Raghavendra Rayalapadu Column: ರೇಡಿಯೋ ಕಿಯಾಸ್ಕ್ 1940 !
ರೇಡಿಯೋ ಕಿಯಾಸ್ಕ್ 1940 ಎಂದು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ, ಸಿಮೆಂಟ್ ಗಾರೆ ಯಲ್ಲೇ ಅಕ್ಷರ ರೂಪಿಸಿ, ರೇಡಿಯೋ ಕಿಯೋಸ್ಕ್ ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಬರಹ ವನ್ನೂ ಕಾಣಬಹುದು. ಏನಿದು ‘ರೇಡಿಯೋ ಕಿಯಾಸ್ಕ್’ ಎಂಬ ಕುತೂಹಲದಿಂದ ಫೇಸ್‌ಬುಕ್‌ನಲ್ಲಿ ಬರೆಹವೊಂದನ್ನು ಹಾಕಿದಾಗ ಇದನ್ನು ಕಂಡು ಕೇಳಿದ್ದ ಹಲವರು ತಮಗೆ ಗೊತ್ತಿದ್ದ ಮಾಹಿತಿಯನ್ನು ಆಸ್ಥೆಯಿಂದ ಹಂಚಿ ಕೊಂಡರು!


ನೆನಪು
ರಾಘವೇಂದ್ರ ರಾಯಲಪಾಡು
ಇಪ್ಪತ್ತನೆಯ ಶತಮಾನದಲ್ಲಿ, ಕೆಲವು ದೊಡ್ಡ ಊರುಗಳಲ್ಲಿ, ಸಾರ್ವಜನಿಕ ಉದ್ಯಾನವನದ ಬಳಿಯೋ, ಮೈದಾನದ ಬಳಿಯೋ, ಜನರು ಸೇರಿ ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಗಳನ್ನು ಕೇಳುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು!
ಕೋಲಾರ ನಗರದ ಹೃದಯಭಾಗದಲ್ಲಿರುವ ಸರ್ವಜ್ಞ ಪಾರ್ಕ್, ಸೋಮೇಶ್ವರ ಮತ್ತು ಕೋಲಾರಮ್ಮ ದೇವಸ್ಥಾನಗಳಿಗೆ ಸಮೀಪವಾಗಿದ್ದು ದಿನನಿತ್ಯ ಪ್ರವಾಸಿಗರು ಭೇಟಿ ನೀಡುವ ತಾಣ. ಸುತ್ತಲೂ ಹಲವಾರು ಸರ್ಕಾರಿ ಮತ್ತು ಖಾಸಗಿ ವಿದ್ಯಾಲಯಗಳಿರುವುದರಿಂದ ವಿರಾಮ ಸಮಯದಲ್ಲಿ ವಿದ್ಯಾರ್ಥಿಗಳೂ ಇಲ್ಲಿಗೆ ಬಂದು ಕೂರುತ್ತಾರೆ.
ಈ ಉದ್ಯಾನವನದಲ್ಲಿ ಆಕರ್ಷಕವಾದ ಆದರೆ ಹಳೆಯದೆನಿಸುವ ಕಟ್ಟಡವೊಂದು, ಶಿಥಿಲಗೊಂಡಿ ದ್ದರೂ ದೃಢವಾಗಿ ನಿಂತಿದೆ; ಅದರ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಶಿಲಾಫಲಕ ವೊಂದರ ಮೇಲೆ ಶ್ರೀ ವಿ.ಆರ್. ಚಿಕ್ಕ ಚನ್ನಂಜಪ್ಪ ಶೆಟ್ಟರು, ರೇಡಿಯೋ ಕಿಯಾಸ್ಕ್ 1940 ಎಂದು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ, ಸಿಮೆಂಟ್ ಗಾರೆ ಯಲ್ಲೇ ಅಕ್ಷರ ರೂಪಿಸಿ, ರೇಡಿಯೋ ಕಿಯೋಸ್ಕ್ ಎಂದು ಇಂಗ್ಲಿಷ್‌ನಲ್ಲಿ ಬರೆದಿರುವ ಬರಹ ವನ್ನೂ ಕಾಣಬಹುದು. ಏನಿದು ‘ರೇಡಿಯೋ ಕಿಯಾಸ್ಕ್’ ಎಂಬ ಕುತೂಹಲದಿಂದ ಫೇಸ್‌ಬುಕ್‌ನಲ್ಲಿ ಬರೆಹವೊಂದನ್ನು ಹಾಕಿದಾಗ ಇದನ್ನು ಕಂಡು ಕೇಳಿದ್ದ ಹಲವರು ತಮಗೆ ಗೊತ್ತಿದ್ದ ಮಾಹಿತಿ ಯನ್ನು ಆಸ್ಥೆಯಿಂದ ಹಂಚಿ ಕೊಂಡರು!
1895ರಲ್ಲಿ ಮಾರ್ಕೋನಿ ಪ್ರಥಮಬಾರಿಗೆ ರೇಡಿಯೋ ಸಂಕೇತಗಳನ್ನು ಒಂದಡೆಯಿಂದ ಮತ್ತೊಂದ ಡೆಗೆ ಕಳುಹಿಸಿ ರೇಡಿಯೋ ಸಾಧನದ ಆವಿಷ್ಕಾರಕ್ಕೆ ನಾಂದಿ ಆಡಿದ. 1936ರಲ್ಲಿ ಭಾರತದಲ್ಲಿ ಆಗಿದ್ದ ಬ್ರಿಟಿಶ್ ಸರ್ಕಾರವು ಏಐಆರ್ (ಆಲ್ ಇಂಡಿಯಾ ರೇಡಿಯೋ) ಹೆಸರಿನಲ್ಲಿ ದೇಶೀ ಹಾಗೂ ವಿದೇಶೀ ರೇಡಿಯೋ ಪ್ರಸಾರವನ್ನು ಕೈಗೊಳ್ಳುತ್ತದೆ; ಅದಕ್ಕೂ ಒಂದು ವರ್ಷ ಮುಂಚೆ, 1935ರಲ್ಲಿ ‘ಆಕಾಶ ವಾಣಿ ಮೈಸೂರು’ ಸಣ್ಣ ಮಟ್ಟದಲ್ಲಿ ಖಾಸಗಿ ರೇಡಿಯೋ ಸೇವೆಯನ್ನು ಆರಂಭಿಸಿತ್ತು.
ಇದನ್ನೂ ಓದಿ: Shashidhara Halady Column: ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?
ಆ ಕಾಲದಲ್ಲಿ ರೇಡಿಯೋ ಸೆಟ್‌ಗಳು ಜನಸಾಮಾನ್ಯರಿಗೆ ಕೈಗೆಟುಕುವ ಸ್ಥಿತಿಯಲ್ಲಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಸರಕಾರದಿಂದ ಹಾಗೂ ದಾನಿಗಳಿಂದ ಸಾರ್ವಜನಿಕ ರೇಡಿಯೋ ಕೇಂದ್ರ(ಕಿಯಾಸ್ಕ್)ಗಳ ನಿರ್ಮಾಣ ಆಯಿತು. ಈ ರೀತಿಯಾಗಿ ಸ್ಥಳೀಯ ವಾಗಿ ಚಿಂತಾಮಣಿ, ಬಂಗಾರಪೇಟೆಗಳಲ್ಲಿಯೂ ಈ ರೇಡಿಯೋ ಕಿಯಾಸ್ಕ್ ಆರಂಭಗೊಂಡವು.
ಹಳ್ಳಿಯ ಜನರು ಸೇರುವ ತಾಣ
ಕೋಲಾರದ ಸರ್ವಜ್ಞ ಉದ್ಯಾನವನದ ಕಿಯೋಸ್ಕ್ ಕಟ್ಟಡದ ನಾಲ್ಕೂ ಬದಿಯಲ್ಲಿ ಧ್ವನಿ ವರ್ಧಕ ಗಳನ್ನು ಅಳವಡಿಸಲಾಗಿತ್ತು. ಬಹು ವರ್ಷಗಳ ತನಕ, ನಿತ್ಯ ಪ್ರಸಾರವಾಗುತ್ತಿದ್ದ ಕನ್ನಡ ವಾರ್ತೆ ಗಳನ್ನು ಕೇಳಲು ಇಲ್ಲಿ ಜನರು ಸೇರುತ್ತಿದ್ದರು. ಅಲ್ಲದೆ ರೇಡಿಯೋ ಸಿಲೋನ್‌ನಿಂದ ನಿತ್ಯ ಬಿತ್ತರಗೊಳ್ಳುತ್ತಿದ್ದ ಚಿತ್ರಗೀತೆಗಳು ಹಾಗೂ ಬುಧವಾರಗಳಂದು ಪ್ರಸಾರಗೊಳ್ಳುತ್ತಿದ್ದ ಜನಪ್ರಿಯ ಬಿನಾಕಾ ಗೀತ್ ಮಾಲಾ ಕೇಳಲೆಂದು ನೆರೆಯ ಹಳ್ಳಿಗಳ ಜನರೂ ಇಲ್ಲಿಗೆ ಬರುತ್ತಿದ್ದರು ಎಂದು ಕೆಲವರು ಹಿರಿಯರು ನೆನಪು ಮಾಡಿಕೊಂಡರು.
ಸುತ್ತಮುತ್ತಲಿನ ಅಂಗಡಿ ಕಚೇರಿಗಳಲ್ಲಿನ ಜನರು ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಲೇ ರೇಡಿಯೋದಿಂದ ಪ್ರಸಾರವಾಗುತ್ತಿದ್ದ ಚಿತ್ರಗೀತೆಗಳಿಗೆ ಕಿವಿಯಾಗುತ್ತಿದ್ದರು. ಉದ್ಯಾನವನದಲ್ಲಿ ವಾರಕ್ಕೊಮ್ಮೆ ವಾದ್ಯಗೋಷ್ಠಿಯನ್ನು ಏರ್ಪಡಿಸಲಾಗುತ್ತಿತ್ತು. ಆಗ ಉದ್ಯಾನವನದ ತುಂಬೆಲ್ಲಾ ಜನರು ನೆರೆಯುತ್ತಿದ್ದರು. ಈಗಲೂ ಸ್ಥಿರವಾಗಿ ನಿಂತಿರುವ ರೇಡಿಯೋ ಕೇಂದ್ರದತ್ತ ಕಣ್ಣಗಲಿಸಿ, ಕಿವಿಗೆ ಕೈಯಿಟ್ಟು ಏನಾದರೂ ಕೇಳಿಸೀತೆ ಎಂದು ಕ್ಷಣ ನಿಲ್ಲುವಂತೆ ಆಗುತ್ತದೆ ಎನ್ನುತ್ತಾರೆ ಅವರು.
ಮೊದಲ ಚುನಾವಣೆಯ ಫಲಿತಾಂಶ
1951ನೆಯ ಇಸವಿಯಲ್ಲಿ ಜರುಗಿದ ಮೊದಲ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶಗಳನ್ನು ಆಲಿಸಲು ಸರ್ವಜ್ಞ ಉದ್ಯಾನವನದಲ್ಲಿ ಜಾತ್ರೆಗೆ ಸೇರುವ ತೆರದಲ್ಲಿ ಜನರು ನೆರೆದಿದ್ದರು ಎಂದು ಕೆಲವರು ತಮ್ಮ ಅನುಭವವನ್ನು ಸ್ಮರಿಸಿಕೊಂಡರು. 1980ರ ದಶಕದಲ್ಲಿ ದೇಶದಲ್ಲಿ ದೂರದರ್ಶನ ಪ್ರಸಾರ ಆರಂಭಗೊಂಡಾಗ ಈ ರೇಡಿಯೋ ಕಿಯಾಸ್ಕ್‌ನಲ್ಲಿ ದೂರದರ್ಶನ ಉಪಕರಣವನ್ನು ಅಳವಡಿಸಲಾಯಿತು; ಒಂದು ಪಾರ್ಶ್ವದಲ್ಲಿ ಅದಕ್ಕಾಗಿ ಒಂದು ಷಟರ್ ಹಾಕಿ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸಂಜೆ 7 ರಿಂದ 9 ರವರೆಗೆ ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮಗಳನ್ನು ಹಾಗೂ ಶನಿವಾರ, ಭಾನುವಾರಗಳಂದು ಬಿತ್ತರವಾಗುತ್ತಿದ್ದ ಕನ್ನಡ ಚಲನಚಿತ್ರಗಳನ್ನು ನೋಡಲು ನಗರದ ಜನರೇ ಅಲ್ಲದೆ ಅಕ್ಕಪಕ್ಕದ ಗ್ರಾಮಗಳ ಜನರೂ ಇಲ್ಲಿ ಸೇರುತ್ತಿದ್ದರಂತೆ.
1984ರಲ್ಲಿ ಆಗಿನ ಪ್ರಧಾನಮಂತ್ರಿಗಳಾಗಿದ್ದ ಇಂದಿರಾಗಾಂಧಿಯವರ ಹತ್ಯೆಯಾದ ಸಂದರ್ಭ ದಲ್ಲಂತೂ ವಾರ್ತೆಗಳನ್ನು ಕೇಳಲು ರೇಡಿಯೋ ಕಿಯಾಸ್ಕ್ ಮುಂದೆ ಸಾವಿರಾರು ಜನರು ಸೇರಿ ನೂಕುನುಗ್ಗಲಾಗಿತ್ತು ಎಂದು ಅಂದು ಅಲ್ಲಿ ಸೇರಿದ್ದ ಹಿರಿಯ ಸಾಹಿತಿಗಳೊಬ್ಬರು ಸ್ಮರಿಸಿಕೊಂಡರು. 85 ವರ್ಷಗಳೇ ಸಂದಿದ್ದರೂ ಈ ಪುಟ್ಟ ಕಟ್ಟಡ ಗಟ್ಟಿಮುಟ್ಟಾಗಿದೆ; ಇದೆ ಮೇಲ್ಭಾಗದಲ್ಲಿ ಗಿಡ ಮರಗಳು ಬೆಳೆದಿದ್ದು, ಇಂದು ಅದು ಜನರ ಆಸಕ್ತಿಯ ಕೇಂದ್ರವಾಗಿ ಉಳಿದಿಲ್ಲದೇ ಇರುವುದರ ಪ್ರತೀಕ ಎನಿಸಿದೆ; ಸ್ವತಂತ್ರಪೂರ್ವ ಕಾಲದ ಈ ಕಟ್ಟಡ ಅಂದಿನ ಕಾಮಗಾರಿಕೆ, ಸಾಮಗ್ರಿಗಳ ಗುಣ ಮಟ್ಟ ಮತ್ತು ಅಂದಿನ ಕೆಲಸಗಾರರ ಶ್ರದ್ಧೆ, ಕೌಶಲ್ಯ, ಬದ್ಧತೆಗಳ ಸಾಕ್ಷಿಯಾಗಿ, ಸಂದು ಹೋದ ಕಾಲಘಟ್ಟವೊಂದರ ಅನನ್ಯ ಸಾಕ್ಷಿಯಾಗಿ ಉಳಿದುಕೊಂಡಿದೆ.