ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ವಿಶ್ವದಾಖಲೆ ಬರೆದ ಹಾಸ್ಯನಟನ ಆತ್ಮಕಥೆ

ತೆಲುಗು ಹಾಸ್ಯ ನಟ ಬ್ರಹ್ಮಾನಂದಂ, ತಮ್ಮ ಹಾಸ್ಯನಟನೆಯಿಂದ, ಪಡೆದ ಪ್ರಶಸ್ತಿಗಳಿಂದ, ನಟಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಇಂದು ಒಂದು ಜೀವಂತ ದಂತಕಥೆಯೇ ಆಗಿದ್ದಾರೆ. ಅವರ ಯಶಸ್ಸು ಅದಾವ ಮಟ್ಟದ್ದೆಂದರೆ, ಬ್ರಹ್ಮಾನಂದಂ ಅವರ ಪುಟ್ಟ ಪಾತ್ರವಾದರೂ ತಮ್ಮ ಸಿನಿಮಾ ದಲ್ಲಿರಬೇಕು ಎಂದು ತೆಲುಗು ನಿರ್ಮಾಪಕರು, ನಿರ್ದೇಶಕರು ಅವರ ಕಾಲ್'ಶೀಟ್‌ಗಾಗಿ ಕಾಯುತ್ತಿದ್ದರು! ಹಾಸ್ಯನಟ ನೊಬ್ಬನ ಅಸಾಧಾರಣ ಸಾಧನೆಯಿದು.

ನಮ್ಮ ನೆರೆಯ ರಾಜ್ಯದ ಹಾಸ್ಯನಟ ಬ್ರಹ್ಮಾನಂದಂ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರ ನಟನಾ ಕೌಶಲ್ಯದಿಂದಲೇ, ಅವೆಷ್ಟೋ ಚಲನಚಿತ್ರಗಳು ಯಶಸ್ಸು ಕಂಡಿವೆ. ಆದರೆ, ಬಡತ ನದ ಕುಟುಂಬದಲ್ಲಿ ಜನಿಸಿದ ಅವರ ಬದುಕು ಕಷ್ಟದಲ್ಲೇ ಸಾಗಿತ್ತು; ಸತತ ಪರಿಶ್ರಮ, ಛಲ, ಮುಂದುವರಿಯುವ ಆತ್ಮವಿಶ್ವಾಸ ಮತ್ತು ದೈವಕೃಪೆಯಿಂದಾಗಿ, ತಾನು ಯಶಸ್ಸನ್ನು ಕಂಡೆ ಎಂದು ಬ್ರಹ್ಮಾನಂದಂ ಅವರು ತಮ್ಮ ಈ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಈ ಪುಸ್ತಕವು ಇದೀಗ ಕನ್ನಡಕ್ಕೆ ಅನುವಾದಗೊಂಡಿದೆ.

ಯಶಸ್ವೀ ಚಲನಚಿತ್ರವೊಂದರ ಸ್ಟಾರ್ ನಟ ಪಡೆಯುವಷ್ಟೇ ಸಂಭಾವನೆಯನ್ನು, ಅದೇ ಚಿತ್ರದ ಹಾಸ್ಯನಟನೂ ಪಡೆಯುತ್ತಾನೆ! ಹಾಸ್ಯದ ಜತೆಯಲ್ಲೇ, ವಿಭಿನ್ನ ಪಾತ್ರಗಳನ್ನು ಮನೋಜ್ಞವಾಗಿ ನಟಿಸಬಲ್ಲ ತೆಲುಗು ನಟ ಬ್ರಹ್ಮಾನಂದಂ ಅವರ ತಾಕತ್ತು ಅಂತಹದ್ದು. ಅವರ ಆತ್ಮಕಥೆ ‘ನಾನು ನಿಮ್ಮ ಬ್ರಹ್ಮಾನಂದಂ’ ಓದುತ್ತಾ ಹೋದಂತೆ, ಸಾಧಾರಣ ಹಿನ್ನೆಲೆಯ ಒಬ್ಬ ವ್ಯಕ್ತಿ, ಸ್ವಪ್ರಯತ್ನ ದಿಂದ, ಸತತ ಪರಿಶ್ರಮದಿಂದ, ದೈವಕೃಪೆಯ ಬೆಂಬಲವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು, ಹೇಗೆ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂಬುದು ತೆರೆದು ಕೊಳ್ಳುತ್ತಾ ಹೋಗುತ್ತದೆ.

ತೆಲುಗು ಹಾಸ್ಯ ನಟ ಬ್ರಹ್ಮಾನಂದಂ, ತಮ್ಮ ಹಾಸ್ಯನಟನೆಯಿಂದ, ಪಡೆದ ಪ್ರಶಸ್ತಿಗಳಿಂದ, ನಟಿಸಿದ ಚಲನಚಿತ್ರಗಳ ಸಂಖ್ಯೆಯಿಂದ ಇಂದು ಒಂದು ಜೀವಂತ ದಂತಕಥೆಯೇ ಆಗಿದ್ದಾರೆ. ಅವರ ಯಶಸ್ಸು ಅದಾವ ಮಟ್ಟದ್ದೆಂದರೆ, ಬ್ರಹ್ಮಾನಂದಂ ಅವರ ಪುಟ್ಟ ಪಾತ್ರವಾದರೂ ತಮ್ಮ ಸಿನಿಮಾ ದಲ್ಲಿರಬೇಕು ಎಂದು ತೆಲುಗು ನಿರ್ಮಾಪಕರು, ನಿರ್ದೇಶಕರು ಅವರ ಕಾಲ್'ಶೀಟ್‌ಗಾಗಿ ಕಾಯು ತ್ತಿದ್ದರು! ಹಾಸ್ಯನಟನೊಬ್ಬನ ಅಸಾಧಾರಣ ಸಾಧನೆಯಿದು.

ಅನಿವಾರ್ಯ ಕಾರಣಗಳಿಂದ ತೆಲುಗು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು (ಅನಿವಾರ್ಯವೇಕೆಂದರೆ, ಅವರಿಗೆ ಬೇಕೆನಿಸಿದ ಇತರ ವಿಷಯಗಳನ್ನು ಆಯ್ದುಕೊಂಡು ವಿದ್ಯಾಭ್ಯಾಸ ನಡೆಸುವ ಅವಕಾಶ, ಆರ್ಥಿಕ ಬೆಂಬಲ ಅವರಿಗಿರಲಿಲ್ಲ!), ತಮ್ಮ ಆತ್ಮ ಕಥೆಯನ್ನು ತಾವೇ ಬರೆದಿದ್ದಾರೆ; ಅದು ಪ್ರಾಮಾಣಿಕವಾಗಿ ಮೂಡಿಬಂದಿರುವುದು ವಿಶೇಷ. ಅವರು ತೆಲುಗು ಭಾಷೆಯಲ್ಲಿ ಎಂ.ಎ. ಮಾಡಿದ್ದರಿಂದಾಗಿಯೇ ಇರಬಹುದು, ಆತ್ಮಕಥೆಯ ರಚನಾವಿನ್ಯಾಸ ಓದುಗರ ಮನಸೆಳಯುವಂತಿದೆ. ಅವರ ಆತ್ಮಕಥೆಯನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದವರು,

ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್ ಅವರು. ಹಾಸ್ಯನಟನೊಬ್ಬನ ಉತ್ತಮ ಆತ್ಮಕಥೆಯನ್ನು, ಯಶಸ್ಸಿನ ಹಾದಿಯ ಹೆಜ್ಜೆಗಳನ್ನು ಇಲ್ಲಿ ಕನ್ನಡದ ಓದುಗರು ಕಾಣಬಹುದು.

ಇದನ್ನೂ ಓದಿ: Shashidhara Halady Column: ಪರಿಸರ ದಿನದ ಪ್ರಲಾಪಗಳಿಗೆ ಕೊನೆ ಎಂದು ?

ಗಿನಿಸ್ ದಾಖಲೆ ವೀರ

ಬ್ರಹ್ಮಾನಂದಂ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಅತಿ ಹೆಚ್ಚು ಚಲನಚಿತ್ರ ನಟಿಸಿದ ದಾಖಲೆ ಅವರ ಹೆಸರಿನಲ್ಲಿದೆ ಮತ್ತು ಅದು ಗಿನಿಸ್ ದಾಖಲೆಗಳ ಪುಸ್ತಕದಲ್ಲಿ ನಮೂದಾಗಿದೆ. ಭಾರತ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಹಾಸ್ಯ ನಟರಲ್ಲಿ ಅವರು ಪ್ರಮುಖರು. ವಿಭಿನ್ನ ಪಾತ್ರ ಗಳಲ್ಲಿ ಸಹಜವಾಗಿ ಮತ್ತು ನಾಟಕೀಯವಾಗಿ ನಟಿಸಬಲ್ಲರು, ಪ್ರೇಕ್ಷಕರನ್ನು ನಗೆಯ ಕಡಲಿನಲ್ಲಿ ತೇಲಿಸಬಲ್ಲರು.

ಮಾತ್ರವಲ್ಲ, ‘ನಕ್ಕು ನಕ್ಕು ಸಾಯುವಂತೆ’ (ಅವರದೇ ಮಾತುಗಳು) ಮಾಡಬಲ್ಲರು! ಬ್ರಹ್ಮಾನಂದ ಅವರ ಆತ್ಮಕಥೆಯನ್ನೋದುತ್ತಾ ಹೋದಂತೆ, ಅವರ ಬಾಲ್ಯದ ಕಷ್ಟದ ದಿನಗಳು ಓದುಗನನ್ನೂ ಕಾಡುತ್ತವೆ. 1956ರಲ್ಲಿ ಜನಿಸಿದ ಇವರು, ಇವರ ತಂದೆ ತಾಯಿಗೆ ಎಂಟು ಮಕ್ಕಳಲ್ಲಿ ಒಬ್ಬರು! ಬಡತನದಲ್ಲೇ ಬದುಕು. ವಿದ್ಯಾಭ್ಯಾಸ ನಡೆಸಲು ಹೋರಾಟ. ಪ್ರಾಥಮಿಕ ಶಾಲೆಯಲ್ಲಿರುವಾಗಲೇ, ಟೆನಿಸ್ ಬಾಲ್ ಆಯುವ ಹುಡುಗನ ಕೆಲಸ ಮಾಡಿ, ಶಾಲಾ ಶುಲ್ಕವನ್ನು ಗಳಿಸಿದ ಧೀರ ಬಾಲಕ!

ತಾನೇ ದುಡಿದು, ವಿದ್ಯಾಭ್ಯಾಸ ಮಾಡಲು ಸಾಧ್ಯ ಎಂದು ಆ ಬಾಲ್ಯದ ಉದಾಹರಣೆಯು ಅವರಿಗೆ ಒಳ್ಳೆಯ ಪಾಠವನ್ನೇ ಕಲಿಸಿರಬೇಕು; ನಂತರ, ವಿದ್ಯಾರ್ಥಿಯಾಗಿದ್ದಾಗಲೂ ಹಲವು ಬಾರಿ ಸಣ್ಣಪುಟ್ಟ ಕೆಲಸ ಮಾಡಲು ಅವರು ಹಿಂಜರಿಯಲಿಲ್ಲ. ಅವರು ಎಂತೆಂತಹ ಕೆಲಸಗಳನ್ನು ಮಾಡಿದ್ದರೆಂದರೆ, ರಾತ್ರಿ ಹೊತ್ತು ಲಾರಿಗಳಿಗೆ ಬಣ್ಣ ಹಚ್ಚಿ ಹಣ ಗಳಿಸಿ, ವಿದ್ಯಾಭ್ಯಾಸಕ್ಕೆ ವಿನಿಯೋಗಿಸಿದ್ದರು!

ಇದೊಂದು ಕೆಲಸವನ್ನು, ತನ್ನ ಸಹ ಪಾಠಿಗಳಿಗೆ ಗೊತ್ತಾಗದಂತೆ ರಹಸ್ಯವಾಗಿ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೈ ಹಿಡಿದ ಮಿಮಿಕ್ರಿ

ತೆಲುಗು ಉಪನ್ಯಾಸಕ ಹುದ್ದೆಯನ್ನು ನಿರ್ವಹಿಸುವಾಗ, ಸಂಸಾರದ ಜವಾಬ್ದಾರಿಗಳಿಂದಾಗಿ, ತಿಂಗಳ ಕೊನೆಯಲ್ಲಿ ಹಣಕಾಸಿಗಾಗಿ ಪರದಾಡಬೇಕಾಗುತ್ತಿತ್ತು. ಆಗ ಇವರ ಕೈ ಹಿಡಿದದ್ದು, ಇವರಲ್ಲೇ ಅಂತರ್ಗತವಾಗಿದ್ದ ಒಂದು ಪ್ರತಿಭೆ : ಮಿಮಿಕ್ರಿ! ಅಂದಿನ ಸನ್ನಿವೇಶದಲ್ಲಿ ಮಿಮಿಕ್ರಿ ಕಲಾವಿದರಿಗೆ ಸಾಕಷ್ಟು ಬೇಡಿಕೆ ಇತ್ತು, ದೂರದ ಊರುಗಳಲ್ಲಿ ಮಿಮಿಕ್ರಿ ಮಾಡಿ, ಜನರನ್ನು ನಗಿಸುವಂತೆ ಆಹ್ವಾನ ದೊರಕುತ್ತಿತ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ನಂತರ, ದೂರದೂರುಗಳಿಗೆ ಹೋಗಿ ಮಿಮಿಕ್ರಿ ಮಾಡುತ್ತಿದ್ದರು. ಇದು ಶ್ರಮದ ಕೆಲಸ ನಿಜ. ಆದರೆ, ಇದರಿಂದಾಗಿ, ಹಾಸ್ಯ ಕ್ಷೇತ್ರದಲ್ಲಿ ಇವರಿಗಿದ್ದ ಪ್ರತಿಭೆಯು ಜಗತ್ತಿಗೆ ಗೋಚರಿಸಿತು.

ಮೊದಲಿಗೆ ಆಕಾಶವಾಣಿ, ನಂತರ ದೂರದರ್ಶನ, ನಾಟಕಗಳಲ್ಲಿ ಜನರನ್ನು ನಗಿಸಿದರು; ಇವರ ಅದ್ಭುತ ಶೈಲಿಯನ್ನು ಕಂಡು, ಚಲನಚಿತ್ರರಂಗ ಇವರನ್ನು ಆಹ್ವಾನಿಸಿತು. ಅಲ್ಲಿ ಇವರು ಮಾಡಿದ ದಾಖಲೆಗಳಿಗೆ ಲೆಕ್ಕವಿಲ್ಲ. ಕೆಲವು ಚಿತ್ರಗಳು ಯಶಸ್ಸು ಕಾಣುವುದಿಲ್ಲ ಎಂದು ಚಿತ್ರೀಕರಣ ನಡೆಯುವಾಗಲೇ ‘ಪಂಡಿತ’ರು ಭವಿಷ್ಯ ನುಡಿದಿದ್ದರೂ, ಇವರ ನಟನೆಯಿಂದಾಗಿ, ಗಲ್ಲಾಪೆಟ್ಟಿಗೆ ತುಂಬುತ್ತಿತ್ತು. ಚಿರಂಜೀವಿ ನಾಯಕ ನಟನಾಗಿ, ಇವರು ಹಾಸ್ಯನಟನಾಗಿ ಅಭಿನಯಿಸಿದ ‘ಇಂದ್ರ’ ದಂತಹ ಚಿತ್ರ ಗಳು ಜನರನ್ನು ರಂಜಿಸಿದವು, ಅಪಾರ ಯಶಸ್ವು ಗಳಿಸಿದವು.

ಇಂದು ಎಪ್ಪತ್ತರ ಹರೆಯದಲ್ಲಿರುವ ಬ್ರಹ್ಮಾನಂದಂ ಅವರದು ತೃಪ್ತ ಬದುಕು; ತಮ್ಮ ಆತ್ಮಕಥೆ ಯಲ್ಲಿ, ತಮ್ಮ ಯಶಸ್ಸಿಗೆ ಕಾರಣ ರಾದ ಪೋಷಕರು, ಅಣ್ಣಂದಿರು, ಬಂಧುಗಳು, ಮಡದಿ ಲಕ್ಷ್ಮಿ, ಸ್ನೇಹಿತರು, ಚಿತ್ರರಂಗದ ದಿಗ್ಗಜರು ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸಿ, ಧನ್ಯವಾದ ಹೇಳುವ ಅವರ ಸಜ್ಜನಿಕೆಯು, ಎಲ್ಲರಿಗೂ ಪಾಠವಾಗಬಲ್ಲದು.

ಇವರ ಆತ್ಮಕಥೆಯುದ್ದಕ್ಕೂ ಕಾಣಿಸುವ ಒಂದು ಪ್ರಧಾನ ಎಳೆಯು ಗಮನ ಸೆಳೆಯುತ್ತದೆ. ಅದೆಂದರೆ, ಅಧ್ಯಾತ್ಮದತ್ತ ಒಲವು ಮತ್ತು ದೇವರು ಬದುಕಿನುದ್ದಕ್ಕೂ ನೀಡಿದ ಸಹಕಾರ, ಒತ್ತಾಸೆಗಳ ಕುರಿತು ಕೃತಜ್ಞತೆ. ದೇವರ ಕೃಪೆಯಿಂದಾಗಿ, ಯಾವ ಸಂದರ್ಭಗಳಲ್ಲಿ ತಾನು ಬದುಕಿನಲ್ಲಿ ಸರಿಯಾಗಿ ಹೆಜ್ಜೆ ಹಾಕಲು ಸಾಧ್ಯವಾಯಿತು ಎಂದು ಹಲವು ಬಾರಿ ನಿವೇದಿಸಿಕೊಂಡಿದ್ದಾರೆ.

ಬಡವರೇ ಆಗಲಿ, ಸಿರಿವಂತರೇ ಆಗಲಿ, ಬದುಕಿನಲ್ಲಿ ದೈವಕೃಪೆಯಿದ್ದಾಗ, ನೆಮ್ಮದಿಯ ಬದುಕು ಸಾಧ್ಯ ಎಂಬುದು ಅವರ ಭಾವ. “ನನ್ನ ಈ ಯಶಸ್ಸಿಗೆ ನಾನೊಬ್ಬನೇ ಕಾರಣ ಎಂದು ನಾನು ನಂಬುವುದಿಲ್ಲ. ನನ್ನ ಜೀವನ ಅನೇಕ ವಿಸ್ಮಯಗಳ ಪಯಣ. ಇಂದು ನಾನು ನಾನಾಗುವಂತೆ ತೋರಿದ್ದೇ ಈ ವಿಸ್ಮಯಗಳು. . . ನನಗೆ ನನ್ನ ಕೆಲಸವೇ ದೇವರು. ನಾನು ಕಟ್ಟಿಕೊಂಡ ನಂಬಿಕೆಯ ಪ್ರಪಂಚವೇ ನನ್ನ ದೇವರು... ಮನುಷ್ಯ ಪ್ರಯತ್ನ ಮತ್ತು ದೈವಬಲ ಜತೆಜತೆಯಾಗಿದ್ದರೆ ಒಳ್ಳೆಯ ಫಲ ನಿಶ್ಚಿತ ಎಂಬುದು ನನ್ನ ಅಭಿಪ್ರಾಯ." (ಪುಟ 23) ಜತೆಯಲ್ಲೇ, ಅವರಿಗೆ ದೊರೆತ ತಿರುಪತಿಯ ದೇವರ ದರ್ಶನ, ವಾರಾಣಸಿಯಲ್ಲಿ ಚಿತ್ರೀಕರಣದ ಸಮಯದಲ್ಲೂ ದೇಗುಲದತ್ತ ಮುಖ ಮಾಡಿ ಭಕ್ತಿಯಿಂದ ನಮಿಸಿದ ದೈವಭಕ್ತಿ ಇಂತಹ ಹಲವು ಉದಾಹರಣೆಗಳನ್ನು ನೀಡುತ್ತಾ, ದೇವರು ತನ್ನ ಕೈ ಹಿಡಿದು ನಡೆಸಿದ್ದನ್ನು ಪುಸ್ತಕದುದ್ದಕ್ಕೂ ಸ್ಮರಿಸಿದ್ದಾರೆ.

ಚಲನಚಿತ್ರಗಳಲ್ಲಿ ಅವರ ಹಾಸ್ಯ ನಟನೆಯನ್ನು ಕಂಡಾಗ ಪ್ರೇಕ್ಷಕರ ಮನದಲ್ಲಿ ಮೂಡುವ ‘ಬ್ರಹ್ಮಾ ನಂದಂ’ ಬೇರೆ, ಆತ್ಮಕಥೆಯಲ್ಲಿ ಅವರೇ ಬರೆದುಕೊಂಡ 'ಬ್ರಹ್ಮಾನಂದಂ’ ಬದುಕಿದ ರೀತಿಯೇ ಬೇರೆ ಎಂದು ಓದುಗನು ಮನಗಂಡಾಗ, ದೇವರ ಕೃಪೆಯ ಕುರಿತು ಹಲವು ಬಾರಿ ಅವರು ನಿವೇದಿಸಿ ಕೊಂಡದ್ದು ಮುಖ್ಯ ಎನಿಸುತ್ತದೆ.

ನಮ್ಮ ನೆರೆಯ ರಾಜ್ಯದ, ಅಸಾಧಾರಣ ನಟನೊಬ್ಬನ ಈ ಚಂದದ ಆತ್ಮಕಥೆಯನ್ನೋದಿದಾಗ, ಚಿತ್ರರಂಗವನ್ನು ಮತ್ತು ನಟರ ಬದುಕನ್ನು ನಾವು ಗ್ರಹಿಸುವ ರೀತಿಯೇ ಬದಲಾಗ ಬಲ್ಲದು. ಇದೊಂದು ಉತ್ತಮ ಆತ್ಮಕಥೆ.

ಶಶಿಧರ ಹಾಲಾಡಿ

View all posts by this author