ಶಶಿಧರ ಹಾಲಾಡಿ
ಒಂದು ಚಿತ್ರವು ಸಾವಿರ ಪದಗಳಿಗೆ ಸಮ ಎನ್ನುತ್ತಾರೆ; ಆದರೆ, ರಘುರಾಯ್ ಅವರ ಒಂದು ಚಿತ್ರವು ಸಾವಿರಾರು ಪದಗಳಿಗೆ ಸಮನಾದುದು! ಫೋಟೋ ಜರ್ನಲಿಸಂ ಕ್ಷೇತ್ರದಲ್ಲಿ ನಮ್ಮ ದೇಶದ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಪ್ರಥಮ ಅಗ್ರಗಣ್ಯ ಛಾಯಾಚಿತ್ರಗ್ರಾಹಕ ರಘು ರಾಯ್ (1942-2026), ಇತ್ತೀಚೆಗೆ ನಿಧನರಾದರು. ಅವರ ಆರು ದಶಕಗಳ ಫೊಟೋಗ್ರಫಿಯನ್ನು ಗಮನಿ ಸುತ್ತಾ ಹೋದರೆ, ನಮ್ಮ ದೇಶದ ಪ್ರಮುಖ ವಿದ್ಯಮಾನಗಳನ್ನು ಚಿತ್ರಗಳಲ್ಲಿ ಸೆರೆ ಹಿಡಿಯುವುದರ ಜತೆ, ಅಂತಹ ಛಾಯಾಚಿತ್ರಗಳಿಗೆ ಕಲಾತ್ಮಕ ಚೌಕಟ್ಟನ್ನು, ಸ್ಪರ್ಶವನ್ನು ಕೊಡುವಲ್ಲಿ ಅವರು ತೋರಿದ ಕೌಶಲ ಮನದಟ್ಟಾದೀತು.
ಅವರ ಕೆಲವು ಪ್ರಸಿದ್ಧ ಛಾಯಾಚಿತ್ರಗಳು ಹೇಳುವ ಕಥೆಯ ವ್ಯಾಪ್ತಿ, ಆಯಾಮ ಅನೂಹ್ಯ ವಾದುದು. ಸ್ವತಂತ್ರ ಭಾರತದ ಪ್ರಮುಖ ಪ್ರೆಸ್ ಫೋಟೋಗ್ರಾಫರ್ ಸಹ ಆಗಿದ್ದ ಅವರಿಗೆ, ದೆಹಲಿಯ ಅಧಿಕಾರಶಾಹಿಯ ಪಡಸಾಲೆಗೆ ಸುಲಲಿತ ಪ್ರವೇಶವಿತ್ತು. ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹಲವು ಅರ್ಥಪೂರ್ಣ ಛಾಯಾಚಿತ್ರಗಳನ್ನು ಅವರು ಸೆರೆ ಹಿಡಿದಿದ್ದಾರೆ. ಅವುಗಳಲ್ಲಿ ಒಂದು ಎಂದರೆ, ಇಂದಿರಾ ಗಾಂಧಿಯವರು ಕುರ್ಚಿಯಲ್ಲಿ ಕುಳಿತಿದ್ದು, ಅವರ ಸುತ್ತಲೂ ಹಿರಿಯ ರಾಜಕಾರಣಿಗಳು, ಮಂತ್ರಿಗಳು ವಿನೀತರಾಗಿ ನಿಂತಿದ್ದಾರೆ!
ಇಂದಿರಾ ಗಾಂಧಿಯವರು, ಅಧಿಕಾರದಲ್ಲಿದ್ದಾಗ, ಅವರ ಪಕ್ಷದ ಇತರ ರಾಜಕಾರಣಿಗಳನ್ನು, ಮಂತ್ರಿಗಳನ್ನು ಯಾವ ಸ್ಥಾನದಲ್ಲಿಟ್ಟಿದ್ದರು, ಎಷ್ಟರಮಟ್ಟಿಗೆ ನಿಯಂತ್ರಿಸುತ್ತಿದ್ದರು ಎಂಬುದನ್ನು, ಈ ಒಂದು ಚಿತ್ರವು ಅದೆಷ್ಟು ಮಾರ್ಮಿಕವಾಗಿ ಸೆರೆ ಹಿಡಿದಿದೆ ಎಂದರೆ, ಈ ಚಿತ್ರವನ್ನು ನೋಡಿದಾಗ ಮನಸ್ಸಿನಲ್ಲಿ ಮುಡುವ ಚಿತ್ರಣವು, ಸಾವಿರಾರು ಪದಗಳಲ್ಲಿ ವರ್ಣಿಸಿದರೂ, ದಕ್ಕಲಾರದು!
ಇದನ್ನೂ ಓದಿ: Shashidhara Halady Column: ಎಲ್ಲೆಲ್ಲೂ ಎಲ್ ನಿನೋ ತಂದಿಟ್ಟಿರುವ ಎಡವಟ್ಟು !
ರಘು ರಾಯ್ ಅವರು 1942ರಲ್ಲಿ, ಪಂಜಾಬ್ ರಾಜ್ಯದ ಭಾಗದಲ್ಲಿ ಜನಿಸಿದರು; ಅವರ ಜನ್ಮಸ್ಥಳವು 1947ರಲ್ಲಿ ಪಾಕಿಸ್ತಾನಕ್ಕೆ ಸೇರಿಹೋಯಿತು. ಅವರು ಓದಿದ್ದು ಇಂಜಿನಿಯರಿಂಗ್. ಅವರ ಸಹೋದರ ಶರಮ್‌ಪಾಲ್ ಚೌಧುರಿ (ಎಸ್.ಪಾಲ್) ಪತ್ರಿಕಾ ಛಾಯಾಚಿತ್ರಗ್ರಾಹಕರಾಗಿದ್ದರು; ಅವರಿಂದ ಎರವಲು ಪಡೆದ ಒಂದು ಕ್ಯಾಮೆರಾ ಬಳಸಿ, ರಘುರಾಯ್ ಅವರು ಚಿತ್ರಿಸಿದ ಒಂದು ಕತ್ತೆಯ ಚಿತ್ರವು, ಟೈಮ್ ಪತ್ರಿಕೆಯಲ್ಲಿ ಪ್ರಕಟಗೊಂಡದ್ದೇ, ರಘು ರಾಯ್ ಅವರ ಭವಿಷ್ಯದ ಹಾದಿಯನ್ನು ಬದಲಿಸಿತು.
ಇಂಜಿನಿಯರ್ ಆಗಬೇಕಿದ್ದ ಅವರು ಪತ್ರಿಕಾ ಛಾಯಾಚಿತ್ರಗ್ರಾಹಕರಾಗಿ ತಮ್ಮ ಬದುಕನ್ನು ರೂಪಿಸಿಕೊಂಡರು. 1966ರಲ್ಲಿ, ಅಂದರೆ 22ನೆಯ ವಯಸ್ಸಿಗೆ ‘ದ ಸ್ಟೇಟ್ಸ್‌ಮನ್’ ಪತ್ರಿಕೆ ಸೇರಿದರು; 1976ರಲ್ಲಿ ಕೊಲ್ಕೊತ್ತಾದ ‘ಸಂಡೇ’ ವಾರಪತ್ರಿಕೆಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಿ ದರು.
ಅಂದಿನ ದಿನಗಳಲ್ಲಿ ‘ಸಂಡೇ’ ಪತ್ರಿಕೆಯು, ಛಾಯಾಚಿತ್ರಗಳಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡುವ ಅವಕಾಶ ನೀಡುತ್ತಿತ್ತು; ಅಲ್ಲಿ ಬೆಳೆದ ರಘುರಾಯ್ ಅವರು ಮುಂದೆ ಸೇರಿದ್ದು ಇಂಡಿಯಾ ಟುಡೇ (1982-1) ಪತ್ರಿಕೆಯನ್ನು. ಈ ಸಮಯದಲ್ಲೇ, ನಮ್ಮ ದೇಶದ ಕುಖ್ಯಾತ ಕೈಗಾರಿಕಾ ದುರಂತ ಘಟಿಸಿತು: ಅದೇ ಭೋಪಾಲ್ ಅನಿಲ ದುರಂತ (1984). ಆ ದುರಂತ ಸನ್ನಿವೇಶವನ್ನು ರಘು ರಾಯ್ ಅವರು ಚಿತ್ರಗಳ ಮೂಲಕ ಸೆರೆ ಹಿಡಿದ ಪರಿಯು, ಇಡೀ ವಿಶ್ವದ ಗಮನ ಸೆಳೆಯಿತು.
ಅಲ್ಲಿನ ಮಾರ್ಮಿಕ ಚಿತ್ರಗಳನ್ನು ಬಳಸಿ, ‘ಎಕ್ಸ್‌ಪೋಷರ್ : ಎ ಕಾರ್ಪೊರೇಟ್ ಕ್ರೈಮ್’ ಎಂಬ ಪುಸ್ತಕ ವನ್ನೂ ರಚಿಸಿ, ಜಗತ್ತಿನ ಹಲವು ಪ್ರಮುಖ ದೇಶಗಳಲ್ಲಿ ಆ ದುರಂತದ ಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಿದರು. ಬಹುರಾಷ್ಟ್ರೀಯ ಕಂಪೆನಿಯೊಂದರ ನಿರ್ಲಕ್ಷ್ಯದಿಂದ ಘಟಿಸಿದ ಭೋಪಾಲ್ ದುರಂತದ ತೀವ್ರತೆಯನ್ನು ಜಗತ್ತಿನ ಮುಂದಿಡುವಲ್ಲಿ ಯಾವುದೇ ರಾಜಿ ಮಾಡಿ ಕೊಳ್ಳದೇ, ಆಳುವವರ ಸಂಭಾವ್ಯ ಬೆದರಿಕೆಗೂ ಜಗ್ಗದೇ ರಘುರಾಯ್ ಅವರು ತಮ್ಮ ಚಿತ್ರಗಳನ್ನು ಪ್ರಕಟಿಸಿದರು ಎಂಬುದು ಗಮನಾರ್ಹ.
1971ರ ಬಾಂಗ್ಲಾ ವಿಮೋಚನೆಯ ಸಮಯದಲ್ಲಿ ಅಲ್ಲಿನ ನಿರಾಶ್ರಿತರ ಸಂಕಷ್ಟಗಳನ್ನು ರಘುರಾಯ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ; ಕೊಲ್ಕೊತ್ತಾದಲ್ಲಿದ್ದ ಮದರ್ ತೆರೆಸಾ ಅವರ ಬದುಕಿನ ಹಲವು ಸನ್ನಿವೇಶಗಳು ಇವರ ಛಾಯಾಚಿತ್ರಗಳಲ್ಲಿ ಮೂಡಿ ಬಂದಿವೆ. ನಮ್ಮ ರಾಜ್ಯದ ಹಂಪೆಯ ಸ್ಮಾರಕ ಗಳನ್ನು ಸಹ ರಘುರಾಯ್ ಅವರು ಚಿತ್ರಿಸಿ, ಪುಸ್ತಕಗವನ್ನು ರಚಿಸಿದ್ದಾರೆ.
ರಘುರಾಯ್ ಅವರು ಚಿತ್ರಿಸಿದ ಛಾಯಾಚಿತ್ರಗಳನ್ನು ಬಳಸಿಕೊಂಡು ಹಲವು ಪುಸ್ತಕಗಳು ಹೊರ ಬಂದಿವೆ; ಅವುಗಳಲ್ಲಿ ‘ರಘು ರಾಯ್ಸ್ ಇಂಡಿಯಾ’ ಹೆಚ್ಚು ಪ್ರಸಿದ್ಧ. ಕಪ್ಪು ಬಿಳುಪು ಚಿತ್ರಗಳನ್ನು ಮಾತ್ರ ಬಳಸಿಕೊಂಡು ಹೊರಬಂದಿರುವ ಈ ಪುಸ್ತಕವು, ಸ್ವಾತಂತ್ರ್ಯೋತ್ತರ ಭಾರತದ ಪ್ರಗತಿ ಯನ್ನು, ಜನರ ಸಂಕಷ್ಟಗಳನ್ನು, ರಾಜಕೀಯ ಸನ್ನಿವೇಶಗಳನ್ನು ಹಿಡಿದಿಟ್ಟಿರುವ ಪರಿ ಅನನ್ಯ.
ರಘುರಾಯ್ ಅವರು ಛಾಯಾಚಿತ್ರಕಲೆಯಲ್ಲಿ, ಫೋಟೋಜರ್ನಲಿಸಂ ಕ್ಷೇತ್ರದಲ್ಲಿ ಹಾಕಿಕೊಟ್ಟ ಮಾದರಿಯು ನಮ್ಮ ದೇಶದ ಪತ್ರಿಕೆ ಮತ್ತು ಸುದ್ದಿ ಕ್ಷೇತ್ರದಲ್ಲಿ ಅಚ್ಚಳಿಯದ ಛಾಪನ್ನು ಒತ್ತಿದೆ.
ಚಿತ್ರಕೃಪೆ: ರಘು ರಾಯ್
30ನೆಯ ವಯಸ್ಸಿನಲ್ಲೇ ಪದ್ಮಶ್ರೀ!
ಫೋಟೋಗ್ರಾಫಿ ಕ್ಷೇತ್ರದಲ್ಲಿ ಬಹಳ ಗೌರವ ಹೊಂದಿರುವ ‘ಮ್ಯಾಗ್ನಮ್ ಫೋಟೋಸ್’ ಸಂಸ್ಥೆಗೆ ರಘುರಾಯ್ ಸೇರಿದಾಗ, ಜಗತ್ತಿನ ಪ್ರಮುಖ ಛಾಯಾಚಿತ್ರ ಗ್ರಾಹಕರಲ್ಲಿ ಇವರೊಬ್ಬರು ಎಂದು ಜಗತ್ತೇ ಬೆರಗಿನಿಂದ ನೋಡುವಂತಾಯಿತು. ಆಗ ಅವರಿಗೆ ಕೇವಲ 35 ವರ್ಷ ವಯಸ್ಸು! 1971ರ ಬಾಂಗ್ಲಾ ವಿಮೋಚನೆಯ ಸಮಯದಲ್ಲಿ ಇವರು ಸೆರೆ ಹಿಡಿದ ಚಿತ್ರಗಳು ಎಲ್ಲರ ಗಮನ ಸೆಳೆದವು. ಅದರ ಮುಂದಿನ ವರ್ಷ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು. ಆಗ ಅವರ ವಯಸ್ಸು ಕೇವಲ 30! ಕಿರಿಯ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ ಇವರು, ಪೋಟೋಜರ್ನಲಿಸಂನಲ್ಲಿ ನಡೆಸಿದ ಯಶಸ್ವಿ ಪ್ರಯೋಗಗಳು ಹಲವು.