ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Suresh Gudaganavar Column: ಇಲ್ಲಿದೆ ಮಂಗ್ಯಾನ ಮಹಲ್‌ !

ಧಾರವಾಡವು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಪ್ರಮುಖ ನಗರ ಎಂದು ಪ್ರಸಿದ್ಧಿ ಪಡೆದಿದೆ. ವಿದ್ಯಾಕಾಶಿ ಎಂಬುದು ಇಲ್ಲಿಗೆ ಅನ್ವರ್ಥ ನಾಮ. ಈ ವಿದ್ಯಾಕಾಶಿಯ ಪಾರಂಪರಿಕ ಇತಿಹಾಸ ತಿಳಿಯುವ ಆಸಕ್ತಿ ಇದ್ದರೂ ತಿಳಿಸುವವರು ಯಾರು, ಮಾರ್ಗದರ್ಶನ ನೀಡುವವರು ಯಾರು ಎಂಬ ಸಮಸ್ಯೆ.

ಸುರೇಶ ಗುದಗನವರ

ಧಾರವಾಡದ ನೂರಾರು ವರ್ಷಗಳ ಇತಿಹಾಸವನ್ನು ಆಸಕ್ತಿಯಿಂದ ನೋಡಲು ಅವಕಾಶ ಮಾಡಿಕೊಟ್ಟ ‘ಹೆರಿಟೇಜ್ ವಾಕ್’ ಇತ್ತೀಚೆಗೆ ಆಯೋಜನೆಗೊಂಡಿತ್ತು.

ಪಾರಂಪರಿಕ ಸ್ಥಳಗಳಿಗೆ ಹೆಜ್ಜೆ ಹಾಕುವ ಆಸಕ್ತಿಗೆ ಇನ್'ಟ್ಯಾಕ್ ಸಂಸ್ಥೆ ನೀಡಿರುವ ಹೆಸರು ಪಾರಂ ಪರಿಕ ನಡಿಗೆ. ಸ್ಥಳ ಪುರಾಣ, ಇತಿಹಾಸ, ಸಾಂಸ್ಕೃತಿಕ ಮಹತ್ವ ಗೊತ್ತಿರುವ ನುರಿತ ಸಹೃದಯಿ ನಿಗದಿಯಾದ ಸ್ಥಳಗಳ ಬಗ್ಗೆ ವಿವರಣೆಗಳನ್ನು ನೀಡುತ್ತಾರೆ. ಇತಿಹಾಸ ಮತ್ತು ಪಾರಂಪರಿಕ ಪ್ರಜ್ಞೆಯನ್ನು ರೂಪಿಸುವ ಕಾಳಜಿಯಿಂದ ತಮ್ಮ ಗ್ರಹಿಕೆಗಳನ್ನು ಹಂಚಿಕೊಳ್ಳುತ್ತಾರೆ. ಆಸಕ್ತರ ಪ್ರಶ್ನೆಗಳಿಗೆ ಉತ್ತರವನ್ನು ಅವರು ನೀಡುತ್ತಾರೆ.

ಧಾರವಾಡವು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕವಾಗಿ ಪ್ರಮುಖ ನಗರ ಎಂದು ಪ್ರಸಿದ್ಧಿ ಪಡೆದಿದೆ. ವಿದ್ಯಾಕಾಶಿ ಎಂಬುದು ಇಲ್ಲಿಗೆ ಅನ್ವರ್ಥ ನಾಮ. ಈ ವಿದ್ಯಾಕಾಶಿಯ ಪಾರಂಪರಿಕ ಇತಿಹಾಸ ತಿಳಿಯುವ ಆಸಕ್ತಿ ಇದ್ದರೂ ತಿಳಿಸುವವರು ಯಾರು, ಮಾರ್ಗದರ್ಶನ ನೀಡುವವರು ಯಾರು ಎಂಬ ಸಮಸ್ಯೆ.

ಇದಕ್ಕೆಂದೇ, ‘ಇನ್ʼಟ್ಯಾಕ್’ ಎಂಬ ಸಂಸ್ಥೆ ‘ಪಾರಂಪರಿಕ ನಡಿಗೆ’ ಆಯೋಜಿಸಿದೆ. ಧಾರವಾಡದ ಪಾರಂಪರಿಕ ನಡಿಗೆ ನಡೆದದ್ದು ಇದೇ ಏಪ್ರಿಲ್ 7ರಂದು. ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿರುವ ಹೊಸಯಲ್ಲಾಪುರದ ಶುಕ್ರವಾರ ಪೇಟೆಯ ‘ಮಂಗ್ಯಾನ ಮಹಲ್’ದಿಂದ ಗಾಂಧಿಚೌಕದ ದತ್ತ ಮಂದಿರದ ಹಿಂದಿರುವ ಸಂಸ್ಕೃತ ಪಾಠಶಾಲೆಯವರೆಗೆ ಬೆಳಿಗ್ಗೆ 6.30 ರಿಂದ 8.30ರ ವರೆಗೆ ಎರಡು ಗಂಟೆಗಳ ಹೆರಿಟೇಜ್ ವಾಕ್ ಕಾರ್ಯಕ್ರಮವನ್ನು ಇಂಟ್ಯಾಕ್ ಸದಸ್ಯರಿಗೆ ಆಯೋಜಿಸಿತ್ತು.

ಇದನ್ನೂ ಓದಿ: Suresh Gudaganavar Column: ವಯಸ್ಸು ಕೇವಲ ಒಂದು ಸಂಖ್ಯೆ!

ಮಹಡಿಯೇರಿದ ಮಂಗ್ಯಾ!

ಅಂದು ಬೆಳಿಗ್ಗೆ 6.15ಕ್ಕೆ ನಾವೆಲ್ಲ ಹೊಸಯಲ್ಲಾಪುರದಲ್ಲಿರುವ ಡಾ.ಶಶಿಧರ ನರೇಂದ್ರ ಅವರ ಮನೆಯಲ್ಲಿ ಸೇರಿದೆವು. ಮೊದಲು ಹತ್ತಿರದಲ್ಲಿದ್ದ ಮಂಗ್ಯಾನ್ ಮಹಲ್‌ಗೆ ಭೇಟಿ ಕೊಟ್ಟೆವು. ಅಂದಾಜು 1890ರಲ್ಲಿ ಹಾವೇರಿಯ ವಕೀಲರಾದ ಭೀಮರಾವ್ ಜೋಶಿ ಅವರು ಶುಕ್ರವಾರ ಪೇಟೆಯಲ್ಲಿ ನಾಲ್ಕಂತಸ್ತಿನ ಇಮಾರತನ್ನು ಕಟ್ಟಿಸಿದರು. ಆಗ ಧಾರವಾಡದಲ್ಲಿ ಇದೊಂದೇ ಬಹುಮಹಡಿಯ ಮನೆಯಾಗಿತ್ತು. ಮನೆಯಲ್ಲಿಯೇ ಚಿಕ್ಕದಾದ ಚೊಕ್ಕದಾದ ಹನುಮಂತ ದೇವರ ಗುಡಿಯನ್ನು ಕಟ್ಟಿಸಿದರು. ಅಲ್ಲಿ ಅವರ ಅವಿಭಕ್ತ ಕುಟುಂಬ ನೆಲೆಸಿತ್ತು. ವರ್ಷಗಳು ಕಳೆದಂತೆ ಜೋಶಿಯವರ ಮಕ್ಕಳು, ಮೊಮ್ಮಕ್ಕಳು ನೌಕರಿಗಾಗಿ ದೊಡ್ಡ ಪಟ್ಟಣಗಳನ್ನು ಸೇರಿದರು. ಮನೆಯಲ್ಲಿ ಜನಸಂಖ್ಯೆ ಕಡಿಮೆಯಾಯಿತು. ಮೇಲಿನ ಎರಡು ಅಂತಸ್ತುಗಳು ಖಾಲಿಯಾದವು. ಕ್ರಮೇಣ ಊರ ಹೊರಗಿನ ನೂರಾರು ಮಂಗಗಳು ಮೇಲಿನ ಎರಡು ಅಂತಸ್ತುಗಳನ್ನು ಆಕ್ರಮಿಸಿ ಕೊಂಡವು.

ಮುಂಜಾನೆ, ಸಂಜೆ ಹೊತ್ತಿನಲ್ಲಿ ಮಂಗಗಳು ಚೇಷ್ಟೆ ಮಾಡುವದನ್ನು ಓಣಿಯ ಹುಡುಗರು-ಜನರು ನೋಡುತ್ತ ನಿಲ್ಲುತ್ತಿದ್ದರು. ಆಗ ಜನರು ಈ ಮನೆಗೆ ‘ಮಂಗ್ಯಾನ್ ಮಹಲ್’ ಎಂದೂ ಕರೆದರು. ನಂತರ ಮಂಗಗಳ ಉಪದ್ರವ ತಾಳದೇ ಮೇಲಿನ ಅಂತಸ್ತುಗಳನ್ನು ಕೆಡವಲಾಯಿತು. ಹೆಸರು ಮಾತ್ರ ಮಂಗ್ಯಾನ ಮಹಲ್ ಎಂದೇ ಉಳಿಯಿತು!

Screenshot_10 R

ನಂತರ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಮನೆ, ಶ್ರೀ ಕಲ್ಮೇಶ್ವರ ದೇವಸ್ಥಾನ, ಮಳೆ ಮಲ್ಲೇಶ್ವರ ಮಹಾಸಂಸ್ಥಾನ ಹಿರೇಮಠ, ಡಾ.ಬಸವರಾಜ ರಾಜಗುರು ಅವರ ಸಮಾಧಿ, ನುಚ್ಚುಂಬಲಿ ಬಾವಿ, ಡಾ.ಗಂಗೂಬಾಯಿ ಹಾನಗಲ್ ಅವರು ಜನಿಸಿದ ಮನೆ ಗಂಗೋತ್ರಿ, ಬಸದಿ ಓಣಿಯಲ್ಲಿ ಬೆಟಗೇರಿ ಕೃಷ್ಣ ಶರ್ಮರ ಮನೆ, ಭಗವಾನ ಆದಿನಾಥ ಬಸದಿ, ಹಿಂದುಸ್ಥಾನಿ ಗಾಯಕಿ ಸುಲಭಾದತ್ತ ನೀರಲಗಿ, ವಿನಾಯಕ ತೊರವಿ ಅವರ ಮನೆ, ಗೋಂದಳಿ ಸಮಾಜದ ಸಂತ ಸಮಾಜ ಹರಿಮಂದಿರ, ಠಾಕೂರ ತಾಲೀಮ ಗರಡಿ ಮನೆ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಗಾಂಧಿ ಹಿಂದಿ ಪ್ರೌಢ ಶಾಲೆ-ಚಾಚಾ ನೆಹರು ಶಿಶು ವಿಹಾರ-ಪಾರ್ಶ್ವನಾಥ ಹಿಂದಿ ಪ್ರಾಥಮಿಕ ಶಾಲೆ, ಕಾಮನಕಟ್ಟೆ, ಕಿತ್ತೂರ ಚೆನ್ನಮ್ಮ ಗುರುಗಳ ವಂಶಸ್ಥ ಕಟ್ಟಿಮಠರ ಮನೆ, ಕಾಳಿಕಾ ದೇವಸ್ಥಾನ, ನಂದಿಕೋಲ ಬಸವಣ್ಣ, ನಗರೇಶ್ವರ ದೇವಸ್ಥಾನ, ಭೂಸಪೇಟೆಯ ಕಾಮಣ್ಣ, ಪೋತ್ನಿಸ್ ಓಣಿಯ ದ.ರಾ.ಬೇಂದ್ರೆಯವರು ಜನಿಸಿದ ಮನೆ, ಮನೋಹರ ಗ್ರಂಥ ಮಾಲೆಯ ಜಿ.ಬಿ.ಜೋಶಿಯವರ ಮನೆ, ಹೆಬ್ಬಳ್ಳಿ ಅಗಸಿ, ಗಣಪತಿ ದೇವಸ್ಥಾನ, ವಿಕ್ಟೋರಿಯಾ ಹೈಸ್ಕೂಲ (ವಿದ್ಯಾರಣ್ಯ ಶಾಲೆ), ಸಮಾಜ ಪುಸ್ತಕಾಲಯ, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ ಮತ್ತು ದತ್ತ ಮಂದಿರಗಳೀಗೆ ಭೇಟಿ ನೀಡಿದೆವು.

ತುಪ್ಪದ ದೋಸೆ

ದತ್ತ ಮಂದಿರ ಬದಿಯಲ್ಲಿಯೇ ಇದ್ದ ಪಾರಂಪರಿಕ ಬಾಂಬೆ ರೆಸ್ಟೋರೆಂಟಿನಲ್ಲಿ ತುಪ್ಪದ ದೋಸೆ ಸವಿದೆವು. ಸವಿದೆವು. ವೈವಿದ್ಯಮಯವಾದ ದೋಸೆ ತಯಾರಿಕೆಯೊಂದಿಗೆ, ಅದನ್ನು ಗ್ರಾಹಕರಿಗೆ ನೀಡುವ ಬಗೆಯಲ್ಲಿಯೇ ಧಾರವಾಡದ ದೋಸೆಗಳ ವೈಶಿಷ್ಟ್ಯ ಅಡಗಿದೆ. ಎನ್ಕೆ ಅವರು ಮುಂಜಾನೆ ದೋಸೆ ತಿಂದರೆ ಸಾಯಂಕಾಲವರೆಗೂ ಕೈ ವಾಸನೆ ಹೋಗುತ್ತಿರಲಿಲ್ಲ ಎಂದು ಹೇಳುತ್ತಿದ್ದನ್ನು ನೆನಪಿಸಿಕೊಂಡರು. ನಂತರ ನಾವೆಲ್ಲ ಜಕಣಿಬಾವಿಗೆ ತೆರಳಿದೆವು.

ಇದು 62 -ಟ ಆಳವಿದ್ದು, ಇದರ ನೀರನ್ನು ಕುಡಿಯುತ್ತಿದ್ದರು. ಆದರೆ ಈಗ ಜಕ್ಕಣಿಬಾವಿಯನ್ನು ಗುರುತಿಸಲು ಅಸಾಧ್ಯವಾಗದ ಸ್ಥಿತಿ ಇದೆ. ಅದರ ಪಕ್ಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಗೋಳಿ ಬಾರಿನಲ್ಲಿ ಮಡಿದ ಹುತಾತ್ಮರ ನೆನಪಿನ ಸ್ಮಾರಕವಿದೆ. ಅಸಹಕಾರ ಚಳವಳಿಯ ಸಂದರ್ಭದಲ್ಲಿ 1921 ಜುಲೈ 1ರಂದು ಧಾರವಾಡದ ಜಕಣಿಬಾವಿ ಬಳಿ ಪೊಲೀಸರು ಜನರ ಮೇಲೆ ಗುಂಡು ಹಾರಿಸಿದಾಗ, ಮಲ್ಲಿಕಸಾಬ್ ಮರ್ದಾನ ಸಾಬ್, ಗೌಸುಸಾಬ್ ಖಾದರಸಾಬ್ ಮತ್ತು ಅಬ್ದುಲ್‌ಗಫರ್ ಚೌಕ್‌ಥಾಯಿ ಎಂಬವರು ಮೃತರಾದರು. ಅವರ ನೆನಪಿಗಾಗಿ ಇಲ್ಲಿ ಒಂದು ಸ್ಮಾರಕ ನಿರ್ಮಿಸ ಲಾಗಿದೆ.

ಇಂಟ್ಯಾಕ್ ಸಂಸ್ಥೆಯ ಸಂಚಾಲಕ ಡಾ.ಮೋಹನ ಮಠ ಅವರಿಗೆ 82 ವರ್ಷಗಳಾಗಿದ್ದು, ಅವರು ಪಾರಂಪರಿಕ ನಡಿಗೆಯ ನೇತೃತ್ವ ವಹಿಸಿದ್ದರು. ಪಟ್ಟಣವೊಂದರ ಪರಂಪರೆಯನ್ನು ಇಂತಹ ನಡಿಗೆಯ ಮೂಲಕ ಅರಿಯುವ ಪ್ರಕ್ರಿಯೆಯು, ನಮ್ಮ ಅರಿವನ್ನು ವಿಸ್ತರಿಸುವುದರಲ್ಲಿ ಸಂಶಯ ವಿಲ್ಲ.