B K Meenakshi Column: ಎಲ್ಲರ ದೋಸೆಯೂ ಒಂದೇ ಬಣ್ಣ !
ಕಳೆದ ಬಾರಿ ಹಾಲಾಡಿ ಅಂತ ಬೋರ್ಡು ಓದಿಕೊಂಡು ಹೋಗಿದ್ದೆವು. ಈಗ ಇಳಿಯೋಣ ಅಂದುಕೊಳ್ಳು ತ್ತಲೇ ನೆನಪಾಯಿತು, ‘ಹಾಲಾಡಿಯ ದೋಸೆ ಹೋಟೆಲ್!’ ಶಶಿಧರ ಹಾಲಾಡಿಯವರು ಇದರ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದರು. ನಾವೂ ಈ ಹೋಟೆಲ್ ನಲ್ಲಿ ದೋಸೆ ತಿನ್ನಲೇಬೇಕೆಂದು ನಿರ್ಧರಿಸಿ ಇಳಿದೆವು. ಹಾಲಾಡಿಯ ಪುಟ್ಟ ಹೊಟೇಲ್, ಗುರು ಕ್ಯಾಂಟೀನ್ ಮುಂದೆ ಇಳಿದು, ಮೊದಲು ಸಾಕ್ಷಿಗೆ ಒಂದು ಫೋಟೋ ತೆಗೆಸಿಕೊಂಡೆವು. ಒಳಗೆ ಹೋಗಿ ನೋಡುತ್ತೇವೆ......ಈಷ್ಟುದ್ದ ಕ್ಯೂ ಇದೆ.


ಬಿ.ಕೆ.ಮೀನಾಕ್ಷಿ, ಮೈಸೂರು
ತಿಂಡಿಪೋತರಿಗೆ ರುಚಿರುಚಿ ತಿನಿಸುಗಳ ಕನಸು ಬೀಳುತ್ತಲೇ ಇರುತ್ತದೆ! ಬೆಣ್ಣೆ ಹಾಕಿದ ಮಸಾಲೆ ದೋಸೆಗಳು ಎಲ್ಲರ ತಟ್ಟೆಯಲ್ಲೂ ಒಂದೇ ಬಣ್ಣದಲ್ಲಿ ರಾರಾಜಿಸುವ ಒಂದು ಹೊಟೇಲ್‌ನಲ್ಲಿ ದೋಸೆ ತಿಂದ ಅನುಭವ ಇದು.
ಕರಾವಳಿಯ ಕಡೆಗೆ ಪ್ರವಾಸ ಹೋಗಿದ್ದೆವು. ಶಿವಮೊಗ್ಗದ ಮಾರ್ಗವಾಗಿ ಹೋಗಬೇಕೆಂಬುದು ನಮ್ಮೆಲ್ಲರ ಇಚ್ಛೆಯಾಗಿತ್ತು. ಆದರೆ ಡ್ರೈವರ್ ನಮಗೆ ಅರ್ಥವಾಗದ ಕಾರಣಗಳನ್ನು ಹೇಳಿ ಅವರಿಗೆ ಇಷ್ಟವಾದ ಅಥವಾ ಸುಲಭವಾದ ಮಾರ್ಗದಲ್ಲೇ ಕರೆದುಕೊಂಡು ಬಂದರು. ಮಂಗಳೂರನ್ನು ಹಾದು ಹೋಗುವಾಗ ಸಿಕ್ಕ ಸಿಕ್ಕ ಸಣ್ಣ ಪುಟ್ಟ ಊರುಗಳ ಹೆಸರುಗಳನ್ನು ಓದಿಕೊಳ್ಳುತ್ತಾ ಸಾಗು ತ್ತಿದ್ದೆವು.
ಯಾವುದಾದರೊಂದು ಊರು ಸಿಕ್ಕರೆ, ಆ ಊರನ್ನು ಅಂಟಿಸಿಕೊಂಡು ತಮ್ಮ ಹೆಸರನ್ನು ಬರೆದು ಕೊಳ್ಳುವ ಸಾಹಿತಿಗಳ ಹೆಸರು ನನಗೆ ನೆನಪಾಗುತ್ತಿತ್ತು. ಉದಾಹರಣೆಗೆ, ಹೆಬ್ರಿ ಸಿಕ್ಕಿತು; ಮಂಡ್ಯದ ಸಾಹಿತಿ ಪ್ರದೀಪಕುಮಾರ್ ನೆನಪಾದರು. ಪೆರ್ಲ ಸಿಕ್ಕಿತು. ಆಗ ವಸಂತಕುಮಾರ್ ಪೆರ್ಲ ಎಂಬ ಲೇಖಕರ ನೆನಪಾಯಿತು. ದಾರೇಶ್ವರ ಸಿಕ್ಕಿತು, ಅನುರಾಧಾ ಎಂಬ ಪ್ರಸಿದ್ಧ ಗಾಯಕಿ ನೆನಪಾದರು. ಬ್ರಹ್ಮಾವರ ಸಿಕ್ಕಿತು. ಸದಾಶಿವ ಎಂಬ ಉತ್ತಮ ನಟರ ನೆನಪಾಯಿತು. ಕುಮಟಾ ಸಿಕ್ಕಿತು, ಖ್ಯಾತ ನಟಿ ಪದ್ಮ ನೆನಪಾದರು.
ಪುತ್ತೂರು, ಗಾಯಕ ನರಸಿಂಹನಾಯಕರನ್ನು ನೆನಪಿಸಿತು. ಗೋಕರ್ಣದಿಂದ ವಾಪಸ್ಸು ನಾವು ಬರಬೇಕಾದರೆ ಕೋಟ ಸಿಕ್ಕಿತು; ಶಿವರಾಮ ಕಾರಂತರ ಊರು. ಮುಂದೆ ಕಮಲಶಿಲೆಗೆ ಹೊರಟೆವು. ಕಮಲಶಿಲೆಯಲ್ಲಿ ಪೂರ್ಣಿಮಾ ಕಮಲಶಿಲೆ ಎಂಬ ಲೇಖಕಿ ನೆನಪಾದರು. ನಂತರ ಶಂಕರ ನಾರಾಯಣ ಸಿಕ್ಕಿತು. ವಿದ್ಯಾಭೂಷಣರು ಹಾಡಿದ, ‘ಯಾವ ನಿಧಿಯು ಮಿಗಿಲೋ ಧ್ವಜಪುರ ವಾಸನ ಸನ್ನಿಧಿಗಿಂತ ನೆನಪಾಗಿ ಅದನ್ನೇ ಗುನುಗುತ್ತಾ, ಈ ದೇವಸ್ಥಾನವನ್ನು ನೋಡಲು ಹೋದೆವು.
ಇದನ್ನೂ ಓದಿ: Shashidhara Halady Column: ಇವರು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ !
ಕಣ್ಣಿಗೆ ಹಬ್ಬ, ಮನಸ್ಸಿಗೆ ತೃಪ್ತಿ, ಆನಂದವುಂಟಾಯಿತು. ಅಲ್ಲಿಂದ ಮುಂದೆ ಉಡುಪಿಯ ಕಡೆಗೆ ನಮ್ಮ ಪಯಣ. ಕೇವಲ ಕೆಲವೇ ನಿಮಿಷಗಳಲ್ಲಿ ಹಾಲಾಡಿ ಸಿಕ್ಕಿಬಿಡಬೇಕೆ? ಲೇಖಕ ಶಶಿಧರ ಹಾಲಾಡಿ ಅವರ ಊರು ಬಂತು ಅಂತ ಮಾತನಾಡಿಕೊಂಡೆವು. ಕಳೆದ ಬಾರಿ ಹಾಲಾಡಿ ಅಂತ ಬೋರ್ಡು ಓದಿಕೊಂಡು ಹೋಗಿದ್ದೆವು. ಈಗ ಇಳಿಯೋಣ ಅಂದುಕೊಳ್ಳುತ್ತಲೇ ನೆನಪಾಯಿತು, ‘ಹಾಲಾಡಿಯ ದೋಸೆ ಹೋಟೆಲ್!’ ಶಶಿಧರ ಹಾಲಾಡಿಯವರು ಇದರ ಬಗ್ಗೆ ಒಂದು ಲೇಖನವನ್ನೇ ಬರೆದಿದ್ದರು. ನಾವೂ ಈ ಹೋಟೆಲ್ ನಲ್ಲಿ ದೋಸೆ ತಿನ್ನಲೇಬೇಕೆಂದು ನಿರ್ಧರಿಸಿ ಇಳಿದೆವು. ಹಾಲಾಡಿಯ ಪುಟ್ಟ ಹೊಟೇಲ್, ಗುರು ಕ್ಯಾಂಟೀನ್ ಮುಂದೆ ಇಳಿದು, ಮೊದಲು ಸಾಕ್ಷಿಗೆ ಒಂದು ಫೋಟೋ ತೆಗೆಸಿಕೊಂಡೆವು. ಒಳಗೆ ಹೋಗಿ ನೋಡುತ್ತೇವೆ......ಈಷ್ಟುದ್ದ ಕ್ಯೂ ಇದೆ. ಇಲ್ಲಿ ಮಧ್ಯಾಹ್ನ ಮೂರರಿಂದ ಸಂಜೆ ಏಳು ಗಂಟೆಯ ತನಕ ಮಾತ್ರ ಬೆಣ್ಣೆ ಮಸಾಲೆ ಲಭ್ಯ; ಆದ್ದರಿಂದಲೇ ಕ್ಯೂ! ಅರ್ಧ ಗಂಟೆ ಕಾದ ಮೇಲೆ ಬೆಣ್ಣೆ ಹಾಕಿದ, ಗರಿಗರಿಯಾಗಿ ಕಾಯಿಸಿದ ದೋಸೆಗಳು ಸಿಕ್ಕವು. ಘಮಘಮಿಸುವ ದೋಸೆಯನ್ನು ತಿಂದರೆ ಎಲ್ಲಿ ಖಾಲಿಯಾಗಿಬಿಡುವುದೋ ಎಂಬ ದೂರದೃಷ್ಟಿ ಯಿಂದ, ನಿಧಾನವಾಗಿ ತಿನ್ನತೊಡಗಿದೆವು
ಬೆಣ್ಣೆ ಹಾಕಿದ ಬಣ್ಣದ ದೋಸೆ
ನನಗೆ ಅದೆಷ್ಟು ಆಶ್ಚರ್ಯವಾಯಿತೆಂದರೆ, ಎಲ್ಲರ ತಟ್ಟೆಯಲ್ಲಿದ್ದ ದೋಸೆಗಳ ಬಣ್ಣವೂ ಕಿತ್ತಳೆ ಬಣ್ಣದ ಸಮವಸ ಧರಿಸಿದ್ದವು. ಒಂದೇ ಒಂದು ದೋಸೆ ಬಣ್ಣವೂ ಕಪ್ಪಾಗಲೀ, ಬೆಳ್ಳಗಾಗಲೀ ಇರಲಿಲ್ಲ. ಬಿಳಿಯ ಅಡಿಕೆ ಹಾಳೆಯ ಪ್ಲೇಟಿನಲ್ಲಿ, ಕೇಸರಿ ಬಣ್ಣದ ತ್ರಿಕೋನಾಕಾರದ ಫ್ರಾಕು ಧರಿಸಿ ಕೊಂಡು, ಮೇಲೆ ಬಿಳಿಯ ನವನೀತದ ಅಲಂಕಾರ ಮಾಡಿಕೊಂಡು, ಪಕ್ಕದಲ್ಲೊಂದಿಷ್ಟು ಗಟ್ಟಿಚಟ್ನಿಯ ಚೀಲ ಹಿಡಿದು, ಒಳಗೆ ಹಳದಿ ಬಣ್ಣದ ಆಲೂಗೆಡ್ಡೆಯ ಪಲ್ಯ ತುಂಬಿಕೊಂಡು ನೋಡಲೆರಡು ಕಣ್ಣು ಸಾಲದಂತೆ ನಮ್ಮ ಮುಂದೆ ಬಂದು ಕುಳಿತವು.

ಈ ಕೊನೆಯಿಂದ ಆ ಕೊನೆಯವರೆಗೂ ಒಂದೇ ರೀತಿಯಲ್ಲಿ ಕಾಣುತ್ತಿದ್ದ ದೋಸೆಗಳನ್ನು ನೋಡಿ ನನಗಂತೂ ನಿಜಕ್ಕೂ ಆಶ್ಚರ್ಯವಾಯಿತು. ಎರಡು ನಿಮಿಷ ಅದರ ಸೌಂದರ್ಯವನ್ನು ನಾವೆಲ್ಲ ಕಣ್ಣಲ್ಲೇ ಸವಿದೆವು. ಬಿಸಿ ಆರಿ ತಣ್ಣಗಾಗಿಬಿಟ್ಟರೆ ಎಂಬ ಭಯದಿಂದ ತಿನ್ನಲು ಶುರು ಹಚ್ಚಿಕೊಂಡೆವು. ಮಕ್ಕಳು ಇನ್ನೊಂದೊಂದು ಬೇಕು ಎಂದವು. ಅದಕ್ಕಾಗಿ ಇನ್ನೊಂದು ಗಂಟೆ ಕಾಯಲು ನಾವು ತಯಾರಿಲ್ಲ ಎಂದು ಕಾಫಿ ಕುಡಿದು ಆಚೆ ಬಂದೆವು.
ನಮಗೆ ಮೊದಲು ‘ನಿಜವಾದ ಕಾಫಿ ಬೇಕಿತ್ತು! ಅದು ಇಲ್ಲಿ ಸಿಕ್ಕಿತು!’ ಕುಡಿದೆವು. ದೋಸೆ-ಕಾಫಿ ಯಾವತ್ತಿಗೂ ಎಂಥಾ ಕಾಂಬಿನೇಷನ್ ಅಲ್ವಾ? ಪ್ರಯಾಣದಲ್ಲಿ ಒಮ್ಮೊಮ್ಮೆ ಸರಿಯಾಗಿ ಊಟ ತಿಂಡಿ ಸಿಗುವುದಿಲ್ಲ. ಹೀಗೆ ಮಾರ್ಗ ಮಧ್ಯದಲ್ಲೊಂದು ಹೋಟೆಲ್ ಸಿಕ್ಕರೆ ಆನಂದವೋ ಆನಂದ!
ಹೋಟೆಲ್ ಮಾಲೀಕರನ್ನು (ಗರಿ ಗರಿ ದೋಸೆಯನ್ನು ಕಾಯಿಸುವುದು ಅವರೇ) ಮತ್ತು ಅವರ ಪತ್ನಿ ಸುಮ ಅವರನ್ನೂ ಮಾತನಾಡಿಸಿ, ಪ್ರೀತಿಯಿಂದ ಮೆಚ್ಚುಗೆ ಸೂಚಿಸಿ ಹೊರಬಂದಾಗ, ನಮ್ಮೆಲ್ಲರ ಕಣ್ಣಲ್ಲೂ ಸಂತೃಪ್ತ ಭಾವ! ತಿಂಡಿಪೋತರಿಗೆ, ಒಳ್ಳೊಳ್ಳೆಯ ಹೋಟೆಲ್ ಹುಡುಕಿ ಹೋಗುವವರಿಗೆ, ಹಾಲಾಡಿಯ ಗುರು ಕ್ಯಾಂಟೀನ್‌ನಲ್ಲಿ ಹಬ್ಬ ಕಾದಿರುತ್ತದೆ.