Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ
ಈ ಬದುಕನ್ನು ಇನ್ನಷ್ಟು ಕ್ರಿಯೇಟಿವ್ ಆಗಿ ಪಡೆಯಲು, ನೋಡಲು ಸಾಧ್ಯವೇ ಎಂದು ಗೋವಿಂದ ಹೆಗಡೆ ಅವರು ತಮ್ಮ ಕವಿತೆಗಳ ಮೂಲಕ ಹುಡುಕುತ್ತಿದ್ದಾರೆ ಎಂದು ಈ ಸಂಕಲನ ಓದುವಾಗ ಅನ್ನಿಸಿ ತು. ಇದು ಗೋಪಾಲಕೃಷ್ಣ ಅಡಿಗರು ಹೇಳಿದ ‘ಏನಾದರೂ ಮಾಡುತಿರು ತಮ್ಮ’ ಕವನದ ಏನಕೇನ ರೀತಿಯದ್ದಲ್ಲ
Source : Vishwavani Daily News Paper
ಹರೀಶ್ ಕೇರ
ಈ ಬದುಕನ್ನು ಇನ್ನಷ್ಟು ಕ್ರಿಯೇಟಿವ್ ಆಗಿ ಪಡೆಯಲು, ನೋಡಲು ಸಾಧ್ಯವೇ ಎಂದು ಗೋವಿಂದ ಹೆಗಡೆ ಅವರು ತಮ್ಮ ಕವಿತೆಗಳ ಮೂಲಕ ಹುಡುಕುತ್ತಿದ್ದಾರೆ ಎಂದು ಈ ಸಂಕಲನ ಓದುವಾಗ ಅನ್ನಿಸಿತು. ಇದು ಗೋಪಾಲಕೃಷ್ಣ ಅಡಿಗರು ಹೇಳಿದ ‘ಏನಾದರೂ ಮಾಡುತಿರು ತಮ್ಮ’ ಕವನದ ಏನಕೇನ ರೀತಿಯದ್ದಲ್ಲ. ಬದಲಾಗಿ ಕಲೆ ಮತ್ತು ಬದುಕಿಗೆ ಅನುರಕ್ತಿಯನ್ನು ಮತ್ತೆ ಮತ್ತೆ ಸೂಸುವ ಮೂಲಕ. ಅಂಥ ಪದ್ಯಗಳನ್ನು ಇಲ್ಲಿ ನೋಡಬಹುದು.
ಏನಾದರೂ ನಡೆಯಲಿ ಇಲ್ಲಿ
ನಿಷ್ಕ್ರಿಯತೆಯನ್ನು ಹೇಗೆ ಸಹಿಸುವುದು
ಅಂತ ಹೇಳುವ ಕವಿ ಸುಮ್ಮನಿರುವುದು ಶಕ್ಯವಲ್ಲ. ಹೀಗಾಗಿ ‘ಬಾಹುಬಲಿ’ ಕವಿತೆಯಲ್ಲಿ ಅವರು ಹೇಳುವ
ನಮ್ಮೆಲ್ಲರ ಎದೆಯ ಕೂಪಗಳಿಗೆ
ನಿನ್ನ ಎದೆಯಿಂದ
ಅನುರಾಗದೊಂದು ಕಿರಣ
ಎಂಬ ಅಹವಾಲು ಪ್ರಾಮಾಣಿಕ ಅನಿಸುತ್ತದೆ.
ನಾನು ಕುಳಿತೇ ಇರುತ್ತೇನೆ
ಸುಳಿಯಲ್ಲಿ ಕಣ್ಣುನೆಟ್ಟು
ಕಾಯುತ್ತ ಕಿವಿ ಕೀಲಿಸಿ
ಅಲೆ ಮುರಿವ ಸದ್ದಿಗಾಗಿ
ಎಂಬ ಹಂಬಲದಲ್ಲಿ ಹೆಗಡೆಯವರ ಕವಿತೆಗಳು ಮೂಡುತ್ತವೆ. ಚುಟುಕು; ವಿಸ್ತಾರ ಬಯಸದ ಆಕೃತಿ. ಆಡಿದ ಕೆಲವೇ ಪದಗಳಲ್ಲಿ ಅರ್ಥ ಮತ್ತು ಅಕ್ಕರೆ, ಆಡದೆ ಉಳಿಸಿದ ಪದಗಳು ಇರಬಹುದು ಎಂಬ ಗುಮಾನಿ, ಆ ಗುಮಾನಿಯಲ್ಲಿ ಹೊಮ್ಮುವ ಧ್ವನಿಗಳು ಈ ಕವಿತೆಗಳನ್ನು ಪೊರೆದಿವೆ. ಒಂದರ್ಥದಲ್ಲಿ ಇವು ಯಾರನ್ನೂ ನೋಯಿಸ ಬಯಸದ ಸುಕೋಮಲ ರಚನೆಗಳು. ಸಂಬಂಧಗಳು ಮುರಿಯುವ ಬಗ್ಗೆ ಬರೆಯುವಾಗಲೂ ಅವರು ಮೃದು. ಹಾಗೇ ಆಗಿಹೋದುದಕ್ಕಿಂತಲೂ ಆಗಲಿರುವುದರ ಬಗ್ಗೆ
ಅಪಾರ ವಿಶ್ವಾಸ:
ಏನಾದರೂ ಹೇಳುವಳೆಂದು
ಕಾದೆ
ಕ್ಷಣ ಕಣ್ಣಲ್ಲಿ ಕಣ್ಣಿಟ್ಟು ನಿರುಕಿಸಿ
ಹೊರಟುಬಿಟ್ಟಳು
ಸೇತುವೆ ತುಯ್ಯುತ್ತಲೇ ಇದೆ
ಅಗೋಚರ
ಅವಳು ಮತ್ತೆ ಬರುವ,
ಬರದಿರುವ ಸಾಧ್ಯತೆಗಳ
ಕಾಯುತ್ತ ಯಾವ ದಡ
ಸೇರುವೆ
ಕವಿತೆಯ ಬಗೆಗೆ ಈ ಕವಿಗೆ ಅಂಥ ಆಶಾವಾದವೇನಿಲ್ಲ:
ಕಾಲಿಲ್ಲದ ಕವಿತೆ ನೆರವಿಯ ಆಚೆಯೇ
ನಿಂತು ಕೈ ಚಾಚುತ್ತದೆ- ಆರ್ತ
ನಡಿಗೆ ಮರೆತು ದೌಡೋಡುವವರ ಕಣ್ಣಲ್ಲಿ
ಯಾವ ಬಿಂಬವೂ ಮೂಡುವುದಿಲ್ಲ.
ಹಾಗಾದರೆ ಯಾಕೆ ಬರೆಯಬೇಕು? ಕವಿ ನಿಂತಿರುವ ನೆಲೆ ಮತ್ತು ನಮಗೆ ತೋರಿಸುತ್ತಿರುವ ಬೆಳಕು ಯಾವುದು?
ಎಲ್ಲದಕ್ಕೂ ಅರ್ಥ
ನೆನಪುಗಳಲ್ಲಿ ಮಾತ್ರ
ಆ ಹಕ್ಕಿಯ ಇಂಪಾದ ಕೂಗು
ಆ ಹೂವಿನ ಮೈಮರೆಸುವ ಗಂಧ
ಅವಳ ಕಮ್ಮನೆಯ ಮೈ ಬಿಸುಪು
ಕವಿತೆ ಬರೆಯುವುದು ಮತ್ತು
ಜೀವಿಸುವುದರ ನಡುವೆ
ಅಂಥ -ರಕ್ಕೇನೂ ಇಲ್ಲ
ಕ್ರಿಯೆಯ ಹೊರತಾಗಿ
ದಶಕಗಳಿಂದ ಕಾವ್ಯ ಬರೆಯುತ್ತ ಬಂದಿರುವ ಗೋವಿಂದ ಹೆಗಡೆಯವರ ಮೊದಲ ಹಾಗೂ ಕೊನೆಯ ನಿಷ್ಠೆ ಕವಿತೆಯಲ್ಲಿದೆ. ಕಾವ್ಯಕ್ಕಿದು ಕಾಲವಲ್ಲ ಎಂದು ಅವರೇ ಪದ್ಯದಲ್ಲಿ ಹೇಳುತ್ತಾರೆ. ಆದರೆ ಕವಿತೆಗಾಗಿ ಹಾಗೂ ಬದುಕಿನ ಘನತೆಯನ್ನು ಎತ್ತರಿಸುವ ಮಾತಿಗಾಗಿ ನೋನುತ್ತ ಅವರು
ಬರೆಯುವ ಅಂಥ ಪದ್ಯಗಳೇ ಇಂದು ಓದುಗನನ್ನು ಪೊರೆಯುವ ಜೀವಾಮೃತ ಎಂಬುದು ಇಲ್ಲಿ ರುವ ವಿಸ್ಮಯ. ಹೀಗಾಗಿ ಇವರ ಕವಿತೆಗೆ ಕಾಲುಗಳಿಲ್ಲ, ಆದರೆ ಔನ್ನತ್ಯದತ್ತ ಕೊಂಡೊಯ್ಯುವ ರೆಕ್ಕೆಗಳಿವೆ ಅನ್ನಬಹುದು.
ಇದನ್ನೂ ಓದಿ: Harish Kera Column: ದಾರಿ ಯಾವುದಯ್ಯಾ ಆ್ಯಂಟಿಲೈಬ್ರರಿಗೆ!