ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sandesh H Naik Column: ಸಾಧು ಅಕ್ಕ- ಇವರಿಗೆ ಗೊತ್ತಿರಲಿಲ್ಲ ಕಾರ್ಮಿಕ ದಿನದ ಮಹತ್ವ !

ವಿಧಿಯ ಲೆಕ್ಕಾಚಾರವೇ ಬೇರೆ ಇತ್ತೆನಿಸುತ್ತದೆ. ಬದುಕಿನ ಕೊನೆಯ ದಿನಗಳಲ್ಲಿ ಸಾಧಕ್ಕ ಹಾಸಿಗೆ ಹಿಡಿಯುವಂತೆ ಮಾಡಿ, ತನ್ನ ಆಶಯದಲ್ಲಿ ಆಕೆ ಸೋಲೊಪ್ಪಿಕೊಳ್ಳುವಂತೆ ಮಾಡಿತ್ತು. ಮೊನ್ನೆ ಮೊನ್ನೆ ಹೋಗಿ ನೋಡಿದ್ದಾಗ ಸಾಧಕ್ಕನ ಎಂದಿನ ನಗು ಮಾಸಿತ್ತು, ದೇಹ ಬಳಲಿತ್ತು, ಕೈಗಳು ಸೋತಿದ್ದವು, ನೋಟದಲ್ಲಿ ಅಸಹಾಯಕತೆ ಮಡುಗಟ್ಟಿತ್ತು.

ಸಂದೇಶ್ ಎಚ್.ನಾಯ್ಕ್

(ಕಾರ್ಮಿಕ ದಿನ ವಿಶೇಷ)

ಕಾರ್ಮಿಕರ ದಿನ ಬಂದಾಗ (ಮೇ 1), ಶ್ರಮಿಕ ವರ್ಗದವರಲ್ಲಿ ಅದೇನೋ ಹುರುಪು, ಕಾರ್ಮಿಕರಲ್ಲಿ ಅದೇನೋ ಒಂದು ಉತ್ಸಾಹ. ತಮ್ಮ ಶ್ರಮಕ್ಕೆ ಗೌರವವನ್ನು ಸೂಚಿಸ ಲೆಂದೇ ಕಾರ್ಮಿಕ ದಿನವನ್ನು ಎಲ್ಲರೂ ಹಮ್ಮಿಕೊಂಡಿದ್ದಾರೆ, ಸಮುದಾಯವು ನಮಗೆ ನೀಡುವ ಗೌರವ ಇದು ಎಂದೇ ತಿಳಿದು, ಅದೊಂದು ದಿನವನ್ನು ಸಂತಸ ದಿಂದ, ಕ್ರಿಯಾತ್ಮಕವಾಗಿ ಕಳೆಯುತ್ತಾರೆ. ಶ್ರಮದ ದುಡಿಮೆಗೆ ಮಹತ್ವ ನೀಡುವ, ಪ್ರಗತಿಪರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ದೇಶಗಳಲ್ಲಂತೂ ಕಾರ್ಮಿಕರ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಆದರೆ, ಕಾರ್ಮಿಕ ದಿನದ ಮಹತ್ವ, ಆಚರಣೆ ಗೊತ್ತಿಲ್ಲದ ಲಕ್ಷಾಂತರ ಜನ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ; ಅಂತಹ ಶ್ರಮಜೀವಿಗಳು ಕಟ್ಟಿದ ಸಮಾಜದ ಭದ್ರ ತಳಹದಿಯ ಮೇಲೆ ನಾವೆಲ್ಲಾ ನಮ್ಮ ಬದುಕನ್ನು ಇಂದು ಕಟ್ಟಿಕೊಂಡಿದ್ದೇವೆ. ಅಂತಹ ಒಬ್ಬರು ಅನಾಮಿಕ ಎನ್ನಬಹು‌ ದಾದ ಶ್ರಮಜೀವಿಯ ನೆನಪಿನಲಿ ಮೂಡಿ ಬಂದ ಈ ಬರಹವು, ನಮ್ಮ ನಾಡಿನ ಎಲ್ಲಾ ಕಾರ್ಮಿಕರಿಗೆ ಸಮರ್ಪಣೆ.

ಏನೋ ಮಗಾ... ಆ ದೇವ್ರ್ ಸಾವಲ್‌ವರೆಗೆ ಕೈ ಕಾಲ್ ಕಟ್ಟಿ ಇದ್, ಗೇಯ್ಕಾ ತಿಂಬಾಂಗ್ ಇಟ್ರ್ ಸಾಕ್’ ಹೀಗೊಂದು ಮಾತನ್ನು ಯಾವಾಗಲೂ ಆಡುತ್ತಿದ್ದಳು ನಮ್ಮೂರ ಸಾಧು ಅಕ್ಕ. ‘ಇನ್ನೂ ಎಷ್ಟ್ ಕೆಲಸ ಮಾಡ್ತ್ಯೇ ಸಾಧು ಅಕ್ಕ. ಸಾಕು ಬಾ ಕುತ್ಕೋ’ ಎಂದ ನಮ್ಮ ಬಾಯಿ ಯನ್ನೇ ಆಕೆ ಹಾಗೆ ಮುಚ್ಚಿಸುತ್ತಿದ್ದಳು. ಆದರೆ ವಿಪರ್ಯಾಸ : ಆ ವಿಧಿ ಸಾಧಕ್ಕನಿಗೆ ಅಂಥದ್ದೊಂದು ಅವಕಾಶವನ್ನೇ ನೀಡಲಿಲ್ಲ.

ವಿಧಿಯ ಲೆಕ್ಕಾಚಾರವೇ ಬೇರೆ ಇತ್ತೆನಿಸುತ್ತದೆ. ಬದುಕಿನ ಕೊನೆಯ ದಿನಗಳಲ್ಲಿ ಸಾಧಕ್ಕ ಹಾಸಿಗೆ ಹಿಡಿಯುವಂತೆ ಮಾಡಿ, ತನ್ನ ಆಶಯದಲ್ಲಿ ಆಕೆ ಸೋಲೊಪ್ಪಿಕೊಳ್ಳುವಂತೆ ಮಾಡಿತ್ತು. ಮೊನ್ನೆ ಮೊನ್ನೆ ಹೋಗಿ ನೋಡಿದ್ದಾಗ ಸಾಧಕ್ಕನ ಎಂದಿನ ನಗು ಮಾಸಿತ್ತು, ದೇಹ ಬಳಲಿತ್ತು, ಕೈಗಳು ಸೋತಿದ್ದವು, ನೋಟದಲ್ಲಿ ಅಸಹಾಯಕತೆ ಮಡುಗಟ್ಟಿತ್ತು.

ಆಕೆ ಸಿರಿವಂತೆಯಾಗಿರಲಿಲ್ಲ. ಯಾವುದೇ ಹುದ್ದೆ ಗಳಿಸಿರಲಿಲ್ಲ. ಯಜಮಾನಿಕೆಯ ಅಹಮ್ಮಿಕೆಯನ್ನು ಎಂದೂ ತೋರಲಿಲ್ಲ. ಆದರೆ ಆಕೆ ನಮ್ಮೂರಿನ ತಾಯಿ ಮನಸ್ಸಿನ ಹೆಂಗಸು. ನಮ್ಮ ನೆರೆಮನೆಯವರೇ ಆದ ಸಾಧು ಅಕ್ಕನನ್ನು ನಾವು ಚಿಕ್ಕಂದಿನಿಂದಲೂ ‘ಕೆಲಸಕ್ಕೆ ಬರುವ ಹೆಂಗಸಾಗಿ’ ನೋಡುತ್ತಲೇ ಬೆಳದವರು.

ಹಾಗೆಯೇ ಅದೆಷ್ಟೋ ಮನೆ-ಮನಸ್ಸುಗಳಿಗೆ ಹತ್ತಿರವಾದವರು. ಅದು ನಮ್ಮ ಮನೆ, ನಮ್ಮ ಊರಷ್ಟೇ ಅಲ್ಲ, ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲಾ ಆಕೆ ಮಾಡಿದ ಕೆಲಸದ ಬೆವರ ಹನಿಯ ಘಮಲಿದೆ. ಬಸಿದ ಶ್ರಮದ ಕಾವು ಅಡಗಿದೆ. ಆ ಮಟ್ಟಿಗೆ ಆಕೆ ಜೀವನಪೂರ್ತಿ ಕೆಲಸ ಮಾಡು ತ್ತಲೇ ತನ್ನ ಜೀವವನ್ನು ತೇದವಳು.

ಇದನ್ನೂ ಓದಿ: Hari Paraak Column: ರಾಘವ ಛಡ್ಡಾ- ಹಮ್‌ ‌ʼಆಪ್‌ʼ ಕೇ ಹೈ ಕೌನ್

ಕೆಲಸವೇ ತನ್ನ ಸರ್ವಸ್ವ ಎಂದು ಬಗೆದವಳು. ಎಲ್ಲೇ ಯಾರದೇ ಕೆಲಸವೇ ಆಗಲಿ ಅದನ್ನು ತನ್ನದೇ ಮನೆಯ ಕೆಲಸ ಎಂಬಂತೆ ಭಾವಿಸಿ ಮಾಡಿದವಳೇ ಹೊರತು, ಕೊಡುವ ದುಡ್ಡಿ ಗೋ, ಕೂಲಿಗೋ ಸೀಮಿತವಾದ ಕೆಲಸ ಆಕೆಯದ್ದು ಎಂದೂ ಆಗಿರಲಿಲ್ಲ. ತಾನೊಬ್ಬಳು ‘ಕಾರ್ಮಿಕ ವರ್ಗ’ದವಳು ಎಂಬ ಭಾವನೆಯೂ ಆಕೆಯಲ್ಲಿ ಮೂಡಲಿಲ್ಲ!

ಎಲ್ಲಾ ಕೆಲಸ ಗೊತ್ತು

ಸಾಧು ಅಕ್ಕ ಕೆಲಸಕ್ಕೆ ಬಂದಳೆಂದರೆ ಮನೆಯವರೇ ಆ ಕೆಲಸದಲ್ಲಿ ತೊಡಗಿಸಿಕೊಂಡಂತೆ. ಗದ್ದೆಗೆ ಗೊಬ್ಬರ ಹಾಕುವಾಗ ಗುಡಿ(ಗುಪ್ಪೆ) ದೂರ ದೂರ ಹಾಕಿದರೆ, ತಾನೇ ‘ಇಷ್ಟು ದೂರ ಹಾಕಿದರೆ ನಲು ಸಾಕಾತಿಲ್ಲ’ ಎಂದು ಬೈದು ಹತ್ತಿರಕ್ಕೆ ಹಾಕಿಸುತ್ತಿದ್ದಳು. ಕೊಯ್ಲು ಆಗಿ ಕೆಯ್ ಕಟ್ಟುವಾಗ ಒಂದೇ ಒಂದು ಹುಲ್ಲಿನ ತೆನೆ ಕೆಳಗೆ ಬಿದ್ದರೂ ಹೆಕ್ಕಿ ಹೊರೆಗೆ ಸೇರಿಸು ತ್ತಿದ್ದಳು, ಕಳೆಗದ್ದೆಗೆ ಇಳಿದರೆ ಮತ್ತಲ್ಲಿ ಒಂದೂ ಕಳೆಯೂ ಉಳಿಯಬಾರದು, ಹುಲ್ಲು ಜಪ್ಪಲು ಬಂದರೆ ಆ ಸೂಡಿ ಅಷ್ಟು ಅಂದಗಟ್ಟಬೇಕು ಅಲ್ಲಿಯ ತನಕ ಆಕೆ ತಾನೆಂದೂ ರಾಜಿ ಆಗುತ್ತಲೇ ಇರಲಿಲ್ಲ. ಯಾರದೋ ಮನೆಯ ದರಲೆ (ತರಗೆಲೆ) ಗುಡಿಸುವಾಗಲೂ ಹಾಡಿಯ ಮೂಲೆ ಮೂಲೆಯನ್ನೂ ಬಿಡದೇ ಎಳೆದು ಒಟ್ಟುಗೂಡಿಸುತ್ತಿದ್ದಳು.

ಹೀಗೆ ನಟ್ಟಿ, ಕೊಯ್ಲು, ಸುಡುಮಣ್ಣು, ಕಳೆ ಕೀಳುವುದು, ಹುಲ್ಲು ಜಪ್ಪುವುದು, ದರಲೆ ಒಟ್ಟುಗೂಡಿಸುವುದು, ಮಣ್ಣು ಹೊರುವುದು, ತೋಟ ಸ್ವಚ್ಛಗೊಳಿಸುವುದು, ಕಟ್ಟಿಗೆ ಕಡಿಯುವುದು ಯಾವುದೇ ಕೆಲಸ ಎಂದರೂ ಅಲ್ಲಿ ಸೀರೆಯನ್ನು ಕೊಂಚ ಮೇಲಕ್ಕೆ ಎತ್ತಿಕಟ್ಟಿ, ಮೇಲೊಂದು ಪುರುಷರ ಪೂರ್ಣ ತೋಳಿನ ಅಂಗಿ ತೊಟ್ಟು, ತಲೆಗೆ ಮಂಡೆಹಾಳೆ ಹಾಕಿಕೊಂಡು ಬರುವ ಸಾಧು ಅಕ್ಕನ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಎಲ್ಲರೂ ದಿನದಂತ್ಯದ ಸೂರ್ಯನ ಚಲನೆಯನ್ನೋ, ಸಂಜೆ ಆರು ಗಂಟೆಗೆ ಬರುವ ಬಸ್‌ನ ಹಾರ್ನ್‌ನ ದನಿಗೋ ತಮ್ಮ ಕೆಲಸ ಮುಗಿಸಲು ಅನುವಾದರೆ, ಸಾಧು ಅಕ್ಕ ಮಾತ್ರ ಹಿಡಿದ ಕೆಲಸ ಪೂರ್ಣಗೊಳ್ಳುವುದೇ ದಿನದ ಕೆಲಸ ನಿಲ್ಲಿಸಲು ಪ್ರಶಸ್ತ ಕಾಲ ಎಂದು ಭಾವಿಸುತ್ತಿದ್ದಳು.

ಅದೇ ಕಾರಣಕ್ಕೆ ಆಕೆ ಇತರೆ ಕೆಲಸಗಾರರಿಂದ ಬೈಸಿಕೊಂಡಿದ್ದೂ ಇದೆ, ಮೂಗು ಮೂರಿಸಿ ಕೊಂಡಿದ್ದೂ, ಕರುಬಿಸಿಕೊಂಡಿದ್ದೂ ಇದೆ. ಆದರೂ ಆಕೆಯ ನಿಷ್ಠೆ ಮಾತ್ರ ಕೊಂಚವೂ ಬದಲಾಗುತ್ತಿರಲಿಲ್ಲ. ಎಷ್ಟೋ ಬಾರಿ ಆಕೆಗೆ ಸಂಬಳ ಕೊಡುವಾಗಲೋ, ಕೆಲಸದ ಕೊಚ್ಚು (ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ನೀಡುವ ಅಕ್ಕಿ, ಭತ್ತ) ನೀಡುವಾಗಲೋ ಆಕೆ ಮಾಡಿದ ಕೆಲಸಕ್ಕೆ ಅದರ ಸ್ವರೂಪಕ್ಕೆ ನಾವು ಕೊಡುತ್ತಿರುವುದು ಬಹಳ ಕಡಿಮೆಯೇ ಎಂದೆನಿಸುತ್ತಿತ್ತು.

ಹಾಗಂತ ಹೆಚ್ಚಿಗೆ ಕೊಡಲು ಹೋದರೆ, ಎಂದೂ ಕೈಯ್ಯೊಡ್ಡದೇ ‘ಎಂತಾ ಇದ್ ನಾ ಏನ್ ಹೊರಗಿನಳಾ..ಬ್ಯಾಡ್ ಬ್ಯಾಡ... ಸುಮ್ನ್ ಆಯ್ಕ್ಯೋ’ ಎನ್ನುತ್ತಾ ಹುಸಿ ಮುನಿಸು ತೋರಿ, ಪರಮ ಸ್ವಾಭಿಮಾನಿಯಂತೆ ಕಾಣುತ್ತಿದ್ದಳು.

Screenshot_10

ಬೇಯಿಸಿದ ಅವಡೆಯ ಘಮಲು

ಸುಮಾರು ಎರಡು ದಶಕಗಳ ಹಿಂದೆ, ಅದೊಂದು ವಿಷಮ ಗಳಿಗೆಯಲ್ಲಿ, ಇಡೀ ಊರಲ್ಲಿ ಆಕೆಗೆ ಕೆಲಸವನ್ನೇ ಮಾಡದಂಥ ದುಃಸ್ಥಿತಿ ಬಂದಾಗಲೂ ಆಕೆ ಬೆದರಲಿಲ್ಲ, ಕುಸಿತು ಕುಳಿತಿರ ಲಿಲ್ಲ. ಬದಲಿಗೆ ಬೇರೆ ಬೇರೆ ಅಕ್ಕಪಕ್ಕದ ಊರುಗಳಿಗೆಲ್ಲ ತೆರಳಿ, ದುಡಿಮೆಯೇ ತನ್ನ ಬದುಕು ಅದನ್ನು ಹೇಗೋ ದಕ್ಕಿಸಿಕೊಂಡೇ ತೀರುತ್ತೇನೆ ಎಂದು ಅಕ್ಷರಶಃ ಕೆಲಸದ ಮೂಲಕವೇ ಸವಾಲೆಸೆದು ಗೆದ್ದ ಗಟ್ಟಿಗಿತ್ತಿ. ಆಗೆಲ್ಲ ಚಿಕ್ಕಮಕ್ಕಳಾಗಿದ್ದ ನಮಗೆ, ಅವರ್ಯಾಕೆ ನಮ್ಮ ಮನೆಗೆ ಕೆಲಸಕ್ಕೆ ಬರುತ್ತಿಲ್ಲ ಎನ್ನುವುದೇ ಒಂದು ದೊಡ್ಡ ಬಿಡಿಸಲಾಗದ ಒಗಟಿನಂತೆ ಕಾಡುತ್ತಿತ್ತು. ಆದರೂ ಅಲ್ಲೆಲ್ಲೋ ಕೆಲಸ ಮುಗಿಸಿ ಬರುವಾಗ ಮಂಡೆ ಹಾಳೆಯ ಒಳಗೆ ಹಾಕಿಕೊಂಡು ತರುತ್ತಿದ್ದ ಹಲಸಿನ ಹಣ್ಣಿನ ತೊಳೆಯನ್ನೂ, ಬೇಯಿಸಿದ ಅವಡೆಯನ್ನೋ, ಘಮಘಮಿಸುವ ಮಾವಿನ ಹಣ್ಣನ್ನೋ ನೀಡಿ ಅಕ್ಕರೆಯ ನಗೆಯಾಡುತ್ತಿದ್ದಳು. ಕೊನೆ ಗೊಮ್ಮೆ ಆ ಘಟನೆ ಸುಖಾಂತ್ಯ ಕಂಡಾಗಲೇ ಅದೆಷ್ಟೋ ಜನ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದು.

ಯಾರದೇ ಮನೆಯ ಕೆಲಸಕ್ಕೆ ಹೋದರೂ ಆಕೆಗೆ ತಾನು ಆ ಮನೆಯ ಕೆಲಸಕ್ಕೆ ಹೋದವಳು ಅಷ್ಟೇ ಎಂಬ ಭಾವ ಎಂದೂ ಅವಳ ಕಾರ್ಯವೈಖರಿಯಲ್ಲೋ, ಮನೋಭಾವದಲ್ಲೋ ಇಣುಕುತ್ತಿರಲಿಲ್ಲ. ಬದಲಿಗೆ ತಾನೂ ಆ ಮನೆಯ, ಅಲ್ಲಿ ನಡೆಯುವ ಕೆಲಸದ ಒಂದು ಬಹುಮುಖ್ಯ ಭಾಗ ಎಂದೇ ಭಾವಿಸುತ್ತಿದ್ದಳು. ಅದರಂತೆ ನಡೆದುಕೊಳ್ಳುತ್ತಿದ್ದಳೂ ಕೂಡಾ.

ಕೆಲಸಕ್ಕೆ ಬಂದರೂ ಕುಡಿಯುವ ನೀರು, ಜೊತೆಗೆ ನೀಡುವ ಬೆಲ್ಲದ ಚೂರು, ಬೆಳಗ್ಗಿನ ತಿಂಡಿ - ಚಾ, ಮಧ್ಯಾಹ್ನದ ಊಟ ಅದನ್ನೆಲ್ಲಾ ಎಲ್ಲರಿಗೂ ಬಡಿಸುವುದು, ಅದರ ಪೂರ್ವಸಿದ್ಧತೆ ಎಲ್ಲವನ್ನೂ ತಾನೇ ಖುದ್ದು ಮುಂದೆ ನಿಂತು ನೋಡಿಕೊಳ್ಳುತ್ತಿದ್ದಳು. ಎಲ್ಲರಿಗೂ ಬಡಿಸಿ ಕೊನೆಗೆ ತಾನೊಂದು ಬದಿಯಲ್ಲಿ ಕೂತು ಗಬಗಬನೇ ತಿಂದು ಮತ್ತೆ ಕೆಲಸಕ್ಕೆ ಸಜ್ಜಾಗು ತ್ತಿದ್ದಳು. ಅಂದರೆ ’ಕಾಯಕವೇ ಕೈಲಾಸ’ ಎಂದು ಅವಳೆಂದೂ ಎಲ್ಲೂ ಓದಿಲ್ಲ, ಬಹುಶಃ ಕೇಳಿರಲಿಕ್ಕೂ ಇಲ್ಲ, ಆದರೆ ಅದನ್ನೇ ಉಸಿರಾಡಿಕೊಂಡು ಬದುಕಿ ಬಂದವಳು

ಊರಲ್ಲಿ ಎಲ್ಲೇ ಯಾರದೇ ಮನೆಯಲ್ಲಿ ಕಾರ್ಯಕ್ರಮಗಳು ಇದ್ದರೂ, ತೀರಾ ಇತ್ತೀಚಿನ ವರೆಗೂ ಕಾರ್ಯಕ್ರಮದ ಮುನ್ನಾ ದಿನಗಳಲ್ಲಿ, ಆ ದಿನದ ಬೆಳಗ್ಗೆ, ಕಾರ್ಯಕ್ರಮದ ತರುವಾಯದ ಎಲ್ಲಾ ಕೆಲಸಗಳಲ್ಲೂ ಸಾಧಕ್ಕ ತನ್ನನ್ನು ತಾನು ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುತ್ತಿದ್ದಳು.

‘ಅಯ್ಯೋ ಕಾರ್ಯಕ್ರಮಕ್ಕೆ ಬಂದೇ ಸಾಕಾಯ್ತು, ಊಟ ಮಾಡಿಯೇ ಸುಸ್ತಾಯ್ತು’ ಎಂದು ವಟಗುಟ್ಟುವವರ ನಡುವೆ ಸಾಧು ಅಕ್ಕ ಎಂದೂ ಅದನ್ನೆಲ್ಲಾ ಉಸುರಿದವಳೇ ಅಲ್ಲ. ತೊಟ್ಟ ಹೊಸ ಸೀರೆಯ ನೆರಿಗೆಯನ್ನು ಮೇಲಕ್ಕೆ ಎತ್ತಿ ಸಿಕ್ಕಿಸಿಕೊಂಡು ಮತ್ತೆ ಅಲ್ಲಿನ ಸಣ್ಣಪುಟ್ಟ ಕೆಲಸಗಳಿಗೆ ಕಾರ್ಯಕ್ರಮದ ಮನೆಯವರ ಜೊತೆ ಕೈ ಜೋಡಿಸಬೇಕು. ಆಗಲೇ ಆಕೆಗೆ ಸಮಾಧಾನ, ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಆಕೆಯ ಪಾಲಿಗೆ ಸಂಪೂರ್ಣಗೊಳ್ಳುವುದೇ ಹಾಗೆ. ಆಕೆಯ ಆ ಶ್ರಮಕ್ಕೆ, ಅದರ ಹಿಂದಿನ ಬದ್ಧತೆಗೆ ಯಾವ ಬೆಲೆ ತಾನೇ ಕಟ್ಟಲಾದೀತು. ಅದಕ್ಕೆಂದು ನಾವು ಕೊಟ್ಟ ಕೆಲವು ನೂರುಗಳೋ, ಹೊಸ ಸೀರೆಯೋ ಇನ್ನೊಂದೋ ಮತ್ತೊಂದೋ ಆಕೆಯ ಕೆಲಸದ ನಿಷ್ಠೆಯ ಮುಂದೆ ತೀರಾ ಚಿಕ್ಕದು ಎಂದು ಯಾವಾಗಲೂ ಅನಿಸುತ್ತದೆ.

ಕೆಲಸ ಮುಗಿಸಿ ಬಾಳೆಲೆಯ ಮುಂದೆ ಕುಳಿತರೆ, 3-4 ಸೌಟು ಅನ್ನವನ್ನು ನಿರುಮ್ಮಳತೆಯಿಂದ ಉಂಡೇಳುತ್ತಿದ್ದ ಸಾಧು ಅಕ್ಕ, ಮೊನ್ನೆ ಮೊನ್ನೆ ಕೇವಲ ಎರಡೂವರೆ ಚಮಚ ನೀರನ್ನು ಕಡೆ ಬಾಯಿಯಲ್ಲಿ ಅರೆಬರೆಯಾಗಿ ನುಂಗಿ ಒಳಗೊಳಗೇ ನೋಯುತ್ತಿದ್ದುದನ್ನು ನೋಡಿಯೂ, ಆ ವಿಧಿಯನ್ನು ಹೇಗೆ ಶಪಿಸದೇ ಇರುವುದು? ಆಕೆ ಉಸಿರು ಚೆಲ್ಲಿ, ತನ್ನನ್ನು ಕಾಡುತ್ತಿದ್ದ ನೋವಿನಿಂದ ಮುಕ್ತಿ ಪಡೆದಳು.

ಆಕೆ ತನ್ನ ಜೀವಮಾನವಿಡಿ ಬಸಿದ ಶ್ರಮದ ಹರಿವು ಯಾವ್ಯಾವುದೋ ತೋಟ, ಗದ್ದೆ, ತೋಡು, ಬದು, ಹಾಡಿ, ಮಕ್ಕಿಗದ್ದೆ, ಅಂಗಳ, ಮನೆ, ಗುಡ್ಡೆ, ರಸ್ತೆ, ಹಾದಿ ಹಾದಿಗಳಲ್ಲಿ ತಣ್ಣಗೆ ಪ್ರವಹಿಸಿದಂತೆ ಅನಿಸುತ್ತದೆ. ಇನ್ನು ಯಾರೋ ಬರುತ್ತಾರೆ, ಕೆಲಸಗಳೂ ನಡೆಯುತ್ತವೆ. ಆದರೆ ‘ಸಾಧು ಅಕ್ಕ’ ಇಲ್ಲವೆಂಬ ಕೊರತೆಯೊಂದು ಹಾಗೆಯೇ ಉಳಿದು ಹೋಗುತ್ತದೆ.

ಕೆಲಸದ ಮೂಲಕ ಬಂಧುತ್ವ!

ಸಾಧು ಅಕ್ಕ ಬೇರೆಯವರ ಮನೆಯ ಹೆಂಗಸು, ಇನ್ನಾರದೋ ತಾಯಿ. ಮತ್ತಾರದೋ ಅಕ್ಕ. ಆದರೆ ಆಕೆಯೊಳಗಿನ ಬಂಧುತ್ವ, ಕಾರುಣ್ಯ, ಅಕ್ಕರೆ, ಕಾಳಜಿ ಪರಿಶುದ್ಧ ಮಮಕಾರಗಳು ಆಕೆಯ ತಾಯ್ತನದ ವ್ಯಾಪ್ತಿಯನ್ನು ಇನ್ನಷ್ಟು ಮತ್ತಷ್ಟು ವಿಸ್ತರಿಸಿದೆ. ಊರು ಅದನ್ನು ಉಸಿರಾಡಿದೆ. ಕೆಲಸ, ಕೆಲಸಗಾರರು ಹಾಗೂ ಅದರ ಸ್ವರೂಪಗಳು ಊಹಿಸಲ ಸಾಧ್ಯ ಬದಲಾವಣೆಗೆ ಒಳಗಾಗಿ ನಲುಗುತ್ತಿರುವ ಈ ಹೊತ್ತಲ್ಲಿ ಸಾಧು ಅಕ್ಕ ಅಂಥದ್ದೊಂದು ಉದಾತ್ತ ಮಾದರಿಗೆ ಅಪರೂಪದ ಉದಾಹರಣೆಯಂತಿದ್ದವಳು.

ಎಂತೆಂಥ ಬಾಂಧವ್ಯಗಳೇ ಬರಡಾಗುವ ಹೊತ್ತಲ್ಲೂ ತನ್ನ ಗೇಯ್ಮೆಯ ಮೂಲಕವೇ ಬಂಧುತ್ವಕ್ಕೆ ಅತ್ಯಂತ ಸಹಜವಾಗಿ ಆತುಕೊಂಡವಳು. ಕೆಲಸದ ಮೂಲಕವೇ ಹತ್ತಿರವಾಗಿ ಮತ್ತು ಆ ಕೆಲಸವನ್ನೇ ಉಸಿರಾಡಿಕೊಂಡಿದ್ದ ಸಾಧಕ್ಕನ ಉಸಿರು ನಿಂತಿದೆ ಎಂದರೆ ನಿಂತದ್ದು ಬರೀ ಉಸಿರಷ್ಟೇ ಅಲ್ಲ ಎಂದು ಮತ್ತೆ ಮತ್ತೆ ಅನಿಸದೇ ಇರದು!