಟಲೆ, ಊಹಿಸಲೂ ಆಗದಷ್ಟು ಅಧಿಕ!
ಇದರ ರಸವನ್ನು ಸಂಗ್ರಹಿಸಿ, ಪಲ್ಪನ್ನು ಸಂಗ್ರಹಿಸಿ, ವರ್ಷಪೂರ್ತಿ ಜ್ಯೂಸ್ ತಯಾರಿಸಿ, ಮಾರಾಟ ಮಾಡುವ ಅವಕಾಶವಿದೆ. ನೈಸರ್ಗಿಕ ಪಾನೀಯ ಎಂದು ಪ್ರಚುರ ಪಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಅವಕಾಶವೂ ಇದೆ. ಏಕೆಂದರೆ, ಯಾವುದೇ ಸಿಹಿ ಬಳಸದೇ, ಗೇರು ಹಣ್ಣಿನ ಜ್ಯೂಸ್‌ನ್ನು ಕುಡಿಯಬಹುದು, (ಒಗರು ರುಚಿ ನಿವಾರಿಸಿದ ನಂತರ) ಅಷ್ಟರ ಮಟ್ಟಿಗೆ ಅದು ರುಚಿಕರ!
ಸಂಶೋಧನೆ
ನಮ್ಮ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು, ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿರುವ ತೋಟಕಾರಿಕಾ ವಿಶ್ವವಿದ್ಯಾಲಯ, ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಮೊದಲಾದ ಸಂಸ್ಥೆಗಳು ಗೋಡಂಬಿ ಹಣ್ಣಿನ ಸಂಸ್ಕರಣೆ, ಜ್ಯೂಸ್ ತಯಾರಿಸುವ ವಿಧಾನ, ಒಗರು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು ಮೊದಲಾದ ಕುರಿತು ಹಲವು ಸಂಶೋಧನೆಗಳನ್ನು ನಡೆಸಿವೆ. ಆದರೆ, ಸರಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳೇ ತಾವೇ ಸ್ವತಃ ತಯಾರಿಸುವ ಉತ್ಪನ್ನಗಳ ಗುಣಮಟ್ಟ ಉತ್ತಮವಿದ್ದರೂ, ವಾಣಿಜ್ಯಕವಾಗಿ ಅವರು ಯಶಸ್ಸು ಗಳಿಸಲು ಹಲವು ತೊಡಕುಗಳಿವೆ. ಆದರೆ ಈಗಾಗಲೇ ನಡೆದಿರುವ ಸಂಶೋಧನೆಯು ಗುಣಮಟ್ಟದ್ದಾಗಿದ್ದು, ದೊರಕಿರುವ ಮಾಹಿತಿ ಉಪಯೋಗಿ ಎನಿಸಿದೆ.
ಈ ಸಂಶೋಧನೆಯ ಲಾಭವನ್ನು ಬಳಸಿಕೊಂಡು, ನಮ್ಮ ರಾಜ್ಯದಲ್ಲಿ ಹೇರಳವಾಗಿ ಸೀಸನ್ ನಲ್ಲಿ) ಲಭ್ಯವಿರುವ ಗೋಡಂಬಿ ಹಣ್ಣುಗಳನ್ನು ಸಂಸ್ಕರಿಸಿ, ಜ್ಯೂಸ್, ಸಿರಪ್ ತಯಾರಿಸುವ ಚಟುವಟಿಕೆಯನ್ನು ವಾಣಿಜ್ಯಕವಾಗಿ ಕೈಗೊಳ್ಳುವ ಅವಕಾಶವಿದೆ.
ಕರ್ನಾಟಕದ ಸ್ಟಾರ್ಟ್ ಅಪ್ ಉದ್ಯಮಿಗಳು, ಆಸಕ್ತರು ಗೇರು ಹಣ್ಣಿನ ಜ್ಯೂಸ್‌ನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ, ಅಷ್ಟರ ಮಟ್ಟಿಗೆ ವ್ಯಾಲ್ಯೂ ಎಡಿಶನ್ ಆದೀತು, ನಮ್ಮ ರಾಜ್ಯದಲ್ಲಿ ಸಾಕಷ್ಟು ಬೆಳೆಯುವ ಈ ಒಂದು ರಸಭರಿತ ಹಣ್ಣನ್ನು ಸದುಪಯೋಗ ಮಾಡಿಕೊಂಡಂತೆಯೂ ಆದೀತು. (ಮಾಹಿತಿ ಕೃಪೆ : ಅಡಿಕೆ ಪತ್ರಿಕೆ : ೮೦೭೩೧ ೪೦೯೧೭)
ಪೌಷ್ಟಿಕಾಂಶಗಳ ಆಗರ
ಗೋಡಂಬಿ ಹಣ್ಣಿನಲ್ಲಿ ಹಲವು ಪೌಷ್ಟಿಕಾಂಶಗಳಿವೆ. ಕಿತ್ತಳೆಗಿಂತಲೂ, ಸೇಬು ಹಣ್ಣಿ ಗಿಂತಲೂ ಅಧಿಕ ವಿಟಮಿನ್ ಸಿ ಇದರಲ್ಲಿ ಇರುವುದು ವಿಶೇಷ. ಜತೆಗೆ ಪೊಟ್ಯಾಶಿಯಂ, ಮ್ಯಾಗ್ನೀಶಿಯಂ ಅಧಿಕ ಪ್ರಮಾಣದಲ್ಲಿದ್ದು, ವಿಟಮಿನ್ ಎ ಮತ್ತು ಇ, ಅಲ್ಪ ಪ್ರಮಾಣ ದಲ್ಲಿದೆ. ಹಳದಿ ಬಣ್ಣದ ಹಣ್ಣಿನಲ್ಲಿ ಮ್ಯಾಗ್ನೀಶಿಯಂ ಅಧಿಕ ಪ್ರಮಾಣದಲ್ಲಿದ್ದರೆ, ಕೆಂಪು ಬಣ್ಣದ ಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕ ಪ್ರಮಾಣದಲ್ಲಿದೆ. ಇದರ ರಸದಲ್ಲಿರುವ ಒಗರು ಗುಣವನ್ನು ನಿವಾರಿಸಿ, ಜ್ಯೂಸ್ ರೂಪದಲ್ಲಿ ಕುಡಿದರೆ, ಇವೆಲ್ಲಾ ಪೌಷ್ಟಿಕಾಂಶಗಳು ದೇಹಕ್ಕೆ ಲಭ್ಯವಾಗುವುದರಿಂದ, ಬೇಸಗೆಯಲ್ಲಿ ಉತ್ತಮ ಪಾನೀಯವಾಗಬಲ್ಲದು.
ಗೋವಾದಲ್ಲಿ ಆಲ್ಕೊಹಾಲ್!
ಗೋವಾ ರಾಜ್ಯದಲ್ಲೂ ಗೋಡಂಬಿಯನ್ನು ಬೆಳೆಯುತ್ತಾರೆ. ನಮ್ಮ ದೇಶಕ್ಕೆ ಪೋರ್ಚು ಗೀಸರು ಹದಿನಾರನೆಯ ಶತಮಾನಕ್ಕೆ ಬಂದಾಗ, ತಂದ ವಿವಿಧ ಸಸ್ಯಗಳಲ್ಲಿ ಗೋಡಂಬಿ ಯೂ ಒಂದು; ಸಹಜವಾಗಿಯೇ ಗೋವಾದಲ್ಲಿ ಅದನ್ನು ಮೊದಲಿಗೆ ಬೆಳೆದರು. ಗೋವಾ ದಲ್ಲಿ ಗೋಡಂಬಿ ಹಣ್ಣಿನ ರಸವನ್ನು ‘ಫೆನ್ನಿ’ ಎಂಬ ಹೆಸರಿನ ಮದ್ಯಸಾರವನ್ನಾಗಿ ತಯಾರಿ ಸುವ ಪದ್ಧತಿ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಆಫ್ರಿಕಾದ ಕೆಲವು ದೇಶಗಳಲ್ಲೂ ಇದರಿಂದ ಅಲ್ಪ ಪ್ರಮಾಣದಲ್ಲಿ, ಮದ್ಯಸಾರವನ್ನು ತಯಾರಿಸುವರು.
ಗೋವಾದಲ್ಲೂ ‘ಕ್ಯಾಶ್ಯೂ ಆಪಲ್ ಜ್ಯೂಸ್’ (ಮದ್ಯಸಾರ ರಹಿತ) ತಯಾರಿ ನಡೆದಿದ್ದು, ಸೀಮಿತ ಯಶಸ್ಸು ಗಳಿಸಿದೆ.ಮಹಾರಾಷ್ಟ್ರದ ಪ್ರಯತ್ನ ಮಹಾರಾಷ್ಟ್ರದಲ್ಲಿ ಗೋಡಂಬಿ ಬೆಳೆ ಸಾಕಷ್ಟು ಇದೆ. ಕೊಲ್ಹಾಪುರದ ಚಾಂದ್‌ಗಡ್ ಪ್ರದೇಶದಲ್ಲಿ 3000 ಹೆಕ್ಟೇರ್ ಗೋಡಂಬಿ ತೋಟವನ್ನು ಹೊಂದಿರುವ ಡಾ.ಸಂಜಯ್ ಪಾಟೀಲ್ ಎಂಬುವವರು, ಗೇರು ಹಣ್ಣಿನ ಸಿರಪ್ ಮತ್ತು ಜ್ಯೂಸ್ ತಯಾರಿಸಿ ಮಾರುತ್ತಿದ್ದಾರೆ.
ಇದೇ ರೀತಿ ಮಹಾರಾಷ್ಟ್ರದ ಸಿಂಧುದುರ್ಗ, ಕೊಂಕಣ ಪ್ರದೇಶದ ಹಲವರು ಗೋಡಂಬಿ ಹಣ್ಣಿನ ಜ್ಯೂಸ್ ತಯಾರಿಸಿ, ಮಾರಿದ್ದಾರೆ. ಆದರೆ, ‘ಕ್ಯಾಶ್ಯೂ ಆಪಲ್ ಜ್ಯೂಸ್’ ಎಂಬ ಪ್ರಸಿದ್ಧ ಬ್ರ್ಯಾಂಡ್ ನೇಮ್ ರೂಪಿಸಲು ಅಗತ್ಯವಾದ ಸಂಘಟಿತ ಮಾರುಕಟ್ಟೆ, ಜಾಹೀರಾತು ಪರಿಣತಿಯನ್ನು ಅವರು ಸಾಧಿಸಿಲ್ಲ.
ಮನೆಯಲ್ಲೇ ಗೋಡಂಬಿ ಜ್ಯೂಸ್!
ಗೋಡಂಬಿ ಹಣ್ಣು ನೋಡಲು ಸುಂದರ, ರಸಭರಿತ. ಆದರೆ, ಅದರಲ್ಲಿರುವ ‘ಟ್ಯಾನಿನ್’ ಎಂಬ ಅಂಶದಿಂದಾಗಿ, ಗಂಟಲು ಕೆರೆಯುವ ಗುಣ ಆ ರಸಕ್ಕೆ ಇದೆ. ಅದನ್ನು ಪರಿಹರಿಸಿ, ಮನೆಯಲ್ಲೇ ಗೋಡಂಬಿ ಹಣ್ಣಿನ ಜ್ಯೂಸ್ ಹೀಗೆ ಮಾಡಬಹುದು: ಸಾಬಕ್ಕಿಯನ್ನು (ಸಾಗುದಾನಿ) ಪುಡಿ ಮಾಡಿಕೊಂಡು, ಒಂದು ಲೀಟರ್‌ನೀರಿಗೆ ಒಂದು ಚಮಚ (ಐದು ಗ್ರಾಂ) ಸೇರಿಸಿ, ಕುದಿಸಿ ಇಟ್ಟುಕೊಳ್ಳಬೇಕು.
ಗೋಡಂಬಿ ಹಣ್ಣಿನ ರಸಕ್ಕೆ, ಇದನ್ನು ಅಲ್ಪಪ್ರಮಾಣದಲ್ಲಿ ಮಿಶ್ರಣ ಮಾಡಿ ಸೆಟಲ್ ಆಗಲು ನಾಲ್ಕೈದು ತಾಸು ಬಿಡಬೇಕು; ಟ್ಯಾನಿನ್ ಅಂಶವು ತಳದಲ್ಲಿ ಶೇಖರವಾಗುತ್ತದೆ. ಮೇಲ್ಭಾಗದ ತಿಳಿಯಾದ ರಸವನ್ನು ಬೇರ್ಪಡಿಸಿ, ನೇರವಾಗಿ ಕುಡಿಯಬಹುದು. (ಇದು ಪ್ಲಾಂಟೇಶನ್ ಕಾರ್ಪೊರೇಶನ್ ಆಫ್ ಕೇರಳ ಸಂಸ್ಥೆಯ ಸರಳ ವಿಧಾನ; ಬೇರೆ ವಿಧಾನಗಳೂ ಇವೆ). ಈ ಗೋಡಂಬಿ ಜ್ಯೂಸ್‌ಗೆ ಸಕ್ಕರೆ ಬೆರೆಸುವ ಅವಶ್ಯಕತೆಯೂ ಇಲ್ಲ!
ಆದ್ದರಿಂದ, ಆರೋಗ್ಯಕ್ಕೂ ಪೂರಕ. 2007ರಿಂದಲೇ ಕೇರಳದಲ್ಲಿ ಜ್ಯೂಸ್ ತಯಾರಿ ನಮ್ಮ ದೇಶದ ಗೋಡಂಬಿ ಉತ್ಪಾದನೆಯಲ್ಲಿ ಕೇರಳ ಮುಂದಿದೆ. 2007ರಲ್ಲೇ ಖಾಸಗಿಯವರು ಕೇರಳದಲ್ಲಿ ಗೋಡಂಬಿ ಹಣ್ಣಿನ ರಸ ತೆಗೆಯಲು ಆರಂಭಿಸಿದ್ದರು. ಕಣ್ಣೂರು ಜಿಲ್ಲೆಯ ಟೋಮಿಚ್ಚನ್ ಎಂಬುವವರು, ದೇಶದಲ್ಲೇ ಪ್ರಥಮ ಎನ್ನಲಾದ ಗೇರು ಹಣ್ಣಿನ ಜ್ಯೂಸ್ (ಮದ್ಯಸಾರ ರಹಿತ) ಉದ್ದಿಮ ಆರಂಭಿಸಿ, ವರ್ಷಕ್ಕೆ ಸುಮಾರು 50000 ಬಾಟಲಿಗಳನ್ನು ಮಾರಿದ್ದರು. ಇವರು ತಯಾರಿಸಿದ ಗೋಡಂಬಿ ಹಣ್ಣಿನ ಜ್ಯೂಸ್, ಒಮಾನ್ ದೇಶಕ್ಕೂ ಹಡಗಿನಲ್ಲಿ ರಫ್ತಾಗಿತ್ತು.
ಆದರೆ, ಜಿಎಸ್‌ಟಿ ಗೊಂದಲ, ಸ್ಥಳೀಯ ಪರವಾನಿಗೆಯ ಸಮಸ್ಯೆ ಮೊದಲಾದ ತೊಡಕುಗಳು ಎದುರಾಗಿ, ಗೋಡಂಬಿ ಜ್ಯೂಸ್ ಉದ್ದಿಮೆಯನ್ನು ಕ್ಷಿಚ್ಚಬೇಕಾಯಿತು. ಇಂತಹ ಹಲವು ಪ್ರಯತ್ನಗಳು ಸಣ್ಣ ಮತ್ತು ಮಧ್ಯಮ ಗಾತ್ರದಲ್ಲಿ ಕೇರಳದಲ್ಲಿ ನಡೆದಿದೆ.
ಸೋನ್ಸ್ ಫಾರ್ಮ್‌ನಿಂದ ರಿಯಲ್ ಜ್ಯೂಸ್!
ಮಂಗಳೂರು ಸನಿಹದ ಮೂಡಬಿದ್ರೆಯ ಸೋನ್ಸ್ ಫಾರ್ಮ್ʼನಲ್ಲಿ ನಾನಾ ರೀತಿಯ ಕೃಷಿ ಪ್ರಯೋಗಗಳು ಹಲವು ದಶಕಗಳಿಂದ ನಡೆದಿವೆ. ಎರಡು ದಶಕಗಳ ಹಿಂದಿನಿಂದಲೂ ಅಲ್ಲಿ ಗೋಡಂಬಿ ಹಣ್ಣಿನ ಜ್ಯೂಸ್ ತಯಾರಿಕೆ ನಡೆದಿದ್ದು, ಸಾಧ್ಯತೆ ತೋರಿಸಲಷ್ಟೇ, ಕಡಿಮೆ ಪ್ರಮಾಣದಲ್ಲಿ ಮಾಡಿದ್ದಾರೆ, ಹೆಚ್ಚಿನ ಪ್ರಚಾರ ನೀಡಿಲ್ಲ. ವರ್ಷಕ್ಕೆ ಸುಮಾರು ಒಂದೆರಡು ಸಾವಿರ ಬಾಟಲಿ ಮಾರುತ್ತಿದ್ದಾರೆ. ಇವರ ವಿಶೇಷವೆಂದರೆ, ಯಾವುದೇ ಬಣ್ಣ ಬರೆಸದೇ, ಕೃತಕ ರಾಸಾಯನಿಕ ಬೆರೆಸದೇ, ರುಚಿಕರ ಕ್ಯಾಶ್ಯೂ ಆಪಲ್ ಜ್ಯೂಸ್ ತಯಾರಿಸಿದ್ದಾರೆ!
“ಸಕ್ಕರೆ, ಸಂರಕ್ಷಕ (ಪ್ರಿಸರ್ವೇಟಿವ್), ಎಸೆನ್ಸ್ ಮತ್ತು ಬಣ್ಣ, ಇದು ಹೆಚ್ಚಾಗಿ ಸಾಫ್ಟ್ ಡ್ರಿಂಕಿನ ಜತೆ ಸೇರಿಕೊಳ್ಳುವ ಇತರ ಒಳಸುರಿಗಳು. ಇಂಥವು ಏನನ್ನೂ ಸೇರಿಸದ ಸೋನ್ಸ್ ಫಾರ್ಮ್ ತಯಾರಿಸುವಂತಹದನ್ನು ಗೇರು ಹಣ್ಣಿನ ‘ರಿಯಲ್ ಜ್ಯೂಸ್’ ಎಂದು ಕರೆಯೋಣ. ಇದು ಬಹುತೇಕ ಕ್ಲಿಯರ್, ಅಂದರೆ ಹೆಚ್ಚು ಕಮ್ಮಿ ಪಾರದರ್ಶಕ ಅಥವಾ ಬಿಳಿ ಬಣ್ಣದ ನಸು ಛಾಯೆ ಹೊಂದಿರುತ್ತದೆ. ಸಕ್ಕರೆ ಮತ್ತು ಹೆಚ್ಚಿನ ಸಂಸ್ಕರಣೆಯನ್ನು ದೂರವಿಡುವ ಆರೋಗ್ಯ ಪ್ರಜ್ಞೆಯ ವಿಭಾಗ ಹೆಚ್ಚುತ್ತಿರುವುದರಿಂದ, ‘ರಿಯಲ್ ಜ್ಯೂಸ್’ಗೆ ಒಳ್ಳೆಯ ಭವಿಷ್ಯ ವಿದೆ." (ಕೃಪೆ: ‘ಅಡಿಕೆ ಪತ್ರಿಕೆ’ಯ ವರದಿ)
ಬ್ರೆಸಿಲ್‌ನಲ್ಲಿ ಜ್ಯೂಸ್
ಗೋಡಂಬಿಯ ಮೂಲ ದಕ್ಷಿಣ ಅಮೆರಿಕ. ಪೋರ್ಚುಗೀಸ್ ದೇಶದವರು ಆ ಪ್ರದೇಶವನ್ನು ವಶಪಡಿಸಿಕೊಂಡ ನಂತರ, ನಮ್ಮ ದೇಶಕ್ಕೆ ಬರುವಾಗ ಗೋಡಂಬಿ ಮತ್ತು ಇತರ ಹಲವು ಸಸ್ಯಗಳನ್ನು ತಂದರು. ನಂತರ ಈ ಸಸ್ಯವು ಆಫ್ರಿಕಾ ಖಂಡಕ್ಕೂ ಹೋಯಿತು. ಇಂದು ಜಗತ್ತಿನ ಅತಿ ಹೆಚ್ಚು ಗೋಡಂಬಿ ಉತ್ಪಾದಿಸುವ ದೇಶದಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ; ಮೊದಲ ಸ್ಥಾನವು ಐವರಿ ಕೋಸ್ಟ್‌ದು. ತಾಂಜಾನಿಯಾ, ನೈಜೀರಿಯಾ, ದಕ್ಷಿಣ ಅಮೆರಿಕದ ಬ್ರೆಸಿಲ್, ಇಂಡೋನೇಷ್ಯಾ ಮೊದಲಾದ ದೇಶಗಳೂ ಸಾಕಷ್ಟು ಗೋಡಂಬಿ ತಯಾರಿಸುತ್ತವೆ.
ಇವುಗಳ ಪೈಕಿ, ಗೋಡಂಬಿ ಹಣ್ಣಿನ ರಸವನ್ನು, ಪಲ್ಪ್‌ನ್ನು ವಾಣಿಜ್ಯಕವಾಗಿ ಬಳಸುವಲ್ಲಿ ಬ್ರೆಸಿಲ್ ಮುಂಚೂಣಿಯಲ್ಲಿದೆ. ಆ ದೇಶದಲ್ಲಿ ಗೋಡಂಬಿ ಹಣ್ಣಿನ ಜ್ಯೂಸ್ ಸಾಕಷ್ಟು ಜನಪ್ರಿಯ ಮತ್ತು ‘ಕಾಜುಈನ’ ಎಂಬ ಬ್ರ್ಯಾಂಡ್ ಹೆಸರು ಅದಕ್ಕಿದೆ; ‘ಪ್ರವಾಸಿಗಳು ಕುಡಿಯಲೇಬೇಕಾದ ಹಣ್ಣಿನ ರಸ ಇದು’ ಎಂಬ ಪ್ರಚಾರವನ್ನೂ ಅಲ್ಲಿ ಮಾಡಲಾಗಿದೆ.