ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M V Negalur Column: ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ

ಮರಗಳ ತಾಯಿ ಎಂದೇ ಖ್ಯಾತರಾದ ಸಾಲುಮರದ ಸಂಗಾತಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿ ದ್ದರೂ (14-11-2025), ಅವರ ನೆನಪು, ಆ ಮುಗ್ಧ ನಗು, ಸರ್ವರನ್ನು ಅಪ್ಪಿಕೊಳ್ಳುವ ಮನೋಭಾವ, ಸಾಲುಮರ ಬೆಳೆಸಿದ ಸಂದೇಶ ಸದಾ ಹಚ್ಚ ಹಸಿರು. ಉಸಿರು ನಿಂತ ನಂತರವೂ ಮರಗಳಲ್ಲಿ ಜೀವಂತ ವಾಗಿ ಉಸಿರಾಡುತ್ತಿದ್ದಾರೆ ತಿಮ್ಮಕ್ಕ.

M V Negalur Column:  ಸಾಲುಮರದ ಸಾಧಕಿಯೊಂದಿಗೆ ಮೊದಲ ಭೇಟಿ

-

Ashok Nayak
Ashok Nayak Jan 4, 2026 10:08 AM

ಎಂ.ವಿ.ನೆಗಳೂರ ನೆಲಮಂಗಲ

ಹವ್ಯಾಸಿ ಬರಹಗಾರರೊಬ್ಬರು 1994ರಲ್ಲಿ ಕುಗ್ರಾಮದ ಏಕಾಂಗಿ ಮಹಿಳೆಯೊಬ್ಬರನ್ನು ಭೇಟಿ ಯಾದರು. ಆ ಮಹಿಳೆಯು ರಸ್ತೆಬದಿಯಲ್ಲಿ 284 ಆಲದ ಮರಗಳನ್ನು ಬೆಳೆಸಿದ್ದುದನ್ನು ಕೇಳಿ ಚಕಿತರಾದರು; ಮರಗಳ ಜತೆ ಆ ಮಹಿಳೆಯ ಫೋಟೋ ತೆಗೆಸಿ, ಲೇಖನ ಬರೆದು ಪತ್ರಿಕೆ ಯಲ್ಲಿ ಪ್ರಕಟಿಸಿದರು. ತಮಗೆ ಅರಿವಿಲ್ಲದೇ, ಹಳ್ಳಿಗಾಡಿನ ಏಕಾಂಗಿ ಮಹಿಳೆಯೊಬ್ಬರು, ಪರಿಸರ ಸೇವೆಯನ್ನು ಮಾಡಿದ ಸುದ್ದಿ ನಾಡಿನಾದ್ಯಂತ ಸಂಚಲನ ಸೃಷ್ಟಿಸಿತು. ಆ ಮಹಿಳೆ ಮುಂದೆ ಪ್ರಸಿದ್ಧರಾದರು. ಅವರೇ ಸಾಲುಮರದ ತಿಮ್ಮಕ್ಕ. ಮರಗಳನ್ನೇ ಮಕ್ಕಳಂತೆ ಪ್ರೀತಿಸಿ ಬೆಳೆಸಿದ ಸಾಲುಮರದ ತಿಮ್ಮಕ್ಕನವರನ್ನು ಮೊದಲ ಬಾರಿ ಭೇಟಿಯಾಗಿ, ಅವರ ಕುರಿತು ಲೇಖನ ಬರೆದು, ಅವರ ಸಾಧನೆಯನ್ನು ಬೆಳಕಿಗೆ ತಂದ ಆ ಬರಹಗಾರರ ಅನುಭವ ಇಲ್ಲಿದೆ.

ಮರಗಳ ತಾಯಿ ಎಂದೇ ಖ್ಯಾತರಾದ ಸಾಲುಮರದ ಸಂಗಾತಿ ತಿಮ್ಮಕ್ಕ ದೈಹಿಕವಾಗಿ ನಮ್ಮನ್ನು ಅಗಲಿದ್ದರೂ (14-11-2025), ಅವರ ನೆನಪು, ಆ ಮುಗ್ಧ ನಗು, ಸರ್ವರನ್ನು ಅಪ್ಪಿಕೊಳ್ಳುವ ಮನೋ ಭಾವ, ಸಾಲುಮರ ಬೆಳೆಸಿದ ಸಂದೇಶ ಸದಾ ಹಚ್ಚ ಹಸಿರು. ಉಸಿರು ನಿಂತ ನಂತರವೂ ಮರಗಳಲ್ಲಿ ಜೀವಂತವಾಗಿ ಉಸಿರಾಡುತ್ತಿದ್ದಾರೆ ತಿಮ್ಮಕ್ಕ.

ಅಭಿವೃದ್ಧಿಯ ಹೆಸರಲ್ಲಿ ಮರ ಕಡಿಯುತ್ತಿರುವ ನಮಗೆ, ಪರಿಸರ ಹೋರಾಟ ಎಂಬ ಪರಿಕಲ್ಪನೆಯೇ ಇಲ್ಲದ ದಿನಗಳಲ್ಲಿ, ಅಕ್ಷರ ಕಲಿಯದಿದ್ದರೂ, ಮರಗಳನ್ನೇ ಮಕ್ಕಳೆಂದು ಪೋಷಿಸಿದ ತಿಮ್ಮಕ್ಕನ ಜೀವನವು, ನಮ್ಮಗಳ ಜವಾಬ್ದಾರಿಗೆ ಪರೋಕ್ಷ ಪಾಠ.

ಮಾಗಡಿ ತಾಲ್ಲೂಕು, ಕುದೂರು ಬಳಿಯ ‘ಹುಲಿಕಲ್ಲು’ ಗ್ರಾಮವು ಸಾಲುಮರದ ತಿಮ್ಮಕ್ಕನ ಕರ್ಮ ಭೂಮಿ. ಆ ಗ್ರಾಮದಂಚಿನ ಹೊರಭಾಗದ ಹಟ್ಟಿಯ ತೆಂಗಿನ ಗರಿಯ ಗೂಡಿನಲ್ಲಿ ಬದುಕು ಕಟ್ಟಿ ಕೊಂಡವರು, ಬಿಕ್ಕಲು ಚಿಕ್ಕಯ್ಯ ಮತ್ತು ತಿಮ್ಮಕ್ಕ ದಂಪತಿ. ಹೆಸರಿಗೊಂದು ತುಂಡುಭೂಮಿ. ಕೂತುಣ್ಣುವಷ್ಟು ಕೂಳಿಲ್ಲ; ದುಡಿದರೆ ಮಾತ್ರ ಅಂದಿನ ಪಾಡು.

ಚಿಕ್ಕಯ್ಯನ ಮಾತು ಸ್ಪಷ್ಟವಿಲ್ಲದೆ ಬಿಕ್ಕುತ್ತಿದ್ದರಿಂದ ಬಿಕ್ಕಲು ಚಿಕ್ಕಯ್ಯನೆಂದೇ ಗ್ರಾಮಕ್ಕೆಲ್ಲಾ ಚಿರ ಪರಿಚಿತರು. ಗುಬ್ಬಿ ತಾಲ್ಲೂಕಿನ ಕಕ್ಕೇನಹಳ್ಳಿಯ ತಿಮ್ಮಕ್ಕ, ರಸ್ತೆ ಕಾಮಗಾರಿಯ ಕೂಲಿಕಾರ್ಮಿಕ ಹುಲಿಕಲ್ಲಿನ ಚಿಕ್ಕಯ್ಯನನ್ನು ವರಿಸಿ ಎರಡು ದಶಕ ಕಳೆದರೂ ಸಂತಾನ ಭಾಗ್ಯದಿಂದ ವಂಚಿತ ಳಾದರು.

ಇದನ್ನೂ ಓದಿ: Saalumarada Thimmakka Death: ಮರಗಳನ್ನೇ ಮಕ್ಕಳೆಂದು ಪ್ರೀತಿಸಿದ ಸಾಲುಮರದ ತಿಮ್ಮಕ್ಕ

ಮಕ್ಕಳಿಲ್ಲವೆಂಬ ಕೊರತೆಯನ್ನು ನೀಗಿಸಲು ದಂಪತಿಗಳು ಮರ ನೆಡುವ ಹವ್ಯಾಸ ಕಂಡುಕೊಂಡರು. ನಿತ್ಯ ಕೂಲಿಗೆ ಹೋಗುವ ಮುನ್ನ ಹುಲಿಕಲ್ಲಿನಿಂದ ಕುದೂರು ಗ್ರಾಮಕ್ಕೆ ಸಾಗುವ ರಸ್ತೆಯಲ್ಲಿ ಮರ ನೆಡಲು ಸಂಕಲ್ಪಮಾಡಿದರು. ಇಂದಿಗೆ ಆರು ದಶಕಗಳ ಹಿಂದೆ, ಆಲದ ಮರದ ಕೊಂಬೆಯನ್ನು ಕಡಿದು ರಸ್ತೆ ಇಕ್ಕೆಲಗಳಲ್ಲಿ ಗುಂಡಿ ತೋಡಿ ಚಿಕ್ಕಯ್ಯ ಕೊಂಬೆ ನೆಟ್ಟರು; ಮಡದಿ ತಿಮ್ಮಕ್ಕ ಆ ಗಿಡಗಳಿಗೆ ಪ್ರತಿದಿನ ನೀರು ಹೋಯ್ದರು.

ಗಿಡನೆಟ್ಟು, ಅವುಗಳಿಗೆ ಬೇಲಿಕಟ್ಟಿ ಮಕ್ಕಳಂತೆ ಪೋಷಿಸಿ ಹೆಮ್ಮರವಾಗಿಸಿದರು. ಬಿರುಬೇಸಿಗೆಯಲ್ಲಿ ದೂರದಿಂದ ನೀರು ತಂದು, ಇನ್ನೂರಕ್ಕೂ ಅಽಕ ಗಿಡಗಳಿಗೆ ನೀರುಣಿಸಿದರು, ಅವುಗಳ ಚಿಗುರನ್ನು ಕಂಡು ಸಂತಸಪಟ್ಟರು.

ನೋಡು ನೋಡುತ್ತಲೇ ಇಕ್ಕೆಲಗಳಲ್ಲಿ ಮರಗಳ ಸಾಲು ಬೆಳೆಯಿತು; ದಾರಿಹೋಕರಿಗೆ ನೆರಳಾದವು. ಹಕ್ಕಿ ಪಕ್ಕಿಗಳಿಗೆ ಆಶ್ರಯ, ಆಹಾರದ ನೆಲೆಯಾದುದ ಕಂಡ ದಂಪತಿಗಳ ಕಂಗಳಲ್ಲಿ ಸಂತೃಪ್ತಿಯ ಮಿಂಚು: ಮಕ್ಕಳಿಲ್ಲದಿದ್ದರೇನು? ಮರಗಳೇ ಮಕ್ಕಳೆಂಬ ಭಾವದಿಂದ ಗಿಡಗಳಿಗೆ ಕಣ್ಣೋಕಾವಲಾಗಿ ನೋಡಿಕೊಂಡರು.

Saalamarada 2

ಮರ ಬೆಳೆಸಿದವರ ವಿರುದ್ಧ ದೂರು!

ಹುಲಿಕಲ್ಲಿನಿಂದ ಕುದೂರುವರೆಗೆ ನಾಲ್ಕು ಕಿ.ಮೀ. ರಸ್ತೆಯ ಇಕ್ಕೆಲದಲ್ಲಿ ಸುಮಾರು ಮುನ್ನೂರು ಮರಗಳು ಎತ್ತರವಾಗಿ ಬೆಳೆದುದ ಕಂಡು ಆನಂದಿಸಿದ ದಂಪತಿಗಳಿಗೆ, ತಮ್ಮ ಪರಿಸರ ರಕ್ಷಣೆಯ ಕಾಯಕದಲ್ಲಿ ಕೆಲವು ಅಡೆತಡೆಗಳೂ ಎದುರಾದುದು ಉಂಟು! ಕಡುಬಡತನದ ಈ ದಂಪತಿಗೆ, ಅನಿರೀಕ್ಷಿತ ಆಘಾತವೊಂದು ಎದುರಾಯ್ತು.

ಸಂಬಂಧಿಗಳ ತಿಥಿಕಾರ್ಯಕ್ಕೆ ಅಗತ್ಯವೆಂದು, ಚಿಕ್ಕಯ್ಯ ತಾನೇ ನೆಟ್ಟ ಮರದ ಕೊಂಬೆಯೊಂದನ್ನು ಕಡಿದು ತಂದಿದ್ದರು; ಅದನ್ನು ಕಂಡ ಯಾರೋ ದೂರು ನೀಡಿದ್ದರಿಂದ, ಪೊಲೀಸರು ಚಿಕ್ಕಯ್ಯ ನನ್ನು ಠಾಣೆಗೆ ಕರೆಸಿದರು; ಬಡವ್ಯಕ್ತಿಗೆ ಠಾಣೆಯಲ್ಲಿ ಸೂಕ್ತ ಉಪಚಾರ ದೊರಕಿತು; ಲಾಠಿಯ ಏಟು ತಿಂದ ಕೊರಗಿನಲ್ಲಿಯೇ ಚಿಕ್ಕಯ್ಯ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆದ. ಪತಿಯನ್ನು ಕಳೆದು ಕೊಂಡ ಸಂಕಷ್ಟದ ಒಂಟಿ ಬಾಳು ತಿಮ್ಮಕ್ಕನದ್ದಾಯಿತು. ಆ ಕೊರಗಿನಲ್ಲಿಯೇ ಒಂಟಿಯಾಗಿ ಬುಡ್ಡಿ ದೀಪದ ಮುರುಕು ಜೋಪಡಿಯಲ್ಲಿ ಹಸಿದ ಒಡಲಿನೊಂದಿಗೆ ಕಾಲನೂಕುತ್ತಿದ್ದರು ತಿಮ್ಮಕ್ಕ.

ಹಳ್ಳಿ ಹೆಂಗಸಿನ ಸಾಹಸ

ಏತನ್ಮಧ್ಯೆ ಕೃಷಿ ಅರಣ್ಯ ತೋಟಗಾರಿಕೆಯ ಒಟ್ಟಾಗಿಸಿದ ಜಲಾನಯನ ಅಭಿವೃದ್ಧಿ ಯೋಜನೆ ಯೊಂದು ಈ ಭಾಗದಲ್ಲಿ ಅನುಷ್ಠಾನಕ್ಕೆ ಬಂತು. ತಿಮ್ಮಕ್ಕನ ಸಮಾಜ ಕಾರ್ಯ ಕೇಳಿದ ಅಧಿಕಾರಿ ಗಳು ಅನುಕಂಪದಿಂದ ಆಕೆಯ ಎರಡು ಎಕರೆಯ ತುಂಡು ಭೂಮಿಯಲ್ಲಿ ಕೃಷಿ ಹೊಂಡ ನಿರ್ಮಿಸಲು ಅವರನ್ನು ಫಲಾನುಭವಿಯಾಗಿ ಆಯ್ಕೆ ಮಾಡಿದರು.

Saamarada 2

ಜಲಾನಯನ ಯೋಜನೆಯ ಕಾಮಗಾರಿಯ ವೀಕ್ಷಣೆಗಾಗಿ, ಯೋಜನೆಯ ಅಂದಿನ ನಿರ್ದೇಶಕರು, ಹವ್ಯಾಸಿ ಬರಹಗಾರನಾಗಿದ್ದ ನನ್ನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾಗ, ತಿಮ್ಮಕ್ಕನನ್ನು ಪರಿಚಯಿಸಿದರು. ಏಕಾಂಗಿ ತಿಮ್ಕಕ್ಕನ ಒಂಟಿ ಬಾಳು ಕಂಡ ನಾನು, ವೃದ್ಧಾಪ್ಯದ ಅಂಚಿನಲ್ಲಿರುವ ಅವರನ್ನು, ಕೃಷಿ ಹೊಂಡ ನಿರ್ಮಾಣ ಕಾರ್ಯದ ಫಲಾನುಭವಿಯಾಗಿ ಆಯ್ಕೆ ಮಾಡಿದ್ದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಕೇಳಿದೆ.

ಆಗ, ಆ ಅಧಿಕಾರಿಯು, ತಿಮ್ಮಕ್ಕನು ರಸ್ತೆಯ ಬದಿಗಳಲ್ಲಿ ಸಾಲುಮರಗಳನ್ನು ನೆಟ್ಟು ಪೋಷಿಸಿದನ್ನು ವಿವರಿಸಿದರು. ಆ ಸೇವಾ ಅನುಕಂಪದಿಂದ ಕೃಷಿ ಹೊಂಡದ ಫಲಾನುಭವಿಯಾಗಿ ಆಯ್ಕೆ ಮಾಡಿ ದ್ದೇವೆ, ಎಂದರು. ತಿಮ್ಮಕ್ಕ ಎಂಬ ಹಳ್ಳಿಯ ಹೆಂಗಸು, ಅಮಾಯಕ ಮಹಿಳೆ, ನೂರಾರು ಮರಗಳನ್ನು ಪೋಷಿಸಿದಳು ಎಂದು ಕೇಳಿ ನನಗೆ ನಿಜಕ್ಕೂ ಅಚ್ಚರಿಯಾಯಿತು!

ಇದು ಹೇಗೆ ಸಾಧ್ಯವಾಯಿತು ಎಂದು ನಾನು ಆ ಸುದ್ದಿಯ ಬೆನ್ನುಹತ್ತಿದಾಗ, ಆ ದಂಪತಿ ಪಟ್ಟ ಪಡಿಪಾಟಲುಗಳ ವಿವರವು ಅದೇ ಹಳ್ಳಿಯ ಜನರಿಂದ ತಿಳಿಯಿತು. ಜಾತಿಯ ರೀತಿ ರಿವಾಜುಗಳಲ್ಲಿ ನಲುಗಿದ್ದರ ಮಧ್ಯದಲ್ಲಿ ಉರಿಬಿಸಿಲಿನ ಬೇಸಿಗೆಯಲ್ಲಿ ಬಹುದೂರದಿಂದ ಬಿಂದಿಗೆಗಳಲ್ಲಿ ನೀರು ತಂದು ನೀರುಣಿಸಿದ್ದು, ಗಿಡಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದು, ಜಾನುವಾರುಗಳು ಎಲೆ ತಿನ್ನದಂತೆ ಮುಳ್ಳು ಕೊನೆಗಳ ಕಟ್ಟಿ ಗಿಡಗಳು ಬೆಳೆಯಲು ಅನುವು ಮಾಡಿದ್ದು, ಎಲ್ಲವನ್ನೂ ಅದೇ ಗ್ರಾಮದವರು ಕಂಡಿದ್ದರು, ಅದನ್ನು ನನಗೆ ವಿವರಿಸಿದರು.

ಆಗ, ತಿಮ್ಮಕ್ಕನವರ ಪರಿಸರಪ್ರಜ್ಞೆ, ಆಲದ ಗಿಡಗಳಿಗೆ ಅವರು ನೀರು ಹೊತ್ತ ವಿಚಾರ ಎಲ್ಲವೂ ನನಗೆ ಮನದಟ್ಟಾಯಿತು. ಅದೆಲ್ಲದರ ಬಗ್ಗೆ ತಿಮ್ಮಕ್ಕನನ್ನು ಪ್ರಶ್ನಿಸಿದಾಗ ಅವರು ಪಟ್ಟ ಪಾಡನ್ನು, ಸರೀಕರ ನಿಂದನಾನುಡಿಗಳನ್ನು ಕೇಳಿ, ಅನುಭವಿಸಿದ ಅಳಲನ್ನು ತೋಡಿಕೊಂಡರು. ಈವರೆಗೆ ಕನಿಷ್ಠ ಪ್ರೀತಿಯು ದುರ್ಲಭವಾಗಿದ್ದ ಆ ಗ್ರಾಮೀಣ ಪ್ರದೇಶದಲ್ಲಿ, ನನ್ನ ಗೌರವಪೂರ್ವಕವಾದ ಮಾತುಗಳು ತಿಮ್ಮಕ್ಕನವರಿಗೆ ಆಶಾಕಿರಣವಾಗಿ ಕಂಡಿರಬೇಕು.

ನನ್ನ ಮೊದಲ ಭೇಟಿಯ ಸಮಯದಲ್ಲಿ, ತಿಮ್ಮಕ್ಕನ ಗುಡಿಸಿಲಿನಲ್ಲಿ ಕುಳಿತುಕೊಳ್ಳಲು ಒಂದು ಚಾಪೆಯೂ ಇಲ್ಲದ ಅವಸ್ಥೆ. ನಾನು ಅಜ್ಜಿಯ ಮನೆಗೆ ಹೋದರೆ, ಸಂಕೋಚದಿಂದ ಅವಳ ಜೀವ ಹಿಂಡಿಹೋಗುತ್ತಿತ್ತು. ಕುಡಿಯಲು ನನಗೆ ನೀರು ಕೊಡಲು ಆಕೆಗೆ ಆತಂಕ. ಅಂದು ಪ್ಲಾಸ್ಟಿಕ್ ನೀರಿನ ಬಾಟಲಿಗಳು ಇನ್ನೂ ಬಂದಿರಲಿಲ್ಲ. ಆ ಮನೆಯ ಬಾಗಿಲಿಗೆ ನಾನು ಹೋದದ್ದೇ, ತಿಮ್ಮಕ್ಕನ ಪಾಲಿಗೆ ಸಂಭ್ರಮ, ಗಾಬರಿ ಎನಿಸಿತ್ತು.

ಮಗುವಿನಂತೆ ಓಡಿಹೋದವಳೇ, ಪಕ್ಕದ ಗುಡ್ಲು ಅಂಗಡಿಯಿಂದ ಬಿಸ್ಕತ್ತು ಬಾಳೇಹಣ್ಣು ತಂದು ‘ತಗಳ್ಳಿ ಸಾಮಿ’ ಎಂದು ನನ್ನ ಮುಂದಿಟ್ಟು, ಅಮಾಯಕತನದಿಂದ ಅಂಗಲಾಚುತ್ತಿದ್ದಳು. ‘ಅಜ್ಜಿ, ಹಾಗೆಲ್ಲ ಸಂಕೋಚ ಪಡಬಾರದು’ ಎಂದು ನಾನು ಎಷ್ಟೇ ಧೈರ್ಯ ತುಂಬಿದರೂ, ಹಲವು ದಶಕಗಳ ಕಾಲ ಜಾತಿಯ ಕಾರಣದಿಂದ ನೋವುಂಡ ಆ ಜೀವಕ್ಕೆ ನಂಬಿಕೆಯೇ ಬರುತ್ತಿರಲಿಲ್ಲ.

ಮರಗಳ ಬಳಿ ಫೋಟೋ ಸೆಷನ್!

ಆ ದಿನ ತಿಮ್ಮಕ್ಕನವರನ್ನು ವಿವರವಾಗಿ ಮಾತನಾಡಿಸಿದೆ; ಅವರು ರಸ್ತೆಯುದ್ದಕ್ಕೂ ಮರಗಳನ್ನು ಬೆಳೆಸಿದ ಕಥೆಯನ್ನು ಕೇಳಿದೆ; ಅದಕ್ಕೆ ಅವರು ಪಟ್ಟ ಕಷ್ಟವನ್ನು ಆಲಿಸಿದೆ. ರಸ್ತೆ ಬದಿಯಲ್ಲಿ ಹಸಿರು ಬೆಳೆಸಿದ ಅವರ ಕಥೆಯನ್ನು ಕೇಳಿ ಅಚ್ಚರಿಯಾಯಿತು. ಛಾಯಾಚಿತ್ರಗ್ರಾಹಕರನ್ನು ಕರೆದೊಯ್ದು, ತಿಮ್ಮಕ್ಕನವರನ್ನು ಮರಗಳ ಬಳಿ ನಿಲ್ಲಿಸಿ ಫೋಟೋ ತೆಗೆಸಿದೆ. ಆಗಿನ್ನೂ ಅವರು ಮುಗ್ಧ ಮಹಿಳೆ; ಮರಗಳ ಬಳಿ ತನ್ನನ್ನು ನಿಲ್ಲಿಸಿ ಫೋಟೋ ತೆಗೆಸುವುದನ್ನು ಕಂಡು ಅವರಿಗೆ ನಿಜಕ್ಕೂ ಅಚ್ಚರಿ ಯಾಗಿತ್ತು!

ಅವರು ಸಾಲು ಮರಗಳನ್ನು ಬೆಳೆಸಿದ ಸಾಹಸದ ವಿಚಾರದ ವರದಿಯೊಂದನ್ನು ಸಿದ್ಧಪಡಿಸಿ ಬೆಂಗಳೂರಿನ ಪ್ರಸಿದ್ಧ ದಿನಪತ್ರಿಕೆಗೆ ಕಳುಹಿಸಿದೆ. ಗ್ರಾಮೀಣ ಪ್ರದೇಶದಲ್ಲಿದ್ದ ಏಕಾಂಗಿ ಮಹಿಳೆ ತಿಮ್ಮಕ್ಕನವರ ಆ ಅಪರೂಪದ ಸೇವೆಯನ್ನು ಸಂಪಾದಕೀಯ ವಿಭಾಗದವರು ನಂಬಲಿಲ್ಲ.

‘ರಸ್ತೆಯ ಅಂಚಿನಲ್ಲಿ ಯಾರಾದರೂ ಗಿಡನೆಡುತ್ತಾರೆಯೇ? ಸರಕಾರದ ಇಲಾಖೆಯ ಕೆಲಸವದು, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಸಂಪರ್ಕಿಸಿ ಖಚಿತ ಮಾಹಿತಿ ಪಡೆದು ಕಳಿಸಿ’ ಎಂದು ನನಗೆ ತಿಳಿಸಿದರು.

ಪತ್ರಿಕೆಯವರ ಸೂಚನೆಯಂತೆ, ಸಂಬಂಧಿಸಿದವರಿಂದ, ಸ್ಥಳೀಯರಿಂದ ಖಾತರಿಪಡಿಸಿಕೊಂಡು ‘ಹೌದು, ಅವರೇ ಸಾಲು ಮರಗಳನ್ನು ನೆಟ್ಟು ಬೆಳೆಸಿದವರು; ಅದರಲ್ಲೂ ಮರ ನೆಡುವಲ್ಲಿ ಬಿಕ್ಕಲು ಚಿಕ್ಕಯ್ಯನದೇ ಹೆಚ್ಚಿನ ಶ್ರಮವೆಂದು’ ಸ್ಪಷ್ಟವಾಯಿತು. ಈ ವಿಚಾರವನ್ನು ಸಂಪಾದಕೀಯ ವಿಭಾಗದ ಗಮನಕ್ಕೆ ತಂದಾಗ ಲೇಖನವು ಆಯ್ಕೆಯಾಗಿ 19-6-1996ರ ಭಾನುವಾರದ ಪುರವಣಿ ಯಲ್ಲಿ ಚಿತ್ರ ಮತ್ತು ಬರಹ ಪ್ರಕಟವಾಯಿತು. (‘ಸಾಲುಮರದ ಸಂಗಾತಿ ತಿಮ್ಮಕ್ಕ’).

ಪತ್ರಿಕೆಯವರು, ನನ್ನ ವರದಿಯನ್ನು ತಿದ್ದಿ, ಅದನ್ನು ಒಂದು ಫೀಚರ್ ಲೇಖನದ ರೂಪದಲ್ಲಿ, ಛಾಯಾಚಿತ್ರ ಸಹಿತ ಆಕರ್ಷಕವಾಗಿ ಪ್ರಕಟಿಸಿದ್ದರು; ಪರಿಸರ ಪ್ರೇಮದ ಅಪರೂಪದ ಉದಾಹರಣೆ ಯನ್ನು ಆ ಲೇಖನದ ಮೂಲಕ ಬಿಂಬಿಸಿದ್ದರು. ಹಸಿರು ಬೆಳೆಸುವ, ಮರಗಳನ್ನು ರಕ್ಷಿಸುವ ಪರಿಸರ ಪ್ರೇಮದ ಆ ಒಂದು ಲೇಖನವು ಓದುಗರಿಗೆ ಬಹಳ ಇಷ್ಟವಾಯಿತು!

400ಕ್ಕೂ ಅಧಿಕ ಪತ್ರಗಳು

ಸಾಲುಮರದ ತಿಮ್ಮಕ್ಕನ ಕುರಿತ ಮೊದಲ ಲೇಖನ ಅದು; ಆ ಲೇಖನಕ್ಕೆ ನಾನ್ನೂರಕ್ಕೂ ಹೆಚ್ಚು ಮೆಚ್ಚುಗೆಯ ಪತ್ರಗಳು ಬಂದು ಅದೊಂದು ದಾಖಲೆಯಾಯಿತು. ಆ ಪತ್ರಿಕಾ ಲೇಖನದ ಮೂಲಕ ರಾಜ್ಯವ್ಯಾಪಿ ತಿಮ್ಮಕ್ಕ ಕೀರ್ತಿವಂತಳಾದರು. ಅವರ ಬಡತನದ ವಿಚಾರ ತಿಳಿದು, ಹಲವು ಕಡೆ ಗಳಿಂದ ಸಹಾಯಹಸ್ತಗಳು ಬರಲಾರಂಭಿಸಿದವು. ಇದಕ್ಕೆ ಮುಖ್ಯ ಕಾರಣವೆಂದರೆ, ಪತ್ರಿಕೆಯ ಪ್ರಭಾವ ಎಂದು ತಿಮ್ಮಕ್ಕನಿಗೆ ಮೊದಲಿಗೆ ಹೊಳೆಯಲೇ ಇಲ್ಲ!

ಅಕ್ಷರವನ್ನು ಕಾಣದ ಆ ಮರದ ಮಾತೆಗೆ ಪ್ರಸಿದ್ಧ ದಿನಪತ್ರಿಕೆ ಎಂದರೇನು ಗೊತ್ತು, ಆ ಪತ್ರಿಕೆಯ ವ್ಯಾಪ್ತಿಯ ಪ್ರಭಾವ ಏನು ಗೊತ್ತು? ಅಂದು ಅಷ್ಟೊಂದು ಮುಗ್ಧೆ ಅವರು. ನಾನು ಹಲವು ಬಾರಿ ಅವರನ್ನು ಭೇಟಿಮಾಡಿದರೂ, ನಾನು ಹವ್ಯಾಸಿ ಬರಹಗಾರನೆಂದೂ, ಆಕೆಯ ಕುರಿತು ಮಾಹಿತಿ ಸಂಗ್ರಹಿಸಿ ಲೇಖನ ಬರೆದೆನೆಂದೂ ಅವರಿಗೆ ಅವಳಿಗೆ ತಿಳಿಯಲೇ ಇಲ್ಲ!

ಗ್ರಾಮಕ್ಕೆ ಹಲವು ಕೃಷಿ ಇಲಾಖೆಯ ಅಧಿಕಾರಿಗಳು ಆಗಾಗ ಬರುತ್ತಿದ್ದರಲ್ಲ, ನಾನು ಸಹಾ ಅವರಲ್ಲೊಬ್ಬನೆಂದು ಭಾವಿಸಿದ್ದರು.

ಮೊದಲ ಸನ್ಮಾನ

ಜೂನ್ 1994ರಲ್ಲಿ ಸಾಲುಮರದ ತಿಮ್ಮಕ್ಕನವರ ಕುರಿತು ನಾನು ಬರೆದ ಮೊದಲ ಲೇಖನ ಪ್ರಕಟ ಗೊಂಡಿತು. ಹುಲಿಕಲ್ಲು, ಕುದೂರು, ಮಾಗಡಿ ಮೊದಲಾದ ಕಡೆ ಅವರ ‘ಸಾಲುಮರದ ಸೇವೆ’ ಪ್ರಸಿದ್ಧಿ ಪಡೆಯಿತು! ಅದಾಗಿ ಎರಡೇ ತಿಂಗಳಲ್ಲಿ, 1994ರ ಆಗಸ್ಟ್ 15 ರಂದು ನೆಲ ಮಂಗಲ ತಾಲ್ಲೂಕಿನ ಸ್ವಾತಂತ್ರ್ಯೋತ್ಸವದಲ್ಲಿ ನೆಲಮಂಗಲ ಲಯನ್ಸ್ ಕ್ಲಬ್ ವತಿಯಿಂದ ಅವರನ್ನು ಸನ್ಮಾನಿ ಸಲಾಯಿತು; ಜತೆಗೆ, ಅವರ ಖರ್ಚು ವೆಚ್ಚಕ್ಕೆ ಸಣ್ಣ ಮೊತ್ತದ ಕಾಸು ಕೊಡಿಸಿ, ನನ್ನ ಮನೆಯಲ್ಲಿಯೇ ಎರಡು ದಿನ ಉಳಿಸಿಕೊಂಡಾಗ, ಅವರಿಗೆ ಜಾತಿಯ ಮೈ ಚಳಿ ಹೋಗಿ, ಸ್ವಲ್ಪಮಟ್ಟಿಗೆ ಜನರೊಂದಿಗೆ ಬೆರೆಯಲಾರಂಭಿಸಿದರು.

ಇದೇ ತಿಮ್ಮಕ್ಕನ ಮೊದಲನೆಯ ಗೌರವದ ಸಮಾರಂಭ. ನಂತರ ಅವರಿಗೆ ಜನಬಳಕೆ ಅಭ್ಯಾಸ ವಾಯಿತು; ಸಾಲು ಮರಗಳನ್ನು ಬೆಳೆಸಿದ್ದು, ಸುಮಾರು 400 ಮರಗಳನ್ನು ರಕ್ಷಿಸಿದ್ದು ಒಂದು ಅಪರೂಪದ ಸಾಧನೆ ಎಂದು ಆಕೆಗೆ ನಿಧಾನವಾಗಿ ಅರಿವಾಗಿ, ತನ್ನ ಪ್ರಾಮುಖ್ಯತೆಯೂ ತಿಳಿಯ ತೊಡಗಿತು.

ಯಾರಾದರೂ ಕೇಳಿದರೆ ‘ನೆಲ ಮಂಗಲದ ನೆಗಳೂರು ಎಂಬುವವರು ಬಂದರು, ಅದೇನೋ ಬರೆದುಕೊಂಡು ನನ್ನ ಪಟ ತೆಗೆದರು, ಪೇಪರ್ ನಲ್ಲಿ ನನ್ನ ಪಟ ಬಂತಂತೆ ಸಾಮಿ’ ಎನ್ನುತ್ತಿದ್ದರು. 2015ರಲ್ಲಿ ಪ್ರಕಟವಾದ ಇಂದಿರಮ್ಮಾ ಬೇಲೂರು ಅವರ ‘ಸಾಲುಮರದ ಸರದಾರಿಣಿ’ ಜೀವನ ಚರಿತ್ರೆಯಲ್ಲಿ, ನೆಗಳೂರ್ ಎಂಬ ಹವ್ಯಾಸಿ ಬರಹಗಾರರು ತಮ್ಮ ಬರಹಕ್ಕೆ ಟೈಟಲ್ ಆಗಿ ನೀಡಿದ ‘ಸಾಲುಮರದ ಸಂಗಾತಿ’ ಶೀರ್ಷಿಕೆ ತಿಮ್ಮಕ್ಕರ ಬಾಳಿಗೆ ಮರುಜನ್ಮ ನೀಡಿತ’ ಎಂದು ಉಲ್ಲೇಖಿಸಿ ದ್ದಾರೆ.

ಅಮಾಯಕ ಮತ್ತು ಮುಗ್ಧ ಗ್ರಾಮೀಣ ಮಹಿಳೆಯ ಸಾಧನೆಯನ್ನು ಗುರುತಿಸಿ, ಬೆಳಕಿಗೆ ತಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಟ್ಟದಲ್ಲಿ ಗುರುತಿಸುವಂತಾಗುವುದಕ್ಕೆ ನಾನು ಧನ್ಯ. ವಿಶ್ರಾಂತ ರಾಜ್ಯಪಾಲರಾಗಿದ್ದ ನ್ಯಾಯಮೂರ್ತಿ ಎಂ.ರಾಮಾಜೋಯಿಸ್ ಅವರ ಕರೆಯ ಮೇರೆಗೆ ತಿಮ್ಮಕ್ಕ ನನ್ನು ನಾನು ಅವರ ಮನೆಗೆ ಕರೆದುಕೊಂಡು ಹೋದಾಗ, ಅತ್ಯಂತ ಆತ್ಮೀಯತೆಯಿಂದ ಕಂಡ ಮಾತೆ ವಿಮಲಾಜೋಯಿಸರು (ರಾಮಾಜೋಯಿಸರ ಪತ್ನಿ) ಸತ್ಕರಿಸಿ ಗೌರವವಾದರಗಳನ್ನು ನೀಡಿದ್ದನ್ನು ಸದಾ ಸ್ಮರಿಸುತ್ತಿದ್ದರು.

01-04-1995ರದಂದು ಬೆಂಗಳೂರಿನಿಂದ ಪ್ರಕಟವಾಗುವ ಇಂಗ್ಲಿಷ್ ದೈನಿಕದಲ್ಲಿ ‘ತಿಮ್ಮಕ್ಕ ಅಂಡ್ ಹರ್ 284 ಚಿಲ್ಡ್ರನ್’ ಎಂಬ ಲೇಖನವು ನನ್ನ ಲೇಖನದ ಆಧಾರದಿಂದ ಪ್ರಕಟಗೊಂಡಿತು; ತಿಮ್ಮಕ್ಕ ನವರು ಸಿಟಿಜನ್ ಅವಾರ್ಡ್‌ಗೆ ಆಯ್ಕೆಯಾಗಿ, ಇನ್ನಷ್ಟು ಪ್ರಸಿದ್ಧರಾದರು. ಅರಣ್ಯೀಕರಣದಲ್ಲಿ ಮಹಿಳೆಯರ ಪಾತ್ರದ ಬಗ್ಗೆ 1998ರಲ್ಲಿ ಜಾಗತಿಕ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸ ಲಾಗಿತ್ತು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನಾರಾಯಣಗೌಡರು ಮರ ಮಾತೆಯ ಸೇವೆಯನ್ನು ದಾಖಲಿಸಿ ಪ್ರಸ್ತುತ ಪಡಿಸಿದ್ದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನ ಪಡೆದು ಜಾಗತಿಕ ಮನ್ನಣೆಗೆ ತಿಮ್ಮಕ್ಕ ಪಾತ್ರರಾದರು. ಟುಡೇಸ್ ಹೀರೋ ಶೀರ್ಷಿಕೆಯಲ್ಲಿ 01-04-1998ರ ‘ರೀಡರ‍್ಸ್ ಡೈಜೆಸ್ಟ್’ ಸಂಚಿಕೆಯಲ್ಲಿ ನನ್ನ ಲೇಖನವನ್ನು ಆಧರಿಸಿದ ಬರಹ ಪ್ರಕಟವಾಯಿತು ಮತ್ತು ಅದು ಜಗತ್ತಿನ ಪ್ರಮುಖ 19 ಭಾಷೆಗಳಲ್ಲಿ ಭಾಷಾಂತರವಾಗಿದ್ದು ತಿಮ್ಮಕ್ಕನಿಗೆ ಸಂದ ಜಾಗತಿಕ ಗೌರವ.

ಕುಗ್ರಾಮದ ಮುಗ್ಧ ಮಹಿಳೆ, ಬದುಕಿದ್ದಾಗಲೇ ದಂತಕಥೆಯಾದುದು, ಶಾಲಾ ಕಾಲೇಜುಗಳ ಪಠ್ಯ ಪುಸ್ತಕವಾದದ್ದು ನನ್ನ ಸಣ್ಣದೊಂದು ಪ್ರಯತ್ನದಿಂದ ಎನ್ನುವ ಅಭಿಮಾನ ನನ್ನದು. ತಿಮ್ಮಕ್ಕ ನಿಂದ ನಾನೂ ಸಾರ್ಥಕ್ಯಪಡೆ ದಂತಾಯಿತು.

ಪ್ರಾಮಾಣಿಕ ಮತ್ತು ಫಲಾಪೇಕ್ಷೆಯಿಲ್ಲದ ಸೇವೆಗೆ ಗೌರವಾದರಗಳು ಇದ್ದೇ ಇವೆ ಎನ್ನುವುದಕ್ಕೆ ತಿಮ್ಮಕ್ಕ ಬಿಕ್ಕಲು ಚಿಕ್ಕಯ್ಯ ಸಾಕ್ಷಿಯಾಗಿರುತ್ತಾರೆ. ಈ ದಂಪತಿ ಕೈಗೊಂಡ ಕೆಲಸ ಬೆಲೆಕಟ್ಟಲಾಗದ್ದು; ಹಸುರುಕ್ಕುವ ಮರ ಬೆಳೆಸಿದ ತಿಮ್ಮಕ್ಕ ಜಾಗತಿಕ ಮಾದರಿಯಾಗಿ ಮಿಂಚಿದರು. ಬಡತನ ಕ್ರಮೇಣ ದೂರವಾಗಿ ಪುರಸ್ಕಾರ ದೇಣಿಗೆಗಳು ಹರಿದುಬಂದವು. ಜಗತ್ತಿನ ಪ್ರಭಾವಿ ಮಹಿಳೆಯರಲ್ಲೊಬ್ಬರಾಗಿ ತಿಮ್ಮಕ್ಕನನ್ನು ಗುರುತಿಸಲಾಯಿತು.

ಸಾಲುಮರದ ತಿಮ್ಮಕ್ಕನನ್ನು ನಾನು ಮೊದಲ ಬಾರಿ ಕಂಡಾಗ, ಅವರಿಗೆ ಅಜಮಾಸು 55 ರಿಂದ 60 ವಯಸ್ಸು ಇದ್ದಿರಬಹುದು. (1994ಲ್ಲಿ). ನಂತರದ ದಿನಗಳಲ್ಲಿ ಅವರ ಜನ್ಮದಿನಾಂಕವನ್ನು 30-06-1911 ಎಂದು ಗುರುತಿಸಲಾಯಿತು. ಅವರ ಕೊಡುಗೆ ಜಗತ್ತಿಗೆ ಮಾದರಿ. ಯಾವುದೇ ಜಾತಿಯವ ರಾಗಿರಲಿ ಹೆಣ್ಣಾಗಲಿ, ಗಂಡಾಗಲಿ, ಬಡವ ಸಿರಿವಂತರಾಗಲಿ ಸಾಮಾಜಿಕ ಕಳಕಳಿ ಇದ್ದರೆ, ಬರಿಗೈ ಸಹಾಯದಿಂದಲೂ ಸಮಾಜಕ್ಕೆ ಕೊಡುಗೆ ಕೊಡಬಹುದು ಎಂಬುವುದನ್ನು ತಿಮ್ಮಕ್ಕ ಸಾಧಿಸಿ ತೋರಿಸಿದ್ದಾರೆ.

ಹಸಿರು ಪ್ರಶಸ್ತಿ

ತಿಮ್ಮಕ್ಕನ ಹೆಸರಿನಲ್ಲಿ ಪರಿಸರ ಪ್ರಶಸ್ತಿನೀಡಲು ಕಾರ್ಯಕ್ರಮ ಆಯೋಜಿಸಿ, ಅಜ್ಜಿಯ ಶತಮಾನೋ ತ್ಸವದ ಆಚರಣೆಯ ಸಮಿತಿಯೊಂದನ್ನು ರಚಿಸಿ, ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ 18-03-2015ರಂದು ಪರಿಸರಕ್ಕಾಗಿ ದುಡಿದ 30 ಜನರನ್ನು ಆಯ್ಕೆ ಮಾಡಿ ‘ಸಾಲುಮರದ ತಿಮ್ಮಕ್ಕ ಹಸಿರು ಪ್ರಶಸ್ತಿ 2015’ ನೀಡಿ ಗೌರವಿಸಲಾಯಿತು.

ಸರ್ಕಾರ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಿ ರಾಜ್ಯ ಪರಿಸರ ವಕ್ತಾರರನ್ನಾಗಿ ಗುರುತಿಸಿ ಗೌರವಿಸಿತು; ಸಂಘಸಂಸ್ಥೆಗಳು ತಿಮ್ಮಕ್ಕನವರಿಗೆ ಅಪಾರ ಗೌರವ ನೀಡಿವೆ; ಅವರು ಪಡೆದ ಪ್ರಶಸ್ತಿ ಗಳು ಹಲವು.

ಇಳಿವಯಸ್ಸಿನಲ್ಲಿ, ತಿಮ್ಮಕ್ಕನ ಬಾಳಿಗೆ ದೈವವಾಗಿ ಬಂದವರು ಮಾನಸ ಪುತ್ರ ಉಮೇಶ್. ಬಾಲ್ಯದಲ್ಲಿ ಪರಿಸರ ಪ್ರೇಮಿಯಾಗಿದ್ದ ಬೇಲೂರು ಬಳಿಯ ಬಳ್ಳೂರಿನ ವನ ಸಿರಿಯ ಉಮೇಶ್ ಶಿಕ್ಷಕ ತರಬೇತಿ ಪದವೀಧರ ವಿದ್ಯಾರ್ಥಿ ದಿಶೆಯಲ್ಲಿಯೇ ಸಾವಿರಾರು ಗಿಡನೆಟ್ಟು ಬೆಳೆಸಿದವರು.

ತಿಮ್ಮಕ್ಕನ ಸೇವೆಯೊಂದಿಗೆ ಕಟ್ಟೆಯ ಕಲ್ಲು ಕಟ್ಟೆಗೆ ಸೇರಿದಂತಾಯಿತು. ಕೋಟಿಗಿಡ ನೆಡಬೇಕೆನ್ನುವ ಸಂಕಲ್ಪ ಉಮೇಶರದ್ದಾಗಿದೆ. 2007ರಲ್ಲಿ ‘ಯಂಗ್ ಅಚೀವರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾನಸ ಮಾತೆಯನ್ನು ಕಳೆದುಕೊಂಡ ಉಮೇಶರಿಂದ ಇನ್ನಷ್ಟು ಪರಿಸರ ಸೇವೆ ನಡೆಯಲಿ, ಅವರಿಂದ ಇನ್ನಷ್ಟು ಸಾಧನೆಯಾಗಲೆಂದು ಶುಭ ಹಾರೈಕೆ.