ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಮನಸ್ಸು ಹಗುರವಾಗಿಸಿಕೊಂಡು ಮುಖದ ಮೇಲೊಂದು ಸಮಾಧಾನದ ನಗೆ ಬೀರಿದೆ. ಹೀಗೆ ಒಂದು ದಿನ ಬರೀ ಯೋಜನೆ ಹಾಕಿಕೊಳ್ಳುವುದರಲ್ಲೇ ಕಳೆದೆ. ಆದರೂ ಸ್ವಲ್ಪಮಟ್ಟಿಗೆ ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನವಂತೂ ಇದ್ದೇ ಇತ್ತು. ಮಚಲಿ ಪಟ್ಟಣದ ಕಾರ್ಯಕ್ರಮದಲ್ಲಿ ಜನರನ್ನು ನಗೆಗಡಲಿನಲ್ಲಿ ತೇಲಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವೆ ಎಂದು ಮಾತು ಕೊಟ್ಟಿದ್ದೇನೆ.

ಬ್ರಹ್ಮಾನಂದಂ

ಕನ್ನಡಕ್ಕೆ: ವಿಶ್ವೇಶ್ವರ ಭಟ್

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ತೆಲುಗು ಚಿತ್ರ ನಟ ಬ್ರಹ್ಮಾನಂದಂ ಅವರು ಶಿಕ್ಷಕ ರಾಗಿದ್ದು ಕೊಂಡೇ, ನಟನೆಯನ್ನು ಕೈಗೆತ್ತಿಕೊಂಡು ಯಶಸ್ಸನ್ನು ಕಂಡರು. ಹಾಸ್ಯ ನಟರಾಗಿ ಅವರು ತೆಲುಗು ಚಿತ್ರರಂಗದಲ್ಲಿ ದಾಖಲೆಯನ್ನೇ ಬರೆದರು. ಅದಕ್ಕಿಂತಲೂ ಮಿಗಿಲಾಗಿ, ಜನರನ್ನು ನಗಿಸಿದರು, ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು! ಬೇರೆಯವರನ್ನು ನಗಿಸುವ ಕಲೆಯನ್ನು ಜನ್ಮದಿಂದಲೇ ಕಲಿತು ಬಂದವರಂತೆ, ತಮ್ಮ ಸುತ್ತಲಿನ ಎಲ್ಲರನ್ನೂ ನಗಿಸಿ, ವಾತಾವರಣದಲ್ಲಿ ಸಂತಸ ವನ್ನೇ ತುಂಬಿದರು. ಇವರ ನಗಿಸುವ ಕಲೆ ಎಷ್ಟು ಉನ್ನತಮಟ್ಟ ದಲ್ಲಿತ್ತೆಂದರೆ, ತೆಲುಗು ಭಾಷೆಯಲ್ಲಿ ಎಂ.ಎ. ಪದವಿ ಪ್ರವೇಶ ಪಡೆಯಲು ನಡೆದ ಸಂದರ್ಶನದಲ್ಲಿ, ಸಂದರ್ಶಕರ ಸೂಚನೆಯ ಮೇರೆಗೆ ಮಿಮಿಕ್ರಿ ಮಾಡಿ, ಸಂದರ್ಶನಕ್ಕೆ ಕುಳಿತ ಪ್ರೊಫೆಸರ್ ಮತ್ತು ಅವರ ತಂಡವನ್ನೇ ನಗೆಯ ಕಡಲಿನಲ್ಲಿ ತೇಲಿಸಿದರು! ಬ್ರಹ್ಮಾನಂದಂ ಅವರು ತಮ್ಮ ಅನುಭವಗಳನ್ನು ಆತ್ಮಕಥೆಯಾಗಿ ಸೊಗಸಾಗಿ ಬರೆದು ಕೊಂಡಿದ್ದಾರೆ. ಅದರ ಕನ್ನಡ ಅನುವಾದವನ್ನು ವಿಶ್ವೇಶ್ವರ ಭಟ್ ಅವರು ಮಾಡಿದ್ದು, ‘ನಾನು ನಿಮ್ಮ ಬ್ರಹ್ಮಾನಂದಂ’ ಹೆಸರಿನ ಈ ಚಂದದ ಪುಸ್ತಕ ಇದೀಗ ಪ್ರಕಟಗೊಂಡಿದೆ. ಆ ಪುಸ್ತಕದ ಆಯ್ದ ಭಾಗಗಳು ಇಲ್ಲಿವೆ.

ಮತ್ತೊಂದು ಅನಿರೀಕ್ಷಿತ ಸವಾಲು ನನಗಾಗೇ ಕಾದು ಕುಳಿತ ಹಾಗಿತ್ತು ಆ ಸಂದರ್ಭ. ಏನೇ ಆಗಲಿ ಪ್ರದರ್ಶನ ನೀಡಲೇಬೇಕು, ಸರಿ ಅದಕ್ಕೆ ತಕ್ಕಂತೆ ನನ್ನ ಯೋಜನೆ ಹೀಗಿತ್ತು. ೧. ಮಧ್ಯಾಹ್ನದೊಳಗಾಗಿ ಕ್ಲಾಸ್ ಮುಗಿಸಬೇಕು. ೨. ನಂತರ ಭೀಮಾವರಂ ಬಸ್ ಹಿಡಿಯು ವುದು. ೩. ಅಲ್ಲಿಂದ ಭೀಮಾವರಂಗೆ ಹೋಗಲು ಇನ್ನೊಂದು ಬಸ್ ಹಿಡಿಯುವುದು. ೪. ನ್ಯಾಶನಲ್ ಕಾಲೇಜಿನಲ್ಲಿ ಪ್ರದರ್ಶನ ನೀಡುವುದು. ೫. ಸಂಭಾವನೆ ತೆಗೆದುಕೊಳ್ಳುವುದು. ೬.ಕಾರ್ಯಕ್ರಮ ಮುಗಿಸಿ ಅತ್ತಿಲಿಗೆ ಮರಳಿ ಲಕ್ಷ್ಮೀಯೊಂದಿಗೆ ಚಿಕ್ಕಪುಟ್ಟ ಅನುಭವಗಳನ್ನು ಹಂಚಿಕೊಂಡು ಇಬ್ಬರು ನಗುವುದು. ಹೀಗೆ ಮನಸ್ಸಿನ ಏನೇನೋ ಯೋಜನೆ ಹಾಕಿಕೊಂಡೆ.

ಮನಸ್ಸು ಹಗುರವಾಗಿಸಿಕೊಂಡು ಮುಖದ ಮೇಲೊಂದು ಸಮಾಧಾನದ ನಗೆ ಬೀರಿದೆ. ಹೀಗೆ ಒಂದು ದಿನ ಬರೀ ಯೋಜನೆ ಹಾಕಿಕೊಳ್ಳುವುದರಲ್ಲೇ ಕಳೆದೆ. ಆದರೂ ಸ್ವಲ್ಪಮಟ್ಟಿಗೆ ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನವಂತೂ ಇದ್ದೇ ಇತ್ತು. ಮಚಲಿ ಪಟ್ಟಣದ ಕಾರ್ಯಕ್ರಮದಲ್ಲಿ ಜನರನ್ನು ನಗೆಗಡಲಿನಲ್ಲಿ ತೇಲಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವೆ ಎಂದು ಮಾತು ಕೊಟ್ಟಿದ್ದೇನೆ. ಇದಕ್ಕೆ ಪ್ರತಿಯಾಗಿ ನನಗೆ ಸಂಭಾವನೆಯ ರೂಪ ದಲ್ಲಿ ಸಿಗುವ ಮೊತ್ತ ಹದಿನೈದು ನೂರು ರುಪಾಯಿಗಳು. ಅಂದರೆ ನನ್ನ ನಾಲ್ಕು ತಿಂಗಳ ಸಂಬಳಕ್ಕೆ ಸಮ. ಒಂದು ಕಡೆ ಕೊಟ್ಟ ಮಾತನ್ನುಉಳಿಸಿಕೊಳ್ಳುವ ಹಂಬಲ, ಮತ್ತೊಂದೆಡೆ ಹದಿನೈದು ನೂರು ರುಪಾಯಿಗಳ ದೊಡ್ಡ ಮೊತ್ತ ಪಡೆಯುವ ಅನಿವಾರ್ಯತೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದೆಂಬ ನಿರ್ಧಾರ ಗಟ್ಟಿಯಾಗಿತ್ತು. ಕಾರ್ಯಕ್ರಮ ಇದ್ದ ದಿನ ಬೆಳಗ್ಗೆ ಲಘು ಉಪಾಹಾರ ಸೇವಿಸಿ ಬೇಗನೆ ಮನೆಯಿಂದ ಹೊರಟೆ. ಅವಸರವಾಗಿ ಹೆಜ್ಜೆ ಇಡುತ್ತ ಅತ್ತಿಲಿ ಕಾಲೇಜು ತಲುಪಿದೆ. ನಾನು ಈ ದಿನ ಕಾಲೇಜಿಗೆ ಬರುವುದೇ ಇಲ್ಲ ಎಂದುಕೊಂಡಿದ್ದ ನನ್ನ ಸಹೋದ್ಯೋಗಿ ವೈರಿಗಳು ಎಂದಿಗಿಂತ ಸ್ವಲ್ಪ ಬೇಗನೆ ಬಂದು ನನ್ನ ಕೆಲಸಗಳನ್ನು ಲಗುಬಗೆಯಿಂದ ಮಾಡುತ್ತಿದ್ದ ನನ್ನನ್ನು ನೋಡಿ ಅಚ್ಚರಿಯಾಗಿದ್ದರಷ್ಟೇ ಅಲ್ಲ, ಕಸಿವಿಸಿಗೊಂಡಿದ್ದರು ಕೂಡ. ನಾನು ಕಾಲೇಜಿಗೆ ಖಂಡಿತ ಬರುವುದಿಲ್ಲ, ಇದೇ ಸಮಯ ಸಾಧಿಸಿ ಆಡಳಿತ ಮಂಡಳಿಗೆ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಬೇಕೆಂದುಕೊಂಡಿದ್ದ ಅವರ ಯೋಜನೆ ಯೆಲ್ಲ ಬುಡಮೇಲಾಗುತ್ತಿದ್ದುದನ್ನು ತಮ್ಮ ಕಣ್ಣುಗಳಿಂದ ನೋಡಲು ಆಗದೇ ಚಡಪಡಿಸಿಬಿಟ್ಟಿದ್ದರು. ಈ ಹಗೆ ಎನ್ನುವುದು ಮನುಷ್ಯ ರನ್ನು ನೆಮ್ಮದಿಯಿಂದ ಇರಲು ಬಿಡುವುದಿಲ್ಲ ನೋಡಿ. ಅಂದು ಬೇಕೆಂದೇ ಹೆಚ್ಚಿನ, ಅನವಶ್ಯ ಕೆಲಸಗಳನ್ನು ನನ್ನ ಮೇಲೆ ಹೇರಿ ಇದನ್ನು ಇವತ್ತೇ ಮಾಡಬೇಕು ಎಂದು ಹೇಳಿದರು. ನಾನು ನಾಳೆ ಮಾಡಬಹುದಲ್ಲ ಎಂದು ವಿನಂತಿಸಿಕೊಂಡಿದ್ದಕ್ಕೆ ‘ಕಾಲೇಜಿನ ಕೆಲಸಕ್ಕಿಂತ ವೈಯಕ್ತಿಕ ಕೆಲಸವೇ ನನಗೆ ಹೆಚ್ಚಾಯಿತು’ ಎಂಬ ಧಾಟಿಯಲ್ಲಿ ಕುಹಕವಾಡಿ ದರು. ನಾನು ಪ್ರತಿಯಾಗಿ ವಾದಿಸಲಿಲ್ಲ. ನಾನೇನೋ ಮಾತನಾಡುವುದು, ಅದಕ್ಕೆ ಅವರೊಂದು ಹೇಳುವುದು, ಇದೆಲ್ಲ ನನಗೆ ಬೇಡವಾಗಿತ್ತು. ಅವರು ಕೊಟ್ಟ ಪತ್ರಿಕೆಗಳ ಎಲ್ಲ ಕೆಲಸವನ್ನು ಆದಷ್ಟು ಬೇಗ ಮುಗಿಸಿ ಪಾಠ ಮಾಡಬೇಕಿದ್ದ ತರಗತಿಗೆ ತೆರಳಿದೆ. ಕ್ಲಾಸ್ ಮುಗಿಸಿ ಕಾಲೇಜಿನಿಂದ ಹೊರಟಾಗ ಸಮಯ ಸುಮಾರು ಮಧ್ಯಾಹ್ನದ ಹನ್ನೆರಡೂವರೆ.

ಇದನ್ನೂ ಓದಿ: Vishweshwar Bhat Column: ಅಮೆರಿಕ ಮತ್ತು ಇರಾನ್‌ ಯುದ್ಧಕ್ಕೂ, ಬಿಯರ್‌ ಬಾಟಲಿಗೂ ಏನು ಸಂಬಂಧ ?

ಮಿಸ್ಸಾದ ಬಸ್!

ಸಂಜೆಯಾಗುವುದರೊಳಗಾಗಿ ಮಚಲಿಪಟ್ಟಣಂ ಸೇರಬೇಕಿತ್ತು. ಹಾಕಿಕೊಂಡ ಯೋಜನೆಯ ಪ್ರಕಾರ ಮೊದಲ ಹಂತ ಯಶಸ್ವಿ. ಇನ್ನು ಭೀಮಾವರಂ ಬಸ್ಸು ಹಿಡಿಯುವುದು. ನನ್ನ ಶಕ್ತಿ ಮೀರಿ ದಾಪುಗಾಲು ಇಟ್ಟು ಸಮೀಪದ ಬಸ್ ನಿಲ್ದಾಣ ತಲುಪಿದೆ. ಬಸ್ ನಿಲ್ದಾಣಕ್ಕೆ ಆಗಷ್ಟೇ ತಲುಪಿದ್ದೆ, ಭೀಮಾವರಂ ಬಸ್ಸು ಅನತಿ ದೂರದಲ್ಲಿದ್ದಾಗಲೇ ಹೊರಟೇ ಬಿಟ್ಟಿತು. ಅಯ್ಯೋ ವಿಧಿಯೆ! ಮನಸ್ಸಿನ ಗೊಣಗಿದೆ.

ಕಣ್ಣಮುಂದೆಯೇ ಭೀಮಾವರಂಗೆ ಹೋಗುವ ಬಸ್ಸನ್ನು ತಪ್ಪಿಸಿಕೊಂಡಿದ್ದೆ. ಇನ್ನು ಮುಂದಿನ ಬಸ್ಸು ಹೊರಡಲು ಕಡಿಮೆಯೆಂದರೂ ಎರಡು-ಮೂರು ಗಂಟೆ ಕಾಯಬೇಕಿತ್ತು. ಮುಂದಿನ ಬಸ್ ಹಿಡಿದು ಮಚಲಿಪಟ್ಟಣಂ ಕಾರ್ಯಕ್ರಮಕ್ಕೆ ಹಾಜರಾಗುವುದು ಸಾಧ್ಯವೇ ಇರಲಿಲ್ಲ.

ಒಂದೇ ಸಂಜೆಯಲ್ಲಿ ನನ್ನ ಸಂಬಳದ ನಾಲ್ಕು ಪಟ್ಟು ಸಂಪಾದನೆಯನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಏನು ಮಾಡಬೇಕೆಂದು ತೋಚದೇ ಚಡಪಡಿಸುತ್ತ ನಿಂತೆ. ಬೇರೆ ಯಾವ ದಾರಿಯಿದೆ ಎಂದು ತಲೆಕೆಡಿಸಿಕೊಳ್ಳುತ್ತ ಉದ್ವಿಗ್ನ ಮನಸ್ಕನಾಗಿ ನಿಂತಿದ್ದೆ.

‘ಆಕಿವೀಡು! ಆಕಿವೀಡು!’ ಎಂದು ದೂರದಿಂದ ಬೊಬ್ಬೆ ಹೊಡಿದವರಂತೆ ಧ್ವನಿ ಕೇಳಿಸಿತು. ಹೊಡೆದದ್ದು ಬೊಬ್ಬೆಯಾಗಿದ್ದರು ನಾನಿದ್ದ ಆ ಭಯಂಕರ ಸ್ಥಿತಿಯಲ್ಲಿ ಅದು ನನಗೆ ಸಂಗೀತದಂತೆ ಕೇಳಿಸಿತು. ತಿರುಗಿ ನೋಡಿದರೆ ‘ಆಕಿವೀಡು’ಗೆ ಒಂದು ಮೆಟಡೋರ್ ಹೊರಟಿತ್ತು. ಡ್ರೈವರ್ ನಾನು ನಿಂತಿದ್ದನ್ನು ಗಮನಿಸಿ ನನ್ನ ಹತ್ತಿರ ಗಾಡಿ ನಿಲ್ಲಿಸಿ ‘ಆಕಿವೀಡು’ ಎಂದಷ್ಟೇ ಹೇಳಿ ನನ್ನ ಪ್ರತಿಕ್ರಿಯೆಗಾಗಿ ಕಾಯ್ದ. ಸರಿ, ಆಕಿವೀಡು ತಲುಪಿ ಅಲ್ಲಿಂದ ಮಚಲಿಪಟ್ಟಣಂ ತಲುಪಿದರಾಯಿತು ಎಂದುಕೊಂಡು ‘ಹೌದು’ ಎಂದು ತಲೆ ಅಳ್ಳಾಡಿಸಿ ಒಳಗೆ ನುಸುಳಿದೆ. ಒಳಗೆ ಕೂಡಲು ಕೂಡ ಜಾಗವಿಲ್ಲದಷ್ಟು ಜನ. ನನ್ನ ಅದೃಷ್ಟಕ್ಕೆ ಇಷ್ಟಾದರೂ ಸಿಕ್ಕಿತಲ್ಲ ಎನ್ನುತ್ತ ಅರ್ಧಂಬರ್ಧ ಸೀಟಿನಲ್ಲಿ ಹೇಗೋ ಒತ್ತಿ ಕುಳಿತೆ. ಈ ಮೆಟಡೋರ್ ನಿತ್ಯ ಅತ್ತಿಲಿಯಿಂದ ಆಕಿವೀಡಿಗೆ ಅಡ್ಡಾಡುತ್ತಿತ್ತು ಎಂದು ಆಮೇಲೆ ತಿಳಿಯಿತು.

ಗಾಡಿ ತುಂಬಿದ್ದರೂ ಇನ್ನು ಸ್ವಲ್ಪ ದುಡ್ಡು ಮಾಡಬೇಕೆಂಬ ಆಸೆಯಿಂದ ಇನ್ನಷ್ಟು ಪ್ರಯಾಣಿಕರನ್ನು ಗಾಡಿ ಹತ್ತಿಸಿಕೊಳ್ಳುವ ಚಿಂತೆಯಲ್ಲಿದ್ದ ಡ್ರೈವರ್. ನನಗೋ ಗಾಡಿ ಯಾವಾಗ ಹೊರಟೀತು ಎಂಬುದೇ ಚಿಂತೆ. ಕೊನೆಗೂ ಒಂದೆರಡು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೊರಟಿತು ನಮ್ಮ ಗಾಡಿ. ಈಗ ಮನಸ್ಸಿಗೆ ಸ್ವಲ್ಪ ನಿರಾಳವೆನಿಸಿತು.

ಬ್ರೇಕ್ ಹಾಕಿದ ಪುಷ್ಪಕ ವಿಮಾನ

ಗದ್ದಲದಿಂದ ತುಂಬಿದ ಗಾಡಿ ನನ್ನ ಪಾಲಿಗೆ ಆಗ ಪುಷ್ಪಕ ವಿಮಾನದಂತೆ ಕಂಡಿತು. ಸ್ವಲ್ಪ ದೂರ ಹೋಗಿದ್ದನಷ್ಟೇ ಇದ್ದಕ್ಕಿದ್ದಂತೆ ಜೋರಾಗಿ ಬ್ರೆಕ್ ಹಾಕಿದ. ನಾನು ಮುಗ್ಗರಿಸಿ ಡ್ರೈವರ್ ಸೀಟಿನ ಹಿಂಬದಿಗೆ ಅಪ್ಪಳಿಸಿದೆ. ನನ್ನ ಜತೆಗಿದ್ದ ಪ್ರಯಾಣಿಕರು ಕೋಪಗೊಂಡು ಡ್ರೈವರ್‌ಗೆ ಬೈಯತೊಡಗಿದರು. ಮುಂದೆ ರೈಲು ದಾಟಬೇಕಿದೆ ಅದಕ್ಕೆ ಬ್ರೇಕ್ ಹಾಕಿದೆ ಎಂದು ಪ್ರಯಾಣಿಕರಿಗಿಂತ ಜೋರಾಗಿ ಉತ್ತರಿಸಿದ ಡ್ರೈವರ್. ಇನ್ನು ರೈಲು ದಾಟುವುದಕ್ಕೆ ಮೊದಲೇ ಕಾಯುತ್ತ ನಿಂತ ಕಿಲೋಮೀಟರ್ ಉದ್ದದಲ್ಲಿ ಇದ್ದ ವಾಹನಗಳಲ್ಲಿ ನಮ್ಮ ವಾಹನವೇ ಕೊನೆಯದು. ನನಗ್ಯಾಕೋ ಇದು ಸರಿ ಕಾಣಲಿಲ್ಲ. ಮೆಟಡೋರ್ ಕೂಡ ಒಳ್ಳೆಯ ಕಂಡೀಷನ್‌ನಲ್ಲಿ ಇರಲಿಲ್ಲ. ಇಂಥ ಗಾಡಿಯಲ್ಲಿ ನಾನು ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ತಲುಪಲು ದೇವರಾಣೆ ಸಾಧ್ಯವಿಲ್ಲ ಎಂದುಕೊಂಡು ನನ್ನ ಅದೃಷ್ಟಕ್ಕೆ ಹಿಡಿ ಶಾಪ ಹಾಕುತ್ತ ಕೆಳಗಿಳಿದೆ. ಉಳಿದ ಪ್ರಯಾಣಿಕರು ಕೂಡ ನನ್ನನ್ನೇ ಹಿಂಬಾಲಿಸಿದರು. ಪರಿಸ್ಥಿತಿಯ ಕೈಗೊಂಬೆಯಾದ ನಾನು ಹುಚ್ಚು ಹಿಡಿದವನಂತೆ ಏನೇನೋ ಯೋಚಿಸುತ್ತ ನಿಂತಿದ್ದೆ.

ಅಷ್ಟರಲ್ಲಿ ರೇಲ್ವೆ ಗೇಟಿನ ಬಳಿ ಮಿಂಚುತ್ತಿದ್ದ ಕೆಂಪು ಬಣ್ಣದ ಕಾರು ಕಣ್ಣಿಗೆ ಬಿತ್ತು. ನನ್ನ ಹತ್ತಿರವೂ ಒಂದು ಕಾರು ಇದ್ದಿದ್ದರೆ ಇಷ್ಟೆಲ್ಲ ಅನುಭವಿಸಬೇಕಿಲ್ಲ ಎಂದು ಮನಸ್ಸಿನಲ್ಲಿ ಹೇಳಿಕೊಂಡೆ. ಕೂಡಲೆ ಏನೋ ಹೊಳೆದಂತಾಗಿ ಆ ಕಾರ್ ಹತ್ತಿರ ಹೋಗಿ ಡ್ರೈವರ್ʼಗೆ ವಿನಂತಿಸಿಕೊಂಡೆ. ಕಾರ್ ಎಲ್ಲಿಗಾದರೂ ಹೋಗಲಿ, ನಾನು ಮಚಲಿಪಟ್ಟಣಂ ಸಮೀಪದ ಗುಡಿವಾಡವರೆಗೂ ಹೋದರೆ ಸಾಕು, ಅಲ್ಲಿಂದ ಮಚಲಿಪಟ್ಟಣಂಗೆ ಹೇಗೋ ಹೋಗ ಬಹುದು ಎಂಬುದು ನನ್ನ ವಿಚಾರವಾಗಿತ್ತು. ನನ್ನನ್ನು ತಲೆಯಿಂದ ಬುಡದವರೆಗೆ ನೋಡಿ ‘ಇದು ಬಾಡಿಗೆ ಕಾರು’ ಎಂದು ಶುಭ್ರ ವಾದ ಖಾದಿ ಬಟ್ಟೆ ಹಾಕಿಕೊಂಡು, ಮ್ಯಾಗಜಿನ್ ಓದುತ್ತ ಕುಳಿತಿದ್ದ ಪ್ರಯಾಣಿಕರನ್ನು ತೋರಿಸುತ್ತ ಹೇಳಿದ ಡ್ರೈವರ್. ಅಂದುಕೊಂಡ ಯೋಜನೆ ಫಲಿಸದ್ದಕ್ಕೆ ಬೇಸರವಾಯಿತು. ಆ ಪ್ರಯಾಣಿಕರು ಕುತೂಹಲಕ್ಕಾಗಿ ‘ಏನು ನಡೆಯುತ್ತಿದೆ ಇಲ್ಲಿ’ ಎಂದು ಕೇಳಿದರು.

ಡ್ರೈವರ್ ಎಲ್ಲ ವಿವರಿಸಿದ. ಮುಂದಿನ ಸೀಟು ಹೇಗೂ ಖಾಲಿ ಇತ್ತು. ಎಲ್ಲವನ್ನು ತಾಳ್ಮೆ ಯಿಂದ ಕೇಳಿದ ಆ ಮಹಾನುಭಾವರು ಮುಂದಿನ ಸೀಟಿನಲ್ಲಿ ಕೂಡಬಹುದೆಂದು ಸಮ್ಮತಿಸಿ ದರು. ಅಬ್ಬ! ಮನಸ್ಸಿನಲ್ಲಿ ಮಂಡಿಗೆ ತಿಂದಷ್ಟು ಸಂತೋಷ. ಅವರ ಔದಾರ್ಯಕ್ಕೆ ಧನ್ಯ ವಾದ ಹೇಳುತ್ತ ಕಾರಿನಲ್ಲಿ ಕುಳಿತೆ. ರೇಲ್ವೆ ಗೇಟ್ ಕೂಡ ತೆರೆಯಿತು. ಕಾರು ರಾಕೆಟ್ ವೇಗದಲ್ಲಿ ಹೊರಟಿತು. ಹಿಂದೆ ಸೈಕಲ್ ವೇಗದಲ್ಲಿ ಒದ್ದಾಡುತ್ತ ಬರುತ್ತಿದ್ದ ಮೆಟಡೋರ್ ನೋಡನೋಡುತ್ತಿದ್ದಂತೆಯೇ ಮಾಯವಾಯಿತು. ಕೊನೆಗೂ ಅರ್ಧ ದಾರಿಯಲ್ಲಿ ಮೆಟಡೋರ್ ಧಿಕ್ಕರಿಸಿ ನನ್ನ ಅದೃಷ್ಟವನ್ನು ಪರೀಕ್ಷಿಸಿ, ಯಶಸ್ವಿಯಾಗಿ ಕಾರು ಹತ್ತಿದ್ದು ಸಾರ್ಥಕವೆನಿಸಿತು. ಹಿಂದೆ ಕುಳಿತ ಆ ಮಹಾನುಭಾವ ನಾನು ಹೋಗಬೇಕಿದ್ದ ಸ್ಥಳದ ಕುರಿತಾಗಿ ವಿಚಾರಿಸಿದರು. ತಕ್ಷಣ‘ಸರ್ ಮಚಲಿಪಟ್ಟಣಂಗೆ’ ಎಂದೆ. ಕೂಡಲೆ ಮುಂದುವರಿದು ‘ಗುಡಿವಾಡಗೆ ಬಿಟ್ಟರೆ ಸಾಕು,

ಮಂತ್ರಿ ಬಂದದ್ದರಿಂದ ದೇವರ ದರ್ಶನವಾಯಿತು!

ಪ್ರತಿ ಸಲ ತಿರುಮಲೆಗೆ ಹೋದಾಗ ಸಮರ್ಪಣಾ ಭಾವದಿಂದ ನಾನು ಆ ವೆಂಕಟೇಶ್ವರನಿಗೆ ವಂದಿಸುತ್ತೇನೆ. ನಮ್ಮ ಅಪ್ಪ-ಅಮ್ಮ ಒಂದು ಮಾತು ಹೇಳಿದ್ದನ್ನು ಇಲ್ಲಿ ಸ್ಮರಿಸಿ ಕೊಳ್ಳುತ್ತೇನೆ. ನಾನು ಬಹಳ ಚಿಕ್ಕವನಿದ್ದಾಗ ಒಮ್ಮೆ ತಿರುಪತಿ ವೆಂಕಟೇಶ್ವರನ ದೇವಸ್ಥಾನಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಷ್ಟು ಗದ್ದಲದಲ್ಲಿ ನನಗೆ ಸರಿಯಾಗಿ ದರ್ಶನ ಆಗುವುದಿಲ್ಲವೆಂದರಿತ ಅಪ್ಪ ನನ್ನನ್ನು ತಮ್ಮ ಹೆಗಲಿನ ಮೇಲೆ ಕೂರಿಸಿಕೊಂಡು ಆ ದಿವ್ಯ ವಿಗ್ರಹವನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದರು. ಬಹುಶಃ ದೇವರು ಅಪ್ಪನ ಹೆಗಲಿನ ಮೇಲೆಯೇನನ್ನನ್ನು ಹರಸಿದ್ದನೆಂದು ಕಾಣುತ್ತದೆ. ಇಡೀ ಜೀವನದ ತುಂಬ ವೆಂಕಟೇಶ್ವರ ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರೆಸಿ ಅನುಗ್ರಹಿಸಿದ. ಇದಾದ ಎಷ್ಟೋ ವರ್ಷಗಳ ನಂತರ ನಾನು ಚಿತ್ರೀಕರಣದ ನಿಮಿತ್ತ ತಿರುಪತಿಗೆ ಹೋಗುವ ಸಂದರ್ಭ ಒದಗಿ ಬಂತು. ಆಗ ನನ್ನಷ್ಟು ಖುಷಿಪಟ್ಟವರೇ ಯಾರು ಇರಲಿಕ್ಕಿಲ್ಲ. ಚಿತ್ರೀಕರಣವನ್ನೆಲ್ಲ ಮುಗಿಸಿ ಬಿಡುವು ಮಾಡಿಕೊಂಡು ತಿರುಮಲೆಗೆ ಹೋಗುವುದೆಂದು ನಿರ್ಧರಿಸಿದೆ. ಅಷ್ಟರಲ್ಲಿ ನಮ್ಮ ತಂಡದಲ್ಲಿದ್ದವರೊಬ್ಬರು ‘ನಮ್ಮ ಚಿತ್ರೀಕರಣವೆಲ್ಲ ಮುಗಿಯುವ ಹೊತ್ತಿಗೆ ದೇವಸ್ಥಾನದ ಬಾಗಿಲು ಹಾಕಿರುತ್ತದೆ’ ಎಂದು ಹೇಳಿದರು.

ನನಗೆ ತುಂಬ ಬೇಸರವಾಯಿತು. ಆದರೆ ಇದರಲ್ಲಿ ಹೊಸತೇನಿದೆ? ನನ್ನ ಜೀವನದಲ್ಲಿ ಈ ರೀತಿಯ ಅದೆಷ್ಟು ಅನಿರೀಕ್ಷಿತಗಳನ್ನು ನೋಡಿದವನು ನಾನು ಎಂದು ನಕ್ಕು ಸುಮ್ಮನಾದೆ. ಬಹುಶಃ ವೆಂಕಟೇಶ್ವರನಿಗೆ ಈಗ ನನ್ನ ಕರೆಸಿಕೊಳ್ಳುವ ಇಚ್ಛೆ ಇಲ್ಲ, ನಾಳೆ ಬೆಳಗ್ಗೆ ಹೋದ ರಾಯಿತು ಅಂದುಕೊಂಡು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಚಿತ್ರೀಕರಣಕ್ಕೆ ಸ್ವಲ್ಪ ಖಿನ್ನ ಮನಸ್ಕನಾಗಿಯೇ ಹೋದರೂ ದೇವರ ದಯೆಯಿಂದ ಚಿತ್ರೀಕರಣ ಸುಸೂತ್ರವಾಗಿ ಸಾಗಿತು. ನಿರ್ದೇಶಕರು ನನ್ನ ಕೆಲಸ ನೋಡಿ ಬಹಳ ಖುಷಿಪಟ್ಟರು. ಸರಿ, ಇನ್ನು ಮುಂಗಡ ವಾಗಿ ಕಾಯ್ದಿರಿಸಿದ ನನ್ನ ಕೋಣೆಗೆ ಹೋಗಬೇಕು ಎಂದುಕೊಂಡು ತಯಾರಾಗುತ್ತಿದ್ದೆ. ದೂರದಿಂದ ಕಾಣುತ್ತಿದ್ದ ಶೇಷಾದ್ರಿ ಬೆಟ್ಟದ ವಿಹಂಗಮ ನೋಟ ನನ್ನನ್ನು ಸೆಳೆಯುತ್ತಿತ್ತು. ಏನೂ ಪ್ರಯೋಜನವಿಲ್ಲ. ಇನ್ನೇನು ಹೊರಟಿದ್ದೆ, ಯಾರೋ ಬಂದು, ‘ಇಂದು ಯಾರೋ ಮಂತ್ರಿಗಳೊಬ್ಬರು ತಿಮ್ಮಪ್ಪನ ದರ್ಶನಕ್ಕೆ ಬರುತ್ತಿದ್ದಾರೆ. ಅದಕ್ಕೆ ಬಾಗಿಲು ಸ್ವಲ್ಪ ತಡವಾಗಿ ಹಾಕುತ್ತಾರಂತೆ’ ಎಂದು ಹೇಳಿದರು.

ಒಂದು ಕ್ಷಣ ಕೂಡ ತಡಮಾಡದೇ ಅಲ್ಲಿಂದ ಕಾಲ್ಕಿತ್ತೆ. ತಿಮ್ಮಪ್ಪನ ದೇವಸ್ಥಾನದ ಅಂಗಳ ವನ್ನು ಸಮೀಪಿಸುತ್ತಿದ್ದಂತೆ ನನ್ನ ದೇವರು ಕೊನೆಗೂ ನನ್ನ ತುಡಿತವನ್ನು ಅರ್ಥ ಮಾಡಿ ಕೊಂಡು ದರ್ಶನ ನೀಡಿದ ಎಂದುಕೊಳ್ಳುತ್ತ ಸಣ್ಣ ನಗೆ ನಕ್ಕು ಆ ಪರಮಾತ್ಮನ ದಿವ್ಯ ದರ್ಶನವನ್ನು ಪಡೆದೆ. ಮೊದಲ ಬಾರಿ ಒಂದು ಅಲೌಕಿಕ ಅನುಭವವಾಯಿತು.

(ಪುಟ 195)

ಬೆಳಗ್ಗೆ ಶಿಕ್ಷಕ ರಾತ್ರಿ ಮಿಮಿಕ್ರಿ ಕಲಾವಿದ!

ಬರಬರುತ್ತಾ ಒಂದೇ ಆದಾಯದಿಂದ ಮನೆ ನಡೆಸುವುದು ತುಂಬ ಕಷ್ಟವಾಗತೊಡಗಿತು. ತಿಂಗಳ ಸಂಬಳ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಇನ್ನೊಂದು ಆದಾಯದ ಮೂಲ ವನ್ನು ಕಂಡುಕೊಳ್ಳಲೇಬೇಕೆಂದು ನಿರ್ಧರಿಸಿದಾಗ ನನಗೆ ಹೊಳೆದಿದ್ದು ‘ಮಿಮಿಕ್ರಿ’ ಕಲೆ. ಮುಂಚೆ ಹೇಳಿದಂತೆ ಆಗ ಮಿಮಿಕ್ರಿ ಒಂದು ಹೊಸ ಪ್ರದರ್ಶನ ಕಲೆಯಾಗಿ ಬಹಳ ಬೇಡಿಕೆ ಯಲ್ಲಿತ್ತು. ತೆಲುಗಿನಲ್ಲಿ ಮಿಮಿಕ್ರಿ ಕಲಾವಿದರು ಅಷ್ಟಾಗಿ ಇರಲಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡ ನಾನು ಮಿಮಿಕ್ರಿ ಪ್ರದರ್ಶನಗಳನ್ನು ನೀಡಲಾರಂಭಿಸಿದೆ. ಒಂದೆರಡು ಕಾರ್ಯಕ್ರಮಗಳಾಗುತ್ತಿದ್ದಂತೆಯೇ ಅವಕಾಶಗಳ ಮಹಾಪೂರವೇ ಹರಿದು ಬಂತು. ಶಾಲೆ, ಕಾಲೇಜುಗಳಲ್ಲಿ, ಸಾಂಸ್ಕೃತಿಕ ಸಂಜೆಗಳಲ್ಲಿ ಮದುವೆಯಂಥ ಖಾಸಗಿ ಕಾರ್ಯಕ್ರಮಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಹೀಗೆ ಹಾಸ್ಯದ ಅವಶ್ಯಕತೆ ಇದ್ದೆಡೆಗೆಲ್ಲ ಕಾರ್ಯಕ್ರಮ ನೀಡಲಾ ರಂಭಿಸಿದೆ. ನನ್ನ ಪ್ರದರ್ಶನ ದಿನೇದಿನೆ ಒಳ್ಳೆಯ ಪ್ರಚಾರ ಪಡೆಯತೊಡಗಿತು. ಆಯೋ ಜಕರು ಕೂಡ ನನ್ನ ಕಲೆಗೆ ಮೆಚ್ಚಿ ಒಳ್ಳೆಯ ಸಂಭಾವನೆ ನೀಡುತ್ತಿದ್ದರು. ದಿನಗಳೆದಂತೆ ಮಿಮಿಕ್ರಿ ನನಗೆ ಹೆಸರು ತಂದುಕೊಟ್ಟಿತು. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ನನ್ನ ಪ್ರದರ್ಶನಕ್ಕೆ ಮುಂಚೂಣಿಯ ಪ್ರಾಧಾನ್ಯ ಇರುತ್ತಿತ್ತು. ವಿಜಯವಾಡ ಆಕಾಶವಾಣಿ ಕೇಂದ್ರದಲ್ಲಿ ಕೂಡ ನನ್ನ ಕಾರ್ಯ ಕ್ರಮ ಪ್ರಸಾರವಾಯಿತು. ವಿಶೇಷ ಅತಿಥಿಯಾಗಿ ಆಕಾಶವಾಣಿಯಲ್ಲಿ ನೀಡಿದ ಕಾರ್ಯಕ್ರಮ ದಿಂದ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಮಿಮಿಕ್ರಿಗಾಗಿ ನನಗೆ ನೂರಾರು ಅವಕಾಶಗಳು ಬರತೊಡಗಿದ್ದರೂ ನನ್ನ ಶಿಕ್ಷಕ ವೃತ್ತಿಯನ್ನೆಂದೂ ನಾನು ಕಡೆಗಣಿಸಿರಲಿಲ್ಲ. ಬೆಳಗ್ಗೆ ಒಬ್ಬ ಶಿಕ್ಷಕನಾಗಿ ವೃತ್ತಿಧರ್ಮವನ್ನು ನಿಭಾಯಿಸಿದರೆ ರಾತ್ರಿ ಒಬ್ಬ ಮಿಮಿಕ್ರಿ ಕಲಾವಿದನಾಗಿ ಜನರನ್ನು ಹೊಟ್ಟೆಹುಣ್ಣಾಗುವಂತೆ ನಗಿಸುತ್ತಿದ್ದೆ. ಏಕಕಾಲಕ್ಕೆ ಅನೇಕ ಕಾರ್ಯ ಮಾಡುವ ಸಾಹಸಕ್ಕೆ ಮತ್ತೆ ಕೈಹಾಕಿದ್ದೆ. (ಪುಟ 114)

ಪದ್ಮಶ್ರೀ ಪ್ರಶಸ್ತಿ ಬಂದಾಗ

2026-06-01 17_23_33-vishwavani-epaper-2026-05-31 (3).pdf and 5 more pages - Profile 1 - Microsoft​ E

ನಾಗಶೇಷುವನ್ನು ಮ್ಯಾನೇಜರ್ ಆಗಿ ನೇಮಕ ಮಾಡಿಕೊಂಡಿದ್ದು ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು. ಆತ ಚಿತ್ರೀಕರಣದ ದಿನಾಂಕಗಳನ್ನು ಕ್ರಮಬದ್ಧವಾಗಿ ಹೊಂದಿಸುತ್ತಿದ್ದರಿಂದಲೇ ನನಗೆ ಸಾಕಷ್ಟು ಚಿತ್ರೀಕರಣಗಳನ್ನು ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ಮಾಡಲು ಸಾಧ್ಯವಾಯಿತು. ಮುಖ್ಯವಾಗಿ ನನ್ನ ಕುಟುಂಬ ದೊಂದಿಗೆ ಕಾಲ ಕಳೆಯಲು ಸಾಕಷ್ಟು ಸಮಯ ಸಿಕ್ಕಿತು. ಹೀಗಾಗಿ ಮುಂಬರುವ ಚಿತ್ರಗಳ ದಿನಾಂಕಗಳು ಒಂದು ಕ್ರಮಬದ್ಧ ರೀತಿಯಲ್ಲಿ ಇರುತ್ತಿದ್ದವು.

‘ಬ್ರಹ್ಮಪುತ್ರುಡು’ ಚಿತ್ರೀಕರಣದ ಸಮಯದಲ್ಲಿ ನಡೆದ ಆ ಘಟನೆಯಿಂದ ನಾನಿನ್ನು ಸಂಪೂರ್ಣವಾಗಿ ಹೊರಬಂದಿದ್ದಿಲ್ಲ. ಒಂದು ಸುಳ್ಳು ಆರೋಪದಿಂದ ರಾಮಾನಾಯ್ಡು ಅಂಥ ದಿಗ್ಗಜರ ಬ್ಯಾನರ್‌ನಿಂದ ನಾನು ಹೊರಗೆ ಬಂದ ಸಂಗತಿ ದೊಡ್ಡ ಆಘಾತವೇ ಆಗಿತ್ತು. ಇದರಿಂದ ಸುರೇಶ್ ನಿರ್ಮಾಣ ಸಂಸ್ಥೆ ಮತ್ತು ನನ್ನ ನಡುವೆ ಒಂದು ಅಂತರ ಸೃಷ್ಟಿಯಾಗಿತ್ತು. ರಾಮಾನಾಯ್ಡು ದೊಡ್ಡ ಮನಸ್ಸಿನ ಮನುಷ್ಯ. ಈ ಬಿಕ್ಕಟ್ಟನ್ನು ಸರಿಪಡಿಸಲೆಂದೇ ವೆಂಕಟೇಶ್ ನಾಯಕ ನಟನಾಗಿ ಅಭಿನಯಿಸಿದ ಚಿತ್ರ ‘ಪ್ರೇಮ’ದಲ್ಲಿ ನನಗೆ ರಾಮಾನಾಯ್ಡು ಅವಕಾಶ ನೀಡಿದರು. ಅಲ್ಲಿಂದ ಸುರೇಶ್ ನಿರ್ಮಾಣ ಸಂಸ್ಥೆಯ ಬಹುಪಾಲ ಚಿತ್ರಗಳಲ್ಲಿ ಅಭಿನಯಿಸುವ ನನ್ನ ಚಿತ್ರ ಪಯಣ ಮುಂದುವರಿಯಿತು. ರಾಮಾನಾಯ್ಡು ಅವರ ದೊಡ್ಡತನಕ್ಕೆ ಇದೊಂದು ಸಾಕ್ಷಿ. ರಾಮಾನಾಯ್ಡು ಅವರ ಒಡನಾಟದ ಒಂದು ಆತ್ಮೀಯ ಸಂಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ ಈ ಪುಸ್ತಕ ಪೂರ್ಣವಾಗುವುದಿಲ್ಲ.

ನನಗೆ ‘ಪದ್ಮಶ್ರೀ’ ಪುರಸ್ಕಾರ ಸಿಕ್ಕ ಮೇಲೆ ಇಡಿ ಚಿತ್ರೋದ್ಯಮವೇ ಸಂಭ್ರಮಿಸಿ ಪ್ರಶಂಸೆಗಳ ಸರಿಮಳೆಯನ್ನೇ ಸುರಿಸಿತು. ರಾಮಾನಾಯ್ಡು ನನಗೆ ಕರೆ ಮಾಡಿ ಅಭಿನಂದಿಸಿದ ಮೊದಲ ವ್ಯಕ್ತಿ. ಪದ್ಮಶ್ರೀಯಂಥ ಶ್ರೇಷ್ಠ ಪ್ರಶಸ್ತಿ ದೊರೆತಿದ್ದರ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದ ರೀತಿಯನ್ನು ನಾನೆಂದು ಮರೆಯಲಾರೆ.

ನನ್ನನ್ನು ಶ್ಲಾಘಿಸುವುದಷ್ಟೇ ಅಲ್ಲದೆ ತಮ್ಮ ಮನೆಗೆ ನನಗೆ ಊಟಕ್ಕೆ ಆಮಂತ್ರಣ ನೀಡಿದರು. ನನಗೆ ನಂಬಲಿಕ್ಕಾಗಲಿಲ್ಲ. ಅವರು ನಿಜಕ್ಕೂ ಆಹ್ವಾನಿಸುತ್ತಿದ್ದಾರಾ ಎಂದುಮತ್ತೊಮ್ಮೆ ಖಚಿತಪಡಿಸಿಕೊಂಡೆ. ನನ್ನ ಮಾತಿಗೆ ನಕ್ಕು ‘ನೀನು ನಮ್ಮ ಹೆಮ್ಮೆ ಬ್ರಹ್ಮಾನಂದಂ. ಸಹಕುಟುಂಬವಾಗಿ ಮನೆಗೆ ಬಾ’ ಎಂದರು.

ಮರುದಿನ ಮಧ್ಯಾಹ್ನ ನಾನು ನನ್ನ ಸಂಸಾರದೊಂದಿಗೆ ರಾಮಾನಾಯ್ಡು ಅವರ ಮನೆಗೆ ಬಂದೆವು. ಮನೆಗೆ ಹೋಗುತ್ತಿದ್ದಂತೆ ಅವರ ಕುಟುಂಬದಿಂದ ಅದ್ದೂರಿ ಸ್ವಾಗತ ಸಿಕ್ಕಿತು. ಸಂಭ್ರಮವನ್ನು ಆಚರಿಸಲು ಮುಂಚಿತವಾಗಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿ ದ್ದರು. ಲಕ್ಷ್ಮೀ, ನಾನು ಮತ್ತು ಮಕ್ಕಳು ಊಟದ ಮೇಜಿನ ಮೇಲೆ ಕುಳಿತುಕೊಳ್ಳಲು ಅವರ ಮಕ್ಕಳಾದ ವೆಂಕಟೇಶ್ ಮತ್ತು ಸುರೇಶ್ ಇಬ್ಬರು ಅತ್ಯಂತ ಸೌಜನ್ಯದಿಂದ ನನ್ನನ್ನು ಅಭಿನಂದಿಸುತ್ತ ಮೇಜಿನವರೆಗೆ ನಮಗೆ ಕರೆದುಕೊಂಡು ಹೋದರು. ಅಂಥ ಶ್ರೀಮಂತ ಕುಟುಂಬ ಮನಸ್ಸು ಮಾಡಿದ್ದರೆ ಊಟ ಬಡಿಸಲು ಸಹಾಯಕರನ್ನು ನೇಮಿಸಿಕೊಳ್ಳುವು ದೇನು ದೊಡ್ಡ ವಿಷಯವೇನಲ್ಲ. ಆದರೆ ಅವರು ಸ್ವತಃ ನಮಗೆ ಅತ್ಯಂತ ಪ್ರೀತಿಯಿಂದ ಊಟ ಬಡಿಸಿದರು. ಆ ಕುಟುಂಬದ ಆತಿಥ್ಯ ನೋಡಿ ಕಲಿತುಕೊಳ್ಳುವ ಹಾಗಿತ್ತು. ವೆಂಕಟೇಶ್ ಮತ್ತು ಸುರೇಶ್ ನಿಜಕ್ಕೂ ತುಂಬ ವಿನಯವಂತ ಮಕ್ಕಳು. ನಾವು ಕೂಡ ಅವರ ಕುಟುಂಬ ದಲ್ಲಿ ಒಬ್ಬರು ಎನ್ನಿಸುವಂತೆ ಮಾಡಿತ್ತು ಅವರ ಪ್ರೀತಿ ಮತ್ತು ಆದರ. (ಪುಟ 135)

ವಿಶ್ವೇಶ್ವರ ಭಟ್‌

View all posts by this author