ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K Janardhana Thunga Column: ಮಗ ಬರೆದ ಅಪ್ಪನ ಆತ್ಮಕಥೆ

ಅಪ್ಪ, ಮಕ್ಕಳು ತಮ್ಮ ಕೌಟುಂಬಿಕ ನೆಲೆಯ ವಾಸ್ತವ ಪ್ರಪಂಚದಲ್ಲಿ ಮಾತ್ರವಲ್ಲದೆ, ಭಾವನಾ ಪ್ರಪಂಚ ದಲ್ಲಿಯೂ ಇರುತ್ತಾರೆ. ಅಪ್ಪನ ಬಗ್ಗೆ ಪ್ರಾಮಾಣಿಕವಾಗಿ ಬರೆಯಿರಿ ಎಂದರೆ, ಮಕ್ಕಳಿಗೆ ಬಲು ಕಷ್ಟ. ತೀರಾ ಪ್ರಾಮಾಣಿಕವಾಗಿ ಬರೆಯುವಾಗ ಅದೆಲ್ಲಿಯೋ ತನ್ನನ್ನೂ ಪ್ರತಿನಿಧಿಸುತ್ತದೆ ಎಂಬ ಹಿಂಜರಿಕೆಯೂ ಇರುತ್ತದೆ. ಈ ಸಂದಿಗ್ಧತೆಯು, ಕೆ.ಎಸ್.ನ. ಅವರ ಮಗ ಮಹಾಬಲ ರನ್ನೂ ಕಾಡಿರಬೇಕು.

ಮಗ ಬರೆದ ಅಪ್ಪನ ಆತ್ಮಕಥೆ

Profile Ashok Nayak Jul 13, 2025 1:49 PM

ಕೆ.ಜನಾರ್ದನ ತುಂಗ

ಪ್ರೇಮ ಕವಿ, ‘ಮೈಸೂರು ಮಲ್ಲಿಗೆ’ಯ ಕವಿ ಎಂಬ ವಿಶೇಷಣಗಳಿಂದ ಪ್ರಸಿದ್ಧರಾಗಿರುವ ಕೆ.ಎಸ್.ನರಸಿಂಹ ಸ್ವಾಮಿ ಅವರನ್ನು ಅಷ್ಟಕ್ಕೆ ಮಾತ್ರ ಸೀಮಿತಗೊಳಿಸಿದರೆ, ಅದು ಅವರ ಕಾವ್ಯಕ್ಕೆ, ಬದುಕಿಗೆ ಮಾಡಿದ ಅಪಚಾರ ಎಂದೇ ಹೇಳಬೇಕು. ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೂಲಕ ನಮ್ಮ ರಾಜ್ಯದ ಮೂಲೆ ಮೂಲೆಗಳಲ್ಲೂ ಪರಿಚಿತಗೊಂಡ ಕೆ.ಎಸ್.ನ. ಅವರು, ‘ತೆರೆದ ಬಾಗಿಲು’ ಮೊದಲಾದ ಅರ್ಥಪೂರ್ಣ ಕವನ ಸಂಕಲನಗಳನ್ನೂ ಹೊರತಂದಿದ್ದಾರೆ.

ಅವರು ಕನ್ನಡ ಕಂಡ ಅಪರೂಪದ ಮತ್ತು ಪ್ರಸಿದ್ಧ ಕವಿಯಾದರೂ, ಸರಳ ಜೀವಿ; ಜತೆಗೆ ಅಮಾ ಯಕರೂ ಸಹ. ಅವರ ಸರಳ ಬದುಕು ಕಾವ್ಯಪ್ರೇಮಿಗಳನ್ನು ಬೆರಗುಗೊಳಿಸಿದ್ದೂ ಇದೆ; ಪ್ರೇಮಗೀತೆ ಗಳ ಸರಮಾಲೆಯನ್ನೇ ಓದುಗರಿಗೆ ನೀಡಿದ ಕೆ.ಎಸ್.ನ. ಅವರ ವೈಯಕ್ತಿಕ ಬದುಕನ್ನು ಹತ್ತಿರದಿಂದ ನೋಡಿದ ಅವರ ಮಗ, ಕೆ.ಎನ್. ಮಹಾಬಲ ಅವರು, ‘ನನ್ನ ಅಪ್ಪ ಕೆ.ಎಸ್.ನ.’ ಎಂಬ ಪುಸ್ತಕವನ್ನು ಈಗ ಹೊರತಂದಿದ್ದಾರೆ; ‘ಮೈಸೂರು ಮಲ್ಲಿಗೆ’ಯ ಹಾಡುಗಳನ್ನು ಕೇಳಿದವರಿಗೆ, ಕೆ.ಎಸ್.ನ.ಅವರ ಕಾವ್ಯವನ್ನು ಮೆಚ್ಚಿದವರಿಗೆ ಈ ಪುಸ್ತಕದಲ್ಲಿನ ಪುಟ್ಟ ಪುಟ್ಟ ಲೇಖನಗಳು ಆಪ್ತವಾಗಬಲ್ಲವು’ ನಮ್ಮ ನಾಡಿನ ಹೆಸರಾಂತ ಕವಿ, ಕೆ.ಎಸ್.ನರಸಿಂಹಸ್ವಾಮಿ (ಕೆ.ಎಸ್.ನ.) ಅವರು ತಮ್ಮ ಆತ್ಮಕಥೆ ಯನ್ನು ಬರೆಯಲಿಲ್ಲ.

ಇದನ್ನೂ ಓದಿ: Dr Rohith Kumar H G Column: ಕೋವಿಡ್-19 ಲಸಿಕೆಯಿಂದಲೇ ಹೃದಯಾಘಾತವಾಗುತ್ತಿದೆಯೇ?

ಹತ್ತಿರ ಹತ್ತಿರ ಅಜ್ಞಾಯತಾವಾದಿಯಾಗಿದ್ದ ಕೆ ಎಸ್ ನ ಸಾವೇ ಬದುಕಿನ ಕೊನೆ ಎಂದು ಭಾವಿಸಿ ಆತ್ಮಕಥೆಯ ಮೂಲಕ ಸಾವಿನ ನಂತರವೂ ತಮ್ಮ ಬದುಕನ್ನು ವಿಸ್ತರಿಸುವುದು ಬೇಡ ಎಂದು ಭಾವಿಸಿದ್ದಿರಬೇಕು. ಆದರೆ ಕವಿಯ ವೈಯಕ್ತಿಕ ಬದುಕಿನ ಬಗ್ಗೆ ತಿಳಿಯಬೇಕೆಂಬ ಕುತೂಹಲ ಅಭಿಮಾನಿ ಓದುಗರಿಗೆ ಇದ್ದೇ ಇರುತ್ತದೆ. ಹೀಗಾಗಿ, ಕವಿಯ ಬಗ್ಗೆ ಬರೆಯಿರಿ ಎಂದು ಅವರ ಮಗ ಕೆ.ಎನ್. ಮಹಾಬಲ ಅವರಿಗೆ ಗೆಳೆಯರು ಒತ್ತಾಯಿಸುತ್ತಲೇ ಇರುತ್ತಿದ್ದರು.

ಅಪ್ಪ, ಮಕ್ಕಳು ತಮ್ಮ ಕೌಟುಂಬಿಕ ನೆಲೆಯ ವಾಸ್ತವ ಪ್ರಪಂಚದಲ್ಲಿ ಮಾತ್ರವಲ್ಲದೆ, ಭಾವನಾ ಪ್ರಪಂಚದಲ್ಲಿಯೂ ಇರುತ್ತಾರೆ. ಅಪ್ಪನ ಬಗ್ಗೆ ಪ್ರಾಮಾಣಿಕವಾಗಿ ಬರೆಯಿರಿ ಎಂದರೆ, ಮಕ್ಕಳಿಗೆ ಬಲುಕಷ್ಟ. ತೀರಾ ಪ್ರಾಮಾಣಿಕವಾಗಿ ಬರೆಯುವಾಗ ಅದೆಲ್ಲಿಯೋ ತನ್ನನ್ನೂ ಪ್ರತಿನಿಧಿಸುತ್ತದೆ ಎಂಬ ಹಿಂಜರಿಕೆಯೂ ಇರುತ್ತದೆ. ಈ ಸಂದಿಗ್ಧತೆಯು, ಕೆ.ಎಸ್.ನ. ಅವರ ಮಗ ಮಹಾಬಲ ರನ್ನೂ ಕಾಡಿರಬೇಕು.

ಸಾಮಾನ್ಯವಾಗಿ ವಸ್ತುನಿಷ್ಠವಾಗಿ ಬದುಕನ್ನು ಗಮನಿಸುವ ಮಹಾಬಲರು ಅಪ್ಪನ ಬಗ್ಗೆ ಬರೆಯಲು ತೃತೀಯ ಮಾರ್ಗವನ್ನು ಹುಡುಕಿಕೊಂಡರು; ಅಪ್ಪನ ಒಡನಾಟಗಳ ಮೂಲಕ ಅಪ್ಪನ ಬಗ್ಗೆ ಚಿತ್ರಣವನ್ನು ಕಟ್ಟಿಕೊಡಲು ಪ್ರಯತ್ನಿಸಿದರು. ‘ನನ್ನ ಅಪ್ಪ ಕೆ ಎಸ್ ನ’ ಎಂಬ ಪುಸ್ತಕವನ್ನು ಬರೆದು ಯಶಸ್ವಿಯೂ ಆದರು.

ಪ್ರಾಮಾಣಿಕತೆಯ ಸ್ಪರ್ಶ

ಸುಮಾರು ನಲವತ್ತಕ್ಕೂ ಹೆಚ್ಚು ಸಮಕಾಲೀನರ ಜೊತೆ ಕವಿಯ ಒಡನಾಟವನ್ನು ಒಳಗಿನವರಾಗಿ ಗಮನಿಸಿದ್ದರೂ, ಅವುಗಳನ್ನು ಹೊರಗಿನವರಾಗಿ ದಾಖಲಿಸಿದ್ದಾರೆ. ಇದರಿಂದಾಗಿ ಇಲ್ಲಿನ ಬರಹಕ್ಕೆ ಪ್ರಾಮಾಣಿಕತೆಯ ಸ್ಪರ್ಶವಿದೆ. ಅವರೆಲ್ಲರ ಜೊತೆ ಕವಿಯ ಒಡನಾಟವನ್ನು ಗುರುತಿಸುತ್ತ ಮಹಾಬಲ ಕವಿಯ ಒಂದು ಸಮಗ್ರ ಚಿತ್ರವನ್ನು ನಮ್ಮ ಕಣ್ಣೆದುರು ತಂದು ನಿಲ್ಲಿಸುತ್ತಾರೆ.

ksn ok

ನವಿರಾದ ದಾಂಪತ್ಯಗೀತೆಗಳನ್ನು ಬರೆದ ಕೆ ಎಸ್ ನ ತುಂಬ ಮೃದುಸ್ವಭಾವದವರು ಎಂಬುದೇನೋ ಸರಿ, ಆದರೆ ಅವರು ನಿರ್ದಾಕ್ಷಿಣ್ಯವಾಗಿಯೂ ವರ್ತಿಸಬಲ್ಲರು ಎಂಬುದನ್ನು ‘ಶವರ್ ಬಾತ್ ಕೊಟ್ಟೆ, ಪ್ರಶಸ್ತಿಗಾಗಿ ಜೀವ ಇಟ್ಟುಕೋ ಅಂತೀಯಾ’ ಲೇಖನಗಳು ತಿಳಿಸಿದರೆ, ಅವರ ಪ್ರಖರ ಸ್ವಾಭಿಮಾನದ ಬಗ್ಗೆ, ಪಾಪ ಅಭಿಮಾನಿ ಮತ್ತು ಶವರ್ ಬಾತ್ ಕೊಟ್ಟೆ ಎಂಬ ಶೀರ್ಷಿಕೆಯ ಲೇಖನಗಳು ಸೂಚನೆ ಕೊಡುತ್ತವೆ.

ಕೆ ಎಸ್ ನ ಸ್ನೇಹಕ್ಕೆ ತುಂಬಾ ಬೆಲೆ ಕೊಡುತ್ತಾರೆ ಎಂಬುದನ್ನು ತಿಳಿಯಲು ಅವರ ನಡಿಗೆ ಬೆತ್ತದ ಕಥೆಯೊಂದೇ ಸಾಕು. ನಮ್ಮ ನಾಡಿನ ಇನ್ನೊಬ್ಬ ಪ್ರಮುಖ ಕವಿ ಗೋಪಾಲಕೃಷ್ಣ ಅಡಿಗ ಮತ್ತು ಕೆಎಸ್‌ನ ನಡುವಣ ಜುಗಲ್ ಬಂದಿಯೂ ಸ್ವಾರಸ್ಯಕರ.

ಕೆ ಎಸ್ ನ ಬಡತನಕ್ಕೆ ಬೇಸರಿಸದವರು, ಗುರುಹಿರಿಯರ ಬಗ್ಗೆ ಭಕ್ತಿಭಾವ ಹೊಂದಿದವರು, ಕುಟುಂಬ ಜೀವಿ, ಸ್ವಾಭಿಮಾನಿ, ಪುಸ್ತಕ ಪ್ರಕಟಣೆಯ ವಿಷಯದಲ್ಲಿ ವ್ಯವಹಾರ ಜ್ಞಾನವಿಲ್ಲದ ವ್ಯಕ್ತಿ, ಸರಕಾರಿ ಸವಲತ್ತುಗಳ ಬಗ್ಗೆ ನಿರಾಸಕ್ತಿ, ಯಾರಿಗೂ ಕೇಡೆಣಿಸದ ಸಜ್ಜನ, ಸ್ನೇಹಜೀವಿ, ರಾಜಕಾರಣದ ಬಗ್ಗೆ ನಿರ್ಲಕ್ಷ್ಯ ಎಂಬುದೇ ಮುಂತಾದ ಹಲವಾರು ಗುಣಗಳ ಖನಿ ಎಂಬ ಭಾವನೆ ಇಡೀ ಪುಸ್ತಕವನ್ನು ಓದಿ ಮುಗಿಸುವಾಗ ಅನಿಸಿದರೆ ಅಚ್ಚರಿಯೇನಲ್ಲ.

ಅವರ ಕೋಪದ ವೈಖರಿ, ನಶ್ಯ ಮತ್ತು ಕಾಫಿಪ್ರೇಮ, ಅತಿಥಿ ಸತ್ಕಾರ.. ಒಂದೊಂದು ಅಧ್ಯಾಯವನ್ನು ಓದುವಾಗಲೂ ಕವಿಯ ಒಂದೊಂದು ಮುಖ ಅನಾವರಣವಾಗುತ್ತದೆ, ಅನನ್ಯ ಓದಿನ ಅನುಭವ ವಾಗುತ್ತದೆ. ಈ ಎಲ್ಲ ಒಡನಾಟಗಳನ್ನು ದಾಖಲಿಸಿರುವ ಮಹಾಬಲರು ಎಲ್ಲಿಯೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಹೋಗಿಲ್ಲ ಎನ್ನುವುದು ಅವರ ಹೆಚ್ಚುಗಾರಿಕೆ. ಅಪ್ಪನ ಬಗ್ಗೆ ತಮ್ಮದೇ ಆದ ಅನುಭವಗಳನ್ನು ಮಂಡಿಸುವಾಗಲೂ ಸಂಯಮವನ್ನು ಪಾಲಿಸಿದ್ದಾರೆ.

ನಲವತ್ತೊಂಬತ್ತು ಲೇಖನಗಳ ಗುಚ್ಛ, ಈ ಪುಸ್ತಕ. ಇಲ್ಲಿನ ಯಾವ ಲೇಖನವೂ ಮೂರು ಪುಟ ಗಳಿಗಿಂತ ದೊಡ್ಡದಿಲ್ಲ. ಮೊದಲ ನೋಟಕ್ಕೇ ಓದಿಗೆಳೆಯುವ ಆಕರ್ಷಕ ತಲೆಬರಹ ಹೊತ್ತ ಲೇಖನಗಳು. ಉದಾಹರಣೆಗೆ ‘ಆಹಾ! ಹೀರೇಕಾಯಿ ಬೋಂಡಾ, ನಿಮ್ಮಪ್ಪ ಕಿಲಾಡಿ ಕಣಯ್ಯ’ ಇತ್ಯಾದಿ.

ಆಡಂಬರವಿಲ್ಲದ ಸರಳ ನೇರ ಭಾಷೆ. ಪ್ರತಿಯೊಂದು ಎಪಿಸೋಡಿಗೂ ಮೊದಲು ಕವಿಯ ಆಕರ್ಷಕ ರೇಖಾಚಿತ್ರ. ನಂಜುಂಡಸ್ವಾಮಿಯವರ ರೇಖೆಗಳಲ್ಲಿ ಪಡಿಮೂಡಿದ ಕವಿಯ ಆಕರ್ಷಕ ಕ್ಯಾರಿಕೇಚರ್ ಮುಖಪುಟದಲ್ಲಿ; ಸುಂದರ ಅಕ್ಷರಶೈಲಿ, ಆಕರ್ಷಕ ವಿನ್ಯಾಸ, ಅಚ್ಚುಕಟ್ಟಾದ ಮುದ್ರಣ (ಬೆಂಗಳೂರಿನ ಬಹುರೂಪಿ.ಆನ್‌ಲೈನ್ ಮೂಲಕ ಪ್ರಕಟಗೊಂಡಿದೆ) ಹೊಂದಿರುವ ಈ ಪುಸ್ತಕ ಎಲ್ಲರ ಸಂಗ್ರಹದಲ್ಲಿಯೂ ಇರಬೇಕು, ಅದರಲ್ಲೂ ಮುಖ್ಯವಾಗಿ ಕೆಎಸ್‌ನ ಅವರ ಮೈಸೂರು ಮಲ್ಲಿಗೆ ಕವನಗಳಿಗೆ ಮಾರುಹೋದವರ ಬಳಿ ಇರಲೇಬೇಕು.

ನಿಮ್ಮನ್ನು ನಿಮಗಿಂತ ನಿಮ್ಮ ಸ್ನೇಹಿತರೇ ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಎಂಬ ಮಾತನ್ನು ಸಮರ್ಥಿಸುವಂತಿರುವ ಈ ಪುಸ್ತಕ, ಮಲ್ಲಿಗೆಯಂತೆಯೇ ಗಮಗಮಿಸುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ!

*

1942ರಲ್ಲಿ ಪ್ರಕಟಗೊಂಡ ‘ಮೈಸೂರು ಮಲ್ಲಿಗೆ’ ಕೆ.ಎಸ್.ನ. (1915-2003) ಅವರ ಮೊದಲ ಕವನ ಸಂಕಲನ. ನಂತರದ ವರ್ಷಗಳಲ್ಲಿ ಅವರು ಸುಮಾರು 20 ಕವನ ಸಂಕಲನಗಳನ್ನು ಹೊರ ತಂದಿದಿದ್ದಾರೆ; ಜತೆಗೆ ಇತರ ಆರೆಂಟು ಗದ್ಯ ಕೃತಿಗಳನ್ನೂ ಬರೆದಿದ್ದಾರೆ.

1977ರಲ್ಲಿ ‘ತೆರೆದ ಬಾಗಿಲು’ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು

1986ರಲ್ಲಿ ಮೈಸೂರು ಮಲ್ಲಿಗೆ ಧ್ವನಿಸುರುಳಿ ಬಿಡುಗಡೆ

1993ರಲ್ಲಿ ಮೈಸೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

1991ರಲ್ಲಿ ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ

1997ರಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಇತರ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ