Harish Kera Column: ದಾರಿ ಯಾವುದಯ್ಯಾ ಆ್ಯಂಟಿಲೈಬ್ರರಿಗೆ!

ಮಳಿಗೆ ಇಟ್ಟಿದ್ದ ಹೊಸ ಬಗೆಯ ಸಾಹಿತ್ಯ ಬರೆಯುವ ಯುವ ಲೇಖಕರು ತಮ್ಮ ಪುಸ್ತಕಗಳೂ ಒಳ್ಳೆಯ ಸಂಖ್ಯೆಯ ಮಾರಿಹೋಯಿತೆಂದರು. ಎರಡೂ ನಿಜವೇ ಇರಬೇಕು

Profile Ashok Nayak December 26, 2024
ಕಾಡು ದಾರಿ ಹರೀಶ್‌ ಕೇರ ಮೊನ್ನೆ ಮೊನ್ನೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾನೂರಕ್ಕೂ ಅಧಿಕ ಪುಸ್ತಕ ಮಳಿಗೆಗಳಿದ್ದವು. ವಿಷ್ಣು ಸಹಸ್ರನಾಮದಿಂದ ರಾಮಾಯಣ ದರ್ಶನಂವರೆಗೆ, ನಾಡಿಶಾಸ್ತ್ರದಿಂದ ನಾ ಡಿಸೋಜರ ಕಾದಂಬರಿಗಳವರೆಗೆ ಎಲ್ಲ ಬಗೆಯ ಓದುಗರಿಗೆ ಬೇಕಾದ ಭಿನ್ನ ಥರದ ಪುಸ್ತಕಗಳಿದ್ದವು. ಸಾಕಷ್ಟು ಮಾರಾಟ ಆಯಿತೆಂದು ಪ್ರಕಾಶಕರು ಖುಷಿಪಟ್ಟರು. ಓದುಗರು ಮತ್ತೆ ಮತ್ತೆ ಕುವೆಂಪು, ದೇವನೂರು, ಭೈರಪ್ಪ ಇವರ ಪುಸ್ತಕಗಳನ್ನೇ ಕೇಳಿ ಬರುತ್ತಿದ್ದರು ಎಂದು ಮಾರಾಟಗಾರರೊಬ್ಬರು ಹೇಳಿದರೆಂದು ವಿಮರ್ಶಕ ರಹಮತ್‌ ತರೀಕೆರೆ ಒಂದು ಕಡೆ ಬರೆದರು. ಆದರೆ ಅಲ್ಲಿ ಮಳಿಗೆ ಇಟ್ಟಿದ್ದ ಹೊಸ ಬಗೆಯ ಸಾಹಿತ್ಯ ಬರೆಯುವ ಯುವ ಲೇಖಕರು ತಮ್ಮ ಪುಸ್ತಕಗಳೂ ಒಳ್ಳೆಯ ಸಂಖ್ಯೆಯಲ್ಲೇ ಮಾರಿಹೋಯಿತೆಂದರು. ಎರಡೂ ನಿಜವೇ ಇರಬೇಕು. ಪುಸ್ತಕಗಳು ಮಾರಾಟವಾದಷ್ಟೂ ಕನ್ನಡ ಪುಸ್ತಕೋದ್ಯಮಕ್ಕೆ ಒಳ್ಳೆಯದೇ. ಪುಸ್ತಕಗಳು ಮಾರಾಟವಾಗುವ ಪ್ರಮಾಣ, ಕನ್ನಡ ಓದುವಿಕೆಯ ಬಗ್ಗೆ ಏನನ್ನಾದರೂ ಸೂಚಿಸುತ್ತದಾ? ತೋರ ಮಟ್ಟಿಗೆ ಹೇಳಬಹುದು. ಅಂದರೆ ಕಾದಂಬರಿಗಳ ಓದು ಹೆಚ್ಚು, ಕತೆಗಳು ಕಡಿಮೆ, ಕಾವ್ಯ ಇನ್ನಷ್ಟು ಕಡಿಮೆ, ವ್ಯಕ್ತಿ ವಿಕಾಸ ಯಥಾಪ್ರಕಾರ, ವೈಚಾರಿಕ- ವಿಮರ್ಶೆ ಪುಸ್ತಕಗಳು ಸೀಮಿತ- ಹೀಗೆ. ಸದ್ಯ ಇಂಥ ಪುಸ್ತಕಗಳಿಗೆ ಏನೂ ಬರವಿಲ್ಲ. ಅಂದರೆ "ಒಳ್ಳೆಯ ಪುಸ್ತಕಗಳೇ ಇಲ್ಲ" ಎಂದು ಯಾರೂ ವಾದ ಮಾಡುವಂತೆಯೇ ಇಲ್ಲ. ಯಾರಿಗೆ ಎಂಥ ಪುಸ್ತಕ ಬೇಕೋ ಅವು ಸಿಗುತ್ತಿವೆ. ಕೆಲವು ಶಾಸ್ತ್ರ ಪುಸ್ತಕಗಳ (ಮಾನವಿಕ, ಸಾಮಾಜಿಕ, ವಿಜ್ಞಾನದಂಥ) ಕೊರತೆ ಇರಬಹುದು. ನಿಜಕ್ಕೂ ಪುಸ್ತಕಗಳಿಗಾಗಿ ಖರ್ಚು ಮಾಡಬಲ್ಲವನಿಗೆ ಇವುಗಳ ಕೊರತೆಯಿಲ್ಲ. ಅವನ ಸಮಸ್ಯೆ ಇದಲ್ಲ. ಅವನ ಮುಖ್ಯ ಸಮಸ್ಯೆ- ಮನೆಯ ತುಂಬಾ ತುಂಬಿರುವ ಪುಸ್ತಕಗಳಲ್ಲಿ ಯಾವುದನ್ನು ಓದಲಿ, ಎಲ್ಲಿಂದ ಆರಂಭಿ ಸಲಿ, ಹೇಗೆ ಮುಗಿಸಲಿ ಎಂಬುದು. ಇದು ಓದುಗ ಪಶ್ಚಾತ್ತಾಪದ ಮೂಲ. ಇತ್ತೀಚೆಗೆ ವಿಮರ್ಶಕ ನರೇಂದ್ರ ಪೈ ಕೂಡ, "ಈಗ ಮನೆಯಲ್ಲಿ ಸಂಗ್ರಹಿಸಿರುವ ಪುಸ್ತಕಗಳನ್ನು ಓದುವುದಕ್ಕೇ ಒಂದು ಜನ್ಮ ಸಾಲದು" ಎಂದು ಬರೆದುಕೊಂಡಿದ್ದರು. ಇದು ನಿಜವಾದ ಎಲ್ಲ ಪುಸ್ತಕಪ್ರೇಮಿಗಳ ಸಮಸ್ಯೆ. ಯಾಕೆಂದರೆ ಇಂದು ಓದು ಮಾತ್ರವೇ ಜ್ಞಾನದ ಸಾಧನವಲ್ಲ. ಅದು ಕೇಳು ಪುಸ್ತಕಗಳಿಂದ, ಆಡಿಯೋ ವಿಡಿಯೋಗಳಿಂದ, ಸಾಕ್ಷ್ಯಚಿತ್ರಗಳಿಂದ ಬರುತ್ತದೆ. ಇನ್ನು ನಮ್ಮ ಮಿತ್ರರು ಫರಮಾಯಿಶ್‌ ಮಾಡಿದ ಒಳ್ಳೆಯ ಫಿಲಂಗಳನ್ನಂತೂ ನೋಡಬೇಕು. ಫ್ಯಾಮಿಲಿಗಂತೂ ಹೇಗೂ ಸಮಯ ಕೊಡಬೇಕು. ಪ್ರವಾಸ ಹೋಗಬೇಕು. ಮತ್ತು ಇವನ್ನೆಲ್ಲ ನಮ್ಮ ಉದ್ಯೋಗದ ಬಳಿಕ ಬಿಡುವಿನಲ್ಲೇ ಮಾಡಬೇಕು. ವಾರಕ್ಕೆ ಒಂದು ಪುಸ್ತಕ ಓದಲೇಬೇಕು ಎಂದುಕೊಂಡರೂ ವರ್ಷದಲ್ಲಿ 52 ಪುಸ್ತಕಗಳಿಂದಾಚೆ ಓದಲು ಸಾಧ್ಯವಿಲ್ಲ. ಆದರೆ ಪ್ರತಿವರ್ಷ ನಾವು ಕೊಂಡುಕೊಳ್ಳುವ ಪುಸ್ತಕಗಳೇ ನೂರಾರು. ಇದರಲ್ಲಿ ನಮ್ಮಿಷ್ಟದ ಲೇಖಕರ ಕೃತಿಗಳು ಇರುವಂತೆಯೇ ನಮ್ಮ ಸ್ನೇಹಿತರದೂ ಇರುತ್ತವೆ. ಇರುವ ಅತ್ಯಲ್ಪ ಸಮಯದಲ್ಲಿ ಇಷ್ಟೆಲ್ಲ ಪುಸ್ತಕಗಳನ್ನು ಓದಬೇಕು, ಹೇಗೆ ಸಾಧ್ಯ? ನಸೀಂ ತಲೇಬ್‌ ಎಂಬ ಲೇಖಕ ಇಂಥ ಓದದ ಪುಸ್ತಕಗಳ ಸಂಗ್ರಹವನ್ನು ʼಆ್ಯಂಟಿಲೈಬ್ರರಿʼ ಎಂದು ಕರೆಯುತ್ತಾನೆ. ಅವನ ಪ್ರಕಾರ ಗಂಭೀರ ಓದುಗ ಬೆಳೆಯುತ್ತ ಹೋದಂತೆ ಅವನ ಮನೆಯಲ್ಲಿ ಓದಿರದ ಪುಸ್ತಕಗಳ ಸಂಖ್ಯೆ ಏರುತ್ತ ಹೋಗಬೇಕು. ತಿಳಿವು ಹೆಚ್ಚಿದಂತೆ ತಿಳಿಯಬೇಕಿರುವುದು ಹೆಚ್ಚುತ್ತೆ. ಶೆಲ್ಫ್‌ನಲ್ಲಿ ಕೂತಿರುವ ಬುಕ್ಕುಗಳು ಈತನನ್ನು ನೋಡಿ ಹಲ್ಲು ಕಿರಿಯಬೇಕು. ʼನನ್ನನ್ನು ಯಾವಾಗ ಎತ್ತಿಕೊಳ್ಳುತ್ತೀ?ʼ ಎಂದು ಚಾಲೆಂಜ್‌ ಹಾಕುತ್ತಿರಬೇಕು. ನಾವು ಓದಿದ್ದರ ಬಗ್ಗೆ ಕೊಚ್ಚಿಕೊಳ್ಳುತ್ತ ತಿರುಗಾಡುತ್ತಿರುತ್ತೇವೆ. ಆದರೆ ಓದದ್ದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಇದು ಹೇಗೆ ಎಂದರೆ, ನೀವು ನಿಮ್ಮ ಶೈಕ್ಷಣಿಕ ಅರ್ಹತೆ ಹೀಗ್ಹೀಗೆ ಎಂದು ಹೇಳಬಹುದು. ಆದರೆ ತಾನು ಏನೇನೆಲ್ಲಾ ಅಧ್ಯಯನ ಮಾಡಿಲ್ಲ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಕೊನೆಯೇ ಇಲ್ಲ. ಆದರೆ ಅದು ಪ್ರತಿಕ್ಷಣವೂ ನಿಮ್ಮ ಅರಿವಿಗೆ ಬರುತ್ತಿರುತ್ತೆ. ಹೀಗೆ ಕ್ಷಣಕ್ಷಣ ನಮ್ಮನ್ನು ಎಚ್ಚರಿಸುವ ಸಂಗತಿ ಆ್ಯಂಟಿಲೈಬ್ರರಿ. ಇಟಾಲಿಯನ್‌ ಲೇಖಕ ಉಂಬರ್ತೋ ಇಕೋ ಅವನ ಮನೆಯಲ್ಲಿ 50,000 ಪುಸ್ತಕಗಳನ್ನು ಇಟ್ಟುಕೊಂಡಿದ್ದನಂತೆ. ಬಹುತೇಕ ಓದದ ಪುಸ್ತಕಗಳೇ ಅಲ್ಲಿದ್ದವು. ಅವನ ಲಾಜಿಕ್‌ ಸರಳವಾಗಿತ್ತು- ನಿಮ್ಮ ಮನೆಯಲ್ಲಿ ಮೆಡಿಸಿನ್‌ ಕ್ಯಾಬಿನೆಟ್‌ ಇರುತ್ತೆ. ಅಂದ್ರೆ ಎಮರ್ಜೆನ್ಸಿಗೆ ಬೇಕಾದ ಎಲ್ಲ ಮದ್ದುಗಳನ್ನು ಇಟ್ಟುಕೊಂಡಿರುತ್ತೀರಿ. ಆದರೆ ಬೇಕಾದಂತೆ ಅವನ್ನು ತೆಗೆದು ತಿನ್ನಲೋ ಕುಡಿಯಲೋ ಸಾಧ್ಯವೆ? ಅಥವಾ ಎಲ್ಲವನ್ನೂ ಸೇವಿಸುವುದೂ ಅಗತ್ಯ ವಿಲ್ಲ. ಅನಾರೋಗ್ಯ ಯಾವುದೇ ಅದಕ್ಕೆ ತಕ್ಕ ಔಷಧ. ಹಾಗೇ ನಿಮ್ಮ ಆ ಹೊತ್ತಿನ ಅಗತ್ಯ, ತಿಳಿವು, ಮನರಂಜನೆ, ಇತ್ಯಾದಿಗಳಿಗೆ ತಕ್ಕಂತೆ ಅಂದಿನ ಓದು. ಅದರಲ್ಲಿ ಅರ್ಧ ಓದಿ ಬಿಟ್ಟ ಪುಸ್ತಕಗಳೂ ಇರಬಹುದು. ಯೋಚಿಸಿ ನೋಡಿ, ನಾವು ಬೇರೆಲ್ಲಾ ಬಿಟ್ಟು ಬರೀ ಓದುತ್ತಾ ಹೋದರೂ ಎಂದಿಗೂ ಈ ನಗರದಲ್ಲಿರುವ ಒಂದು ಗ್ರಂಥಾಲಯದ ಪುಸ್ತಕಗಳನ್ನೂ ಒಂದು ಜನ್ಮದಲ್ಲಿ ಓದಿ ಮುಗಿಸಲು ಸಾಧ್ಯವಿಲ್ಲ. ಹಾಗಿದ್ದ ಮೇಲೆ ನಮ್ಮ ಬಳಿ ಇದ್ದ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಲೇಬೇಕೆಂಬ ಹಠ ಯಾಕೆ ಬೇಕು. ನಸೀಂ ತಲೇಬ್‌ ಇನ್ನೂ ಒಂದು ಮಾತನ್ನು ಹೇಳುತ್ತಾನೆ- ಓದದ ಪುಸ್ತಕಗಳು, ಓದಿದ ಪುಸ್ತಕಗಳಿಗಿಂತಲೂ ಮೌಲ್ಯಯುತ. ನೀವು ಅವುಗಳನ್ನು ಓದಲು ಕೈಗೆತ್ತಿ ಕೊಳ್ಳುವವರೆಗೂ ಅವುಗಳ ಒಳಗೆ ಏನಿದೆ ಎಂದು ನಿಮಗೆ ಗೊತ್ತಿರುವುದಿಲ್ಲ. ಸತ್ತು ಸ್ವರ್ಗ ಸೇರುವ ಹಾಗೇ ಇದು. ತಾನು ಸತ್ತು ತಾನೇ ಸಾಯುವ ವರೆಗೆ ಸ್ವರ್ಗದ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ಸತ್ತವರು ಅದರ ಬಗ್ಗೆ ತಿಳಿಸಲು ಹಿಂದಿರುಗುವುದಿಲ್ಲ. ಓದಿದವರು ತಾವು ಓದಿ ಪಡೆದದ್ದನ್ನು ಇನ್ನೊಬ್ಬನಿಗೆ ಯಥಾರ್ಥವಾಗಿ ದಾಟಿಸಲಾರರು. ಓದಿದ ಕೃತಿಗಳಲ್ಲೂ ಮತ್ತೆ ಮತ್ತೆ ಓದಬಹುದಾದಂಥವು ಅತ್ಯಲ್ಪ. ಅಂಥ ಪುಸ್ತಕಗಳನ್ನು ಓದದ ಪುಸ್ತಕಗಳೆಂದೇ ಪರಿಭಾವಿಸಬೇಕು. ಯಾಕೆಂದರೆ ಪ್ರತಿ ಓದಿನಲ್ಲೂ ಅವು ಬೇರೆ ಧ್ವನಿಗಳನ್ನು ಹೊಮ್ಮಿಸುತ್ತವೆ. ರಾಮಾಯಣ ದರ್ಶನಂ ಇಂದು ಓದಿದಾಗ ರಾಮನ ಕತೆಯಂತೆ ಧ್ವನಿಸಿದರೆ, ಇನ್ನೆರಡು ವರ್ಷ ಬಿಟ್ಟು ಓದಿದಾಗ ಸೀತೆಯ ಕತೆಯಂತೆ ಧ್ವನಿಸಬಹುದು. ಈಗ ಇನ್ನೊಂದು ಪ್ರಶ್ನೆಯತ್ತ ನಾವು ಹೊರಳೋಣ. ನಾವು ಓದಿದ ಒಂದು ಪುಸ್ತಕವನ್ನಾದರೂ ಸರಿಯಾಗಿ ಓದಿ ರ್ತೀವಾ? ಇಲ್ಲಿ ಪ್ರಶ್ನೆ ಸರಿಯಾಗಿ ಎಂದರೆ ಹೇಗೆ ಎಂಬುದು. ಒಂದು ಪುಸ್ತಕವನ್ನು ಕಮಲ ಓದುವ ರೀತಿ ಒಂದು ಥರ ಇರಬಹುದು; ಬಸವ ಅದರ ಓದಿನಿಂದ ಪಡೆದ ಅರ್ಥಗಳು ಇನ್ನೂ ಬೇರೆಯೇ ಇರಬಹುದು. ಲೇಖಕ ಬರೆಯುವಾಗ ಯೋಚಿಸಿದ್ದೇ ಒಂದಿರಬಹುದು, ಬರೆದದ್ದು ಇನ್ನೊಂದಿರಬಹುದು ಮತ್ತು ಅದು ಓದುಗನಲ್ಲಿ ಪಡೆದ ಅರ್ಥವೇ ಬೇರೆ ಇರಬಹುದು. ಹೀಗೆ ಎಲ್ಲವೂ ಒಬ್ಬ ಓದುಗನಲ್ಲಿ ಏಕೀಭವಿಸಿರಲು ಸಾಧ್ಯವಿಲ್ಲ. ಹೀಗಾಗಿಯೇ ನಾವು ಓದಿದ ಉತ್ತಮ ಪುಸ್ತಕವೊಂದರ ಬಗ್ಗೆ ಇನ್ನೊಬ್ಬರು ಮಾತನಾಡುವಾಗ ನೀಡಿದ ಒಳನೋಟಗಳು, ʼಇದು ನನಗೆ ಹೊಳೆದೇ ಇರಲಿಲ್ಲವಲ್ಲ ಎಂಬ ಭಾವ ಮೂಡಿಸಲು ಸಾಧ್ಯ. ಇದೂ ಓದದ ಪುಸ್ತಕಗಳ ಜ್ಞಾತಿಯಾಗುತ್ತದೆ. ಉಂಬರ್ತೋ ಇಕೋ ಹೇಳುವಂತೆ- ನಾವು ಖರೀದಿಸುವ ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಯೋಚಿಸುವುದು ಮೂರ್ಖತನ. ಹಾಗೇ ಎಂದೆಂದಿಗೂ ಓದಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಪುಸ್ತಕಗಳನ್ನು ಖರೀದಿಸುವವರನ್ನು ಟೀಕಿಸುವುದು ಕೂಡ ಮೂರ್ಖತನ. ಒಂದೇ ಪುಸ್ತಕವನ್ನು ಕೊಂಡು, ಅದನ್ನು ಮಾತ್ರ ಓದಿ ನಂತರ ಅದನ್ನು ತೊರೆಯುವವರು ನಿಜಕ್ಕೂ ಏನೂ ಓದಿರುವುದೇ ಇಲ್ಲ. ಅಂಥವರು ಪುಸ್ತಕಗಳಿಗೆ ಕೇವಲ ಗ್ರಾಹಕ ಮನಸ್ಥಿತಿಯನ್ನು ಅನ್ವಯಿಸುತ್ತಾರೆ. ಅಂದರೆ ಪುಸ್ತಕ ಒಂದು ಸರಕು, ಓದಿ ಮುಗಿಸಿದ ನಂತರ ಅದಕ್ಕೂ ತನಗೂ ಸಂಬಂಧವಿಲ್ಲ ಎಂದು ತಿಳಿಯುತ್ತಾನೆ. ಪುಸ್ತಕವನ್ನು ಪ್ರೀತಿಸುವವರು ಹಾಗಲ್ಲ. ಅವರು ಒಂದರಿಂದ ಇನ್ನೊಂದು ಪುಸ್ತಕಕ್ಕೆ ತೆರಳುತ್ತಾರೆ. ವಾಸ್ತವವಾಗಿ, ಯಾವ ಪುಸ್ತಕದತ್ತ ತೆರಳಬೇಕು ಎಂಬುದನ್ನು ಆತ ಓದಿದ ಕೃತಿಯೇ ಸೂಚಿಸುತ್ತದೆ. ಆ್ಯಂಟಿಲೈಬ್ರರಿ ಎಂಬುದು ನಮ್ಮ ಮಿತಿಗಳನ್ನು ನಮಗೆ ಜ್ಞಾಪಿಸುವ ಒಂದು ಸಂಗತಿ. ನಮಗೆ ತಿಳಿದಿಲ್ಲದ, ಅರ್ಧ ತಿಳಿದಿರುವ ಅಥವಾ ತಪ್ಪು ತಿಳಿದಿರುವ ಮತ್ತದ್ನು ಸರಿ ಮಾಡುವ ಅವಕಾಶಗಳನ್ನು ಹೊಂದಿರುವ ಆಗರ. ಪ್ರತಿದಿನ ಅದರೊಂದಿಗೆ ಜೀವಿಸಿದರೆ ಅದು ನಮ್ಮ ಕಲಿಕೆಯನ್ನು ಹೆಚ್ಚಿಸುವ ಬೌದ್ಧಿಕ ನಮ್ರತೆಯ ಕಡೆಗೆ ನಮ್ಮನ್ನು ಸಾಗಿಸುತ್ತದೆ. ಬಹುಶಃ ಎಲ್ಲರಿಗೂ ತಿಳಿದಿರುವ ಒಂದು ಸತ್ಯ ಎಂದರೆ ಮೂರ್ಖರು ಅತಿ ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ಅತ್ಯಂತ ಬುದ್ಧಿವಂತರು ಅನುಮಾನದಿಂದ ತುಂಬಿರುತ್ತಾರೆ. ಇದು ನಿಜ, ಇದನ್ನೇ ಡನ್ನಿಂಗ್-ಕ್ರುಗರ್ ಎಫೆಕ್ಟ್ ಎನ್ನಲಾಗುತ್ತದೆ. ನಮಗೆ ವಿಷಯ ತಿಳಿದಿಲ್ಲ ಎಂದು ನಾವು ಎಷ್ಟು ಬೇಗ ಒಪ್ಪಿಕೊಳ್ಳುತ್ತೀತ್ತೇವೋ ಅಷ್ಟು ಬೇಗ ನಾವು ಅದನ್ನು ಕಲಿಯಲು ಸಾಧ್ಯ. ಅಂದರೆ, ವ್ಯಕ್ತಿಗೆ ವಯಸ್ಸಾದಂತೆ ಹೆಚ್ಚೆಚ್ಚು ಪುಸ್ತಕಗಳನ್ನು ಸಂಗ್ರಹಿಸುವುದು ಅನಿವಾರ್ಯ. ಆದರೆ ಇದೇನೂ ಕೆಟ್ಟದಲ್ಲ. ಮತ್ತಿದು ನಿಮ್ಮ ಒತ್ತಡಕ್ಕೂ ಕಾರಣವಾಗಬಾರದು. ನಾವು ಓದದಿರುವ ಪುಸ್ತಕಗಳ ರಾಶಿ, ನಾವು ತಿಳಿಯಲು ಇನ್ನೂ ಬಹಳಷ್ಟಿದೆ ಎಂದು ನೆನಪಿಸುತ್ತದೆ. ಆದ್ದರಿಂದ ಅದನ್ನು ವೈಫಲ್ಯವೆಂದು ನೋಡುವ ಬದಲು, ಸ್ಫೂರ್ತಿ ಮತ್ತು ಭವಿಷ್ಯದ ಕಲಿಕೆಯ ಮೂಲವಾಗಿ ವೀಕ್ಷಿಸಬಹುದು. ನಮ್ಮ ಸಂಗ್ರಹದಲ್ಲಿರುವ ಓದದ ಪುಸ್ತಕಗಳಿಗೆ ಜಪಾನಿ ಭಾಷೆಯಲ್ಲಿ ʼತ್ಸುಂಡೊಕುʼ ಎಂಬ ಅಂದದ ಹೆಸರೂ ಇದೆ. ಒಂದು ಕಾಲದಲ್ಲಿ ಓದದೆ ಪುಸ್ತಕಗಳನ್ನು ಪೇರಿಸಿಡುವ ಶಿಕ್ಷಕರನ್ನು ಗೇಲಿ ಮಾಡಲು ಹುಟ್ಟಿಕೊಂಡ ಈ ಪದಕ್ಕೆ ಇಂದು ಒಳ್ಳೆಯ ಅರ್ಥವೇ ಇದೆ. ಒಟ್ಟಾರೆ ಅರ್ಥವೇನೆಂದರೆ, ಕನ್ನಡದಲ್ಲಿ ಬರುವ ಒಳ್ಳೆಯ ಪುಸ್ತಕಗಳನ್ನು ನಿಮಗೆ ಸಾಧ್ಯವಿದ್ದಲ್ಲಿ ಖರೀದಿಸಿ. ಲೇಖಕರು ನಿಮ್ಮ ಮಿತ್ರರಲ್ಲದೆ ಹೋದಲ್ಲಿ ಅವುಗಳನ್ನು ಓದಲೇಬೇಕು ಎಂದು ಯಾರೂ ನಿಮ್ಮನ್ನು ಒತ್ತಾಯಿ ಸುವುದಿಲ್ಲ. ಓದದೆ ನೀವೇನೂ ಅಪರಾಧ ಮಾಡುತ್ತಿಲ್ಲ. ಓದದ ಪುಸ್ತಕ ಪ್ರಯೋಗಿಸದ ಬಾಣದ ಹಾಗೆ. ಬಿಟ್ಟ ಬಾಣ ಗುರಿ ತಾಗದೆ ಹೋಗಿರಬಹುದು. ಬಿಡದ ಬಾಣ ಯಾವತ್ತೂ ನಿಮ್ಮ ಗುರಿಯತ್ತ ನಿಖರವಾಗಿ ನುಗ್ಗುವ ಸಾಧ್ಯತೆ ಇದ್ದೇ ಇದೆ! ಹೀಗಾಗಿ ಓದಿದ್ದಕ್ಕಿಂತಲೂ ಓದದ ಪುಸ್ತಕವೇ ಹೆಚ್ಚು ಬೆಲೆಯುಳ್ಳದ್ದು! ಇದನ್ನೂ ಓದಿ: Harish Kera Column: ಒಂದು ನಗರ ಸಾಯುವುದು ಹೇಗೆ ?
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ