ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆನ್ನು ನೋವಿಗೆ ಬಂಗಾರದ ಪುಡಿ !

ನಂಗೆ ಬೇರೆ ದಾರಿ ಇರಲಿಲ್ಲ. ಸೊಂಟದ ಸಹವಾಸ ತುಂಬಾ ಬೇಕಿತ್ತು. ಸಾರಿ , ಸೊಂಟ ಅಂದೆ. ಡಾಕ್ಟರ್ ಹತ್ರ ಹೋಗೊದು ಅನಿವಾರ್ಯ. ಡಾಕ್ಟರು ಹೇಳಿದ್ರು. ‘ಜಾಸ್ತಿ ತೊಂದರೆ ಇಲ್ಲ. ಸ್ಪಾಸಮ್ ಆಗಿದೆ. ಏಳು ದಿನ ಫಿಸಿಯೋ ಥೆರಪಿ ಮಾಡಿಸ್ಕೊಳಿ. ಸರಿಹೋಗತ್ತೆ’ ‘ಸ್ಪಾಸಮ್ ಅಂದ್ರೇನು ಸಾರ್?’ ನನ್ನ ಮುಖ ನೋಡಿ, ಡಾಕ್ಟರು ಮನಸ್ಸಿನಲ್ಲಿ ’ತಲೆಹರಟೆ’ ಅಂದುಕೊಂಡ್ರು ಅನ್ನಿಸುತ್ತೆ.

ಬೆಂ.ಶ್ರೀ ರವೀಂದ್ರ, ಬೆಂಗಳೂರು

ಹಲವು ವರ್ಷಗಳಿಂದ ಸತಾಯಿಸುತ್ತಿದ್ದ ಬೆನ್ನು ನೋವು ವಾಸಿ ಮಾಡುತ್ತೇನೆ ಎಂದು ಸಹಾಯ ಮಾಡಲು ಬಂದ ಆ ವ್ಯಕ್ತಿ, ಬಂಗಾರದ ಪುಡಿ ತಗೊಳಿ ಎಂದದ್ದೇಕೆ ?

ಸೊಂಟ ಅನ್ನೊದು ನನ್ನ ಶರೀರದ ಭಾಗ ಅಂತ ನನಗೆ ಅರಿವಾದದ್ದೆ 2005ರ ಸುಮಾರಿ ನಲ್ಲಿ. ಇದ್ದಕ್ಕಿದಂತೆ ಸೊಂಟದ ಮಾಂಸಖಂಡಗಳು ಸೆಟಗೊಂಡು ಬಿಗಿಯಾಗಿ ಸರಾಗ ಚಲನೆಗೆ ಬ್ರೇಕ್ ಹಾಕಿ, ‘ಗುರುವೇ ನಿನ್ನ ಬಾಡಿಲಿ ನಾನೂ ಇದ್ದೀನಿ. ಅದೂ ಮುಖ್ಯ ಭಾಗದಲ್ಲಿ. ಕೆಳಗೆ ಕಾಲು, ಮೇಲೆ ಶರೀರ. ಎರಡಕ್ಕೂ ಲಿಂಕು ನಾನು. ಕಾಲು ಓಡೋಕ್ಕೂ ನಾನು ಬೇಕು. ಮೇಲಿನ ಶರೀರದ ಶೋಕಿಗೆ, ಚಿನ್ನಾಟಕ್ಕೆ ನಾನು ಬೇಕೇ ಬೇಕು. ಸೊಂಟ ಗಟ್ಟಿಯಿಲ್ಲದಿದ್ದರೆ ನಿನ್ನಾಟ ಏನೂ ನಡೆಯಲ್ಲ. ಮೊನ್ನೆ ನಿನ್ನ ಬ್ಯಾಂಕಿನ ರಂಬೆ ಏನು ಹೇಳಿದ್ಲು, ಜ್ಞಾಪಕ ಇದ್ಯಾ!

ಏನ್ಸಾರ್ ಯಾಕೊ ಬಗ್ಗಿ ನಡಿತಾ ಇದಿರಿ!. ಸೊಂಟದ ಶಕ್ತಿಬತ್ತಿ ಬತ್ತಿತಾ? ಅಂತ ನಕ್ಕಳಲ್ಲಾ ! ಗೊತ್ತಾಗಲಿಲ್ವಾ’ ಅಂತ ಅಣಕಿಸಿದ್ದು! ಪಾಪ, ನಿನ್ನ ಕಥೆ ಏನಾಗಿರಬ್ಯಾಡ. ಏಯ್ ಸುಮ್ನಿರೇ ಅನ್ನೂಕ್ಕೂ ನನ್ನ ಶಕ್ತಿ ಉಡಗಿತ್ತು. ನನ್ನ ಕೆಲಸವೋ ಬಹಳ ಓಡಾಟದ್ದು. ಓಡಾಡಿ ಬೀಡಾಡಿಗಳನ್ನೂ ಬಿಡದೆ ಮಾತನಾಡಿಸಬೇಕಿತ್ತು. ಇಲ್ಲದಿದ್ದರೆ ಮುಂದಿನ ಚುನಾವಣೆಗೆ ಓಟು ಬೀಳಲ್ಲ!

ಸೊಂಟ ಹೇಳಕ್ಕೆ ಶುರು ಮಾಡ್ತು. ‘ಗುರುವೇ, ನಾಲಗೆ, ಕಿವಿ ಮತ್ತು ಬುದ್ದಿಗೆ ಎಷ್ಟು ಬೆಲೆ ಇದ್ಯೋ ಅದಕ್ಕಿಂತ ನನ್ನ ಬೆಲೆ ಜಾಸ್ತಿ!’ ನಿನ್ನ ಮಾತು ನಿಜ ಅನ್ಸತ್ತೆ. ಆದರೆ ನಿನ್ನ ಇರವೇ ಇಷ್ಟು ದಿನ ತಿಳಿಲಿಲ್ಲ. ಈಗ್ಯಾಕೆ ತೊಂದರೆ ಕೊಡ್ತಿ? ನಾನೇನು ಮಾಡ್ಲಿ. ನಿನಗೆ ತೊಂದ್ರೆ ಕೊಡ್ಬೇಕು ನನ್ಗೇನು ಇರಲಿಲ್ಲ. ಆದರೆ ನಿನ್ನ ಬೆನ್ನುಮೂಳೆಗಳು ಸವಿಯೊಕ್ಕೆ ಶುರು ಆಗಿದೆ. ನಿನ್ನ ಕಶೇರುಕಖಂಡಗಳು ಒಂದಕ್ಕೊಂದು ಒತ್ಕೊತಾಯಿದೆ. ಮಧ್ಯ ನರ ; ಪಾಪ ಸಿಕ್ಕೊಂಡಿದೆ.

ಅಯ್ಯೋ ! ಕಶೇರುಕ ಖಂಡಗಳಾ. ಅದೇನು? ನಾ ಕೇಳೇ ಇರಲಿಲ್ಲ! ಹ್ಞಾಂ... ಮತ್ತೆ ಎಲ್ಲಾ ಚೆನ್ನಾಗಿದ್ರೆ, ದೇವರ ನೆನಪು ಬರ್ತಾ! ಅಂತು ಸೊಂಟ. ಮುಂದುವರೆಸಿತು, ‘ದಾಸರೇನೋ ಹೇಳಿದರು, ಕಣ್ಣು, ನಾಲಗೆ, ಮನವು ತನ್ನದೆಂದೆನಬೇಡ. ಆದರೆ ಸೊಂಟ ನಿನ್ನದು ಅನಬ್ಯಾಡ ಅಂತ ಏನೂ ಹೇಳಿಲ್ವಲ್ಲಾ!.

ನನ್ನ ಬಗ್ಗೆನೂ ಗಮ್ನ ಕೊಡು. ಅನ್ಯಾಯ ಮಾಡಬೇಡ. ಜನ ಮಾತಾಡೋದು ಕೇಳಿದಿನಿ ನಾನು. ‘ಅವನ್ಯಾಕೋ ತುಂಬಾ ತಲೆಹರಟೆ; ಸೊಂಟ ಮುರಿದ್ರೆ ಸರಿಯಾಗ್ತಾನೆ’ ಅಂತ. ತಲೆ ಹರಟೆ ಮಾಡಿದ್ರೆ ತಲೆಗೆ ಶಿಕ್ಷೆ ಕೊಡಬೇಕು! ಸೊಂಟಕ್ಕೆ ಯಾಕೆ ಶಿಕ್ಷೆ!

ಇದನ್ನೂ ಓದಿ: Srivathsa Joshi Column: ಪ್ರತಿ ಕಚ್ಚುವಿಕೆಯಲ್ಲಿ ಆನಂದ: ಹಿಟ್ಟಲ್ಲ, ಸೂಪರ್‌ ಹಿಟ್‌ !

ನಂಗೆ ಬೇರೆ ದಾರಿ ಇರಲಿಲ್ಲ. ಸೊಂಟದ ಸಹವಾಸ ತುಂಬಾ ಬೇಕಿತ್ತು. ಸಾರಿ , ಸೊಂಟ ಅಂದೆ. ಡಾಕ್ಟರ್ ಹತ್ರ ಹೋಗೊದು ಅನಿವಾರ್ಯ. ಡಾಕ್ಟರು ಹೇಳಿದ್ರು. ‘ಜಾಸ್ತಿ ತೊಂದರೆ ಇಲ್ಲ. ಸ್ಪಾಸಮ್ ಆಗಿದೆ. ಏಳು ದಿನ ಫಿಸಿಯೋ ಥೆರಪಿ ಮಾಡಿಸ್ಕೊಳಿ. ಸರಿಹೋಗತ್ತೆ’ ‘ಸ್ಪಾಸಮ್ ಅಂದ್ರೇನು ಸಾರ್?’ ನನ್ನ ಮುಖ ನೋಡಿ, ಡಾಕ್ಟರು ಮನಸ್ಸಿನಲ್ಲಿ ’ತಲೆಹರಟೆ’ ಅಂದುಕೊಂಡ್ರು ಅನ್ನಿಸುತ್ತೆ.

ನಗುತ್ತಾ ಹೇಳಿದರು, ‘ಸ್ನಾಯು ಸೆಳೆತ. ದೈವ ಸೃಷ್ಟಿ ಎಷ್ಟು ಚೆನ್ನಾಗಿದೆ ನೋಡಿ. ನೀವು ಬೇಜವಾಬ್ದಾರಿಯಿಂದ ಏನೋ ಎತ್ತಕ್ಕೊ, ಬಗ್ಗಿ ಕೆಲಸ ಮಾಡಕ್ಕೊ ಹೋಗಿರ್ತೀರಾ. ಕಶೇರುಕಗಳು ಸವೆದಿರುವುದರಿಂದ ಮೂಳೆ ಮುರಿತವೋ, ಕಶೇರುಕಗಳ ನಡುವಿನ ಬಿಲ್ಲೆ ಜಾರಬಹುದೊ ಆಗತ್ತೆ. ಆಗ ಬುದ್ಧಿವಂತ ಶರೀರ ತಕ್ಷಣ ಆ ನಿರ್ದಿಷ್ಟವಾದ ಸ್ಥಳದ ಮಾಂಸ ಖಂಡಗಳನ್ನು ಸಂಕುಚಿಸಿ ಗಟ್ಟಿ ಮಾಡತ್ತೆ. ನಿಮಗೆ ದೊಡ್ಡ ತೊಂದರೆ ಆಗೋದು ತಪ್ಪುತ್ತೆ. ನಾಕು ದಿನ ಕಳೆದರೆ ಸಂಕುಚಿತ ಸ್ನಾಯುಗಳು ಸಡಿಲವಾಗತ್ತೆ. ನೀವು ಮಾಮೂಲಿ ಆಗ್ತೀರಿ.’ ಅಂದ್ರು.

ನಾನು ಈ ವಿಷಯನ ಅರಗಿಸಿಕೊಳ್ಳತಾ ಇದ್ದಾಗ, ಸೊಂಟ ಚುಳಕ್ ಅಂತು. ಏನ್ ಮರಾಯ’ನಾನು ನಿನ್ನ ಕಾಪಾಡ್ದೆ ಅಲ್ವಾ! ಬೇಡವೋ ಶಿಸ್ಯಾ ಸೊಂಟದ ವಿಸ್ಯಾ ಅನ್ನ ಬ್ಯಾಡ. ಸೊಂಟದ ಆಸುಪಾಸು ಇನ್ನೂ ಡೆಂಜರು. ಬಾಸು, ಉಸಾರು’ ಅಂದಿದ್ದು ಕೇಳಿಸ್ತು.

ಆಗೀಗ, ನಾನು ಸೊಂಟದ ಸ್ನಾಯು ಎಳೆತಕ್ಕೆ ಡಾಕ್ಟರ್ ಬಳಿ ಹೋಗುವುದು, ಮಧ್ಯೆ ಮಧ್ಯೆ... ವಾಕಿಂಗು, ಯೋಗ.. ವ್ಯಾಯಾಮ ಪ್ರಾಣಾಯಾಮ ಅಲ್ಲದೆ ಯೋಗ ವಿಜ್ಞಾನ ಕೇಂದ್ರದಲ್ಲಿ 15 ದಿನಗಳ ಶಿಬಿರವೂ ಆಯಿತು. ಬೆನ್ನು ನೋವು ವಾಸಿ ಆಗದಿದ್ದರೂ ಅಂಕೆಯೊಳಗಿತ್ತು.

2008 ಇರಬಹುದು. ಒಂದು ದಿನ ಅವಸರವಾಗಿ ಯಾವುದೋ ತರಬೇತಿ ಶಿಬಿರಕ್ಕೆ ಹೊರಟಿದ್ದೆ. ಹೊತ್ತಾಯ್ತು. ಸ್ನಾನ ಮಾಡಿ, ಕೈ ಮುಗಿದು, ಅಲ್ಲಿಗೇ ತಿಂಡಿಗೆ ಹೋಗೋಣ ಅಂತಿದ್ದೆ. ನನ್ನ ಒಬ್ಬ ಗೆಳೆಯರೂ ಮನೆಗೆ ಆಗಲೇ ಬಂದಿದ್ದರು. ಸ್ನಾನ ಮಾಡಿ, ಮೈ ಒರೆಸಿಕೊಳ್ತಾ, ಬಲಗಾಲನ್ನು ಅಲ್ಲಿಯೇ ಕಟ್ಟೆ ಮೇಲಿಟ್ಟು ಒರೆಸಿಕೊಳ್ಳಲು ಬಗ್ಗಿದೆ. ಹ್ಞಾ.... ನಾನು ಯಾವುದು ಬೇಡ ಅಂತಾ ಇದ್ನೋ ಅದೇ ಆಯ್ತು.

ಕಾಲು ಇಳಿಸೋದೆ ಕಷ್ಟವಾಯಿತು. ಹಂಗೂ.. ಹಿಂಗೂ.. ಹೊರಗೆ ಬಂದು ಕಾರ್ಯಕ್ರಮ ರದ್ದು ಮಾಡಿ, ಮಂಚದಲ್ಲಿ ಮೈ ಚೆಲ್ಲಿದೆ. ನಿಲ್ಲೋಕೆ ಆಗ್ತಾಯಿಲ್ಲ. ತಿರುಗೊಕ್ಕೂ ಆಗ್ತಾಯಿಲ್ಲ.... ಏನ ಮಾಡೋದು. ಪುನಃ.. ಮೂಳೆತಜ್ಞರ ಹತ್ತಿರ ಹೊರಟೆ. ಡಾಕ್ಟರು, ಒಂದೇ ಮಾತು ಹೇಳಿದರು ‘ಸ್ಪೈನಲ್ ಟ್ರಾಕ್ಷನ್ ಮಾಡಬೇಕು!’ ಟ್ರಾಕ್ಷನ್ ಎಂದರೇನು? ಮೂಳೆ ಎಳೆದು ಕಾಲಿಗೆ ತೂಕ ಹಾಕಿ, ಕಶೇರುಕಗಳ ನಡುವೆ ಸ್ಥಳಾವಕಾಶ ಕಲ್ಪಿಸಲು ಮಾಡುವ ಸರ್ಕಸ್,’ ಸೊಂಟದ ದನಿ ನೋವಿನಲ್ಲೂ ಕೇಳಿಸಿತು.

‘ಗುರುವೇ, ಯಾಕೆ ಜಾಗರೂಕನಾಗಿರಲಿಲ್ಲ. ಅನುಭವಿಸು’. ಅಂತೂ ಟ್ರಾಕ್ಷನ್ ಹಾಕಿದರು; ಒಂದು ಹದಕ್ಕೆ ಬಂತು. 2010 ಇರಬೇಕು. ಕಾರಿಗೆ ಪೆಟ್ರೋಲ್ ಹಾಕಿಸಲು ಬಸವನ ಗುಡಿಯ ಬಂಕ್ ಬಳಿ ಗಾಡಿ ನಿಲ್ಲಿಸಿದೆ. ಬಾಗಿಲು ತೆರೆದು ಹೊರ ಬರುತ್ತಿದ್ದೆ. ಮಧ್ಯ ವಯಸ್ಸಿನ ಒಬ್ಬ ವ್ಯಕ್ತಿ ಓಡಿ ಬಂದ.

‘ಸಾರ್, ನಿಮಗೆ ಬೆನ್ನು ನೋವಿಯಿದ್ಯಾ? ಹುಷಾರು’ ಅಂದ. ಅರೇ! ಇವನಿಗೆ ಹೇಗೆ ತಿಳಿತು ಅಂತ ಆಶ್ಚರ್ಯ ಆಯ್ತು.

‘ನಿಮ್ಗೆ ಹೇಗೆ ತಿಳಿತು?’ ‘ಸಾರ್, ಕಾರಿನ ಡೋರ್ ತೆಗೆದು ಇಳಿದ ಸ್ಟೈಲ್ ನಲ್ಲಿಯೇ ಅರ್ಥ ಆಗ್ಬಿಡ್ತು. ನಾನಿಲ್ಲೇ ಕೆಲ್ಸ ಮಾಡೋದು ನನ್ನ ಹೆಸರು ರಾಮು’ ಅಂದ. ಪೆಟ್ರೋಲ್ ಹಾಕಿಸ್ಕೊಂಡು, ಗಾಳಿ ಹತ್ರ ಬಂದು ಕಾಯ್ತಾ ಇದ್ದೆ. ಆ ಮನುಷ್ಯ ಅಲ್ಲಿಗೆ ಬಂದ.

‘ಸಾರ್, ಎಷ್ಟು ವರ್ಷದಿಂದ ನಿಮಗೆ ಸೊಂಟ ನೋವು?’‘ಐದೊ ಅರೋ ಆಗಿರ್ಬೇಕು’ ‘ಏನು ಟ್ರೀಟ್‌ಮೆಂಟ್ ತಗೊಂಡ್ರಿ?’ ನಿಜ ಹೇಳಬೇಕು ಅಂದ್ರೆ, ನನ್ಗೆ ಅವತ್ತು ಬೆನ್ನು ನೋವು ಇರಲಿಲ್ಲ. ಆದರೆ ಅವನು ಸೂಕ್ಷ್ಮವಾಗಿ ಗಮನಿಸಿ, ವಿಚಾರಿಸುತ್ತಿದ್ದುದರಿಂದ ಪ್ರಭಾವಿತ ನಾಗಿದ್ದೆ.

‘ಸಾರ್, ನಮ್ಮ ತಂದೆಗೆ ನಿಮಗಿಂತ ಜಾಸ್ತಿ ವಯಸ್ಸು. 80ರ ಹತ್ರ ಇರಬೋದು. ಗಟ್ಟಿ ಮುಟ್ಟಾಗಿದಾರೆ. ಇವಾಗ್ಲೂ ಹೊಲದಲ್ಲಿ ಕೂಲಿ ಮಾಡ್ತಾರೆ. ಆರು ತಿಂಗಳ ಹಿಂದೆ ಅವ್ರಿಗೆ ತುಂಬಾ ಸೊಂಟ ನೋವು ಬಂತು. ಏಳೋಕೆ ಆಗ್ತಾ ಇರಲಿಲ್ಲ.

ಭಾಳಾ ಬೇಜಾರ್ನಲ್ಲಿ ಇದ್ರು. ನಮ್ಮೂರಲ್ಲಿ ಒಬ್ರು ಶಾಮಾಚಾರ್ ಅಂತ ನಾಟಿ ವೈದ್ಯರು ಇದಾರೆ. ಅವರು ನಾನು ಎಣ್ಣೆ ಕೊಡ್ತಿನಿ. ಒಂದು ವಾರ ಚೆನ್ನಾಗಿ ತಿಕ್ಕಿ, ಬಿಸಿಲಲ್ಲಿ ಸ್ವಲ್ಪ ಹೊತ್ತು ಮೈ ಕಾಯಿಸಿಕೊಂಡು, ಬಿಸಿ ಮಾಡಿ, ನೀರಲ್ಲಿ ಸ್ನಾನ ಮಾಡಿ, ಎರಡು ಗಂಟೆ ರೆಸ್ಟ ತಂಗೊಂಡ್ರೆ ಆಯ್ತು ಅಂದ್ರುನಮ್ಮ ತಂದೆಗೆ ಒಂದುವಾರಕ್ಕೇ ವಾಸಿ ಆಯ್ತು. ಈಗ ಮತ್ತೆ ಕೂಲಿಗೆ ಹೋಗ್ತಾಯಿದಾರೆ. ನೀವೂ ಟ್ರೈ ಮಾಡಿ ಸಾರ್’ ನನ್ಗೆ ಬೇಡ ಅನ್ನಿಸ್ತು.

‘ಬೇಡ, ನಮಸ್ಕಾರ’ ಅಂತ ಹೊರಟೆ. ಆದ್ರೆ ರಾಮು, ‘ಸಾರ್, ತಪ್ಪು ತಿಳಿಬೇಡಿ. ನಾನು ದುಡ್ಡಿ ಗೊಸ್ಕರ ನಿಮಗೆ ಮೋಸ ಮಾಡ್ತಿಲ್ಲ. ಆ ನಾಟಿ ವೈದ್ಯ ಶಾಮಾಚಾರ್ ಅವರೂ ನನಗೂ ಎಣ್ಣೆ ಮಾಡೋದು ಹೇಳಿ ಕೊಟ್ಟಿದ್ದಾರೆ. ಆದರೆ ಒಂದು ಷರತ್ತು ಹಾಕಿದಾರೆ. ಯಾವ ಕಾರಣಕ್ಕೂ ಒಂದು ಪೈಸೆ ಕೂಡಾ ತಗೊಕೂಡದು. ಭಗವಂತನ ಹೆಸರಲ್ಲಿ ಸೇವೆ ಮಾಡಬೇಕು ಅಂದ್ರೆ ನೋವು ವಾಸಿಯಾಗೋದು ಅಂತ.

ಸಾರ್, ಶಾಮಾಚಾರ್ ಅವರ ಗುರುಗಳು, ಇಲ್ಲೇ ಕೋರಮಂಗಲದಲ್ಲಿ ಇದಾರೆ. ಅರಮನೆ ವೈದ್ಯರಂತೆ. ಈಗಿರೋರು ಅಲ್ಲ. ಅವರ ತಂದೆಯವರು. ಅವರ ಕಾಲದಿಂದ ಬಂದಿರೋ ವೈದ್ಯ ಸಾರ್ ಇದು. ನಾವು ತಯಾರಿಸೋ ಎಣ್ಣೆಗೆ ಅವರು ಒಂದಿಷ್ಟು ಪುಡಿಗಳನ್ನು, ಅಂಜನಗಳನ್ನು ಹಾಕ್ತಾರೆ. ಅವರೂ ಸರ್ವೀಸ್ಗೆ ದುಡ್ಡು ತಗೊಳಲ್ಲ.’

ನಾನು, ಒಂದೆರೆಕ್ಷಣ ಸುಮ್ಮನಾದೆ. ರಾಮು ಹೇಳಿದ. ‘ಸಾರ್ ನಿಮ್ಮ ನಂಬರ್ ಕೊಡಿ. ನಾನೇ ಫ್ರೀ ಆದಾಗ ಫೋನ್ ಮಾಡ್ತಿನಿ. ನಿಮ್ಮ ಮನೆಗೆ ಬರ್ತಿನಿ’ ನಾನು ಯಾಂತ್ರಿಕವಾಗಿ ನನ್ನ ಮೊಬೈಲ್ ನಂಬರ್ ಹೇಳ್ದೆ. ಕೆಲವು ದಿನ ಕಳೀತು. ನಾನು ರಾಮು ವಿಷ್ಯ, ನನ್ನ ಸೊಂಟದ ವಿಷಯಗಳನ್ನು ಮರೆತು ಬಿಟ್ಟಿದ್ದೆ. ಒಂದು ದಿನ ಫೋನ್ ರಿಂಗಣಿಸಿತು.

‘ನಾನು ಸಾರ್, ರಾಮು. ಅದೇ ಅವತ್ತು ಬಸವನಗುಡಿ ಪೆಟ್ರೋಲ್ ಬಂಕ್ ಹತ್ರ ಸಿಕ್ಕಿದ್ದನಲ್ಲ. ಅದೇ ಸಾರ್ ಸೊಂಟದ ಎಣ್ಣೆ’ ಜ್ಞಾಪಕ ಬಂತು. ‘ಹೇಳಿ ರಾಮು, ಏನು ವಿಷ್ಯ’ ‘ಅದೇ ಸಾರ್, ನಾನು ನಮ್ಮ ಗುರುಗಳು ನಾಟಿ ವೈದ್ಯ ಶಾಮಾಚಾರ್ ಅವರ ಹತ್ರ ಮಾತಾಡ್ದೆ. ಅವರು, ಅವರ ಗುರುಗಳ ಹತ್ರನೂ ಮಾತಾಡಿದ್ರಂತೆ. ಪಾಪ, ಸಾರ್ ಅವರು ಒಳ್ಳೆಯವರು. ಅವರಿಗೆ ಸಹಾಯ ಮಾಡು. ಎಣ್ಣೆ ತಯಾರಿಸಿ, ತಕ್ಕೊಂಬಾ ಕೋರಮಂಗಲಕ್ಕೆ. ನಾನು ಎಲ್ಲಾ ಪುಡಿ; ಅಂಜನಗಳನ್ನು ಬೆರೆಸಿ ಕೊಡ್ತಿನಿ. ದುಡ್ಡು ಕೇಳ್ ಬ್ಯಾಡ ಅಂದಿದಾರೆ. ಇವತ್ತು ಬರ‍್ಲಾ’ ಅಂದ.

‘ಬೇಡ, ಭಾನುವಾರ ಬನ್ನಿ’ ಎಂದೆ.

ಭಾನುವಾರ, 10 ಗಂಟೆಗೆ ರಾಮು ಮನೆಗೆ ಬಂದ. ಕೈನಲ್ಲಿ, ಒಂದು ಚೀಲ.‘ ಸಾರ್, ಸ್ಟವ್ ಎಲ್ಲಿ? ಎರಡು ಲೀಟರ್ ಕೊಬ್ಬರಿ ಎಣ್ಣೆ ಬೇಕು.’ ಎಣ್ಣೆ ಕುದಿ ಶುರುವಾದಾಗ, ಅದಕ್ಕೆ ಬ್ಯಾಗಿನಿಂದ ಏನೋ ಪುಡಿ ಹಾಕಿದ. ವಾಸನೆಯಿಂದ ಗೊತ್ತಾಯಿತು.

‘ಕರ್ಪೂರಾನಾ?

‘ಹೌದು, ಸರ್’

ಆಮೇಲೆ, ಬ್ಯಾಗಿನಿಂದ ಗುಲಾಬಿ ಪಕಳೆಗಳನ್ನು ತೆಗೆದು ಕುದಿ ಎಣ್ಣೆಗೆ ಹಾಕಿದ. 15 ನಿಮಿಷ ಕುದಿಸಿ, ಎಣ್ಣೆಯನ್ನು ಸೋಸಿ, ಸಾರ್, ನಡೀರಿ. ಕೋರಮಂಗಲಕ್ಕೆ ಹೋಗೋಣ ಅಂದ. ನಾನು ಕಾರು ಕೀ ತೆಗೆದುಕೊಂಡು ಹೊರಟೆ. ಪಕ್ಕದಲ್ಲಿದ್ದ ನನ್ನ ಅಣ್ಣ ನಾನೂ ಬರುವೆ ಅಂತ ಹೊರಟ. ರಸ್ತೆ ಉದ್ದಕ್ಕೂ ಎಣ್ಣೆಯದೆ ಮಾತು. ಅದರ ಮಹಿಮೆಯನ್ನು, ಅವರ ಗುರು ಶಾಮಾಚಾರ್, ಅರಮನೆ ವೈದ್ಯರ ಇತಿಹಾಸ.... ಹೀಗೆ ನಡೆಯಿತು. ಕೊನೆಗೆ, ಕೋರಮಂಗಲದಲ್ಲಿ ಒಂದು ಅಂಗಡಿಗೆ ಹೋದೆವು.

ಅಂಗಡಿಯಾತ ರಾಮುವನ್ನು ಚೆನ್ನಾಗಿ ಬಲ್ಲವನಂತೆ ಕಂಡು ಬಂದ. ಅಲ್ಲಿಯೂ ಶಾಮಾಚಾರ್, ಅರಮನೆ ವೈದ್ಯರ ಬಗ್ಗೆ ಮಾತುಕತೆ ನಡೆಯಿತು. ಅಂಗಡಿಯಾತ ಹೇಳಿದ ‘ಇವತ್ತು ಗುರುಗಳು ಇಲ್ಲ. ಇದ್ದಕ್ಕಿದಂತೆ ಹೊಸಮಂಗಲಕ್ಕೆ ಹೋದರು. ಅಲ್ಲಿ ಯಾರಿಗೋ ಹುಷಾರಿಲ್ಲವಂತೆ. ಆದರೆ ನನಗೆ ಎಲ್ಲಾ ಹೇಳಿದಾರೆ. ಯಾವ ಯಾವ ಪುಡಿ ಎಣ್ಣೆಗೆ ಬೆರಸ ಬೇಕೆಂದು ತಿಳಿಸಿದಾರೆ. ಪಾಪ, ನಿಮಗೆ ತುಂಬಾ ಬೆನ್ನು ನೋವಂತೆ.

’ಅವರ ಕಾಳಜಿ ನನಗೆ ಬಹಳ ಖುಷಿಯಾಯಿತು. ಅಂಗಡಿಯಾತ ಮುಂದುವರೆಸಿದ ‘ಸರ್, ನಿಮಗೆ ಕನ್ಸಲ್ಟೇಷನ್ ಚಾರ್ಜಸ್ ಇಲ್ಲ. ಈ ಪುಡಿಗಳನ್ನ ಸ್ಪೆಷಲ್ ಆಗಿ ಮಾಡಿದ್ದೇವೆ. ತುಂಬಾ ಎಫೆಕ್ಟೀವ್. ಬರೀ ಕಾಸ್ಟ್ ಅಷ್ಟೆ ಕೊಡಿ ಸಾಕು’‘ಸರಿ’ ಅವನು.. ಒಂದೊಂದೆ ಪುಡಿ ಯನ್ನು ಎಣ್ಣೆಯಲ್ಲಿ ಹಾಕತೊಡಗಿದ.

ಅವುಗಳ ವಿಶೇಷ ಗುಣಗಳನ್ನು ವರ್ಣಿಸಿ, ಬೆಲೆ ಹೇಳಿ ಹಾಕುತ್ತಿದ್ದ. ಮಧ್ಯೆ ಮಧ್ಯೆ ರಾಮು.. ಸಾರ್ ಈ ಪುಡಿ ಒಳ್ಳೆಯದು. ಆ ಪುಡಿ ಒಳ್ಳೆಯದು. ಬೆಲೆ ಕೇಳ್ಕೊಳಿ ಅಂತ ಇದ್ದ. ಒಂದು ಹಂತಕ್ಕೆ ನಿಲ್ಲಿಸಿ, ಅಂಗಡಿಯಾತ ಹೇಳಿದ ‘ಗುರುಗಳು ಹೇಳಿದ ಎಲ್ಲಾ ಪುಡಿ ಹಾಕಿದ್ದಾಯ್ತು. ಇನ್ನೂ ಒಂದು ಇದೆ. ಅದಕ್ಕೆ ಚಿನ್ನದ ಪುಡಿ ಸೇರ್ಸಿರ್ತೀವಿ. ಸ್ವಲ್ಪ ಬೆಲೆ ಹೆಚ್ಚು’ನಮ್ಮಣ್ಣ ಕೇಳಿದ ‘ಇಲ್ಲಿವರೆಗೆ ಎಷ್ಟಾಯ್ತು?’ ‘ಸಾರ್, ನಿಮಗೆ ಕನ್ಷೇಷನ್ ಕೊಟ್ಟಿದೀವಿ.

ಶಾಮಾಚಾರ್ ಕಡೆಯವರು ಅಲ್ವಾ. 33500/- ಆಗಿದೆ. ಉಪಯೋಗಿಸಿ. ಜೀವನದಲ್ಲಿ ಯಾವತ್ತೂ ಬೆನ್ನು ನೋವು ಬರಲ್ಲ. ಚಿನ್ನದ ಪುಡಿ ಹಾಕಲಾ?’ ನನ್ನಣ್ಣನಿಗೆ ಸಿಟ್ಟು ಬಂದಿತ್ತು.

‘ಏಳು ರವಿ ಹೋಗೋಣ. ಎಲ್ಲಾ ಮೋಸ.’ ಅಷ್ಟು ಹೊತ್ತಿಗೆ ರಾಮು ನಮ್ಮ ಎಣ್ಣೆ ಪಾತ್ರೆ ಹಿಡ್ಕೊಂಡು ಹೊರಗೆ ಹೊರಟಿದ್ದ. ಅಣ್ಣ ಕೂಗಿದ ‘ಏಯ್ ರಾಮು ಪಾತ್ರೆ ಕೊಡಿಲ್ಲಿ’ ಎದ್ದು ಹೋಗಿ ಎಣ್ಣೆ ಪಾತ್ರೆ ಕಿತ್ಕೊಂಡ. ಅಂಗಡಿಯಾತ‘ಸಾರ್, ಚಿನ್ನದ ಪುಡಿ ಬೇಡ ಅಂದ್ರೆ ಬೇಡ. ಇಲ್ಲಿವರೆಗೆ ಕೊಟ್ಟ ಪುಡಿಯ ಕಾಸು ಕೊಡಿ’ ಅಂದ.

ನಾನು ಮರುಮಾತಾಡದೆ. 33500/- ನಗದು ಕೊಟ್ಟೆ. ರಾಮು ಅಲ್ಲಿ ನಿಲ್ಲಲೇ ಇಲ್ಲ. ‘ಸಾರ್ ನನಗೆ ಒಂದು ಸ್ವಲ್ಪ ಕೆಲಸ ಇದೆ. ಆಮೇಲೆ ಫೋನ್ ಮಾಡ್ತಿನಿ’ ಅಂದವನೆ ಸರಸರ ಜನಜಂಗುಳಿಯಲ್ಲಿ ಮಾಯವಾದ.ನನಗೆ ಮೂರ್ಖನಾದ ಅನುಭವ ಆಗತೊಡಗಿತು. ಅಣ್ಣ ‘ಏನು, ರವಿ, ನಿನಗೆ ಸ್ವಲ್ಪನೂ ಬುದ್ಧಿ ಬೇಡವೇ?’ ಅನ್ನುತ್ತಿದ್ದ.

ರು.33500/- ಕೊಟ್ಟ ಹೊಟ್ಟೆಕಿಚ್ಚಿಗೆ ಆ ಸೀದ ಎಣ್ಣೆಯನ್ನು ನಾನು ಬೆನ್ನಿಗೆ ಚೆನ್ನಾಗಿ ಹಚ್ಚಿದೆ. ಎರಡು ಲೀಟರ್ ಖಾಲಿಯಾಗೇಕಲ್ಲ! ದಿನವೂ ಸ್ನಾನಕ್ಕೆ ಮುಂಚೆ ಅದೇ ಕೆಲಸ! 15 ವರ್ಷ ಕಳೆದರೂ ಬೆನ್ನು ನೋವು ಮಾಯವಾಗಿಲ್ಲ. ಬಸವನಗುಡಿಯ ಪೆಟ್ರೋಲ್ ಬಂಕಿನಲ್ಲಿ ಆ ನಂತರ ರಾಮು ಕಾಣಿಸಲೇ ಇಲ್ಲ!