ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬ್ಯಾಟ್‌ʼಬಾಲ್‌ ಆಚೆಗಿಡಿ ಫುಟ್‌ ಬಾಲ್‌ ನೋಡಿ !

ಕೇರಳದ ಕಾಲ್ಚೆಂಡು ಕ್ರೇಜ್ ಅಂಥದು. ಕೋಲ್ಕತಾ, ಗೋವಾಗಳಿಗೆ ಹೋದರೂ ಈ ದೃಶ್ಯ ನೋಡ ಬಹುದು. ಇವರೆಲ್ಲರ ಪಾಲಿಗೆ, ಫಿಫಾ (FIFA) ಎಂಬುದು ಮನೆ ಹಬ್ಬದಂತೆ. ಕೇರಳದಲ್ಲಿ ಕ್ರಿಕೆಟ್‌ಗಿಂತ ಮನಸ್ಸು ಗೆದ್ದಿರುವುದು ಫುಟ್‌ಬಾಲ್. ಅದು ಅಲ್ಲಿನವರ ಸಂಸ್ಕೃತಿಯ ಒಂದು ಭಾಗ. ಕೇರಳದ ಹಳ್ಳಿ ಗಳಿಂದ ನಗರಗಳವರೆಗೆ ಫುಟ್‌ಬಾಲ್ ಹಬ್ಬದ ವಾತಾವರಣ ಕಾಣ ಸಿಗುತ್ತದೆ.

ಸುಮೇರು

ಎಲ್ಲೆಡೆ ಹರಡಿದೆ ಫುಟ್‌ಬಾಲ್ ಜ್ವರ! ಮೊನ್ನೆ ತಾನೆ ಆರಂಭಗೊಂಡ ಫಿಫಾ ಫುಟ್ʼಬಾಲ್ ಪಂದ್ಯಾವಳಿಯನ್ನು ಜಗತ್ತಿನ ಹಲವು ದೇಶಗಳು ಸಂಭ್ರಮಿಸಿಕೊಂಡು ಆಡುತ್ತಿವೆ, ನೋಡು ತ್ತಿವೆ. ಆದರೆ ನಮ್ಮ ದೇಶದಲ್ಲಿ ಈ ಜ್ವರ ಇನ್ನೂ ಮೇಲೇರಿಲ್ಲ! ಹಳ್ಳಿ ಪಟ್ಟಣಗಲ್ಲಿ ಆವರಿಸಿ ರುವ ಕ್ರಿಕೆಟ್ ಪ್ರೇಮದಿಂದಾಗಿ, ಬೇರೆ ಕ್ರೀಡೆಗಳು ತುಸು ಹಿನ್ನೆಲೆಯಲ್ಲೇ ಇರುವಂತಹ ವಾತಾ ವರಣ ನಮ್ಮಲ್ಲಿದೆ. ಈಚಿನ ದಶಕಗಳಲ್ಲಿ, ನಮ್ಮ ದೇಶದಲ್ಲೂ ಫುಟ್‌ಬಾಲ್ ಆಡುವವರ, ನೋಡುವವರ ಸಂಖ್ಯೆ ಹೆಚ್ಚಳಗೊಂಡಿದೆ. ಕೇರಳ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳು ಮೊದಲಾದ ಕಡೆ ಫುಟ್‌ಬಾಲ್ ಸಾಕಷ್ಟು ಜನಪ್ರಿಯ. ಆದರೂ, ಫಿಫಾ ಪಂದ್ಯಾವಳಿಯಲ್ಲಿ ಆಡುವಂತಹ ತಂಡವನ್ನು ನಾವಿನ್ನೂ ಕಟ್ಟಿಲ್ಲ; ಮಾತ್ರವಲ್ಲ ಫಿಫಾ ಪಂದ್ಯಾವಳಿಯ ಅರ್ಹತಾ ಸುತ್ತಿನ ಹೊಸ್ತಿಲನ್ನು ದಾಟಲು ಸಹ ನಮ್ಮಿಂದ ಇಂದಿಗೂ ಸಾಧ್ಯವಾಗಿಲ್ಲ. ಆದ್ದರಿಂದ, ಈಗ ನಾವು ಬ್ಯಾಟು ಬಾಲುಗಳನ್ನು ಬದಿಗಿಟ್ಟು, ಫಿಫಾ ಪಂದ್ಯಗಳನ್ನು ನೋಡೋಣ, ಭವಿಷ್ಯದಲ್ಲಿ ಫುಟ್‌ಬಾಲ್ ತಂಡವನ್ನು ಕಟ್ಟೋಣ.

ನೀವು ಈಗ ಕೇರಳದ ಮಲಪ್ಪುರಂ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ಹಳ್ಳಿಗಳ ಆಟದ ಮೈದಾನಗಳಿಗೆ ಹೋದರೆ, ಯುವಕರು ಕ್ರಿಕೆಟ್‌ನ ಬ್ಯಾಟ್ ಬಾಲ್ ಆಚೆಗಿಟ್ಟು ಕಾಲ್ಚೆಂಡಾಟದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ಅಲ್ಲಿನ ನಗರಗಳ ಸರ್ಕಲ್‌ಗಳಲ್ಲಿ ಮೆಸ್ಸಿ, ರೊನಾಲ್ಡೊ, ಪೀಲೆಯರ ಕಟೌಟ್ ಕಂಡರೂ ಆಶ್ಚರ್ಯವಿಲ್ಲ. ಫುಟ್‌ಬಾಲ್ ವಿಶ್ವಕಪ್ ಫೈನಲ್ ಯಾವ ವರ್ಷ ಎಲ್ಲಿ ನಡೆಯಿತು, ಯಾರು ಗೆದ್ದರು, ಯಾರು ಯಾವ ದಾಖಲೆ ಬರೆದರು ಎಂಬುದನ್ನೆಲ್ಲ ಪಟಪಟ ಹೇಳಬಲ್ಲವರೂ ಇಲ್ಲಿ ಸಿಗುತ್ತಾರೆ.

ಕೇರಳದ ಕಾಲ್ಚೆಂಡು ಕ್ರೇಜ್ ಅಂಥದು. ಕೋಲ್ಕತಾ, ಗೋವಾಗಳಿಗೆ ಹೋದರೂ ಈ ದೃಶ್ಯ ನೋಡ ಬಹುದು. ಇವರೆಲ್ಲರ ಪಾಲಿಗೆ, ಫಿಫಾ (FIFA) ಎಂಬುದು ಮನೆ ಹಬ್ಬದಂತೆ. ಕೇರಳದಲ್ಲಿ ಕ್ರಿಕೆಟ್‌ಗಿಂತ ಮನಸ್ಸು ಗೆದ್ದಿರುವುದು ಫುಟ್‌ಬಾಲ್. ಅದು ಅಲ್ಲಿನವರ ಸಂಸ್ಕೃತಿಯ ಒಂದು ಭಾಗ. ಕೇರಳದ ಹಳ್ಳಿಗಳಿಂದ ನಗರಗಳವರೆಗೆ ಫುಟ್‌ಬಾಲ್ ಹಬ್ಬದ ವಾತಾವರಣ ಕಾಣ ಸಿಗುತ್ತದೆ.

ವಿಶೇಷವಾಗಿ ಮಲಪ್ಪುರಂ, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ. ಮಳೆಯಿರಲಿ ಬಿಸಿಲಿರಲಿ, ಅಲ್ಲಿನ ಕರಾವಳಿಯ ಮರಳಿನ ಮೇಲೆ ಮತ್ತು ಹಸಿರು ಗದ್ದೆಗಳಲ್ಲಿ ಮಕ್ಕಳು ಹಾಗೂ ಯುವಕರು ಫುಟ್ʼಬಾಲ್ ಆಡುವುದನ್ನು ನೋಡುವುದೇ ಚಂದ.

ಕೇರಳದ ಈ ಫುಟ್‌ಬಾಲ್ ಪ್ರೀತಿಗೆ ಜಗತ್ತಿನಾದ್ಯಂತ ದೊಡ್ಡ ಹೆಸರಿದೆ. ವಿಶ್ವಕಪ್ ಬಂದರಂತೂ ಕೇರಳದ ಗಲ್ಲಿ ಗಲ್ಲಿಗಳು ಬಣ್ಣ ಬಣ್ಣದ ಜೆರ್ಸಿಗಳಿಂದ ಕಂಗೊಳಿಸುತ್ತವೆ. ಬ್ರೆಜಿಲ್ ಮತ್ತು ಅರ್ಜೆಂ ಟೀನಾ ದೇಶಗಳ ಆಟಗಾರರ ದೊಡ್ಡ ದೊಡ್ಡ ಕಟೌಟ್‌ಗಳು, ಬ್ಯಾನರ್‌ಗಳು ರಾರಾಜಿಸುತ್ತವೆ.

ಇದನ್ನೂ ಓದಿ: FIFA World Cup 2026: ಕೊನೆಯ ಫಿಫಾ ವಿಶ್ವಕಪ್‌ ಟೂರ್ನಿ ಆಡುತ್ತಿರುವ ಟಾಪ್‌ 5 ಸ್ಟಾರ್‌ಗಳು!

ಲಿಯೋನೆಲ್ ಮೆಸ್ಸಿ, ನೆಯ್ಮಾರ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರ ನೂರಾರು ಅಡಿ ಎತ್ತರದ ಕಟೌಟ್ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸುತ್ತಾರೆ. ನೆಚ್ಚಿನ ತಂಡ ಗೆದ್ದಾಗ ಇಡೀ ರಾತ್ರಿ ಹಬ್ಬ ಮಾಡುತ್ತಾರೆ.

ಹಳದಿ ಸೈನ್ಯ !

ಕೇರಳದಲ್ಲಿ ಸ್ಥಳೀಯವಾಗಿ ನಡೆಯುವ ‘ಸೆವೆನ್ಸ್ ಫುಟ್‌ಬಾಲ್’ ಪಂದ್ಯಾವಳಿಗಳು ಪ್ರಸಿದ್ಧವಾಗಿವೆ. ಇಲ್ಲಿ ಕೇವಲ ಏಳು ಆಟಗಾರರ ತಂಡಗಳು ಸ್ಪರ್ಧಿಸುತ್ತವೆ. ಗ್ಯಾಲರಿಗಳಿಲ್ಲದ ಹೆಚ್ಚಾಗಿ ಜನರ ಮೈದಾನಗಳಲ್ಲಿ ಸಹಸ್ರಾರು ಜನ ಜಮಾಯಿಸಿ, ಗಂಟೆಗಟ್ಟಲೆ ನಿಂತುಕೊಂಡೇ ಪಂದ್ಯಗಳನ್ನು ವೀಕ್ಷಿಸುತ್ತಾರೆ. ಈ ಪಂದ್ಯಗಳು ನೀಡುವ ರೋಮಾಂಚನ ಬೇರೆಲ್ಲೂ ಸಿಗುವುದಿಲ್ಲ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಆಡುವ ‘ಕೇರಳ ಬ್ಲಾಸ್ಟರ್ಸ್’ ತಂಡಕ್ಕಂತೂ ದೇಶದಲ್ಲೇ ಅತಿ ದೊಡ್ಡ ಅಭಿಮಾನಿ ಬಳಗವಿದೆ. ಇವರನ್ನು ‘ಮಂಜಪ್ಪಡೆ’ (ಹಳದಿ ಸೈನ್ಯ) ಎಂದು ಕರೆಯಲಾಗುತ್ತದೆ. ಪಂದ್ಯ ನಡೆದಾಗ ಸಮುದ್ರದಂತೆ ಕಾಣುತ್ತದೆ.

ಕೇರಳದ ಈ ಅಪಾರ ಪ್ರೀತಿ ಮನರಂಜನೆಗೆ ಸೀಮಿತವಲ್ಲ. ಇದು ದೇಶಕ್ಕೆ ಐ.ಎಂ.ವಿಜಯನ್, ಸಿ.ವಿ. ಪಾಪ್ಪಚ್ಚನ್ ಮತ್ತು ಇತ್ತೀಚಿನ ಆಶಿಕ್ ಕುರುನಿಯನ್ ಹಾಗೂ ಸಹಲ್ ಅಬ್ದುಲ್ ಸಮದ್ ಅವರಂತಹ ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದೆ. ಸಂತೋಷ್ ಟ್ರೋಫಿಯಲ್ಲಿ ಕೇರಳ ತಂಡದ ಸಾಧನೆ ಗಣನೀಯ. ಭಾರತದ ಫುಟ್ಬಾಲ್ ಪ್ರೀತಿಯನ್ನು ಜೀವಂತವಾಗಿಟ್ಟಿರುವುದೇ ಕೇರಳ.

ಹಾಗೆಯೇ ಪಶ್ಚಿಮ ಬಂಗಾಳ, ವಿಶೇಷವಾಗಿ ಕೋಲ್ಕತ್ತಾದಲ್ಲಿ ಫುಟ್‌ಬಾಲ್ ಹುಚ್ಚು ತೀವ್ರ ವಾಗಿದೆ! ಭಾರತೀಯ ಫುಟ್‌ಬಾಲ್‌ನ ‘ಮೆಕ್ಕಾ’ ಎಂದು ಕೋಲ್ಕತ್ತಾ ನಗರವನ್ನು ಕರೆಯಲಾಗುತ್ತದೆ. ಇಲ್ಲಿನ ಫುಟ್‌ಬಾಲ್ ಇತಿಹಾಸ ಶತಮಾನ ಹಳೆಯದು. ‘ಮೋಹನ್ ಬಾಗನ್’ ಮತ್ತು ‘ಈಸ್ಟ್ ಬೆಂಗಾಲ್’ ಕ್ಲಬ್‌ಗಳ ನಡುವಿನ ಪಂದ್ಯವನ್ನು ‘ಕೋಲ್ಕತ್ತಾ ಡರ್ಬಿ’ ಎನ್ನಲಾಗುತ್ತದೆ. ಈ ಪಂದ್ಯ ನಡೆದಾಗ ಇಡೀ ನಗರವೇ ಎರಡಾಗಿ ವಿಭಜನೆಯಾಗುತ್ತದೆ.

ಗೋವಾದಲ್ಲಿ ಫುಟ್‌ಬಾಲ್ ಅಧಿಕೃತ ರಾಜ್ಯ ಕ್ರೀಡೆ. ಪೋರ್ಚುಗೀಸರ ಪ್ರಭಾವದಿಂದ ಇಲ್ಲಿ ಫುಟ್‌ ಬಾಲ್ ಸಂಸ್ಕೃತಿ ಆಳವಾಗಿ ಬೇರೂರಿದೆ. ಡೆಂಪೋ ಎಸ್‌ಸಿ, ಚರ್ಚಿಲ್ ಬ್ರದರ್ಸ್ ಮತ್ತು ಎಫ್ಸಿ ಗೋವಾ ತಂಡಗಳಿಗೆ ಇಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಗೋವಾದ ಸಮುದ್ರ ತೀರಗಳಲ್ಲಿ ಸುಂದರ ಸಂಜೆಯಾಗುತ್ತಿದ್ದಂತೆ ಸ್ಥಳೀಯರು ಫುಟ್‌ಬಾಲ್ ಆಡುವುದನ್ನು ಸರ್ವೇ ಸಾಮಾನ್ಯ.

ಈಶಾನ್ಯ ರಾಜ್ಯಗಳಲ್ಲಿ ಫುಟ್‌ʼಬಾಲ್‌ ಹುಚ್ಚು

ಭಾರತೀಯ ಫುಟ್‌ʼಬಾಲ್‌ʼನ ಇಂದಿನ ಮುಂಚೂಣಿ ಶಕ್ತಿ ಎಂದರೆ ಈಶಾನ್ಯ ರಾಜ್ಯಗಳು. ವಿಶೇಷವಾಗಿ ಮಣಿಪುರ, ಕೊಚ್ಚಿಯ ಮೈದಾನದಲ್ಲಿ ಕ್ರೀಡಾಂಗಣ ಹಳದಿ ಮಿಜೋರಾಂ, ಮೇಘಾಲಯ ಮತ್ತು ಸಿಕ್ಕಿಂ. ಭಾರತದ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ತಂಡಗಳಿಗೆ ಅತಿ ಹೆಚ್ಚು ಆಟಗಾರ ರನ್ನು ನೀಡುವ ಹೆಗ್ಗಳಿಕೆ ಮಣಿಪುರದ್ದು. ‘ಮಿಜೋರಾಂ ಪ್ರೀಮಿಯರ್ ಲೀಗ್’ ಕೂಡ ಅತ್ಯಂತ ಯಶಸ್ವಿ ಸ್ಥಳೀಯ ಟೂರ್ನಿ. ಅಲ್ಲಿನ ಹಳ್ಳಿ ಹಳ್ಳಿಗಳಲ್ಲೂ ಫುಟ್‌ಬಾಲ್ ಕ್ರೇಜ್ ಇದೆ. ಭಾರತದ ಫುಟ್‌ಬಾಲ್ ದಂತಕಥೆ ಬೈಚುಂಗ್ ಭುಟಿಯಾ, ಭಾರತದ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕರಾಗಿದ್ದ, ಮಟ್ಟದಲ್ಲಿ ಉತ್ತಮ ಅಂತಾರಾಷ್ಟ್ರೀಯ ಪ್ರದರ್ಶನ ನೀಡಿರುವ ಸುನಿಲ್ ಛೆತ್ರಿ ಕೂಡ ಬಂದಿದ್ದು ಸಿಕ್ಕಿಂನಿಂದ.

ಫುಟ್‌ಬಾಲ್ ನರ್ಸರಿ

ಪಂಜಾಬ್‌ನ ‘ಮಹಿಲ್‌ಪುರ’ ಎಂಬ ಗ್ರಾಮವನ್ನು ‘ಭಾರತೀಯ ಫುಟ್‌ಬಾಲ್‌ನ ನರ್ಸರಿ’ ಎಂದು ಕರೆಯಲಾಗುತ್ತದೆ. ಕಬಡ್ಡಿ ಅಥವಾ ಕ್ರಿಕೆಟ್ ಮಾತ್ರವಲ್ಲ, ಫುಟ್‌ಬಾಲ್ ಆಟದಲ್ಲೂ ಪಂಜಾಬಿಗಳು ಮಿಂಚುತ್ತಾರೆ. ಜೆಸಿಟಿ ಫುಟ್‌ಬಾಲ್ ಕ್ಲಬ್ ಭಾರತೀಯ ಫುಟ್‌ಬಾಲ್ ಇತಿಹಾಸದಲ್ಲಿ ದೊಡ್ಡ ಹೆಸರು.

ಫಿಫಾದಲ್ಲಿ ಮೊದಲ ಗೋಲು

2017ರ ಅಕ್ಟೋಬರ್ 9ರಂದು, ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾರತ ಮತ್ತು ಕೊಲಂಬಿಯಾ ತಂಡಗಳು ಫಿಫಾ ಅಂಡರ್-17 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿ ಯಾಗಿದ್ದವು. ಇದರಲ್ಲಿ ಭಾರತದ ಆಟಗಾರ ಜೀಕ್ಸನ್ ಸಿಂಗ್ ಒಂದು ಗೋಲು ಹೊಡೆದದ್ದೇ ಫಿಫಾ ವಿಶ್ವಕಪ್‌ನ ಇತಿಹಾಸದಲ್ಲೇ, ಭಾರತದ ಮೊತ್ತ ಮೊದಲ ಗೋಲು. (ಆದರೆ, ಫಿಫಾ ಮುಖ್ಯ ಪಂದ್ಯಾವಳಿಗಳಲ್ಲಿ, ನಮ್ಮ ದೇಶ ಇನ್ನೂ ಒಂದೇ ಒಂದು ಗೋಲ್ ಹೊಡೆದಿಲ್ಲ.) ಅಂದು ಕ್ರೀಡಾಂಗಣವೇ ಸಂಭ್ರಮದಿಂದ ಮೊಳಗಿತ್ತು. ಸಾವಿರಾರು ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಅದು ಭಾರತ ಕ್ರಿಕೆಟ್ ಪಂದ್ಯ ಗೆದ್ದಾಗ ಉಂಟಾಗುವ ಸಂಭ್ರಮದಂತೆಯೇ ಕಾಣಿಸಿತು.

ಆದರೆ ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಕೊಲಂಬಿಯಾ ತಂಡ ಪಂದ್ಯವನ್ನು ಗೆದ್ದಿತು. ಜೀಕ್ಸನ್ ಸಿಂಗ್ ಅವರ ಗೋಲು ಭಾರತೀಯರ ಮನಸ್ಸಿನಲ್ಲಿ ಆಶೆಯ ಕಿಡಿಯನ್ನು ಹಚ್ಚಿತ್ತು. ಇದಾಗಿಹತ್ತು ವರ್ಷಗಳು ಕಳೆದಿವೆ. ಭಾರತದಲ್ಲಿ 140 ಕೋಟಿಗೂ ಹೆಚ್ಚು ಜನರಿದ್ದಾರೆ.

ಫುಟ್‌ಬಾಲ್ ಅಭಿಮಾನಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ವಿಶ್ವಕಪ್ ಬಂದಾಗ ಮನೆಗಳಲ್ಲಿ, ಸಾಮಾ ಜಿಕ ಜಾಲತಾಣಗಳಲ್ಲಿ ಮತ್ತು ಟಿವಿ ಚರ್ಚೆಗಳಲ್ಲಿ ಫುಟ್‌ಬಾಲ್ ಜ್ವರ ಕಾಣಿಸುತ್ತದೆ. ಆದರೆ ಒಂದು ಪ್ರಶ್ನೆ ಮಾತ್ರ ಉಳಿದಿದೆ. ಇಷ್ಟು ದೊಡ್ಡ ದೇಶವಾಗಿದ್ದರೂ ಭಾರತ ಏಕೆ ಇನ್ನೂ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ? ಪ್ರತಿ ವಿಶ್ವಕಪ್ ಬಂದಾಗ ನಾವೆಲ್ಲರೂ ಕೇಳುವ ಪ್ರಶ್ನೆ ಇದು!

ಅರ್ಹತಾ ಸುತ್ತಿನ ಹೊಸ್ತಿಲು

ಏನು ಮಾಡುವುದು, ಅರ್ಹತಾ ಸುತ್ತುಗಳ ಪಂದ್ಯದಲ್ಲಿ ಗೆಲ್ಲಲು ನಮ್ಮ ದೇಶದವರಿಗೆ ಸಾಧ್ಯವಾಗು ತ್ತಿಲ್ಲ. ವಿಶ್ವಕಪ್ ತಲುಪಬೇಕಾದರೆ ಭಾರತ ಮೊದಲು ಏಷ್ಯಾ ಖಂಡದ ದೇಶಗಳ ವಿರುದ್ಧ ಅರ್ಹತಾ ಪಂದ್ಯಗಳನ್ನು ಆಡಬೇಕು. ಜಪಾನ್, ದಕ್ಷಿಣ ಕೊರಿಯಾ, ಇರಾನ್, ಸೌದಿ ಅರೇಬಿಯಾದಂತಹ ಬಲಿಷ್ಠ ತಂಡಗಳನ್ನು ದಾಟಿ ಮುನ್ನಡೆಯುವುದು ಭಾರತಕ್ಕೆ ಸದ್ಯದ ದೊಡ್ಡ ಸವಾಲು. ಇತ್ತೀಚಿನ ಫಿಫಾ ಶ್ರೇಯಾಂಕದ ಪ್ರಕಾರ ಭಾರತ 138ನೆಯ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳಲ್ಲಿರುವ ದೇಶಗಳೆಂದರೆ, ಅರ್ಜಂಟೀನಾ, ಸ್ಪೈನ್ ಮತ್ತು ಫ್ರಾನ್ಸ್.

ಯುರೋಪ್ ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ 5-6 ವರ್ಷದ ಮಕ್ಕಳಿದ್ದಾಗಲೇ ವ್ಯವಸ್ಥಿತ ಅಕಾಡೆಮಿ ಗಳಲ್ಲಿ ತರಬೇತಿ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಅಂತಹ ಬಲಿಷ್ಠ ತಳಮಟ್ಟದ ವ್ಯವಸ್ಥೆ ಇನ್ನೂ ಸರಿಯಾಗಿ ರೂಪಿತವಾಗಿಲ್ಲ. ಶಾಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಉತ್ತಮ ಕೋಚಿಂಗ್ ಸಿಗದೆ ಯುವ ಪ್ರತಿಭೆಗಳು ಕಳೆದುಹೋಗುತ್ತಿದ್ದಾರೆ. ಜತೆಗೆ ಕ್ರಿಕೆಟ್‌ನ ಅತಿಯಾದ ಪ್ರಭಾವ. ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವಷ್ಟು ಪ್ರಚಾರ, ಹಣ, ಪ್ರಾಯೋಜಕತ್ವ ಮತ್ತು ಮಾಧ್ಯಮದ ಬೆಂಬಲ ಬೇರೆ ಯಾವುದೇ ಆಟಕ್ಕೂ ಸಿಗುತ್ತಿಲ್ಲ.

ಕೋಚ್‌ಗಳ ಕೊರತೆ

ಭಾರತದಲ್ಲಿ ವಿಶ್ವದರ್ಜೆಯ ಫುಟ್‌ಬಾಲ್ ಮೈದಾನ ಗಳು ತರಬೇತಿ ಸೌಲಭ್ಯಗಳು ತೀರಾ ಕಡಿಮೆ. ಫುಟ್‌ಬಾಲ್‌ನ ಎಳೆಯ ಪ್ರತಿಭೆಗಳನ್ನು ತರಬೇತು ಗೊಳಿಸಿ, ಯುವ ಆಟಗಾರರನ್ನಾಗಿಸಲು ಅಪಾರ ಸಂಖ್ಯೆಯ ಉತ್ತಮ ದರ್ಜೆಯ ಕೋಚ್ಗಳ ಅಗತ್ಯವಿದೆ. ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ ನಲ್ಲಿ ಆಗಾಗ ಉಂಟಾಗುವ ಆಡಳಿತಾತ್ಮಕ ಗೊಂದಲಗಳು ದೀರ್ಘಾವಧಿಯ ಯೋಜನೆಗಳಿಗೆ ಅಡ್ಡಿಯಾಗುತ್ತಿವೆ.

‘ಇಂಡಿಯನ್ ಸೂಪರ್ ಲೀಗ್’ ಬಂದ ನಂತರ ಫುಟ್‌ಬಾಲ್‌ಗೆ ಸ್ವಲ್ಪ ಬೆಂಬಲ ದೊರಕಿದ್ದರೂ, ದೇಶೀಯ ಲೀಗ್‌ಗಳು ಮತ್ತು ರಾಷ್ಟ್ರೀಯ ತಂಡದ ನಡುವೆ ಆಟಗಾರರ ಆಯ್ಕೆ ವಿಷಯದಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಫಿಫಾ ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು ಈಗ 48ಕ್ಕೆ ಹೆಚ್ಚಿಸಿರುವುದರಿಂದ, ಏಷ್ಯಾ ಖಂಡಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ. ಭಾರತ ತಳಮಟ್ಟದಿಂದ ತನ್ನ ಫುಟ್‌ಬಾಲ್ ವ್ಯವಸ್ಥೆಯನ್ನು ಸುಧಾರಿಸಿಕೊಂಡರೆ, ಮುಂದಿನ 10-12 ವರ್ಷಗಳಲ್ಲಿ ವಿಶ್ವಕಪ್ ಆಡುವ ಕನಸು ನನಸಾಗಬಹುದು. ಅಲ್ಲಿಯವರೆಗೂ, ಆ ರೋಮಾಂಚಕಾರಿ ಆಟವನ್ನುನೋಡಿ ಎಂಜಾಯ್ ಮಾಡೋಣ!

97 ಗೋಲು ಬಾರಿಸಿದ ಭಾರತೀಯ

ಜಗತ್ತಿನ ಪ್ರಖ್ಯಾತ ಫುಟ್‌ಬಾಲ್ ಆಟಗಾರರಾದ ಕ್ರಿಸ್ಟಿನೋ ರೊನಾಲ್ಡೋ (ಪೋರ್ಚುಗಲ್, 143 ಗೋಲು), ಲಿಯೋನಿಲ್ ಮೆಸ್ಸಿ (ಅರ್ಜೆಂಟೀನಾ, 117 ಗೋಲು) ಮತ್ತು ಅಲಿ ದೇ (ಇರಾನ್, 108 ಗೋಲು) ಇವರು, ಅಂತಾರಾಷ್ಟ್ರೀಯ ಮಟ್ಟದ ಫುಟ್‌ಬಾಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲ್ ಹೊಡೆದವರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ನಾಲ್ಕನೆಯ ಸ್ಥಾನದಲ್ಲಿರುವುದು ನಮ್ಮ ದೇಶದ ಸುನಿಲ್ ಛೆತ್ರಿ! ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರು ಹೊಡೆದಿರುವ ಗೋಲು ಗಳ ಸಂಖ್ಯೆ 97.

ಸಿಕ್ಕಿಂ ಮೂಲದವರಾದ ಇವರು, ಕೊಲ್ಕೊತ್ತಾದ ಮೋಹನ್ ಬಾಗನ್ ತಂಡದ ಪರವಾಗಿ ಆಡಿ, ಮೇಲೆ ಬಂದರು. ನಮ್ಮ ದೇಶದ ಫುಟ್‌ಬಾಲ್ ತಂಡದ ನಾಯಕನಾಗಿ, ತಂಡವನ್ನು ಮುನ್ನಡೆಸಿ ದರು. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಪರವಾಗಿ ಆಡುತ್ತಿರುವ ಇವರು ಪದ್ಮಶ್ರೀ, ಖೇಲ್‌ರತ್ನ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಮ್ಮ ದೇಶವು ಮುಂದೆಂದಾದರೂ ಫಿಫಾ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆಯಬೇಕಾದರೆ, ಸುನಿಲ್ ಛೆತ್ರಿ ರೀತಿಯ ಹಲವು ಆಟಗಾರರು ರೂಪುಗೊಳ್ಳಬೇಕು!

ಭಾರತ ಫಿಫಾ ಪ್ರವೇಶಿಸಬಲ್ಲದೇ?

ಸದ್ಯ ನಮ್ಮ ದೇಶದವರೆಲ್ಲರೂ ಫಿಫಾವನ್ನು ನೋಡಿ ಆನಂದಿಸುತ್ತಿದ್ದೇವೆ. ಆದರೆ ನಮ್ಮ ದೇಶದ ತಂಡ ಫಿಫಾದಲ್ಲಿ ಆಡುವುದನ್ನು ನೋಡಲು ನಮಗೆ ಇದುವರೆಗೂ ಸಾಧ್ಯವಾಗಿಲ್ಲ. ಈ ಸಲದ ಫಿಫಾದಲ್ಲಿ ಕೂಡ ಭಾರತ ತಂಡ ಇಲ್ಲ. ಹಲವು ವರ್ಷಗಳಿಂದ ನಾವು ಇಲ್ಲಿ ಆಡಲು ಅರ್ಹತೆ ಪಡೆಯುತ್ತಿಲ್ಲ. ಅರ್ಹತಾ ಸುತ್ತಿನಲ್ಲಿ ಗೆಲ್ಲುವುದೇ ನಮ್ಮ ದೇಶದ ತಂಡಕ್ಕೆ ಈಗಿನ ದೊಡ್ಡ ಸವಾಲು; ನಂತರ, ಫಿಫಾ ಗೆಲ್ಲಲು ಯೋಚಿಸಬಹುದು.