Narayana Yaaji Column: ಅಗೋಚರ ಪತಂಗದ ಅನ್ವೇಷಣೆಯ ಚಾರಣ
“ಕರ್ವಾಲೋ" ಮತ್ತು ತೇಜಸ್ವಿಯವರಿಂದ ಪ್ರಭಾವ ಇಲ್ಲಿದೆ ಎಂದರೂ, ಅದರ ಜೊತೆ ಚಾರ್ಮಾಡಿ ಯ ಚಾರಣಗಳ ಅನುಭವ ಹದವಾಗಿ ಸೇರಿಕೊಂಡು “ಕರ್ವಾಲೋ" ದ ಹಾರುವ ಓತಿಯಂತೆ, ಇಲ್ಲಿ ಮಡಗಾಸ್ಕರ ಕಾಮೆಟ್ ಎನ್ನುವ ಹಳದೀ ಬಣ್ಣದ ಪತಂಗವನ್ನು ಹುಡುಕಿಕೊಂಡು ಹೋಗುವ ಘಟನೆಗಳ ಸುತ್ತ ನಡೆಯುತ್ತದೆ.

-

ನಾರಾಯಣ ಯಾಜಿ
ಪರಿಸರ ಸಂಬಂಧಿ ಹಿನ್ನೆಲೆಯ ಈ ಕಾದಂಬರಿಯು, ತೇಜಸ್ವಿಯವರ ಕರ್ವಾಲೋ ಕಾದಂಬರಿ ಯನ್ನು ನೆನಪಿಸುತ್ತದೆ; ಅಲ್ಲಿನ ಮಂದಣ್ಣ ಇಲ್ಲೂ ಬಂದಿದ್ದಾನೆ !
ಹರೀಶ ಕೇರ ತನ್ನನ್ನು ತಾನು ಬಂಟಮಲೆಯ ಹುಡುಗ ಎಂದು ಒಮ್ಮೆ ಅವರ ಸ್ಟೇಟಸಿನಲ್ಲೊಮ್ಮೆ ಹಾಕಿಕೊಂಡಿದ್ದರು. ಕಾಡು, ಚಾರಣ, ಕವಿತೆ, ಕುಮಾರವ್ಯಾಸ, ಕುವೆಂಪು, ತಾಳಮದ್ದಳೆ- ಯಕ್ಷಗಾನ ಇವೆಲ್ಲವೂ ಅವರ ಆಸಕ್ತಿಯ ವಿಷಯ. ಅವರ ಬರಹದಶೈಲಿ ಕಣಿವೆಯಿಂದ ಆಗತಾನೆ ಸಮತಟ್ಟಾದ ಜಾಗಕ್ಕೆ ಬಂದ ನದಿಯ ತಣ್ಣಗಿನ ಪ್ರವಾಹದಂತೆ ಶಾಂತ; ಆಳದಲ್ಲಿ ಅಗೋಚರ ಮಡುವುಗಳು ಇರುತ್ತದೆ.
ಬರಹ ಮತ್ತು ಲವಲವಿಕೆಯ ತಿರುಗಾಟ ಈ ಎಲ್ಲದರ ನಡುವ ಪತ್ರಕರ್ತರಾಗಿ ಯಾವತ್ತಿಗೂ ಪುರುಸೊತ್ತಿಲ್ಲದ ಚುರುಕಿನ ಬರಹಗಾರ. ಈ ಎಲ್ಲದರ ನಡುವೆ ಇದೀಗ ತಮ್ಮ ಮೊದಲ ಕಾದಂಬರಿ “ನಿಲ್ಲು ನಿಲ್ಲೇ ಪತಂಗ" ದ ಮೂಲಕ ಕಾದಂಬರಿ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಈ ಕಾದಂಬರಿಯನ್ನು ಪುಟ ತೆರೆದು ಒಮ್ಮೆ ಓದಲು ಪ್ರಾರಂಭಿಸಿದರೆ ಅದನ್ನು ಮುಗಿಸದೇ ಏಳಲಾಗಲಿಲ್ಲ.
ತೇಜಸ್ವಿಯವರ “ಕರ್ವಾಲೋ" ಕಾದಂಬರಿಯನ್ನು ಕಾಲೇಜಿಗೆ ಹೋಗುವಾಗ ಓದಿದ್ದೆ. ಆ ಕಾದಂಬರಿ ಯ ಗುಂಗಿನಿಂದ ಇನ್ನೂ ಹೊರಬರಲಾಗುತ್ತಿಲ್ಲ. ಇದು ಹರೀಶರನ್ನೂ ಬಿಟ್ಟಿಲ್ಲ. ತೇಜಸ್ವಿ ಹರೀಶರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದಾರೆ. ಮೊದಲ ನುಡಿಯಲ್ಲಿಯೇ ಇದು ತೇಜಸ್ವಿ ಯವರಿಗೆ ಕೊಡುವ ಗೌರವ ಎಂದು ಹೇಳಿದ್ದಾರೆ.
ಜೊತೆಗೆ ಅವರಿಗ ಚಾರಣದ ಗೀಳನ್ನು ಹಿಡಿಸಿದ ದಿನೇಶ ಹೊಳ್ಳರ ಪ್ರಭಾವವೂ ಈ ಕಾದಂಬರಿ ಯಲ್ಲಿದೆ. ಪಶ್ಚಿಮ ಘಟ್ಟ ಅನೇಕ ನಿಗೂಢಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ನಮ್ಮ ಸುತ್ತಲಿನ ಕಾಡಿನಲ್ಲಿರುವ ವಿಚಿತ್ರವಾದ ಮರಗಳು, ಹಾದಿ ತಪ್ಪಿಸಿದ ಬಳ್ಳಿ, ಗೂಂಕ್ರ ಕಪ್ಪೆ, ನಾನಾ ಜಾತಿಯ ಚಿಟ್ಟೆ ಪತಂಗ ಇವೆಲ್ಲದರ ಹಿಂದೆ ಹೋಗಿ ಜಾರಿ ಬಿದ್ದು ಪೆಟ್ಟಾದ ಅನುಭವ ಈ ಕಾದಂಬರಿಯನ್ನು ಓದಿದ ಮೇಲೆ ನೆನಪಿಗೆ ಬಂತು.
ಇದನ್ನೂ ಓದಿ: Narayana Yaji Column: ಸರಳತೆ ನ್ಯಾಯ...ಅಭಿವೃದ್ದಿ !
ಹಾಗಾಗಿ ಚಾರ್ಮಾಡಿ ಕಾಡಿನೊಳಗೆ ನಡೆಯುವ ಇಲ್ಲಿನ ಘಟನೆಗಳು ಯಾವುದೂ ಅಸಹಜವೆನಿಸು ವುದಿಲ್ಲ. ಕಥೆಯೋ ಕಾದಂಬರಿಯೋ ಬರೆಯುವಾಗ ಎಷ್ಟೇ ಪರಕಾಯ ಮಾಡಿದರೂ ಅಲ್ಲಿರುವ ಘಟನೆಗಳು ಕಥೆಗಾರನ ಅನುಭವವದ ಯಾವುದೋ ಸಂಗತಿಯನ್ನು ಹೇಳುತ್ತಲೇ ಇರುತ್ತವೆ. ಅನುಭವಿಸದೇ ಹೇಳಿದ ಕಥೆಗಳಲ್ಲಿ ಜೀವಂತಿಕೆ ಇರುವುದಿಲ್ಲ.
“ಕರ್ವಾಲೋ" ಮತ್ತು ತೇಜಸ್ವಿಯವರಿಂದ ಪ್ರಭಾವ ಇಲ್ಲಿದೆ ಎಂದರೂ, ಅದರ ಜೊತೆ ಚಾರ್ಮಾಡಿ ಯ ಚಾರಣಗಳ ಅನುಭವ ಹದವಾಗಿ ಸೇರಿಕೊಂಡು “ಕರ್ವಾಲೋ" ದ ಹಾರುವ ಓತಿಯಂತೆ, ಇಲ್ಲಿ ಮಡಗಾಸ್ಕರ ಕಾಮೆಟ್ ಎನ್ನುವ ಹಳದೀ ಬಣ್ಣದ ಪತಂಗವನ್ನು ಹುಡುಕಿಕೊಂಡು ಹೋಗುವ ಘಟನೆಗಳ ಸುತ್ತ ನಡೆಯುತ್ತದೆ.
ಕಥೆಯನ್ನು ಹೇಳುವವನೂ ಸಹ ಹರೀಶ ಎನ್ನುವ ಪತ್ರಕರ್ತ ಆಗಿರುವುದು ಕಾಕತಾಳೀಯವೇನೂ ಅಲ್ಲ. ದಿನೇಶ ಹೊಳ್ಳರೊಡನೆ “ಬಿದಿರುಮಳೆಯ" ಚಾರಣಕ್ಕೆ ಹೋದಾಗ ಈ ಕಲ್ಪನೆ ಮೂಡಲು ಯಾವುದೋ ನಡೆದ ಘಟನೆಯೂ ಆಗಿರ ಬಹುದಾದ ಸಾಧ್ಯತೆಗಳಿವೆ. ಊರಿಗೆ ಹೋಗಿ ಅಪ್ಪ ಅಮ್ಮನ ಜೊತೆ ಇದ್ದು ಬರುವ ಅಲೆಮಾರಿ ತರುಣ ಪತ್ರಕರ್ತನಿಗೆ ಚಾರ್ಮಾಡಿಯ ಕೊಟ್ಟಿಗೆ ಹಾರದಲ್ಲಿ ಸಿಗುವ ಫಣ್ಣಿಕ್ಕರ್ ಎನ್ನುವ ಪತಂಗ ಶಾಸ್ತ್ರಜ್ಞರ ಅನೀರೀಕ್ಷಿತ ಭೆಟ್ಟಿಯಿಂದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುವುದು.
ಫಣಿಕ್ಕರ್ ಅವರು ಹಿಂದೆ ಅವರು ಕಪ್ಪೆಯ ಕುರಿತು ಶಿಬಿರವನ್ನು ನಡೆಸಿ ಅವುಗಳ ಪ್ರಬೇಧವನ್ನು ಉಳಿಸುವತ್ತ ಹೋರಾಡಿದವರು. ಊರಿಗೆ ಹೋಗುವ ಹರೀಶ ಇಲ್ಲಿ ಅವರೊಟ್ಟಿಗೆ ಹಳದೀ ಬಣ್ಣದ ಕೊಳವೆಗಳೆರಡಿರುವ ಧೂಮಕೇತು ಪತಂಗವನ್ನು ಹುಡುಕುವ ಸಾಹಸ ಇಲ್ಲಿನ ವಸ್ತು. ಒಂಟಿಯಾಗಿ ರುವ ಫಣಿಕ್ಕರ್ ಅವರಿಗೆ ಜೊತೆಯಾಗುವವರ ಎಲ್ಲರೂ ಕಥೆಗಾರನಿಗೆ ಅಚ್ಚರಿ ಮತ್ತು ಆಕಸ್ಮಿಕ. ಕಾಡಿನ ನಿಗೂಢದೊಳಗೆ ಯಾವುದೋ ಕಾರಣಕ್ಕಾಗಿ ಹೋದಾಗ ಇನ್ಯಾವುದೋ ಸಿಗುವಂತೆ ಇಲ್ಲಿ, ಪತಂಗದ ಸಂಶೋಧಕಿ ನಿಧಿ, ಆಕೆಯ ಗಂಡ ಫೋಟೋಗ್ರಾಫರ್ ನವನೀತ್, ಕಾಡಿನ್ನು ಬಿಡಲಾರದ ಅಜ್ಜ ಮಂದಣ್ಣ, ಮೊಮ್ಮಗ ನವೀನ್ ಇವರಿಬ್ಬರೂ ಪರಿಸರ ಸ್ಥಿತಿಯ ಭೂತ ಮತ್ತು ಭವಿಷತ್ತಿನ ಪ್ರತಿನಿಧಿಗಳು, ಆತನ ಫಿಯಾನ್ಸಿಯಾಗಿರ ಬಹುದಾದ ಫಾತಿಮಾ, ಫಾರೆಸ್ಟ್ ಆಫೀಸರ್ ರಾಜೇಶ್ ಇವರೆಲ್ಲರೂ ಇಲ್ಲಿ ಒಡಮೂಡುತ್ತಾ ಹೋಗುತ್ತಾರೆ.
ಕಾಡಿನಲ್ಲಿ ಮರದ ಮೇಲೆ ನಗುವ ತಲೆಬುರುಡೆ ಇವರ ಸಾಹಸನೋಡಿಯೋ ಅಥವಾ ತನ್ನ ಅನೂಹ್ಯಸ್ಥಿತಿಗಾಗಿ ಹಾಗೆ ತೋರಿದ್ದೋ ಎನ್ನುವ ಮಿಸ್ಟರಿ, ಕೇರ ಅವರಲ್ಲಿರುವ ಲಘು ಹಾಸ್ಯ ಪ್ರವೃತ್ತಿಯನ್ನು ಸೂಚಿಸುತ್ತದೆ. ಪ್ರಾರಂಭದಲ್ಲಿಯೇ ನಾಗರ ಹಾವನ್ನು ಹಿಡಿಯುವ ನಿಧಿ ಕಾದಂಬರಿಯುದ್ದಕ್ಕೂ ಗಂಭೀರ ಪ್ರಕೃತಿಯ ಸಂಶೋಧಕಿ ಮತ್ತು ಅತ್ಮಸ್ಥೈರ್ಯವುಳ್ಳ ಹೆಣ್ಣಾಗಿ ಕಂಡರೆ ಫಾತಿಮಾ ಜಾತಿ ಮತಗಳನ್ನು ಮೀರಿ ಬೆಳೆಯುವ ಕಾದಂಬರಿಕಾರನ ಕನಸಿನ ಚಿಂತನೆ ಯಾಗಿ ಮೂಡುತ್ತಾಳೆ. ಈ ನಡುವೆ ಯಾವಾಗಲೋ ಕಳೆದು ಹೋದ ರುದ್ರೇಗೌಡ ಮರೆಯಲ್ಲಿಯೇ ಉಳಿದರೂ ಆತ ಕಾದಂಬರಿ ಪಯಣಕ್ಕೆ ಮಾರ್ಗದರ್ಶನಕನಾಗುವ ವಿಷಯ ಸಾಹಿತ್ಯದಲ್ಲಿಯೇ ಹೊಸಬಗೆಯಲ್ಲಿ ಮೂಡಿಬಂದಿದೆ.
ತೇಜಸ್ವಿ ಸೆರೆ ಹಿಡಿದ ಫೋಟೋ!
ಹಾರುವ ಓತಿಯಂತೆ, ಹಿನ್ನೆಲೆಯಲ್ಲಿ ತೇಜಸ್ವಿ ಕಾದಂಬರಿಯುದ್ದಕ್ಕೂ ಇದ್ದಾರೆ. ಆದರೆ ನಮ್ಮೆದುರು ಬರುವಾಗ ಅದು ಭೂತಕಾಲದ ಘಟನೆಯಾಗಿರುತ್ತದೆ. ಮಂದಣ್ಣನೇ ಹಿಂದೆ ತೇಜಸ್ವಿಯವರನ್ನು ಕರೆದುಕೊಂಡು ಹೋಗಿದ್ದ. ಧೂಮಕೇತು ಪತಂಗವನ್ನು ಆಕಸ್ಮಿಕವಾಗಿ ನೋಡಿ ಅದರ ಫೋಟೋ ಗಳನ್ನು ತೆಗೆದಿದ್ದರು. ಆದರೆ ಅವುಗಳೆಲ್ಲವೂ ಪ್ರಕಟವಾಗುವ ಮೊದಲೇ ಅವರ ಜೊತೆಯೇ ಅವರ ದಾಖಲೆಗಳೂ ಕಳೆದು ಹೋಗಿವೆ.
ಅರಣ್ಯದ ಗಿಡಮರಗಳು ಸೀತಾಪಹರಣಕ್ಕೆ ಸಾಕ್ಷಿಯಾಗಿದ್ದವಂತೆ, ಆದರೆ ಅವುಗಳಿಗೆ ರಾಮನಿಗೆ ಹೇಳಲು ಮಾತುಬಾರದು; ಇಲ್ಲಿ ಮಂದಣ್ಣನೂ ಅಡವಿಯ ಪ್ರತೀಕ. ಆತನಿಗೆ ಇದನ್ನು ವಿವರಿಸಲು ತಿಳಿಯದು. ಕೊಳಕು ಮಂಡಲ, ನಾಗರಹಾವು, ಹುಲಿ, ಮರದೊಳಗಿನ ಅಸ್ತಿಪಂಜರ ಇವುಗಳೆಲ್ಲವೂ ಆಕಸ್ಮಿಕವಾಗಿ ಕಾಣಿಸುವಂತೆ ಮಂದಣ್ಣನಿಗೆ ಭೂಕುಸಿತದ ಮುನ್ಸೂಚನೆ ಸಿಗುವ ಘಟನೆ ರೋಮಾಂಚನ ಗೊಳಿಸುತ್ತದೆ.
ನಾಯಿ ಕಾಳುವಿನ ಭಾಷೆಯನ್ನು ಆತ ಮಾತ್ರ ಅರ್ಥಮಾಡಿಕೊಳ್ಳಬಲ್ಲ. ಅದರೆ ನಾಯಿ ಸಹ ಕೊನೆಯಲ್ಲಿ ನಿಗೂಢವಾಗಿ ಹುಲಿಗೆ ಬಲಿಯಾಗುವುದು ಅಸಮತೋಲಕ್ಕೆ ಕಾರಣಿಯಾದ ಮನುಷ್ಯ ನಿಂದ ಆತನಿಗೆ ಜೊತೆಯಾಗ ಬಲ್ಲ ವಸ್ತುಗಳೆಲ್ಲವೂ ಇಲ್ಲವಾಗಿ ಕೊನೆಗೆ ಆತ ಅಸಹಾಯಕನಾಗಿ ಉಳಿಯಬಹುದಾದ ಸಂಕೇತವಾಗುತ್ತದೆ. ಪರಿಸರವನ್ನು ಪ್ರೀತಿಸಬೇಕು. ಅವುಗಳಲ್ಲಿನ ಕೆಲವೊಂದು ನಿಗೂಢವನ್ನು ಹುಡುಕುವ ಪ್ರಯತ್ನ ಒಳ್ಳೆಯದು.
ಆದರೆ ಪ್ರಕೃತಿ ಎಲ್ಲವನ್ನೂ ಬಿಟ್ಟುಕೊಡುವುದಿಲ್ಲ. ತೆಜಸ್ವಿಯವರಿಗೆ ಸಾಧ್ಯ ವಾದರೂ ಅದು ಕಳೆದು ಹೋಗಿದೆ. ಪತಂಗ ವೊಂದು ಜೀವಜಾಲದ ಕೊಂಡಿಯಾಗಿ ಇರುವ ಬಗೆ ಮತ್ತು ಬಿಲಿಯನ್ ವರ್ಷ ಗಳ ಹಿಂದೆ ನಡೆದ ಖಂಡಾಂತರ ಚಲನೆ ಎಲ್ಲವೂ ಇಲ್ಲಿ ಹಾದು ಬಂದಿದೆ. ಯಾವುದೂ ಅಸಹಜ ವೆನಿಸದೇ ಕೊನೆಗೂ ಪ್ರಕೃತಿ ತನಗೆ ಅನಿಸಿದಾಗ ಮಾತ್ರ ಕೆಲ ರಹಸ್ಯಗಳನ್ನು ಹೊರ ಪ್ರಪಂಚಕ್ಕೆ ಬಿಟ್ಟು ಕೊಡುತ್ತದೆ.
ಅಲ್ಲಿಯ ತನಕ ಯಾರಿಗೂ ಯಾವ ಕಾರಣಕ್ಕೂ ಸಿಗಲಾರದು ಎನ್ನುವ ವಿಷಯ ತಿಳಿಯುವಾಗ ಕಥೆ ಮುಗಿ ದಿದೆ. ರುದ್ರೇಗೌಡನ ಅಸ್ತಿತ್ವ, ಬುರುಡೆಯ ನಾಮರೂಪ ಇವೆಲ್ಲವೂ ಅಗೋಚರವಾಗಿ ಉಳಿಯುತ್ತದೆ. ಫಾತಿಮಾಳಿಗೆ ಬೆಂಗಳೂರಿಗೆ ಮುಂದಿನ ವಿಧ್ಯಾಭ್ಯಾಸಕ್ಕೆ ಹೋಗಲು ಕರೆ ಬಂದರೆ ಆಕೆಗೆ ನವೀನನ್ನು ಬಿಟ್ಟು ಹೋಗಲು ಮನಸ್ಸಿಲ್ಲ ಎನ್ನುವುದನ್ನು ಆಕೆಯ ಮೌನದ ಪ್ರತಿಕ್ರಿಯೆ ಯಲ್ಲಿ ಹೊರಹೊಮ್ಮುತ್ತದೆ.
ತೇಜಸ್ವಿಯವರ ಪ್ರತಿನಿಽಯಾಗಿ ಅವರ ಚೇತಕ್ ಸ್ಕೂಟರ್ ಮತ್ತು ಅವರಿಗೆ ದರ್ಶನವಾದ ಪತಂಗದ ಫೋಟೋ ಇವೆರಡು ಕಾದಂಬರಿಕಾರ ತೇಜಸ್ವಿಯವರ ಪರಿಸರ ಪ್ರೀತಿಗೆ ಕೊಟ್ಟ ಗೌರವಗಳು. ಲೇಖಕ ತನ್ನನ್ನು ಮುತ್ತಿಕೊಂಡ ಪ್ರಭಾವವನ್ನು ಕಳೆದುಕೊಳ್ಳುವ ಆಶಯ ಇಲ್ಲಿದೆ.
ಆನ್ ಪ್ಯಾಚೆಟ್ ಎನ್ನುವ ಲೇಖಕಿ ಬರೆದ “ಸ್ಟೇಟ್ ಆಫ್ ವಂಡರ್" ಎನ್ನುವ ಕಥೆಯ ಅವಲೋಕನ ವನ್ನೊಮ್ಮೆ ಓದಿದ್ದೆ. ಅಮೆಝಾನ್ ಕಾಡಿನಲ್ಲಿ ಕಳೆದು ಹೋದ ಓರ್ವ ವಿಜ್ಞಾನಿಯನ್ನು ಹುಡಿಕಿ ಕೊಂಡು ಹೋಗುವ ಔಷಧ ಶಾಸ್ತ್ರಜ್ಞೆಯೋರ್ವಳಿಗೆ ಅಲ್ಲಿರುವ ಕೀಟಗಳ ಸಂಬಂಧಿತ ಶೋಧನೆಗಳ ಮೇಲೆ ಅನುಭವಿಸಿದ ನಿಗೂಢ ವಾದ ಲೋಕಕ್ಕೆ ಸಂಬಂಧಿಸಿದ ಕಾದಂಬರಿ ಅದು. ಇಲ್ಲಿನ ಸನ್ನಿವೇಶ ಅದಕ್ಕಿಂತಲೂ ಗೂಢವಾಗಿದೆ; ಇಲ್ಲಿ ಹರೀಶ್ ಕೇರ ನಿಗೂಢ ಎನ್ನಬಹುದಾದ ಕಥೆಯನ್ನು ಹಣೆದಿದ್ದಾರೆ.