ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮನವಮಿಯ ಸಂಭ್ರಮ!

ರಾಮಾಯಣವು ಎಲ್ಲರಿಗೂ ತಿಳಿದದ್ದೇ ಆದರೂ, ಶಾಸ್ತ್ರಿಗಳು ಪ್ರತಿ ಪಾತ್ರಗಳ ವಿವರಣೆ ಯನ್ನು ಮಾಡುತ್ತಾ ಹೋದಂತೆ ಕುಳಿತ ಎಲ್ಲರಿಗೂ ಆ ದಿನದ ಕಂತಿನ ಪ್ರಮುಖ ಪಾತ್ರಗಳಾದ ಮಾರೀಚ, ಸುಬಾಹು, ಅಹಲ್ಯೆ, ಮಂಥರೆ, ಗುಹ, ಜಟಾಯು, ಸಂಪಾತಿ, ಕಬಂಧ, ಸುಗ್ರೀವ, ವಾಲಿ, ಜಾಂಬ ವಂತ, ವಿಭೀಷಣ ಇವರೆಲ್ಲರ ಮುಖವೂ ಕಣ್ಣ ಮುಂದೆ ಕಟ್ಟುತ್ತಿತ್ತು.

ನಾರಾಯಣ ಪೊಸ್ಹಿತ್ಲು

ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರ ರಾಮದೇವಾಲಯಗಳಲ್ಲಿ ರಾಮನವಮಿಯ ಆಚರಣೆ ತುಂಬ ಸಂಭ್ರಮದಿಂದ ನೆರವೇರುತ್ತಿತ್ತು. ‘ಹತ್ತು ದಿನಗಳ ಹರಿಕಥೆ’ ಅಲ್ಲಿನ ಪ್ರಮುಖ ಆಕರ್ಷಣೆ. ನಮ್ಮೂರಲ್ಲಿ ಮೂರು ರಾಮ ದೇವಾಲಯಗಳಿವೆ. ಖಮಿತ್ಕರ್ ಕುಟುಂಬದವರಿಗೆ ಸೇರಿದ ರಾಮದೇವಾಲಯವಿರುವ ಪಿ ಜೆ ಬಡಾವಣೆಯ ಮೂರನೇ ಅಡ್ಡರಸ್ತೆಯಲ್ಲಿ ಯುಗಾದಿಯ ದಿನದಿಂದಲೇ ರಾಮನವಮಿಯ ಮೆರುಗನ್ನು ಕಾಣ ಬಹುದಿತ್ತು.

ಯುಗಾದಿಯಿಂದ ರಾಮನವಮಿಯವರೆಗೆ ಪ್ರತಿ ದಿನವೂ ಇಲ್ಲಿ ಹರಿಕಥೆ ನಡೆಯುತ್ತಿತ್ತು. ಹೊಸದಾಗಿ ಸುಣ್ಣ ಬಳಿದ ಬಿಳಿ ಕಾಂಪೌಂಡ್ ಬಳಿ ಬಿಳಿ ಪಂಚೆಯ ಗೃಹಸ್ಥರು ರಸ್ತೆಯಿಂದಲೇ ಒಮ್ಮೆ ರಾಮದೇವರಿಗೆ ನಿಂತಲ್ಲಿಯೇ ಕೈ ಮುಗಿದು ಒಳಗಡಿಯಿಡುತ್ತಿದ್ದರು. ಒಂದು ಕೈಲಿ ದಪ್ಪ ಹತ್ತಿ ಉಂಡೆ ಇನ್ನೊಂದು ಕೈಲಿ, ನಿನ್ನೆ ಅರ್ಧಮಾಡಿ ಬಿಟ್ಟಿದ್ದ ಗೆಜ್ಜೆವಸ್ತ್ರ, ಸ್ವಲ್ಪ ಸುಣ್ಣ, ಹಾಲಿನ ಬಟ್ಟಲು ಹಿಡಿದ ಮಹಿಳೆಯರು ನಿಧಾನವಾಗಿ ರಾಮ ದೇವಸ್ಥಾನದ ಒಳಗೆ ಕಾಲಿಡುತ್ತಿದ್ದಂತೆ ಆಗಾಗ ಒಳಗಿಂದ ಢಣ್, ಢಣ್ ಅನ್ನೋ ಸದ್ದು ಕೇಳಿಬರುತ್ತಿತ್ತು.

ಎಲ್ಲರೂ ಒಳಗೆ ಹೋಗಿ ಶ್ರೀರಾಮನಿಗೆ ಪ್ರದಕ್ಷಿಣೆ ನಮಸ್ಕಾರ ಮಾಡಿ ಹೊರಬರುವಷ್ಟರಲ್ಲಿ ದೇವಾಲಯದ ಅರ್ಚಕರಾದ ಮಹಾಬಲೇಶ್ವರ ಶಾಸ್ತ್ರಿಗಳು, ರಾಮಾಯಣದ ಪುಸ್ತಕ ಹಿಡಿದು ದೇವಾಲಯದ ಪ್ರಾಂಗಣಕ್ಕೆ ನಿಧಾನವಾಗಿ ನಡೆದು ಬರುತ್ತಿರುವುದು ಕಾಣುತ್ತಿತ್ತು. ಎತ್ತರದ ನಿಲುವಿನ ಮಹಾಬಲೇಶ್ವರ ಶಾಸ್ತ್ರಿಗಳು ಕುಳಿತು, ಮೈಕಿನಲ್ಲಿ ನಮಗೆಲ್ಲ ತಿಳಿದಿರುವ ಶ್ಲೋಕಗಳಾದ “ಶುಕ್ಲಾಂಭರಧರಂ" ನಿಂದ ಆರಂಭಿಸಿ, ಹಲವು ಶ್ಲೋಕಗಳನ್ನು ತಮ್ಮದೇ ಸುಸ್ಪಷ್ಟ, ಮಂದ್ರ ಶೈಲಿಯಲ್ಲಿ ಹೇಳುವಾಗ ಎಲ್ಲರ ಮನವೂ ರಾಮಾಯಣ ಕೇಳಲು ಹದಗೊಳ್ಳುತ್ತಿತ್ತು. ರಾಮಾಯಣವನ್ನು ಅವರು ಹತ್ತು ಕಂತುಗಳಲ್ಲಿ ವಿಭಜಿಸಿ ಕ್ರಮಬದ್ಧವಾಗಿ ದಿನಕ್ಕೆ ಒಂದು ಮುಕ್ಕಾಲು ಗಂಟೆಯಂತೆ ಒಂದೊಂದು ಕಂತನ್ನು ಹೇಳುತ್ತಾ ರಾಮನವಮಿಯ ದಿನ ಮಂಗಳವನ್ನು ಹಾಡುತ್ತಿದ್ದರು.

ಇದನ್ನೂ ಓದಿ: Narendra Pai Column: ಆರುನೂರು ತಳಿಗಳ ಸಂರಕ್ಷಕ !

ಸಂಪಾತಿ ಗುಹ ಕಬಂಧ ಜಟಾಯು. .

ರಾಮಾಯಣವು ಎಲ್ಲರಿಗೂ ತಿಳಿದದ್ದೇ ಆದರೂ, ಶಾಸ್ತ್ರಿಗಳು ಪ್ರತಿ ಪಾತ್ರಗಳ ವಿವರಣೆ ಯನ್ನು ಮಾಡುತ್ತಾ ಹೋದಂತೆ ಕುಳಿತ ಎಲ್ಲರಿಗೂ ಆ ದಿನದ ಕಂತಿನ ಪ್ರಮುಖ ಪಾತ್ರ ಗಳಾದ ಮಾರೀಚ, ಸುಬಾಹು, ಅಹಲ್ಯೆ, ಮಂಥರೆ, ಗುಹ, ಜಟಾಯು, ಸಂಪಾತಿ, ಕಬಂಧ, ಸುಗ್ರೀವ, ವಾಲಿ, ಜಾಂಬವಂತ, ವಿಭೀಷಣ ಇವರೆಲ್ಲರ ಮುಖವೂ ಕಣ್ಣ ಮುಂದೆ ಕಟ್ಟು ತ್ತಿತ್ತು. ಪ್ರವಚನ ಸಾಂಗವಾಗಿ ಸಾಗುತ್ತಿದ್ದಂತೆ ನಿಧಾನವಾಗಿ ಸಂಜೆಗತ್ತಲಾಗುತ್ತ ಬರುತ್ತಿತ್ತು. ಮುಕ್ಕಾಲು

ಘಂಟೆ ಮುಗಿದು, ಮಂಗಳ ಹಾಡುತ್ತಿರುವಾಗ ಕೇಳುತ್ತಿದ್ದ ಬಹುತೇಕರಿಗೆ ಇದು ಇಷ್ಟು ಬೇಗ ಮುಗಿಯಬಾರದಿತ್ತು ಅನ್ನಿಸುತ್ತಿತ್ತು. ಇನ್ನು ಅರ್ಧ ಘಂಟೆಯಲ್ಲಿ ಶಂಕರದಾಸರ ಹರಿಕಥೆ ಶುರುವಾಗುವುದು. ರಾಮ ದೇವಸ್ಥಾನದ ಹತ್ತಿರದ ಮನೆಗಳವರು ಅದೇ ಅರ್ಧ ಘಂಟೆ ಯಲ್ಲಿ ರೂಢಿಯಂತೆ ಒಂದು ಕಾಫಿ ಕುಡಿದು ಬರಲು ತಮ್ಮ ಮನೆಗೆ ತೆರಳಲನು ವಾಗುತ್ತಿದ್ದರು. ಉಳಿದವರಲ್ಲಿ ಕೆಲ ದಂಪತಿಗಳು ಪಕ್ಕದ ರಾಘವೇಂದ್ರ ಸ್ವಾಮಿ ದೇವಾಲ ಯಕ್ಕೆ ಹೋಗಿ ಬರೋಣ ಅಂತ ಹೊರಡುತ್ತಿದ್ದರು.

ತಬಲಾ ಹಾರ್ಮೊನಿಯಂ ಜತೆ

ಅಷ್ಟರಲ್ಲಿ ದೇವಸ್ಥಾನದ ಕೆಲಸಗಾರರು ನಾಲ್ಕು ಮರದ ಬೆಂಚುಗಳನ್ನು ಆವರಣದಲ್ಲಿ ಸಾಲಾಗಿ ಪಕ್ಕ ಪಕ್ಕ ಜೋಡಿಸಿ ಅದರ ಮೇಲೊಂದು ಜಮಖಾನ ಹಾಕಿ ತಬಲಾ ಹಾರ್ಮೊ ನಿಯಂ ನವರಿಗೆ ಕೂಡಲು ವೇದಿಕೆ ಸಿದ್ಧಪಡಿಸುತ್ತಿದ್ದರು. ದಾಸರ ಪದ್ದತಿ ನಿಂತೇ ಹರಿಕಥೆ ಹೇಳುವುದು.

ಮೈಕ್‌ನಲ್ಲಿ ಶಂಕರದಾಸರು ‘ಓಂ ಶುಕ್ಲಾಂಭರದರಂ’ ಹೇಳಲು ಶುರು ಮಾಡಿದೊಡನೆ, ವಿವಿಧ ರಸ್ತೆಗಳಲ್ಲಿ ಬರುತ್ತಿದ್ದ ಆಸ್ತಿಕರ ಗುಂಪುಗಳು ಹೆಜ್ಜೆ ದೊಡ್ಡದು ಮಾಡತೊಡಗು ತ್ತಿದ್ದವು. ಗಂಡಸರು ಗಪ್ಪನೆ ಕುಳಿತರೆ, ಹೆಣ್ಣು ಮಕ್ಕಳು ತಮ್ಮ ಪರಿಚಯದ ವಿಮಲಾ ಬಾಯಿ, ಕಮಲಾ ಬಾಯಿ ಎಲ್ಲಿದ್ದಾರೆ ಗಮನಿಸಿ ಸ್ಥಾನ ಬದಲಾವಣೆ ಮಾಡುತ್ತಿದ್ದರು. ಅಷ್ಟರಲ್ಲಿ ಶಂಕರದಾಸರಿಂದ ‘ಮೆರವ ಪುರದೊಳಗೆ ಧರೆಗವತರಿಸಿದ’ ಹಾಡು ಶುರುವಾಗಿ, ಅದಕ್ಕೆ ತಕ್ಕನಾಗಿ ಎಡದಿಂದ ತಬಲಾ, ಬಲದಿಂದ ಹಾರ್ಮೊನಿಯಂ, ಜೊತೆಗೂಡಿ ಅವರ ಹಾಡು ‘ಹರೇ ವಿಠ್ಠಲ’ ಅನ್ನುವ ಘೋಷದೊಂದಿಗೆ ಮುಗಿಯುತ್ತಿತ್ತು.

ಎಲ್ಲರ ಮನವು ಪಕ್ವವಾಗುವ ಹೊತ್ತಿಗೆ ಈ ದಿನದ ಹರಿಕಥಾ ಭಾಗ ‘ಶ್ರೀಕೃಷ್ಣ ಸಂಧಾನ’ ಅಂತ ಹೇಳಿ ಶುರು ಮಾಡುತ್ತಿದ್ದರು. ಕಥಾ ಭಾಗವು ಶ್ರೀ ಕೃಷ್ಣ ಸಂಧಾನ ವಾದರೂ, ಮುಂದಿನ ಇಪ್ಪತ್ತು ನಿಮಿಷಗಳಲ್ಲಿ ಪಾಂಡುರಾಜ ಧೃತರಾಷ್ಟ್ರರಿಂದ ಶುರುವಾಗಿ ಪಾಂಡವರು ವನವಾಸ ಮುಗಿಸಿ ಅಜ್ಞಾತವಾಸ ಮುಗಿಸುವವರೆಗಿನ ಮಹಾಭಾರತ ಕತೆಯನ್ನು ಸವಿವರವಾಗಿ ದಾಸರು ತಮ್ಮದೇ ಶೈಲಿಯಲ್ಲಿ ವಿಷದಪಡಿಸುತ್ತಿದ್ದರು.

ಹಾಸ್ಯ, ಕೋಪ, ಅಸೂಯೆ, ಭೀಭತ್ಸ, ಶಾಂತ ಮೊದಲಾದ ಎಲ್ಲ ಭಾವಗಳೂ ಮೇಳೈಸಿದ ಈ ಹರಿಕಥಾ ಭಾಗವನ್ನು ದಾಸರು ತಮ್ಮ ಧ್ವನಿಯ ಏರಿಳಿತದಲ್ಲೇ, ಗಂಟಲ ಭಾವದಲ್ಲೇ ಜನರ ಮನಕ್ಕೆ ಉಣಬಡಿಸುತ್ತಿದ್ದರು. ತಬಲಾದವರೂ, ಹಾರ್ಮೊನಿಯಂನವರೂ ತಮ್ಮ ತಮ್ಮ ವಾದ್ಯಗಳನ್ನು ದಾಸರ ಮಾತು ಜನಕ್ಕೆ ಕೇಳುವ ರೀತಿಯಲ್ಲೇ ಇವರ ಮಾತಿನ ಜೊತೆ ಜೊತೆಗೇ ಸಣ್ಣಗೆ ನುಡಿಸುತ್ತಿದ್ದರು.

ಕಥೆಯ ಭಾವಕ್ಕೆ ತಕ್ಕಂತೆ ವಾದ್ಯ ನುಡಿಸುವ ಅವರ ನೈಪುಣ್ಯದಿಂದಲೇ ಕಥೆಯು ಜನರ ಮನವನ್ನು ಇನ್ನಷ್ಟು ಆಳವಾಗಿ ಹೊಕ್ಕುತ್ತಿತ್ತು.ಈ ದ್ವಾಪರಯುಗದ ಕತೆಯ ನಡುವೆ ಹರಿಕಥೆ ದಾಸರು ಜನಕ್ಕೆ ಇಂದಿನ ಯುಗದ ಕೆಲ ರಸ ಗಳಿಗೆಗಳನ್ನು ಕಾಲ್ಪನಿಕ ಹಾಸ್ಯ ಸನ್ನಿವೇಶಗಳನ್ನು ಹೇಳಿ ರಂಜಿಸುತ್ತಿದ್ದರು.

ಕೃಷ್ಣನ ಸಂಧಾನವು ವಿಫಲವಾಗಿ, ದುರ್ಯೋಧನನು ಪಾಂಡವರಿಗೆ ಐದು ಹಳ್ಳಿಗಳನ್ನೂ ಕೊಡಲೊಪ್ಪದೇ ಯುದ್ಧವೇ ಅಂತಿಮ ಅಂದಾಗ ಇಲ್ಲ ಕುಳಿತ ಬಹುತೇಕ ಜನರಿಗೆ ಮನುಷ್ಯನ ಸ್ವಾರ್ಥ-ಅಧಿಕಾರದ ಲಾಲಸೆಯ ಬಗ್ಗೆ ಜಿಗುಪ್ಸೆ ಬರದೇ ಇರುತ್ತಿರಲಿಲ್ಲ. ಒಂಬತ್ತೂವರೆಯ ಹೊತ್ತಿಗೆ ಶಂಕರದಾಸರು ಹರಿಕಥೆಗೆ ಮಂಗಳವನ್ನು ಹಾಡುವಾಗ ಕುಳಿತ ಎಲ್ಲರೂ, ತಂತಮ್ಮ ಬಟ್ಟೆ ಕೊಡವಿಕೊಂಡು ಮಹಾ ಮಂಗಳಾರತಿ ಪಡೆಯಲು ರಾಮ ದೇವಸ್ಥಾನದ ಒಳಗೆ ಹೊರಡುತ್ತಿದ್ದರು. ಇವೆಲ್ಲವೂ ನಮ್ಮೂರಿನ ರಾಮನವಮಿಯ ಆಚರಣೆಯ ನೆನಪುಗಳ ಸಾಲಿನಲ್ಲಿ ಸೇರಿಹೋಗಿವೆ.